ಭಾನುವಾರ, ಆಗಸ್ಟ್ 25, 2019
28 °C

‘370ನೇ ವಿಧಿ ರದ್ದತಿ ಅಲ್ಲ’

Published:
Updated:

ನವದೆಹಲಿ: ಸಂವಿಧಾನದ 370ನೇ ವಿಧಿಯನ್ನು ಅಸಿಂಧುಗೊಳಿಸುವ ಕ್ರಮವನ್ನು ‘ಮೇಜರ್‌ ಸರ್ಜರಿ’ ಎಂದು ಬಣ್ಣಿಸಿರುವ ಕೇಂದ್ರದ ಮಾಜಿ ಸಾಲಿಸಿಟರ್‌ ಜನರಲ್‌ ಹಾಗೂ ಸಂವಿಧಾನ ತಜ್ಞ ಹರೀಶ್‌ ಸಾಳ್ವೆ, ‘370ನೇ ವಿಧಿ ರದ್ದಾಗಿದೆ ಎಂದು ಬಣ್ಣಿಸಿದರೆ ತಪ್ಪು ಅಭಿಪ್ರಾಯ ನೀಡಿದಂತಾಗುತ್ತದೆ’ ಎಂದಿದ್ದಾರೆ.

‘ಜಮ್ಮು ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನಮಾನವನ್ನು ನಿಷ್ಕ್ರಿಯಗೊಳಿಸುವಂಥ ಅಧಿಕಾರ ರಾಷ್ಟ್ರಪತಿಗೆ ಇದೆ. 370ನೇ ವಿಧಿಯ 3ನೇ ಕಲಮು ರಾಷ್ಟ್ರಪತಿಗೆ ಈ ಅಧಿಕಾರವನ್ನು ನೀಡುತ್ತದೆ. ಸಂಸತ್ತಿನ ಅನುಮೋದನೆ ಪಡೆದ ನಂತರವೇ ರಾಷ್ಟ್ರಪತಿಯವರ ಅಧಿಸೂಚನೆ ಪೂರ್ಣಪ್ರಮಾಣದಲ್ಲಿ ಜಾರಿಯಾಗುತ್ತದೆ’ ಎಂದು ಸಾಳ್ವೆ ಹೇಳಿದ್ದಾರೆ.

ಇದು ಶಾಸನಬದ್ಧವಾದ ಆದೇಶವಾಗಿರುತ್ತದೆ. ಭಾರತದ ಸಂವಿಧಾನ ಈಗ ಜಮ್ಮು ಕಾಶ್ಮೀರಕ್ಕೂ ಅನ್ವಯವಾಗುತ್ತದೆ. 1954ರ ರಾಷ್ಟ್ರಪತಿಯವರ ಆದೇಶದ ಭಾಗವಾಗಿದ್ದ ‘35ಎ’ ವಿಧಿಯು ಅಸ್ತಿತ್ವ ಕಳೆದುಕೊಳ್ಳುತ್ತದೆ ಎಂದು ಸಾಳ್ವೆ ತಿಳಿಸಿದ್ದಾರೆ.

ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವ ಪ್ರಕ್ರಿಯೆಯನ್ನು ಎರಡು ಹಂತಗಳಲ್ಲಿ ನಡೆಸಬೇಕಾಗುತ್ತದೆ. ಕಾಶ್ಮೀರದಲ್ಲಿ ವಿಧಾನಸಭೆ ಅಮಾನತಿನಲ್ಲಿರುವುದರಿಂದ ಅದರ ಅಧಿಕಾರಗಳು ಸಂಸತ್ತಿಗೆ ವರ್ಗಾವಣೆಯಾಗುತ್ತವೆ. ಆದ್ದರಿಂದ ಸಂಸತ್ತು ಮೊದಲಿಗೆ, ಜಮ್ಮು ಕಾಶ್ಮೀರ ವಿಧಾನಸಭೆಯ ರೂಪದಲ್ಲಿ ರಾಜ್ಯ ವಿಭಜನೆಯ ಪ್ರಕ್ರಿಯೆಗೆ ಸಂಸತ್ತಿನ ಅನುಮೋದನೆ ಕೇಳಬೇಕು. ಅದಾದ ಬಳಿಕ ಸಂಸತ್ತು, ‘ಸಂಸತ್ತಿನ ರೂಪದಲ್ಲಿ’ ಆ ಪ್ರಸ್ತಾವವನ್ನು ಸ್ವೀಕರಿಸಿ, ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕು. ಕೊನೆಯಲ್ಲಿ ಈ ವಿಚಾರ ಸುಪ್ರೀಂಕೋರ್ಟ್‌ ಮೆಟ್ಟಿಲೇರುವ ಸಾಧ್ಯತೆ ಇಲ್ಲದಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Post Comments (+)