ಭಾನುವಾರ, ಸೆಪ್ಟೆಂಬರ್ 15, 2019
27 °C

ಅರುಣ್‌ ಜೇಟ್ಲಿ ಪಂಚ ಭೂತಗಳಲ್ಲಿ ಲೀನ

Published:
Updated:

ನವದೆಹಲಿ:  ಎಲ್ಲ ರಾಜಕೀಯ ಪಕ್ಷಗಳ ನಾಯಕರು, ವಕೀಲ ಸಮುದಾಯದ ಗೆಳೆಯರು, ಪ್ರಸಿದ್ಧ ಲೋಧಿ ಗಾರ್ಡನ್‌ನಲ್ಲಿ ಬೆಳಗ್ಗಿನ ನಡಿಗೆಗೆ ಜತೆಯಾಗುತ್ತಿದ್ದವರು, ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ಸೇರಿ ಸಾವಿರಾರು ಮಂದಿ ನೆಚ್ಚಿನ ನಾಯಕ, ಮಾಜಿ ಕೇಂದ್ರ ಸಚಿವ ಅರುಣ್‌ ಜೇಟ್ಲಿಗೆ ಭಾರದ ಹೃದಯದಿಂದ ವಿದಾಯ ಹೇಳಿದರು. ಇಲ್ಲಿನ ನಿಗಮ್‌ಬೋಧ ಘಾಟ್‌ನಲ್ಲಿ ಭಾನುವಾರ ಮಧ್ಯಾಹ್ನ ನಂತರ ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಅಂತ್ಯಕ್ರಿಯೆ ನಡೆಯಿತು.   

ಯಮುನಾ ನದಿ ದಡದಲ್ಲಿ ಮಂತ್ರಘೋಷದ ನಡುವೆ ಚಿತೆಗೆ ಜೇಟ್ಲಿಯವರ ಮಗ ರೋಹನ್‌ ಬೆಂಕಿ ಇರಿಸುತ್ತಿದ್ದಂತೆಯೇ ಜೋರಾಗಿ ಮಳೆ ಸುರಿಯಿತು. ದೆಹಲಿಯ ಏಮ್ಸ್‌ನಲ್ಲಿ ಶನಿವಾರ ನಿಧನರಾದ ಜೇಟ್ಲಿ ಅವರಿಗೆ ಹಿರಿಯ ನಾಯಕರು ಪುಷ್ಪಗುಚ್ಛ ಇರಿಸಿ ಅಂತಿಮ ನಮನ ಸಲ್ಲಿಸಿದ ನಂತರ ಅಂತ್ಯಕ್ರಿಯೆ ನಡೆಸಲಾಯಿತು. 

ಇದನ್ನೂ ಓದಿಮೋದಿ ಹಿಂದಿನ ಶಕ್ತಿಯಾಗಿದ್ದ ಜೇಟ್ಲಿ

ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಲೋಕಸಭೆಯ ಸ್ಪೀಕರ್‌ ಓಂ ಬಿರ್ಲಾ, ಬಿಜೆಪಿಯ ಹಿರಿಯ ನಾಯಕ ಎಲ್‌.ಕೆ. ಅಡ್ವಾಣಿ, ಬಿಜೆಪಿ ಅಧ್ಯಕ್ಷ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್‌, ಸ್ಮೃತಿ ಇರಾನಿ, ಅನುರಾಗ್‌ ಠಾಕೂರ್‌, ಕಾಂಗ್ರೆಸ್‌ ಮುಖಂಡರಾದ ಗುಲಾಂ ನಬಿ ಆಜಾದ್‌, ಜ್ಯೋತಿರಾದಿತ್ಯ ಸಿಂಧಿಯಾ, ಕಪಿಲ್‌ ಸಿಬಲ್‌, ಎನ್‌ಸಿಪಿ ಮುಖಂಡ ಪ್ರಫುಲ್‌ ಪಟೇಲ್‌ ಮುಂತಾದವರು ಹಾಜರಿದ್ದರು. 

ಜೇಟ್ಲಿ ಜತೆಗೆ ಬಹಳ ಹತ್ತಿರದಿಂದ ಕೆಲಸ ಮಾಡಿದ್ದ ವೆಂಕಯ್ಯ ಅವರು ಭಾವುಕರಾಗಿದ್ದರು. ಮೃತದೇಹದ ಮುಂದೆ ಸ್ವಲ್ಪ ಹೊತ್ತು ಕೈಮುಗಿದು ನಿಂತಿದ್ದರು. 

ದೆಹಲಿ, ಮಹಾರಾಷ್ಟ್ರ, ಗುಜರಾತ್‌, ಕರ್ನಾಟಕ, ಬಿಹಾರ ಮತ್ತು ಉತ್ತರಾಖಂಡದ ಮುಖ್ಯಮಂತ್ರಿಗಳಾದ ಅರವಿಂದ ಕೇಜ್ರಿವಾಲ್‌, ದೇವೇಂದ್ರ ಫಡಣವೀಸ್‌, ವಿಜಯ ರೂಪಾಣಿ, ಬಿ.ಎಸ್. ಯಡಿಯೂರಪ್ಪ, ನಿತೀಶ್‌ ಕುಮಾರ್‌ ಮತ್ತು ತ್ರಿವೇಂದ್ರ ಸಿಂಗ್‌ ರಾವತ್‌ ಅವರೂ ಇದ್ದರು. 

ಇದನ್ನೂ ಓದಿ:  ಕರ್ನಾಟಕದೊಂದಿಗೆ ಜೇಟ್ಲಿ ನಂಟು 

ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಭಾವುಕ ನಮನ ಸಲ್ಲಿಸಿದ್ದರು. ಆತ್ಮೀಯ ಗೆಳೆಯ ಮತ್ತು ಪಕ್ಷದ ಸಹೋದ್ಯೋಗಿ ನಿಧನರಾಗಿರುವ ಹೊತ್ತಿನಲ್ಲಿ ಭಾರತದಿಂದ ದೂರದ ಬಹರೇನ್‌ನಲ್ಲಿ ಇದ್ದೇನೆ ಎಂಬುದನ್ನು ಊಹಿಸಲೂ ಆಗುತ್ತಿಲ್ಲ ಎಂದು ಅವರು ಹೇಳಿದ್ದರು. 

ನಿಗಮ್‌ಬೋಧ್ ಘಾಟ್‌ನತ್ತ ಅರುಣ್‌ ಜೇಟ್ಲಿ ಪಾರ್ಥಿವ ಶರೀರ: ಮಾಜಿ ಕೇಂದ್ರ ಸಚಿವ ಅರುಣ್‌ ಜೇಟ್ಲಿ ಅವರ ಪಾರ್ಥಿವ ಶರೀರವನ್ನು ಬಿಜೆಪಿ ಪ್ರಧಾನ ಕಚೇರಿಯಿಂದ ನಿಗಮ್‌ಬೋಧ್ ಘಾಟ್‌ಗೆ ಪುಷ್ಪಾಲಂಕೃತ ವಿಶೇಷ ವಾಹನದಲ್ಲಿ ಕೊಂಡೊಯ್ಯಲಾಯಿತು. ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಜನರು ‘ಜೇಟ್ಲಿ ಜಿ ಅಮರ್‌ ರಹೇ’ ಘೋಷಣೆ ಮೊಳಗಿಸಿದರು.

ಇದನ್ನೂ ಓದಿ: ಕೇಂದ್ರದ ಮಾಜಿ ಹಣಕಾಸು ಸಚಿವ ಅರುಣ್‌ ಜೇಟ್ಲಿ ಇನ್ನಿಲ್ಲ

ಅಗಲಿದ ನಾಯಕನಿಗೆ ಅಂತಿಮ ನಮನ ಸಲ್ಲಿಸಲು ಪಕ್ಷದ ಪ್ರಧಾನ ಕಚೇರಿ ಎದುರು ಬಿಜೆಪಿ ಕಾಯರ್ತರು ಭಾರಿ ಸಂಖ್ಯೆಯಲ್ಲಿ ನೆರೆದಿದ್ದರು. ನಿಗಮ್‌ಬೋಧ್ ಘಾಟ್‌ಗೆ ತೆರಳುವ ಹಾದಿಯುದ್ದಕ್ಕೂ ಜೇಟ್ಲಿ ಅವರನ್ನು ನೆನಪಿಸಿಕೊಳ್ಳುವ ಪೋಸ್ಟರ್‌ಗಳು ರಾರಾಜಿಸುತ್ತಿದ್ದವು.

ಇದನ್ನೂ ಓದಿ: ವಿದ್ಯಾರ್ಥಿ ಸಂಘದಿಂದ ಹಣಕಾಸು ಸಚಿವಾಲಯದವರೆಗೆ 

ಅರುಣ್ ಜೇಟ್ಲಿ ಕುರಿತ ಬರಹಗಳಿಗೆ... www.prajavani.net/tags/arun-jaitley

ಇನ್ನಷ್ಟು...

ಆಪದ್ಬಾಂಧವ, ಸುಧಾರಕ ಹಣಕಾಸು ಸಚಿವ ಅರುಣ್ ಜೇಟ್ಲಿ

ಯಡಿಯೂರಪ್ಪ ಸರ್ಕಾರದ ಹಿತ ರಕ್ಷಿಸಿದ್ದ ಜೇಟ್ಲಿ 

ದೇಶ ಮೊದಲು, ಪ್ರವಾಸ ಮೊಟಕು ಬೇಡ: ಮೋದಿಗೆ ಮನವಿ ಮಾಡಿದ ಜೇಟ್ಲಿ ಕುಟುಂಬ​ 

ಹೀಗಿದ್ದರು ಅರುಣ್‌ ಜೇಟ್ಲಿ...

Post Comments (+)