ಭಾನುವಾರ, ಮಾರ್ಚ್ 7, 2021
31 °C
ಶಾಸಕರ ಕೋರಿಕೆ

ಸ್ಪೀಕರ್‌ ಪಕ್ಷಪಾತಿ| ರಾಜೀನಾಮೆ ಸ್ವೀಕಾರಕ್ಕೆ ಸೂಚಿಸಲು ಕೋರಿ ‘ಸುಪ್ರೀಂ’ಗೆ ಅರ್ಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ‘ಸ್ವಯಂ ಪ್ರೇರಣೆಯಿಂದ ನೀಡಿರುವ ರಾಜೀನಾಮೆಯನ್ನು ಸ್ವೀಕರಿಸುವಂತೆ ಕರ್ನಾಟಕದ ವಿಧಾನಸಭೆಯ ಸ್ಪೀಕರ್‌ಗೆ ನಿರ್ದೇಶನ ನೀಡಬೇಕು’ ಎಂದು ಕೋರಿ ಕಾಂಗ್ರೆಸ್ ಮತ್ತು ಜೆಡಿಎಸ್‌ನ ರಾಜೀನಾಮೆ ನೀಡಿರುವ ಶಾಸಕರು ಬುಧವಾರ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದಾರೆ.

ನಾಲ್ಕು ದಿನಗಳಿಂದ ಮುಂಬೈನಲ್ಲಿ ತಂಗಿರುವ ಕಾಂಗ್ರೆಸ್‌ನ ಶಾಸಕ ಪ್ರತಾಪಗೌಡ ಪಾಟೀಲ ಸೇರಿದಂತೆ 10 ಶಾಸಕರು ಹಿರಿಯ ವಕೀಲ ಮುಕುಲ್ ರೋಹಟಗಿ ಅವರ ಮೂಲಕ ಈ ಅರ್ಜಿ ಸಲ್ಲಿಸಿದ್ದು, ತುರ್ತು ವಿಚಾರಣೆಗೆ ಕೋರಿದರು.

ತತ್ವಾಧಾರಿತವಾಗಿ ಮತ್ತು ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ರಾಜೀನಾಮೆ ನೀಡಲಾಗಿದ್ದು, ನಮ್ಮ ಸದಸ್ಯತ್ವವನ್ನು ಅನರ್ಹಗೊಳಿಸುವ ಕ್ರಮ ಕೈಗೊಳ್ಳದಂತೆ ನಿರ್ಬಂಧಿತ ಆದೇಶ ನೀಡುವಂತೆ ಕೋರಿ ಸಲ್ಲಿಸಲಾಗಿರುವ ಈ ರಿಟ್‌ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಅವರು ಗುರುವಾರಕ್ಕೆ ನಿಗದಿಗೊಳಿಸಿದ್ದಾರೆ.

‘ಹೊಸದಾಗಿ ಚುನಾವಣೆ ಎದುರಿಸಲು ಬಯಸಿರುವ ಶಾಸಕರು ಸ್ಪೀಕರ್ ಕಚೇರಿಯಲ್ಲಿ ರಾಜೀನಾಮೆ ಪತ್ರ ನೀಡಿದ್ದಾರೆ. ಆದರೆ, ಸ್ಪೀಕರ್‌ ರಮೇಶ್‌ಕುಮಾರ್‌ ಅವರು ಉದ್ದೇಶಪೂರ್ವಕವಾಗಿ ರಾಜೀನಾಮೆ ಸ್ವೀಕರಿಸದೆ, ಸಂವಿಧಾನಬದ್ಧ ಕರ್ತವ್ಯ ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ’ ಎಂದು ನ್ಯಾಯಪೀಠಕ್ಕೆ ವಿವರಿಸಿದ ವಕೀಲ ರೋಹಟಗಿ, ಪ್ರಕರಣದ ತ್ವರಿತ ವಿಚಾರಣೆಗೆ ಆಗ್ರಹಿಸಿದರು.

ಆದರೆ, ಇಂದೇ ಪ್ರಕರಣದ ವಿಚಾರಣೆ ನಡೆಸುವುದು ಅಸಾಧ್ಯ. ಗುರುವಾರ ವಿಚಾರಣೆಗೆ ಪರಿಗಣಿಸಲಾಗುವುದು ಎಂದು ನ್ಯಾಯಮೂರ್ತಿಗಳು ಹೇಳಿದರು.

ಅರ್ಜಿಯ ವಿವರ

ಈಗಾಗಲೇ ಅಲ್ಪ ಬಹುಮತಕ್ಕೆ ಕುಸಿದಿರುವ ಕರ್ನಾಟಕದ ಸರ್ಕಾರವನ್ನು ರಕ್ಷಿಸುವ ನಿಟ್ಟಿನಲ್ಲಿ ಸ್ಪೀಕರ್‌ ಕೆ.ಆರ್. ರಮೇಶ್‌ಕುಮಾರ್‌ ಅವರು ದುರುದ್ದೇಶದೊಂದಿಗೆ ಪಕ್ಷಪಾತ ನೀತಿ ಅನುಸರಿಸುತ್ತಿದ್ದಾರೆ. ಸದಸ್ಯತ್ವ ಅನರ್ಹಗೊಳಿಸುವ ಉದ್ದೇಶದಿಂದಲೇ ಖುದ್ದಾಗಿ ರಾಜೀನಾಮೆ ಸಲ್ಲಿಸುವಂತೆ ಸೂಚಿಸಲಾಗುತ್ತಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.

ಸಂವಿಧಾನದ 190ನೇ ವಿಧಿ ಅಥವಾ ವಿಧಾನಸಭೆಯ ನಿಯಮಗಳ ಪ್ರಕಾರ ವಿಧಾನಸಭೆಯ ಸದಸ್ಯರು ರಾಜೀನಾಮೆ ನೀಡುವ ನಿಟ್ಟಿನಲ್ಲಿ ಯಾವ ರೀತಿಯ ಸಂವಹನ ಕ್ರಮ ಅನುಸರಿಸಿದರೂ ಅದನ್ನು ನಿರಾಕರಿಸುವಂತಿಲ್ಲ. ರಾಜೀನಾಮೆ ನೀಡುವಾಗ ನಿಗದಿತ ಸಂವಹನ ಪ್ರಕ್ರಿಯೆಯನ್ನು ಅನುಸರಿಸುವುದೂ ಕಡ್ಡಾಯವಲ್ಲ ಎಂದು ಅರ್ಜಿಯಲ್ಲಿ ಪ್ರತಿಪಾದಿಸಲಾಗಿದೆ.

‘ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ರಾಜ್ಯದಲ್ಲಿ ಆಡಳಿತ ವೈಖರಿ ಕುಂಠಿತಗೊಂಡಿದ್ದು, ಐಎಂಎ ಮತ್ತು ಜಿಂದಾಲ್‌ಗೆ ಭೂಮಿ ಹಸ್ತಾಂತರದಂತಹ ಹಗರಣಗಳು ನಡೆದಿವೆ. ಅಲ್ಲದೆ, ರಾಜೀನಾಮೆ ಸಲ್ಲಿಸಿದ ನಂತರ ಕಾಂಗ್ರೆಸ್‌ ಪಕ್ಷವು ನಮ್ಮ ಅನರ್ಹತೆಗಾಗಿ ಸ್ಪೀಕರ್‌ಗೆ ಅರ್ಜಿ ಸಲ್ಲಿಸಿದೆ. ಅನರ್ಹತೆಯಂತಹ ಆದೇಶ ಹೊರಡಿಸುವುದು ಸಂಪೂರ್ಣ ಕಾನೂನುಬಾಹಿರ. ಅನರ್ಹತೆಯ ಬೆದರಿಕೆಯ ಮೂಲಕ ಅಲ್ಪ ಮತದ ಸರ್ಕಾರವನ್ನೇ ನಡೆಸುವುದು ಸ್ಪೀಕರ್‌ ಹುನ್ನಾರವಾಗಿದೆ’ ಎಂದು ಅರ್ಜಿಯಲ್ಲಿ ಹೇಳಲಾಗಿದೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು