ದೆಹಲಿ: ನವೆಂಬರ್‌ನಲ್ಲಿ ‘ಕರ್ನಾಟಕ ಉತ್ಸವ’

7
ಸರ್ಕಾರದಿಂದ ಕನ್ನಡ ಭಾಷಾ ಅಕಾಡೆಮಿ ಸ್ಥಾಪನೆ

ದೆಹಲಿ: ನವೆಂಬರ್‌ನಲ್ಲಿ ‘ಕರ್ನಾಟಕ ಉತ್ಸವ’

Published:
Updated:

ನವದೆಹಲಿ: ಅತ್ಯಂತ ಶ್ರೀಮಂತವಾಗಿರುವ ಕನ್ನಡ ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯನ್ನು ರಾಷ್ಟ್ರದ ಇತರ ರಾಜ್ಯದವರಿಗೂ ಪರಿಚಯಿಸುವ ಉದ್ದೇಶದಿಂದ ದೆಹಲಿಯಲ್ಲಿ ಸ್ಥಳೀಯ ಸರ್ಕಾರವು ನವೆಂಬರ್‌ನಲ್ಲಿ  ‘ಕರ್ನಾಟಕ ಉತ್ಸವ’ ಹಮ್ಮಿಕೊಳ್ಳಲಿದೆ ಎಂದು ದೆಹಲಿಯ ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ತಿಳಿಸಿದರು.

ಯಕ್ಷ ಧ್ರುವ ಪಟ್ಲ ಪ್ರತಿಷ್ಠಾನ ಟ್ರಸ್ಟ್‌ನ ಸ್ಥಳೀಯ ಘಟಕವು ಕರ್ನಾಟಕ ಸಂಘದಲ್ಲಿ ಮಂಗಳವಾರ ಏರ್ಪಡಿಸಿದ್ದ ವಿಶ್ವ ಯಕ್ಷ ಸಂಭ್ರಮದ ಸಮಾರೋಪ ಸಮಾರಂಭದಲ್ಲಿ ಅವರು ‘ಪಟ್ಲ ಯಾನ’ ಗ್ರಂಥ ಬಿಡುಗಡೆ ಮಾಡಿ ಮಾತನಾಡಿದರು.

ರಾಷ್ಟ್ರ ರಾಜಧಾನಿಯಲ್ಲಿ ಆಯಾ ಭಾಷಾ ಅಕಾಡೆಮಿಗಳು ಇರಬೇಕು ಎಂಬುದು ಜನರ ಬಯಕೆಯಾಗಿದೆ. ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯು ದೆಹಲಿಯಲ್ಲಿ ನೆಲೆಸಿರುವ ವಿವಿಧ ರಾಜ್ಯಗಳ ಜನಸಾಮಾನ್ಯರನ್ನೂ ತಲುಪಬೇಕಿದೆ. ಕನ್ನಡದ ಪ್ರಮುಖ ಕೃತಿಗಳನ್ನು ಹಿಂದಿಗೆ ಅನುವಾದಿಸಲು ಸರ್ಕಾರವು ಕನ್ನಡ ಭಾಷಾ ಅಕಾಡೆಮಿ ಸ್ಥಾಪಿಸಲು ಮುಂದಾಗಿದೆ. 15 ದಿನಗಳಲ್ಲಿ ಕಾರ್ಯಾರಂಭ ಮಾಡಲಿದೆ ಎಂದರು.

ಜಾಗತಿಕ ಸೈಬರ್ ಲೋಕದ ಮಹಾದ್ವಾರವಾಗಿರುವ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಕೆಲಸ ಮಾಡಬೇಕೆಂಬುದು ದೇಶದ ಯುವಜನರ ಕನಸಾಗಿದೆ. ದೆಹಲಿಯಿಂದ ಬೆಂಗಳೂರಿಗೆ ಹೋಗುವ ಅನ್ಯಭಾಷಿಕರಿಗೆ ಕನ್ನಡ ಸಾಹಿತ್ಯ, ಸಂಸ್ಕೃತಿ, ಪರಿಸರದ ಪರಿಚಯವಿರಲಿ ಎಂಬ ಕಾರಣದಿಂದ ಅಕಾಡೆಮಿ ಸ್ಥಾಪಿಸಲಾಗುತ್ತಿದೆ ಎಂದು ಅವರು ಹೇಳಿದರು.

ಯಕ್ಷಗಾನ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ, ಕಲಾವಿದರಾದ ಉಮೇಶ್ ಶೆಟ್ಟಿ ಉಬರಡ್ಕ, ಬಿಂದಿಯಾ ಶೆಟ್ಟಿ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು. ಸಾಹಿತಿ ಎಚ್.ಎಸ್. ಶಿವಪ್ರಕಾಶ್ ಅಧ್ಯಕ್ಷತೆವಹಿಸಿದ್ದರು. ಪ್ರತಿಷ್ಠಾನದ ಅಧ್ಯಕ್ಷ ಸತೀಶ ಶೆಟ್ಟಿ ಹಾಜರಿದ್ದರು.

ಕಾರ್ಯಕ್ರಮದ ಅಂಗವಾಗಿ ‘ಭೀಷ್ಮ ಸೇನಾಧಿಪತ್ಯ’ ತಾಳ ಮದ್ದಳೆ, ಯಕ್ಷಗಾನ ನಾಟ್ಯ ವೈಭವ, ‘ಗಜೇಂದ್ರ ಮೋಕ್ಷ’ ಯಕ್ಷಗಾನ ಪ್ರಸಂಗದ ಪ್ರದರ್ಶನ ಏರ್ಪಡಿಸಲಾಗಿತ್ತು. 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !