ಕೇರಳ ಪ್ರವಾಹ: ವೈಮಾನಿಕ ಸಮೀಕ್ಷೆ ನಡೆಸಿದ ಪ್ರಧಾನಿ; ₹500 ಕೋಟಿ ಪರಿಹಾರ ಘೋಷಣೆ

7

ಕೇರಳ ಪ್ರವಾಹ: ವೈಮಾನಿಕ ಸಮೀಕ್ಷೆ ನಡೆಸಿದ ಪ್ರಧಾನಿ; ₹500 ಕೋಟಿ ಪರಿಹಾರ ಘೋಷಣೆ

Published:
Updated:
Deccan Herald

ಕೊಚ್ಚಿ: ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಹಾಗೂ ಅಧಿಕಾರಿಗಳೊಂದಿಗೆ ನಡೆದ ಉನ್ನತ ಮಟ್ಟದ ಸಭೆಯ ಬಳಿಕ ಪ್ರಧಾನಿ ನರೇಂದ್ರ ಮೋದಿ, ಪ್ರವಾಹ ಪರಿಹಾರವಾಗಿ ₹500 ಕೋಟಿ ಘೋಷಿಸಿದರು. 

ಶನಿವಾರ ಬೆಳಿಗ್ಗೆ ಕೊಚ್ಚಿ ನೌಕಾ ನೆಲೆ ತಲುಪಿದ್ದ ಪ್ರಧಾನಿ, ವೈಮಾನಿಕ ಸಮೀಕ್ಷೆಗೆ ಹೊರಟ ಕೆಲವೇ ಕ್ಷಣಗಳಲ್ಲಿ ಭಾರೀ ಮಳೆಯ ಕಾರಣದಿಂದ ಹೆಲಿಕಾಪ್ಟರ್‌ ಹಿಂದಕ್ಕೆ ಕರೆಸಿಕೊಳ್ಳಲಾಗಿತ್ತು. ಬಳಿಕ ತುರ್ತು ಸಭೆಯಲ್ಲಿ ಪ್ರಧಾನಿ ಮಧ್ಯಂತರ ಪರಿಹಾರವಾಗಿ ₹500 ಕೋಟಿ ಘೋಷಿಸಿದರು. ಕಳೆದ ಭಾನುವಾರ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್‌ ಕೇರಳ ಭೇಟಿ ನೀಡಿ ಪ್ರವಾಹ ಪರಿಹಾರವಾಗಿ ₹100 ಕೋಟಿ ಘೋಷಿಸಿದ್ದರು. 

ನೆರೆಯಲ್ಲಿ ಸಾವಿಗೀಡಾದ ವ್ಯಕ್ತಿಯ ಕುಟುಂಬಕ್ಕೆ ₹2 ಲಕ್ಷ ಹಾಗೂ ಗಂಭೀರವಾಗಿ ಗಾಯಗೊಂಡಿರುವ ಪ್ರತಿ ವ್ಯಕ್ತಿಗೆ ₹50 ಸಾವಿರ ಪರಿಹಾರವು ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ಬಿಡುಗಡೆಯಾಗಲಿದೆ. 

ಸಭೆಯ ಬಳಿಕ ಪ್ರಧಾನಿ ಮೋದಿ ತ್ರಿಸೂರ್‌–ಅಲುವಾ ಪ್ರದೇಶಗಳಲ್ಲಿ ಮಾತ್ರ ವೈಮಾನಿಕ ಸಮೀಕ್ಷೆ ನಡೆಸಲು ಸಾಧ್ಯವಾಯಿತು. ಪ್ರಾಥಮಿಕ ಮಾಹಿತಿಗಳ ಪ್ರಕಾರ, ಜಲಪ್ರಳಯದಿಂದಾಗಿ ₹19,512 ಕೋಟಿ ನಷ್ಟ ಉಂಟಾಗಿರುವುದಾಗಿ ಕೇರಳ ಸಿಎಂ ಪಿಣರಾಯಿ ವಿಜಯನ್‌ ಪ್ರಧಾನಿಗೆ ವಿವರಿಸಿದರು. ನಷ್ಟದ ಸ್ಪಷ್ಟ ಮಾಹಿತಿ ನೀರಿನ ಪ್ರಮಾಣ ಕಡಿಮೆಯಾದ ಬಳಿಕ ಮಾತ್ರವೇ ಸಿಗಲು ಸಾಧ್ಯ, ತುರ್ತು ₹2000 ಕೋಟಿ ಪರಿಹಾರ ನೀಡುವಂತೆ ಒತ್ತಾಯಿಸಿದರು.  

ಎರ್ನಾಕುಲಂ ಮತ್ತು ಇಡುಕ್ಕು ಜಿಲ್ಲೆ ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌ ಹಿಂ‍ಪಡೆಯಲಾಗಿದೆ. ಪ್ರವಾಹ ಪರಿಸ್ಥಿತ ಉಂಟಾದ ಬಳಿಕ ಕೇರಳದಲ್ಲಿ ಸುಮಾರು 82 ಸಾವಿರ ಜನರು ಸ್ಥಳಾಂತರ ಗೊಂಡಿದ್ದಾರೆ. ನೆರೆಯಲ್ಲಿ ಸಿಲುಕಿ ಕಳೆದ 9 ದಿನಗಳಲ್ಲಿ 164 ಜನರು ಸಾವಿಗೀಡಾಗಿದ್ದು, 3,14,000 ಜನರನ್ನು ರಕ್ಷಿಸಿ 2094 ಪರಿಹಾರ ಶಿಬಿರಗಳಿಗೆ ತಲುಪಿಸಲಾಗಿದೆ. 

ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾದ ಬಳಿಕ ಶುಕ್ರವಾರ ಸಂಜೆ ಪ್ರಧಾನಿ ಮೋದಿ ತಿರುವನಂತಪುರಂಗೆ ಬಂದಿದ್ದರು. 

 

ಬರಹ ಇಷ್ಟವಾಯಿತೆ?

 • 12

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !