ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರ ವಿಧಾನಸಭೆ ವಿಸರ್ಜನೆ

ಮಹಾಮೈತ್ರಿ ಸರ್ಕಾರ ರಚನೆಗೆ ಹಕ್ಕು ಮಂಡನೆ ಬಳಿಕ ರಾಜ್ಯಪಾಲರ ನಿರ್ಧಾರ
Last Updated 21 ನವೆಂಬರ್ 2018, 20:30 IST
ಅಕ್ಷರ ಗಾತ್ರ

ಶ್ರೀನಗರ:ಜಮ್ಮು ಮತ್ತು ಕಾಶ್ಮೀರದ ರಾಜಕಾರಣ ಬುಧವಾರ ಒಂದೇ ದಿನ ಹಲವು ತಿರುವುಗಳನ್ನು ಪಡೆದುಕೊಂಡಿತು. ಪಿಡಿಪಿ ನೇತೃತ್ವದಲ್ಲಿ ಒಂದು ಗುಂಪು ಮತ್ತು ಪೀಪಲ್ಸ್‌ ಕಾನ್ಫರೆನ್ಸ್‌ (ಪಿ.ಸಿ.) ಮುಖ್ಯಸ್ಥ ಸಜ್ಜದ್‌ ಲೋನ್‌ ನೇತೃತ್ವದ ಇನ್ನೊಂದು ಗುಂಪು ಸರ್ಕಾರ ರಚನೆಗೆ ಒಂದರ ಬಳಿಕ ಇನ್ನೊಂದಾಗಿ ಹಕ್ಕು ಮಂಡಿಸಿದವು.

ಇದಾಗಿ ಸ್ವಲ್ಪ ಹೊತ್ತಿನಲ್ಲಿ, ಈಗಾಗಲೇ ಅಮಾನತಿನಲ್ಲಿ ಇರಿಸಲಾಗಿದ್ದ ವಿಧಾನಸಭೆಯನ್ನು ರಾಜ್ಯಪಾಲ ಸತ್ಯಪಾಲ್‌ ಮಲಿಕ್‌ ಅವರು ಬುಧವಾರ ರಾತ್ರಿ ವಿಸರ್ಜನೆ ಮಾಡಿದರು.

ನ್ಯಾಷನಲ್‌ ಕಾನ್ಫರೆನ್ಸ್‌ (ಎನ್‌ಸಿ) , ಕಾಂಗ್ರೆಸ್‌ ಮತ್ತು ಪೀಪಲ್ಸ್‌ ಡೆಮಾಕ್ರಟಿಕ್‌ ಪಾರ್ಟಿ (ಪಿಡಿಪಿ) ಜತೆಯಾಗಿ ಸರ್ಕಾರ ರಚಿಸುವುದಕ್ಕೆ ಕೆಲ ದಿನಗಳಿಂದ ಪ್ರಯತ್ನ ನಡೆಯುತ್ತಿತ್ತು. ಬುಧವಾರ ಅದು ಸ್ಪಷ್ಟ ರೂಪ ಪಡೆದುಕೊಂಡಿತ್ತು. ಮೂರೂ ಪಕ್ಷಗಳು ಸರ್ಕಾರ ರಚಿಸಲು ಒಮ್ಮತಕ್ಕೆ ಬಂದು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರು ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದರು.

ಇದರ ಬೆನ್ನಿಗೇ ಪೀಪಲ್ಸ್‌ ಕಾನ್ಫರೆನ್ಸ್‌ (ಪಿ.ಸಿ.) ಮುಖಂಡ ಸಜ್ಜದ್‌ ಲೋನ್‌ ಅವರೂ ಹಕ್ಕು ಮಂಡಿಸಿದರು. ಬಿಜೆಪಿಯ 25 ಶಾಸಕರ ಬೆಂಬಲ ತಮಗೆ ಇದೆ ಎಂದೂ ಅವರು ಹೇಳಿಕೊಂಡಿದ್ದಾರೆ. ವಿಧಾನಸಭೆಯಲ್ಲಿ ಅವರ ಪಕ್ಷವು ಇಬ್ಬರು ಶಾಸಕರನ್ನು ಹೊಂದಿದೆ.

28 ಶಾಸಕರನ್ನು ಹೊಂದಿರುವ ಪಿಡಿಪಿ ವಿಧಾನಸಭೆಯಲ್ಲಿ ಅತ್ಯಂತ ದೊಡ್ಡ ಪಕ್ಷವಾಗಿದೆ. ಜತೆಗೆ, ಕಾಂಗ್ರೆಸ್‌ ಮತ್ತು ಎನ್‌ಸಿ ಬೆಂಬಲ ಘೋಷಿಸಿವೆ. ಹಾಗಾಗಿ 87 ಸದಸ್ಯ ಬಲದ ವಿಧಾನಸಭೆಯಲ್ಲಿ ತಮಗೆ 56 ಶಾಸಕರ ಬೆಂಬಲ ಇದೆ ಎಂದು ರಾಜ್ಯಪಾಲರಿಗೆ ಮೆಹಬೂಬಾ ಅವರು ಪತ್ರ ಬರೆದಿದ್ದರು.

ಮಹಾಮೈತ್ರಿಗೆ ಭಂಗ?: ಬಿಜೆಪಿಯ ವಿರುದ್ಧ ಇರುವ ಪಕ್ಷಗಳನ್ನು ಒಟ್ಟಾಗಿಸಿ ದೇಶದಾದ್ಯಂತ ಮಹಾಮೈತ್ರಿ ಕೂಟ ರಚನೆಯ ಪ್ರಕ್ರಿಯೆ ಬಿರುಸಿನಿಂದಲೇ ನಡೆಯುತ್ತಿದೆ. ಅದರ ಭಾಗವಾಗಿಯೇ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಂಗ್ರೆಸ್‌, ಎನ್‌ಸಿ ಮತ್ತು ಪಿಡಿಪಿ ಜತೆಯಾಗಿ ಸರ್ಕಾರ ರಚಿಸಲು ಮುಂದಾಗಿದ್ದವು.

ಅದರಂತೆ, ಮೆಹಬೂಬಾ ಅವರು ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದರು. ವಿಧಾನಸಭೆಯನ್ನು ರಾಜ್ಯಪಾಲರು ದಿಢೀರ್‌ ವಿಸರ್ಜನೆ ಮಾಡಿರುವುದರಿಂದ ಮೈತ್ರಿ ಪ್ರಯತ್ನಕ್ಕೆ ಸದ್ಯಕ್ಕೆ ಹಿನ್ನಡೆಯಾಗಿದೆ.

ವಿಸರ್ಜನೆ ಪ್ರಶ್ನಿಸಿದ ಒಮರ್‌: ವಿಧಾನಸಭೆ ವಿಸರ್ಜಿಸುವ ರಾಜ್ಯಪಾಲರ ನಿರ್ಧಾರವನ್ನು ಎನ್‌.ಸಿ. ನಾಯಕ ಒಮರ್‌ ಅಬ್ದುಲ್ಲಾ ಪ್ರಶ್ನಿಸಿದ್ದಾರೆ.

ಐದು ತಿಂಗಳ ಹಿಂದೆ ‍ಪಿಡಿಪಿ–ಬಿಜೆಪಿ ಸರ್ಕಾರ ಪತನವಾದಾಗಲೇ ವಿಧಾನಸಭೆ ವಿಸರ್ಜನೆಗೆ ತಮ್ಮ ಪಕ್ಷ ಬೇಡಿಕೆ ಇಟ್ಟಿತ್ತು. ಆಗ ವಿಸರ್ಜನೆ ಮಾಡದೆ ಈಗ ಏಕಾಏಕಿ ವಿಸರ್ಜನೆ ಮಾಡಿದ್ದು ಯಾಕೆ ಎಂದು ಅವರು ಕೇಳಿದ್ದಾರೆ.

ಮತ್ತೆ ಕೇಂದ್ರದ ಕೈಗೆ ಕಾಶ್ಮೀರ

ಪಿಡಿಪಿ–ಬಿಜೆಪಿ ಮೈತ್ರಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಬಿಜೆಪಿ ವಾಪಸ್‌ ಪಡೆದ ಬಳಿಕ ಜೂನ್‌ 19ರಿಂದ ಆರು ತಿಂಗಳ ಅವಧಿಗೆ ರಾಜ್ಯದಲ್ಲಿ ರಾಜ್ಯಪಾಲರ ಆಳ್ವಿಕೆ ಹೇರಲಾಗಿತ್ತು. ಅದರ ಪ್ರಕಾರ, ಡಿಸೆಂಬರ್‌ 18ರವರೆಗೆ ರಾಜ್ಯಪಾಲರ ಆಡಳಿತಕ್ಕೆ ಅವಕಾಶ ಇತ್ತು. ಈಗ ಇನ್ನಷ್ಟು ಕಾಲ ರಾಜ್ಯಪಾಲರ ಮೂಲಕ ಕೇಂದ್ರ ಸರ್ಕಾರದ ಆಳ್ವಿಕೆಗೆ ಅವಕಾಶ ದೊರೆತಂತಾಗಿದೆ.

ಕೆಟ್ಟುಹೋದ ಫ್ಯಾಕ್ಸ್‌ ಯಂತ್ರ

ಮೆಹಬೂಬಾ ಅವರು ಈಗ ಶ್ರೀನಗರದಲ್ಲಿದ್ದಾರೆ. ಹಾಗಾಗಿ ಸರ್ಕಾರ ರಚನೆಯ ಹಕ್ಕು ಮಂಡನೆಯ ಪತ್ರವನ್ನು ಅವರು ಫ್ಯಾಕ್ಸ್‌ ಮೂಲಕ ರಾಜ್ಯಪಾಲರಿಗೆ ಕಳುಹಿಸಲು ಬಯಸಿದ್ದರು. ಆದರೆ, ರಾಜಭವನದ ಫ್ಯಾಕ್ಸ್‌ ಯಂತ್ರ ಹಾಳಾಗಿದ್ದರಿಂದ ಅದು ಸಾಧ್ಯವಾಗಿಲ್ಲ. ಹಾಗಾಗಿ ಅವರು ಪತ್ರವನ್ನು ಇ–ಮೇಲ್‌ ಮೂಲಕ ಕಳುಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT