ಜೆಟ್‌ ಏರ್‌ವೇಸ್‌ಗೆ ₹ 1,500 ಕೋಟಿ ನೆರವು

ಗುರುವಾರ , ಏಪ್ರಿಲ್ 25, 2019
33 °C
‘ಜೆಟ್‌’ನಿಂದ ಕೆಳಗಿಳಿದ ನರೇಶ್‌ ಗೋಯಲ್‌

ಜೆಟ್‌ ಏರ್‌ವೇಸ್‌ಗೆ ₹ 1,500 ಕೋಟಿ ನೆರವು

Published:
Updated:
Prajavani

ಮುಂಬೈ: ತೀವ್ರ ಹಣಕಾಸು ಬಿಕ್ಕಟ್ಟು ಎದುರಿಸುತ್ತಿದ್ದ ಖಾಸಗಿ ವಿಮಾನಯಾನ ಸಂಸ್ಥೆ ಜೆಟ್‌ ಏರ್‌ವೇಸ್‌ ಪುನಶ್ಚೇತನಕ್ಕೆ ಬ್ಯಾಂಕ್‌ಗಳು ತಕ್ಷಣದಿಂದಲೇ ಜಾರಿಗೆ ಬರುವಂತೆ ₹1,500 ಕೋಟಿ ನೆರವು ಘೋಷಿಸಿವೆ.

ಪರಿಹಾರ ಯೋಜನೆ ಅನ್ವಯ, ಸಂಸ್ಥೆಯ ಸ್ಥಾಪಕ ಮತ್ತು ಅಧ್ಯಕ್ಷ ನರೇಶ್‌ ಗೋಯಲ್‌ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಲಿದ್ದಾರೆ. ಅವರ ಪತ್ನಿ ಅನಿತಾ ಗೋಯಲ್‌ ಅವರೂ ನಿರ್ದೇಶಕ ಮಂಡಳಿಯಿಂದ ನಿರ್ಗಮಿಸಲಿದ್ದಾರೆ. ಸಂಸ್ಥೆಯಲ್ಲಿ ಶೇ 24ರಷ್ಟು ಪಾಲು ಬಂಡವಾಳ ಹೊಂದಿರುವ ಎತಿಹಾದ್‌ ಏರ್‌ವೇಸ್ ನಾಮಕರಣ ಮಾಡಿರುವ ನಿರ್ದೇಶಕ ಕೆವಿನ್‌ ನೈಟ್‌ ಅವರೂ ಮಂಡಳಿಯಿಂದ ಹೊರ ನಡೆಯಲಿದ್ದಾರೆ.

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ನೇತೃತ್ವದಲ್ಲಿನ ಬ್ಯಾಂಕ್‌ಗಳ ಒಕ್ಕೂಟವು ಸಿದ್ಧಪಡಿಸಿದ್ದ ಪರಿಹಾರ ಯೋಜನೆಗೆ ಜೆಟ್‌ ಏರ್‌ವೇಸ್‌ನ ನಿರ್ದೇಶಕ ಮಂಡಳಿಯು ಸೋಮವಾರ ತನ್ನ ಅಂಗೀಕಾರ ಮುದ್ರೆ ಒತ್ತಿದೆ. ಸಂಸ್ಥೆಯ ದಿನನಿತ್ಯದ ವ್ಯವಹಾರ ನಿರ್ವಹಿಸಲು ಮಧ್ಯಂತರ ಆಡಳಿತ ಸಮಿತಿ ರಚಿಸುವುದಕ್ಕೂ ಮಂಡಳಿ ಸಮ್ಮತಿ ನೀಡಿದೆ.

ಬ್ಯಾಂಕ್‌ಗಳು ಸೂಚಿಸುವ ಇಬ್ಬರು ನಿರ್ದೇಶಕ ಮಂಡಳಿಗೆ ಹೊಸದಾಗಿ ನೇಮಕವಾಗಲಿದ್ದಾರೆ.

25 ವರ್ಷಕ್ಕೂ ಹೆಚ್ಚು ಸಮಯದಿಂದ ದೇಶಿ– ವಿದೇಶಿ ವಿಮಾನ ಯಾನ ಸೇವೆ ಸಲ್ಲಿಸುತ್ತಿರುವ ಸಂಸ್ಥೆಯು ಇತ್ತೀಚಿನ ವರ್ಷಗಳಲ್ಲಿ ಸಾಲದ ಸುಳಿಗೆ ಸಿಲುಕಿತ್ತು. ಇದೇ ಕಾರಣಕ್ಕೆ, ತನ್ನ 80ಕ್ಕೂ ಹೆಚ್ಚು ವಿಮಾನಗಳ ಹಾರಾಟ ಸ್ಥಗಿತಗೊಳಿಸಿತ್ತು. 14 ಅಂತರರಾಷ್ಟ್ರೀಯ ಮಾರ್ಗದಲ್ಲಿ ವಿಮಾನಗಳ ಸೇವೆಯನ್ನೇ ರದ್ದುಗೊಳಿಸಿತ್ತು. ಸಂಸ್ಥೆಯ ಪುನಶ್ಚೇತನಕ್ಕೆ ಹೊಸ ಬಂಡವಾಳ ಸಂಗ್ರಹಿಸಲು ಮುಂದಾಗಿತ್ತು.

ಎಚ್ಚರಿಕೆಯ ಗಂಟೆ: ‘ಜೆಟ್‌ ಏರ್‌ವೇಸ್‌ ಎದುರಿಸುತ್ತಿದ್ದ ಬಿಕ್ಕಟ್ಟು ನೀತಿ ನಿರೂಪಕರ ಪಾಲಿಗೆ ಎಚ್ಚರಿಕೆಯ ಗಂಟೆಯಾಗಿದೆ. ಜಾಗತಿಕ ವಿಮಾನಯಾನ ಕ್ಷೇತ್ರದಲ್ಲಿ ದೇಶಿ ವಿಮಾನಯಾನ ಸಂಸ್ಥೆಗಳ ಸ್ಪರ್ಧಾತ್ಮಕತೆಗೆ ಅಡ್ಡಿಯಾಗಿರುವ ಸವಾಲುಗಳನ್ನು ನಾವು ತುರ್ತಾಗಿ ಪರಿಹರಿಸಿಕೊಳ್ಳಬೇಕಾಗಿದೆ’ ಎಂದು ಸ್ಪೈಸ್‌ ಜೆಟ್‌ನ ಅಧ್ಯಕ್ಷ ಅಜಯ್‌ ಸಿಂಗ್‌ ಪ್ರತಿಕ್ರಿಯಿಸಿದ್ದಾರೆ.

* ದೇಶಿ ವಿಮಾನಯಾನ ರಂಗಕ್ಕೆ ಇವತ್ತಿನದು ದುಃಖಕರ ದಿನವಾಗಿದೆ. ಜಾಗತಿಕ ಮಟ್ಟದ ವಿಮಾನಯಾನ ಸಂಸ್ಥೆ ಕಟ್ಟಿ ಬೆಳೆಸಿದ್ದ ನರೇಶ್‌ ಗೋಯಲ್‌ ದಂ‍ಪತಿ ದೇಶದ ಹಿರಿಮೆ ಹೆಚ್ಚಿಸಿದ್ದರು

- ಅಜಯ್‌ ಸಿಂಗ್‌, ಸ್ಪೈಸ್‌ಜೆಟ್‌ನ ಅಧ್ಯಕ್ಷ

Tags: 

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 1

  Frustrated
 • 3

  Angry

Comments:

0 comments

Write the first review for this !