ಬುಧವಾರ, ಏಪ್ರಿಲ್ 1, 2020
19 °C
ಕಠಿಣ ಕ್ರಮಕ್ಕೆ ಕೆ.ಎಚ್‌. ಮುನಿಯಪ್ಪ ಮನವಿ

ರಮೇಶ ಕುಮಾರ್‌ ವಿರುದ್ಧ ವರಿಷ್ಠರಿಗೆ ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಪಕ್ಷ ವಿರೋಧಿ ಚಟುವಟಿಕೆ ಮೂಲಕ ಲೋಕಸಭೆ ಚುನಾವಣೆಯಲ್ಲಿ ಸೋಲಿಗೆ ಕಾರಣವಾಗಿರುವ ಮುಖಂಡರನ್ನು ಕಾಂಗ್ರೆಸ್‌ನಿಂದ ಉಚ್ಛಾಟಿಸಬೇಕು ಎಂದು ಮಾಜಿ ಸಂಸದ ಕೆ.ಎಚ್‌. ಮುನಿಯಪ್ಪ ಅವರು ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಶುಕ್ರವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಳೆದ ರಾತ್ರಿ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ಈ ಕುರಿತು ಚರ್ಚಿಸಿದ್ದೇನೆ’ ಎಂದರು.

‘ಕೋಲಾರ ಜಿಲ್ಲೆಯಲ್ಲಿನ ಮುಖಂಡರಾದ ಕೆ.ಆರ್‌. ರಮೇಶಕುಮಾರ್‌, ವಿ.ಮುನಿಯಪ್ಪ, ನಜೀರ್‌ ಅಹಮದ್‌, ಎಸ್‌.ಎನ್‌. ನಾರಾಯಣ ಸ್ವಾಮಿ ಅವರು ಲೋಕಸಭೆ ಚುನಾವಣೆಯಲ್ಲಿ ನನ್ನ ವಿರುದ್ಧ ನೇರ ಪ್ರಚಾರ ಮಾಡಿ ಸೋಲಿಗೆ ಕಾರಣರಾದರು. ಅವರನ್ನು ತಕ್ಷಣ ಪಕ್ಷದಿಂದ ಉಚ್ಛಾಟಿಸುವಂತೆ ದೂರು ಸಲ್ಲಿಸಿದ್ದೇನೆ’ ಎಂದು ಅವರು ಹೇಳಿದರು.

‘ಮುಳಬಾಗಿಲಿನ ಎಚ್‌.ನಾಗೇಶ್‌ ಹಾಗೂ ಕೊತ್ತನೂರು ಮಂಜುನಾಥ ಅವರಿಗೆ ಪಕ್ಷ ಮಣೆ ಹಾಕಿತ್ತು. ಆದರೆ, ಅವರೂ ಬಿಜೆಪಿಯತ್ತ ವಾಲಿದ್ದಾರೆ. ಈ ಎಲ್ಲ ಮುಖಂಡರ ಪಕ್ಷ ವಿರೋಧಿ ಚಟುವಟಕೆ ಬಗ್ಗೆ ಸಿದ್ದರಾಮಯ್ಯ ಹಾಗೂ ದಿನೇಶ್‌ ಗುಂಡೂರಾವ್‌ ಅವರಿಗೂ ದೂರು ನೀಡಿದ್ದೇನೆ’ ಎಂದು ಅವರು ತಿಳಿಸಿದರು.

ಲೋಕಸಭೆ ಚುನಾವಣೆ ವೇಳೆ ರಾಜ್ಯದಾದ್ಯಂತ ಪಕ್ಷದ ಕೆಲವು ಪ್ರಮುಖ ನಾಯಕರೇ ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಅಂಥವರಿಂದಾಗಿ ಕಾರ್ಯಕರ್ತರೂ ಗೊಂದಲಕ್ಕೆ ಸಿಲುಕಿದ್ದಾರೆ. ಕೂಡಲೇ ಈ ಬಗ್ಗೆ ಪರಾಮರ್ಶೆ ನಡೆಸುವ ಮೂಲಕ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಪಕ್ಷ ಮತ್ತಷ್ಟು ಸಮಸ್ಯೆಗೆ ಸಿಲುಕಲಿದೆ ಎಂದು ಹೇಳಿರುವುದಾಗಿ ಅವರು ವಿವರಿಸಿದರು.

ಪಕ್ಷದ ಶುದ್ಧೀಕರಣ ತಕ್ಷಣದ ಅಗತ್ಯವಾಗಿದೆ. ಇಲ್ಲದಿದ್ದರೆ ಸುಧಾರಣೆ ಅಸಾಧ್ಯ. ಕಾರ್ಯಕರ್ತರ ಪಡೆ ಕಾಂಗ್ರೆಸ್‌ನಲ್ಲೇ ಮುಂದುವರಿಯಬೇಕಿದ್ದರೆ ದ್ರೋಹ ಮಾಡಿದವರನ್ನು ಕಿತ್ತೆಸೆಯಲೇಬೇಕು ಎಂದು ಮನವರಿಕೆ ಮಾಡಿದ್ದಾಗಿ ಅವರು ಸ್ಪಷ್ಟಪಡಿಸಿದರು.

‘ಕೆಪಿಸಿಸಿ ಅಧ್ಯಕ್ಷರನ್ನು ಬದಲಿಸುವುದಾದರೆ ಅನೇಕ ಹಿರಿಯ ಮುಖಂಡರ ಅಭಿಪ್ರಾಯ ಸಂಗ್ರಹಿಸಿ ಎಲ್ಲರೂ ಮೆಚ್ಚುವ ನಾಯಕನನ್ನು ಆಯ್ಕೆ ಮಾಡಬೇಕು ಪಕ್ಷದ ಸದ್ಯದ ಸ್ಥಿತಿಗತಿಯ ಬಗ್ಗೆ ಆತ್ಮಾವಲೋಕನ ನಡೆಸಿ, ಬಲವರ್ಧನೆಗೆ ಪುಷ್ಟಿ ನೀಡುವಂತಹ ನಾಯಕನನ್ನೇ ನೇಮಿಸಬೇಕು ಎಂದು ಕೋರಿದ್ದೇನೆ’ ಎಂದರು.

‘ಬೆಳಿಗ್ಗೆ ಹಿರಿಯ ಮುಖಂಡ ಗುಲಾಂ ನಬಿ ಆಜಾದ್‌ ಅವರನ್ನೂ ಭೇಟಿ ಮಾಡಿ, ದಲಿತ ಎಡಗೈ ಸಮುದಾಯಕ್ಕೆ ಸೇರಿದ ನನ್ನನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಪರಿಗಣಿಸುವಂತೆ ಮನವಿ ಮಾಡಿದ್ದೇನೆ’ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು