ಶನಿವಾರ, ಫೆಬ್ರವರಿ 29, 2020
19 °C
ಸುಪ್ರೀಂ ಕೋರ್ಟ್

ಶಬರಿಮಲೆಗೆ ಮಹಿಳೆಯರ ಪ್ರವೇಶ: ವಿಸ್ತೃತ ಪೀಠಕ್ಕೆ ಪ್ರಕರಣ ವರ್ಗಾವಣೆ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

‌ನವದೆಹಲಿ: ಶಬರಿಮಲೆ ದೇಗುಲದಲ್ಲಿ ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡುವ ಕುರಿತಂತೆ ಇರುವ ಕಾನೂನು ತೊಡಕುಗಳ ಬಗ್ಗೆ ವಿಸ್ತೃತ ಪೀಠದ ವಿಚಾರಣೆಗೆ ಅವಕಾಶ ಕಲ್ಪಿಸುವ ಕ್ರಮವನ್ನು ಸುಪ್ರೀಂ ಕೋರ್ಟ್‌ ಸೋಮವಾರ ಎತ್ತಿಹಿಡಿಯಿತು.

ಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬೊಬಡೆ ನೇತೃತ್ವದ 9 ಸದಸ್ಯರ ನ್ಯಾಯಪೀಠವು, ತೀರ್ಪು ಮರುಪರಿಶೀಲಿಸುವ ಅಧಿಕಾರದ ಜೊತೆಗೆ, ಕಾನೂನು ತೊಡಕುಗಳನ್ನು ಪರಿಶೀಲಿಸುವಂತೆ ವಿಸ್ತೃತ ನ್ಯಾಯಪೀಠಕ್ಕೆ ಸೂಚಿಸುವ ಅಧಿಕಾರವೂ ಸುಪ್ರೀಂ ಕೋರ್ಟ್‌ಗೆ ಇದೆ ಎಂದು ಅಭಿಪ್ರಾಯಪಟ್ಟಿತು.

ಇದೇ ಸಂದರ್ಭ ನ್ಯಾಯಪೀಠವು ಪರಿಶೀಲಿಸಬೇಕಾದ ವಿಷಯಗಳನ್ನೂ ನ್ಯಾಯಾಲಯವು ಸ್ಪಷ್ಟಪಡಿಸಿತು.

ಶಬರಿಮಲೆ ಪ್ರಕರಣದ ವಿಚಾರಣೆ ಫೆ.17ರಿಂದ ಮತ್ತೆ ಆರಂಭವಾಗಲಿದೆ. ಇಬ್ಬರೂ ವಕೀಲರಿಗೆ ವಾದ ಮಂಡನೆಗೆ ತಲಾ ಒಂದು ದಿನಗಳ ಅವಕಾಶ ಸಿಗಲಿದೆ. ಪೂರಕ ವಾದಕ್ಕಾಗಿ ಎರಡು ತಾಸು ಸಮಯ ನೀಡಲಾಗುವುದು ಎಂದು ನ್ಯಾಯಪೀಠ ಪ್ರಕಟಿಸಿತು.

ವಿಸ್ತೃತ ನ್ಯಾಯಪೀಠವು ಧಾರ್ಮಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಏಳು ಪ್ರಶ್ನೆಗಳಿಗೆ ಸಂಬಂಧಿಸಿದ ವಿಚಾರಗಳನ್ನು ಸಂವಿಧಾನ ಮತ್ತು ಶ್ರದ್ಧೆಗಳನ್ನು ಆಧರಿಸಿ ವಿಚಾರಣೆ ನಡೆಸಲಿದೆ ಎಂದು ನ್ಯಾಯಪೀಠವು ಹೇಳಿತು. ಧಾರ್ಮಿಕ ಸ್ವಾತಂತ್ರ್ಯದ ವ್ಯಾಪ್ತಿ, ವೈಯಕ್ತಿಕ ಶ್ರದ್ಧೆ ಮತ್ತು ಧಾರ್ಮಿಕ ಸ್ವಾತಂತ್ರ್ಯ ಸಂಬಂಧಿಸಿದ ವಿಷಯಗಳೂ ಈ ಪ್ರಶ್ನೆಗಳಲ್ಲಿ ಸೇರಿದೆ.

ಸಂವಿಧಾನದ 25ನೇ ವಿಧಿಯ ಅನ್ವಯ ಧಾರ್ಮಿಕ ಸ್ವಾತಂತ್ರ್ಯ ಮತ್ತು ವಿವಿಧ ಮತಶ್ರದ್ಧೆಗಳಿಗೆ ಸಂಬಂಧಿಸಿದ ವಿಚಾರಗಳನ್ನೂ ವಿಸ್ತೃತ ನ್ಯಾಯಪೀಠವು ಪರಿಶೀಲಿಸುತ್ತದೆ ಎಂದು ಬೊಬಡೆ ನೇತೃತ್ವದ ನ್ಯಾಯಪೀಠವು ಘೋಷಿಸಿತು.

ಸಂವಿಧಾನದ 25 (2)(ಬಿ) ಪರಿಚ್ಛೇದದಲ್ಲಿ ಉಲ್ಲೇಖವಾಗಿರುವ ‘ಹಿಂದೂ ಸಮುದಾಯಗಳು‘ (ಸೆಕ್ಷನ್ಸ್ ಆಫ್ ಹಿಂದೂಸ್) ಪದಗುಚ್ಛದ ಅರ್ಥದ ಜೊತೆಗೆ ಧಾರ್ಮಿಕ ಆಚರಣೆಗಳ ಬಗ್ಗೆಯೂ ವಿಸ್ತೃತ ನ್ಯಾಯಪೀಠವು ನ್ಯಾಯಾಂಗ ಪರಿಶೀಲನೆ ನಡೆಸಲಿದೆ ಎಂದು ಹೇಳಿತು.

ಒಂದು ನಿರ್ದಿಷ್ಟ ಧರ್ಮಕ್ಕೆ ಸೇರಿರದ ವ್ಯಕ್ತಿಗೆ ಮತ್ತೊಂದು ಧರ್ಮದ ಆಚರಣೆಗಳನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮೂಲಕ ಪ್ರಶ್ನಿಸುವ ಅಧಿಕಾರವಿದೆಯೇ ಎಂಬ ಬಗ್ಗೆಯೂ ಸುಪ್ರೀಂ ಕೋರ್ಟ್‌ ತನ್ನ ನಿಲುವು ಸ್ಪಷ್ಟಪಡಿಸಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು