ಶನಿವಾರ, ಜನವರಿ 25, 2020
16 °C

ಪೊಲೀಸ್‌ ಪ್ರವೇಶಕ್ಕೆ ಕುಲಪತಿ ಅತೃಪ್ತಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ : ವಿ.ವಿ.ಯ ಆವರಣದಲ್ಲಿ ಪೊಲೀಸರ ಉಪಸ್ಥಿತಿಯನ್ನು ಸಹಿಸುವುದಿಲ್ಲ. ವಿದ್ಯಾರ್ಥಿಗಳ ಮೇಲೆ ಪೊಲೀಸರ ನಡೆಸಿದ ದೌರ್ಜನ್ಯದ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಬೇಕು ಎಂದು ಜಾಮಿಯಾ ವಿ.ವಿ. ಕುಲಪ‍ತಿ ನಜ್ಮಾ ಅಖ್ತರ್‌ ಆಗ್ರಹಿಸಿದ್ದಾರೆ. ‌

ರಾಜಕೀಯ ವ್ಯಕ್ತಿಗಳು ವಿ.ವಿ.ಗೆ ಬರುವುದಕ್ಕೆ ಅವಕಾಶ ಕೊಡುವುದಿಲ್ಲ, ಮಾನವ ಸಂಪ
ನ್ಮೂಲ ಸಚಿವಾಲಯದ ಜತೆಗೆ ಮಾತ್ರ ಸಂವಹನ ನಡೆಸಲಾಗುವುದು ಎಂದೂ ಅವರು ಸ್ಪಷ್ಟಪಡಿಸಿದ್ದಾರೆ. 

ವಿ.ವಿ. ಕಾರ್ಯಕಾರಿ ಸಮಿತಿಯ ಸಭೆಯು ಸೋಮವಾರ ನಡೆಯಿತು. ಬಳಿಕ ಕುಲಪತಿಯವರು ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದರು. 

‘ಭಾನುವಾರದ ವಿ.ವಿ. ಆವರಣದಲ್ಲಿ ಯುದ್ಧದ ಸನ್ನಿವೇಶ ಸೃಷ್ಟಿಯಾಗಿತ್ತು. ಆವರಣದಲ್ಲಿ ಗುಂಡು ಹಾರಾಟ ನಡೆಸಿದ್ದೇಕೆ ಎಂದು ಪೊಲೀಸ್‌ ಜಂಟಿ ಆಯುಕ್ತರನ್ನು ಪ್ರಶ್ನಿಸಿದ್ದೇವೆ. ಗುಂಡು ಹಾರಿಸಿದ್ದನ್ನು ಅವರು ನಿರಾಕರಿಸಿದ್ದಾರೆ. ವಿ.ವಿ. ಆವರಣದ ಒಳಗಿನಿಂದ ವಿದ್ಯಾರ್ಥಿಗಳು ಕಲ್ಲುತೂರಾಟ ನಡೆಸಿಲ್ಲ. ಕಲ್ಲುತೂರಾಟ ನಡೆಸಿದವರು ಹೊರಗಿನವರು. ಆದರೆ, ಅದನ್ನು ದೃಢೀಕರಿಸುವ ವ್ಯವಸ್ಥೆ ನಮ್ಮಲ್ಲಿ ಇಲ್ಲ’ ಎಂದು ವಿ.ವಿ.ಯ ರಿಜಿಸ್ಟ್ರಾರ್‌ ಎ.ಪಿ. ಸಿದ್ದಿಖಿ ಹೇಳಿದ್ದಾರೆ. 

ಪ್ರತಿಭಟನೆಯ ಜಾಡು

* ಪರೀಕ್ಷೆ ಬಹಿಷ್ಕರಿಸಿದ ದೆಹಲಿ ವಿ.ವಿ.ಯ ವಿದ್ಯಾರ್ಥಿಗಳು, ನಾರ್ಥ್‌ ಕ್ಯಾಂಪಸ್‌ನಲ್ಲಿ ಪ್ರತಿಭಟನೆ

* ದೆಹಲಿಯ ಕೊರೆಯುವ ಚಳಿಯಲ್ಲಿ ಸೋಮವಾರ ಬೆಳಿಗ್ಗೆ ಅಂಗಿ ಬಿಚ್ಚಿ ಆಕ್ರೋಶ ವ್ಯಕ್ತಪಡಿಸಿದ ಜಾಮಿಯಾ ವಿ.ವಿ. ವಿದ್ಯಾರ್ಥಿಗಳು

* ಪೊಲೀಸ್‌ ದೌರ್ಜನ್ಯದ ವಿರುದ್ಧ ಸಿಬಿಐ ತನಿಖೆಗೆ ವಿದ್ಯಾರ್ಥಿಗಳ ಆಗ್ರಹ

* ಭಾನುವಾರ ಪೊಲೀಸರು ವಶಕ್ಕೆ ಪಡೆದಿದ್ದ 50 ವಿದ್ಯಾರ್ಥಿಗಳ ಬಿಡುಗಡೆ

* ಲಖನೌನ ನದ್ವಾ ಕಾಲೇಜು ವಿದ್ಯಾರ್ಥಿಗಳಿಂದ ಪ್ರತಿಭಟನೆ, ಕಾಲೇಜು ಆವರಣದಿಂದ ಹೊರಬರುವ ಯತ್ನಕ್ಕೆ ಪೊಲೀಸರಿಂದ ತಡೆ, ಆವರಣದಿಂದ ಹೊರಗೆ ಕಲ್ಲು ತೂರಾಟ

* ಹೈದರಾಬಾದ್‌ನ ಮೌಲಾನಾ ಆಜಾದ್‌ ಉರ್ದು ವಿ.ವಿ., ಬನಾರಸ್‌ ಹಿಂದೂ ವಿ.ವಿ., ಕೋಲ್ಕತ್ತದ ಜಾಧವಪುರ ವಿ.ವಿ. ವಿದ್ಯಾರ್ಥಿಗಳಿಂದಲೂ ಪ್ರತಿಭಟನೆ

* ಐಐಟಿ ಕಾನ್ಪುರ ವಿದ್ಯಾರ್ಥಿಗಳಿಂದ ಮಂಗಳವಾರ ಕ್ಯಾಂಪಸ್‌ ಮಾರ್ಚ್‌ಗೆ ಕರೆ, ಐಐಟಿ ಮದ್ರಾಸ್‌ ವಿದ್ಯಾರ್ಥಿಗಳಿಂದ ಗಜೇಂದ್ರ ವೃತ್ತದಲ್ಲಿ ಪ್ರತಿಭಟನೆ. ಐಐಟಿ ಬಾಂಬೆ ವಿದ್ಯಾರ್ಥಿಗಳಿಂದ ಭಾನುವಾರ ರಾತ್ರಿಯೇ ಪ್ರತಿಭಟನೆ ನಡೆದಿದೆ

* ಚೆನ್ನೈ ಐಐಟಿ ವಿದ್ಯಾರ್ಥಿಗಳಿಂದ ಪ್ರತಿಭಟನೆಗೆ ಕರೆ: ಜ. 5ರವರೆಗೆ ರಜೆ ಕೊಟ್ಟು, ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಿದ ಆಡಳಿತ

* ಪಶ್ಚಿಮ ಬಂಗಾಳದಲ್ಲಿ ಪ್ರತಿಭಟನೆ ನಡೆಸುತ್ತಿದ್ದ 300 ಜನರನ್ನು ಬಂಧಿಸಲಾಗಿದೆ

 

ಇಬ್ಬರಿಗೆ ಗುಂಡಿನ ಗಾಯ

ವಿದ್ಯಾರ್ಥಿಗಳನ್ನು ಚದುರಿಸುವುದಕ್ಕಾಗಿ ಗುಂಡು ಹಾರಿಸಿಲ್ಲ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. ಆದರೆ, ಭಾನುವಾರದ ಸಂಘರ್ಷದಲ್ಲಿ ಗಾಯಗೊಂಡ ಇಬ್ಬರಿಗೆ ಗುಂಡು ತಗುಲಿದೆ ಎಂಬುದನ್ನು ತೋರಿಸುವ ವಿಡಿಯೊ ಸೋಮವಾರ ಬಹಿರಂಗವಾಗಿದೆ. ಈ ಇಬ್ಬರಲ್ಲಿ ಒಬ್ಬರು ಜಾಮಿಯಾ ವಿ.ವಿ. ವಿದ್ಯಾರ್ಥಿ. 

ಗುಂಡು ತಗುಲಿದ ಗಾಯಗಳೊಂದಿಗೆ ಸಫ್ದರ್‌ಜಂಗ್‌ ಆಸ್ಪತ್ರೆಗೆ ದಾಖಲಾಗಿರುವ ಈ ಇಬ್ಬರು ಯುವಕರನ್ನು ಎನ್‌.ಡಿ.ಟಿ.ವಿ. ಗುರುತಿಸಿದೆ. ಭಾನುವಾರದ ಸಂಘರ್ಷದದಲ್ಲಿ ಈ ಯುವಕರಿಗೆ ಗುಂಡು ತಗುಲಿದೆ ಎಂದು ಆಸ್ಪತ್ರೆಯ ವೈದ್ಯಾಧಿಕಾರಿ ತಿಳಿಸಿದ್ದಾಗಿ ಆ ಸುದ್ದಿವಾಹಿನಿ ವರದಿ ಮಾಡಿದೆ. ಈ ಇಬ್ಬರ ಸಂಬಂಧಿಕರನ್ನೂ ವಾಹಿನಿಯು ಮಾತನಾಡಿಸಿದೆ.

ಭಾನುವಾರದ ಸಂಘರ್ಷದ ಸಂದರ್ಭದಲ್ಲಿ ಗುಂಡಿನ ಹಾರಾಟ ನಡೆದೇ ಇಲ್ಲ ಎಂದು ದೆಹಲಿ ಪೊಲೀಸ್‌ನ ಸಾರ್ವಜನಿಕ ಸಂಪರ್ಕಾಧಿಕಾರಿ ಎಂ.ಎಸ್‌. ರಾಂಧವ ಹೇಳಿದ್ದಾರೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು