ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣಿವೆಯಲ್ಲಿ ಮತ್ತೆ ನಿರ್ಬಂಧ

Last Updated 10 ಸೆಪ್ಟೆಂಬರ್ 2019, 20:18 IST
ಅಕ್ಷರ ಗಾತ್ರ

ಶ್ರೀನಗರ: ಮೊಹರಂ ಮೆರವಣಿಗೆ ತಡೆಯುವ ಸಲುವಾಗಿ ಶ್ರೀನಗರ ಸೇರಿದಂತೆ ಕಾಶ್ಮಿರದ ಹಲವು ಕಡೆಗಳಲ್ಲಿ ಮಂಗಳವಾರ ಮತ್ತೆ ನಿರ್ಬಂಧಗಳನ್ನು ಹೇರಲಾಗಿದೆ.

ಲಾಲ್‌ಚೌಕ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಪ್ರವೇಶದ್ವಾರಗಳಲ್ಲಿ ಮುಳ್ಳಿನ ತಂತಿಗಳನ್ನು ಹಾಕಲಾಗಿದೆ. ಬೃಹತ್ ಪ್ರಮಾಣದ ಭದ್ರತಾಪಡೆಯನ್ನು ನಿಯೋಜಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ನಿರ್ಬಂಧ ವಿಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಾಶ್ಮೀರದಲ್ಲಿ 1990ರಿಂದಲೂ ಮೊಹರಂ ಮೆರವಣಿಗೆಗಳ ಮೇಲೆ ನಿರ್ಬಂಧವಿದೆ.

ಪಾಕ್ ಜತೆ ಕೇವಲ ಪಿಒಕೆ ಬಗ್ಗೆ ಚರ್ಚೆ: ಉಪರಾಷ್ಟ್ರಪತಿ

ನವದೆಹಲಿ: ಪಾಕಿಸ್ತಾದನ ಜತೆ ಮಾತುಕತೆ ನಡೆಯುವುದೇ ಆದಲ್ಲಿ, ಅದು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಕುರಿತು ಮಾತ್ರವೇ ಆಗಿರುತ್ತದೆ ಎಂದು ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರು ಮಂಗಳವಾರ ಹೇಳಿದ್ದಾರೆ.

ಜಮ್ಮು ಕಾಶ್ಮೀರದಿಂದ ಬಂದಿದ್ದ ಪಂಚಾಯಿತಿ ಸದಸ್ಯರು ಹಾಗೂ ಸರಪಂಚ್‌ಗಳ ಜತೆ ಸಂವಾದ ನಡೆಸಿದ ಅವರು,ಕಾಶ್ಮೀರದ ವಿಶೇಷಾಧಿಕಾರ ರದ್ದುಗೊಂಡಿರುವ ಕಾರಣ, ರಾಜ್ಯದ ಅಭಿವೃದ್ಧಿಗೆ ವೇಗ ಸಿಗಲಿದೆ ಎಂದರು.

ಕಾಯ್ದೆ ರದ್ದತಿ ಬಳಿಕ ಪಂಚಾಯಿತಿಗಳನ್ನು ಇನ್ನಷ್ಟು ಕ್ರಿಯಾತ್ಮಕವಾಗಿ ಕೆಲಸ ಮಾಡಲು ಅವಕಾಶವಿದೆ. ಕೇಂದ್ರ ಸರ್ಕಾರದಿಂದ ಸ್ಥಳೀಯಾಡಳಿತಗಳಿಗೆ ಹಣಕಾಸಿನ ಅನುದಾನ ಹಾಗೂ ವಿವಿಧ ಕಾರ್ಯಕ್ರಮಗಳು ಲಭ್ಯವಾಗಲಿವೆ ಎಂದರು.

ಕಾಶ್ಮೀರ ಸ್ತಬ್ಧಗೊಂಡಿಲ್ಲ, ನಿಷೇಧಾಜ್ಞೆಯೂ ಇಲ್ಲ: ಜಿತೇಂದ್ರ ಸಿಂಗ್

ಜಮ್ಮು ಕಾಶ್ಮೀರ ಸ್ಥಬ್ತಗೊಂಡಿದ್ದು, ನಿಷೇಧಾಜ್ಞೆ ಮುಂದುವರಿದಿದೆ ಎಂಬ ವರದಿಗಳನ್ನು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ತಳ್ಳಿಹಾಕಿದ್ದಾರೆ.

‘ಒಂದು ವೇಳೆ ನಿಷೇಧಾಜ್ಞೆ ಜಾರಿಯಿದ್ದರೆ, ಕರ್ಫ್ಯೂ ಪಾಸ್ ಪಡೆದು ಜನರು ಹೊರಗೆ ಬರಬಹುದು. ಆದರೆ ಈವರೆಗೆ ಯಾರೂ ಪಾಸ್‌ಗಳನ್ನು ಕೇಳಿಲ್ಲ. ಶಾಂತಿಭಂಗ ತಡೆಯಲು ಕೆಲವೊಂದು ನಿರ್ಬಂಧ ವಿಧಿಸಲಾಗಿದೆ’ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ಸರ್ಕಾರದಿಂದಲೇ ಸೇಬು ಖರೀದಿ

ನವದೆಹಲಿ: ರೈತರು ಬೆಳೆಯುವ ಸೇಬುಹಣ್ಣುಗಳನ್ನು ಜಮ್ಮು ಮತ್ತು ಕಾಶ್ಮೀರ ಸರ್ಕಾರವೇ ನೇರವಾಗಿ ಖರೀದಿಸಲಿದೆ. ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟದ (ಎನ್‌ಎಎಫ್‌ಇಡಿ) ಮೂಲಕ ಡಿಸೆಂಬರ್ 15ರೊಳಗೆ ಖರೀದಿಪ್ರಕ್ರಿಯೆ ಮುಕ್ತಾಯವಾಗಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ವಿಶೇಷಾಧಿಕಾರ ರದ್ದುಗೊಂಡ ಬಳಿಕ ಮಾರುಕಟ್ಟೆಯಲ್ಲಿ ಸೇಬು ಮಾರಾಟ ಮಾಡದಂತೆ ಭಯೋತ್ಪಾದಕರಿಂದ ಕೆಲವು ರೈತರಿಗೆ ಬೆದರಿಕೆ ಎದುರಾಗಿರುವ ಕಾರಣ ಸರ್ಕಾರವೇ ಹಣ್ಣಿನ ದಾಸ್ತಾನು ಮಾಡಲು ಮುಂದಾಗಿದೆ. ಕಳೆದ ಶುಕ್ರವಾರ ಹಣ್ಣಿನ ವ್ಯಾಪಾರಿಗಳ ಮೇಲೆ ದಾಳಿ ನಡೆದಿತ್ತು.

ರೈತರ ಕೃಷಿ ಉತ್ಪನ್ನಗಳಿಗೆಸಹಕಾರಿ ಮಾರುಕಟ್ಟೆ ಒದಗಿಸುವುದು ಒಕ್ಕೂಟದ ಉದ್ದೇಶವಾಗಿದೆ. ಹಣವನ್ನು ರೈತರ ಬ್ಯಾಂಕ್ ಖಾತೆಗೆ ರಾಜ್ಯ ಸರ್ಕಾರ ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ಪಾವತಿ ಮಾಡಲಿದೆ.

ಜಮ್ಮು ಕಾಶ್ಮೀರದಲ್ಲಿ ಸೇಬು ಬೆಳೆಯುವ ಎಲ್ಲ ಜಿಲ್ಲೆಗಳು ಹಾಗೂ ಸೋಪುರ್, ಶೋಪಿಯಾನ್ ಹಾಗೂ ಶ್ರೀನಗರದ ಸಗಟು ಮಾರುಕಟ್ಟೆಗಳಿಂದ ಎ, ಬಿ ಹಾಗೂ ಸಿ ದರ್ಜೆಯ ಸೇಬು ಖರೀದಿಸಲು ಸರ್ಕಾರ ಮುಂದಾಗಿದೆ.

ಹಣ್ಣು ತುಂಬಿದ 750 ಲಾರಿಗಳು ಪ್ರತಿನಿತ್ಯವೂ ಕಾಶ್ಮೀರದಿಂದ ದೇಶದ ನಾನಾಕಡೆಗೆ ಸಂಚರಿಸುತ್ತವೆ.

ಎಂಟು ಸಹಚರರ ಬಂಧನ

ಸೋಪೊರ್‌ನಲ್ಲಿ ಸ್ಥಳೀಯರಿಗೆ ಬೆದರಿಕೆ ಒಡ್ಡುವ ಕರಪತ್ರಗಳನ್ನು ಹಂಚುತ್ತಿದ್ದ ಆರೋಪದ ಮೇಲೆ ಲಷ್ಕರ್ ಉಗ್ರ ಸಂಘಟನೆಯ ಎಂಟು ಸದಸ್ಯರನ್ನು ಪೊಲೀಸರು ಬಂಧಿಸಿದ್ದಾರೆ.

ಕಾಶ್ಮೀರದ ವಿವಿಧ ಭಾಗಗಳಲ್ಲಿ ಕರಪತ್ರಗಳು ಕಂಡುಬಂದಿವೆ. ನಿಷೇಧಾಜ್ಞೆಯನ್ನು ಭಂಗಗೊಳಿಸುವಂತೆ ಜನರಿಗೆ ಕರೆ ನೀಡಲಾಗಿದೆ.

ಅಯಾಜ್ ಮಿರ್, ಒಮರ್ ಮಿರ್, ತೌಸಿಫ್ ನಜರ್, ಇಮ್ತಿಯಾಜ್ ನಜರ್, ಒಮರ್ ಅಕ್ಬರ್, ಜೈಜನ್ ಲತೀಫ್, ದಾನಿಷ್ ಹಬೀಬ್ ಮತ್ತು ಶೌಕತ್ ಅಹ್ಮದ್ ಮಿರ್ ಎಂಬುವರನ್ನು ವಿಚಾರಣೆಗೆ ಒಳಪಡಿಸಲಾಗಿದೆ.ಕಂಪ್ಯೂಟರ್‌ಗಳನ್ನು ಜಪ್ತಿ ಮಾಡಲಾಗಿದೆ.

ಸ್ಥಳೀಯ ಉಗ್ರ ಸಾಜದ್ ಮಿರ್, ಈತನ ಸಹಚರರಾದ ಮುದಾಸ್ಸಿರ್ ಪಂಡಿತ್ ಮತ್ತು ಅಸಿಫ್ ಮಕ್ಬೂಲ್ ಭಟ್ ಅವರು ನಿಷೇಧಿ ಲಷ್ಕರ್ ಸಂಗಘಟನೆ ಜತೆ ಗುರುತಿಸಿಕೊಂಡಿದ್ದು, ಕಣಿವೆಯಲ್ಲಿ ಕರಪತ್ರಗಳನ್ನು ಹಂಚುವಂತೆ ಪ್ರೋತ್ಸಾಹಿಸಿದ್ದಾರೆ ಎನ್ನಲಾಗಿದೆ.

ಶೆಲ್ ದಾಳಿ: ಮನೆಗಳು ಜಖಂ

ಪೂಂಛ್ ಜಿಲ್ಲೆಯ ಗಡಿನಿಯಂತ್ರಣ ರೇಖೆಯಲ್ಲಿ ಮಂಗಳವಾರ ಮುಂಜಾನೆ ಭಾರಿ ಪ್ರಮಾಣದ ಶೆಲ್ ದಾಳಿ ನಡೆದಿದ್ದು, ಆರು ಮನೆಗಳು ಜಖಂಗೊಂಡು, ಐದು ಜಾನುವಾರುಗಳು ಮೃತಪಟ್ಟಿವೆ. ಗಡಿ ಠಾಣೆಗಳ ಮೇಲೂ ಪಾಕ್ ಪಡೆಗಳು ದಾಳಿ ನಡೆಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT