ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣಿವೆ ರಾಜ್ಯದಲ್ಲಿ ನಿರ್ಬಂಧ ಸಡಿಲ

ಕೆಲವು ಕಡೆ ದೂರವಾಣಿ ಸೇವೆ ಪುನರಾರಂಭ; ಜನರ ಓಡಾಟಕ್ಕೆ ಅವಕಾಶ
Last Updated 17 ಆಗಸ್ಟ್ 2019, 19:14 IST
ಅಕ್ಷರ ಗಾತ್ರ

ಶ್ರೀನಗರ: ಎರಡು ವಾರಗಳ ಬಿಗುವಿನ ಸ್ಥಿತಿಯ ಬಳಿಕ ಕಾಶ್ಮೀರ ಕಣಿವೆಯಲ್ಲಿ ಜನರ ಓಡಾಟದ ಮೇಲೆ ಇದ್ದ ನಿರ್ಬಂಧಗಳನ್ನು ಸಡಿಲಗೊಳಿಸಲಾಗಿದೆ. ಶ್ರೀನಗರದ ಹಲವು ಭಾಗಗಳಲ್ಲಿ ದೂರವಾಣಿ ಸೇವೆ ಶನಿವಾರದಿಂದ ಪುನರಾಂಭಗೊಂಡಿದೆ. ಆದರೆ ಬಿಗಿ ಭದ್ರತಾ ವ್ಯವಸ್ಥೆಯನ್ನು ಮುಂದುವರಿಸಲಾಗಿದೆ.

ಕಚೇರಿಗೆ ತೆರಳಲು ಸರ್ಕಾರಿ ಅಧಿಕಾರಿಗಳಿಗೆ ಶನಿವಾರ ಬೆಳಿಗ್ಗೆಯಿಂದ ಅವಕಾಶ ಮಾಡಿಕೊಡಲಾಯಿತು. ಜನರು ಮನೆಯಿಂದ ಹೊರಬಂದು ಅಗತ್ಯ ವಸ್ತುಗಳನ್ನು ಕೊಳ್ಳಲು ನಿರ್ಬಂಧ ಇರಲಿಲ್ಲ. ಆದರೆ ರಸ್ತೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಸಂಪೂರ್ಣವಾಗಿ ತೆರವುಗೊಳಿಸಿಲ್ಲ.

ರಾಜ್‌ಭಾಗ್, ಜವಾಹರ ನಗರ ಮೊದಲಾದ ಕೆಲವು ಪ್ರದೇಶಗಳಲ್ಲಿ ಮಾತ್ರ ಲ್ಯಾಂಡ್‌ಲೈನ್ ಸೇವೆ ಲಭ್ಯವಾಯಿತು. ಆದರೆ ವಾಣಿಜ್ಯಕೇಂದ್ರ ಲಾಲ್‌ಚೌಕ್‌ ಸೇರಿದಂತೆ ಹಲವು ಭಾಗಗಳಲ್ಲಿ ನಿರ್ಬಂಧ ಮುಂದುವರಿದಿದೆ.

ಶ್ರೀನಗರ ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಖಾಸಗಿ ವಾಹನಗಳ ಓಡಾಟ ಹೆಚ್ಚಳವಾಗಿದೆ. ಡಾಲ್ಗೇಟ್ ಪ್ರದೇಶದಲ್ಲಿ ಅಂತರರಾಜ್ಯ ವಾಹನಗಳು ಕಂಡುಬಂದವು. ಜನವಸತಿ ಪ್ರದೇಶಗಳ ಅಂಗಡಿಗಳು ಬೆಳಿಗ್ಗೆಯಿಂದ ತೆರೆದಿದ್ದವು. ಆದರೆ ಪೆಟ್ರೋಲ್ ಬಂಕ್ ಸೇರಿದಂತೆ ಬಹುತೇಕ ವ್ಯಾಪಾರದ ಕೇಂದ್ರಗಳು ಮುಚ್ಚಿದ್ದವು.

ಮಾತುಕತೆಗೆ ಟ್ರಂಪ್ ಮನವಿ:

ಭಾರತ ಹಾಗೂ ಪಾಕಿಸ್ತಾನ ಮಾತುಕತೆಗೆ ಮುಂದಾಗಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮನವಿ ಮಾಡಿದ್ದಾರೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಗೂ ಮುನ್ನ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಜೊತೆ ಮಾತನಾಡಿದ ಅವರು,ಬಿಕ್ಕಟ್ಟು ಶಮನದ ಅಗತ್ಯವನ್ನು ಮನವರಿಕೆ ಮಾಡಿಕೊಟ್ಟರು ಎಂದು ಶ್ವೇತಭವನ ತಿಳಿಸಿದೆ.

ಸಹಜ ಸ್ಥಿತಿಯತ್ತ...

ಭಾನುವಾರ ಸಂಜೆಯೊಳಗೆ 96ರ ಪೈಕಿ ಅರ್ಧಕ್ಕಿಂತ ಹೆಚ್ಚು ದೂರವಾಣಿ ವಿನಿಮಯ ಕೇಂದ್ರ ಕಾರ್ಯಾರಂಭ

ಜಮ್ಮು ಪ್ರದೇಶದಲ್ಲಿ ಲ್ಯಾಂಡ್‌ಲೈನ್ ಹಾಗೂ ಮೊಬೈಲ್ ಸೇವೆ ಕಾರ್ಯನಿರ್ವಹಣೆ

ಜಮ್ಮುವಿನ 5 ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್ನೆಟ್ ಸೇವೆ ಪುನರಾರಂಭ

ಕ್ರಮೇಣ ಇತರೆ ಪ್ರದೇಶಗಳಲ್ಲಿ ದೂರವಾಣಿ ಸೇವೆ ಸಹಜ ಸ್ಥಿತಿಗೆ

ಕಣಿವೆ ರಾಜ್ಯದ ಬಹುತೇಕ ಶಾಲೆಗಳು ಸೋಮವಾರದಿಂದ ಪುನರಾರಂಭ

ಸರ್ಕಾರಿ ಕಚೇರಿಗಳೂ ಸೋಮವಾರದಿಂದ ಪೂರ್ಣ ಪ್ರಮಾಣದ ಕಾರ್ಯಾರಂಭ

ಅಕ್ಬರುದ್ದೀನ್ ‘ಸ್ನೇಹದ ಹಸ್ತಲಾಘವ’

ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿ ಸೈಯದ್ ಅಕ್ಬರುದ್ದೀನ್ ಅವರು ಪಾಕಿಸ್ತಾನದ ಪತ್ರಕರ್ತರಿಗೆ ಸ್ನೇಹದ ಹಸ್ತಲಾಘವ ಮಾಡಿ ಗಮನ ಸೆಳೆದಿದ್ದಾರೆ.

ಭದ್ರತಾಮಂಡಳಿ ಸಭೆ ಬಳಿಕ ಚೀನಾ ಹಾಗೂ ಪಾಕಿಸ್ತಾನದ ರಾಜತಾಂತ್ರಿಕರಿಗಿಂತ ಅವರು ಭಿನ್ನವಾಗಿ ನಡೆದುಕೊಂಡರು. ದೊಡ್ಡ ಸಂಖ್ಯೆಯಲ್ಲಿ ಸೇರಿದ್ದ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ಧ ಎಂದು ಅವರು ಸ್ವಯಂಪ್ರೇರಿತರಾಗಿ ಮುಂದೆ ಬಂದರು.

‘ನಿಮ್ಮ ಐದು ಪ್ರಶ್ನೆಗಳಿಗೆ ಉತ್ತರಿಸುತ್ತೇನೆ. ಈ ಪೈಕಿ ಪಾಕಿಸ್ತಾನದ ಪತ್ರಕರ್ತರು 3 ಪ್ರಶ್ನೆ ಕೇಳಬಹುದು’ ಎಂದರು. ಭಾರತ ಮಾತುಕತೆಗೆ ಒಪ್ಪಿದೆಯೇ ಎಂಬ ಪ್ರಶ್ನೆಗೆ, ‘ಮೊದಲು ಭಯೋತ್ಪಾದನೆ ನಿಲ್ಲಲಿ, ಆಮೇಲೆ ಮಾತುಕತೆ’ ಎಂದು ಉತ್ತರಿಸಿದರು.

ಯಾವಾಗ ಮಾತುಕತೆ ಆರಂಭಿಸುತ್ತೀರಿ ಎಂದು ಪ್ರಶ್ನಿಸಿದ ಪತ್ರಕರ್ತನ ಬಳಿಗೇ ತೆರಳಿದ ಅಕ್ಬರುದ್ದೀನ್ ಅವರು, ಅಲ್ಲಿದ್ದ ಮೂವರು ಪಾಕಿಸ್ತಾನಿ ಪತ್ರಕರ್ತರಿಗೆ ಹಸ್ತಲಾಭವ ಮಾಡಿದರು. ಈ ನಡೆಗೆ ಮಾಧ್ಯಮಗೋಷ್ಠಿಗೆ ಸೇರಿದ್ದ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಯಿತು. ‘ಶಿಮ್ಲಾ ಒಪ್ಪಂದಕ್ಕೆ ಬದ್ಧವಾಗಿ ಮಾತುಕತೆಗೆ ಸಿದ್ಧ ಎಂದು ನಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದೇವೆ. ಪಾಕಿಸ್ತಾನದ ಕಡೆಯ ಪ್ರತಿಕ್ರಿಯೆಗಾಗಿ ಕಾಯೋಣ’ ಎಂದು ಉತ್ತರಿಸಿದರು.

ಕಾಶ್ಮೀರದ ಸಮಸ್ಯೆ ಕುರಿತು ಮಾತುಕತೆ ನಡೆಸಿದ ವಿಶ್ವಸಂಸ್ಥೆಯ ನಡೆಯನ್ನು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಸ್ವಾಗತಿಸಿದರು.

‘ಸುಪ್ರೀಂ’ನಲ್ಲಿ ಮತ್ತೊಂದು ಅರ್ಜಿ

ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷಾಧಿಕಾರವನ್ನು ಅಸಿಂಧುಗೊಳಿಸಿದ ರಾಷ್ಟ್ರಪತಿಗಳ ಆದೇಶವನ್ನು ರದ್ದುಮಾಡುವಂತೆ ಕೋರಿ ನಿವೃತ್ತ ಅಧಿಕಾರಿಗಳು ಮತ್ತು ನಿವೃತ್ತ ಸೇನಾಧಿಕಾರಿಗಳು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

‘ಸರ್ಕಾರದ ಈ ಕ್ರಮವು ಸಂವಿಧಾನಬಾಹಿರ ಮತ್ತು ಸಂವಿಧಾನಕ್ಕೆ ಬಗೆದ ದ್ರೋಹ. ಈ ವಿಚಾರದಲ್ಲಿ ಯಾವುದೇ ಕ್ರಮ ತೆಗೆದುಕೊಳ್ಳುವ ಮುನ್ನ ಅಲ್ಲಿನ ಜನರು ಮತ್ತು ಚುನಾಯಿತ ಜನಪ್ರತಿನಿಧಿಗಳ ಅಭಿಪ್ರಾಯ ಪಡೆಯಬೇಕಿತ್ತು. ಆದರೆ ಸರ್ಕಾರ ಆ ಕೆಲಸ ಮಾಡಿಲ್ಲ. ಇದರಿಂದ ಪ್ರಜಾಪ್ರಭುತ್ವದ ಮೂಲತತ್ವಗಳಿಗೆ ಧಕ್ಕೆಯಾಗಿದೆ’ ಎಂದು ಅರ್ಜಿದಾರರು ಆರೋಪಿಸಿದ್ದಾರೆ.

ನಿವೃತ್ತ ಉಪ ಏರ್‌ ಮಾರ್ಷಲ್ ಕಪಿಲ್ ಕಾಕ್, ನಿವೃತ್ತ ಮೇಜರ್ ಜನರಲ್ ಅಶೋಕ್ ಕುಮಾರ್ ಮೆಹ್ತಾ, ನಿವೃತ್ತ ಐಎಎಸ್‌ ಅಧಿಕಾರಿಗಳಾದ ಹಿಂದಾಲ್ ಹೈದರ್ ತ್ಯಾಬ್ಜಿ, ಜಿ.ಕೆ.ಪಿಳ್ಳೈ ಈ ಅರ್ಜಿಯಲ್ಲಿ ಸಹಿ ಮಾಡಿದ್ದಾರೆ. ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಕೆಯಾದ ಏಳನೇ ಅರ್ಜಿ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT