ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಸಾಲ ಮನ್ನಾ ಭರವಸೆ ಕಾಂಗ್ರೆಸ್‌ನ ಗಿಮಿಕ್‌: ಮೋದಿ

ಲೋಕಸಭಾ ಚುನಾವಣೆ
Last Updated 3 ಫೆಬ್ರುವರಿ 2019, 19:27 IST
ಅಕ್ಷರ ಗಾತ್ರ

ಜಮ್ಮು: ಕೃಷಿ ಸಾಲ ಮನ್ನಾ ಭರವಸೆಯು ಚುನಾವಣೆ ಗೆಲ್ಲುವುದಕ್ಕಾಗಿ ಕಾಂಗ್ರೆಸ್‌ ಪಕ್ಷದ ತಂತ್ರ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ.

ಚುನಾವಣೆ ಸಮೀಪಿಸಿದಾಗ ಮಾತ್ರ ಕಾಂಗ್ರೆಸ್‌ಗೆ ರೈತರ ಸಾಲ ನೆನಪಾಗುತ್ತದೆ. ಸಾಲ ಮನ್ನಾ ಹೆಸರಲ್ಲಿ ಕಾಂಗ್ರೆಸ್‌ ಪಕ್ಷ ರೈತರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಅವರು ವಿಜಯಪುರದಲ್ಲಿ ಭಾನುವಾರ ನಡೆದ ರ‍್ಯಾಲಿಯಲ್ಲಿ ತರಾಟೆಗೆ ತೆಗೆದುಕೊಂಡರು.

ರೈತರ ₹6 ಲಕ್ಷ ಕೋಟಿ ಸಾಲ ಮನ್ನಾ ಮಾಡುವುದಾಗಿ ಹೇಳಿ 2008–09ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಕೇವಲ ₹52,000 ಕೋಟಿ ಸಾಲ ಮನ್ನಾ ಮಾಡಿತ್ತು. ಹತ್ತು ವರ್ಷಗಳ ನಂತರ ಮತ್ತೊಮ್ಮೆ ರೈತರ ಸಾಲ ಮನ್ನಾ ಮಾಡುವುದಾಗಿ ಹೇಳುತ್ತಿದೆ ಎಂದು ಲೇವಡಿ ಮಾಡಿದರು.

25–30 ಲಕ್ಷ ಅನರ್ಹ ವ್ಯಕ್ತಿಗಳೂ ಸಾಲ ಮನ್ನಾ ಸೌಲಭ್ಯ ಪಡೆದಿರುವ ಆಘಾತಕಾರಿ ವಿಷಯವನ್ನು ಮಹಾಲೇಖಪಾಲರ ವರದಿ ಪತ್ತೆ ಹಚ್ಚಿದೆ. ಈ ಹಣ ಮಧ್ಯವರ್ತಿಗಳ ಜೇಬು ಸೇರುತ್ತಿದೆ ಎಂದು ಆರೋಪಿಸಿದರು.

ಮಧ್ಯಪ್ರದೇಶ, ರಾಜಸ್ಥಾನದ ಕಾಂಗ್ರೆಸ್‌ ಸರ್ಕಾರಗಳು ಇದೇ ಕೆಲಸ ಮಾಡುತ್ತಿವೆ. ರೈತರು ಸಾಲ ಮನ್ನಾ ಮೋಸಕ್ಕೆ ಬಲಿಯಾಗಬಾರದು ಎಂದು ಮೋದಿ ಮನವಿ ಮಾಡಿದರು.

ಪ್ರಧಾನಮಂತ್ರಿ ಕಿಸಾನ್‌ ಯೋಜನೆಗೆ ಪ್ರತಿವರ್ಷ ₹75 ಸಾವಿರ ಕೋಟಿ ಮೀಸಲಾಗಿಡಲಾಗಿದ್ದು ಮುಂದಿನ 10 ವರ್ಷಗಳಲ್ಲಿ ರೈತರ ಖಾತೆಗಳಿಗೆ ₹7.50 ಲಕ್ಷ ಕೋಟಿ ಜಮಾ ಮಾಡಲಾಗುವುದು ಎಂದು ತಿಳಿಸಿದರು.

ಪೌರತ್ವ ಮಸೂದೆ ಜಾರಿಗೆ ಬದ್ಧ:ಪಾಕಿಸ್ತಾನ, ಅಫ್ಗಾನಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಹಿಂಸೆ ಅನುಭವಿಸುತ್ತಿರುವ ಭಾರತ ಮಾತೆಯ ಮಕ್ಕಳ ನೆರವಿಗೆ ನಿಲ್ಲುವ ಉದ್ದೇಶದಿಂದ ಪೌರತ್ವ ತಿದ್ದುಪಡಿ ಮಸೂದೆ ತರಲಾಗಿದೆ ಎಂದು ಮೋದಿ ಹೇಳಿದರು.

ವಿದೇಶಿ ನೆಲದಲ್ಲಿ ನೋವು ಅನುಭವಿಸುತ್ತಿರುವ ಅಣ್ಣ, ತಮ್ಮಂದಿರ ನೋವಿಗೆಧ್ವನಿಯಾಗಬೇಕು ಎಂಬ ಸಂಕಲ್ಪದಿಂದ ಸರ್ಕಾರವು ಪೌರತ್ವ ತಿದ್ದುಪಡಿ ಮಸೂದೆ ಜಾರಿಗೆ ಬದ್ಧವಾಗಿದೆ ಎಂದರು.

‘ಉಗ್ರರ ಬೆನ್ನೆಲುಬು ಮುರಿದಿದ್ದೇವೆ’
ಭಯೋತ್ಪಾದನೆ ನಿಗ್ರಹಕ್ಕೆ ಭಾರತ ಅನುಸರಿಸುತ್ತಿರುವ ಹೊಸ ನೀತಿ ಮತ್ತು ರೀತಿಗಳು ನಿರ್ದಿಷ್ಟ ದಾಳಿಯ ನಂತರ ವಿಶ್ವಕ್ಕೆ ಮನದಟ್ಟಾಗಿವೆ ಎಂದು ಮೋದಿ ಹೇಳಿದ್ದಾರೆ.

ಕಣಿವೆ ರಾಜ್ಯದಲ್ಲಿ ಭಯೋತ್ಪಾದನೆ ಚಟುವಟಿಕೆಗಳ ಬೆನ್ನೆಲುಬು ಮುರಿದಿದ್ದೇವೆ. ಉಗ್ರರಿಗೆ ತಕ್ಕ ಪಾಠ ಕಲಿಸಲು ಸರ್ಕಾರ ಹಿಂಜರಿಯುವುದಿಲ್ಲ ಎಂದು ಘೋಷಿಸಿದರು. ಭಯೋತ್ಪಾದಕರ ಉಪಟಳದಿಂದ ಕಣಿವೆ ರಾಜ್ಯ ತೊರೆದ ಕಾಶ್ಮೀರಿ ಪಂಡಿತರ ರಕ್ಷಣೆಗೂ ಸರ್ಕಾರ ಬದ್ಧ ಎಂದು ಭರವಸೆ ನೀಡಿದರು.

ಭಾರಿ ಭದ್ರತೆ

* ಮೋದಿ ಭೇಟಿ ವಿರೋಧಿಸಿ ಪ್ರತಿಭಟನೆಗೆ ಕರೆ ನೀಡಿದ್ದ ಪ್ರತ್ಯೇಕತಾವಾದಿಗಳು

* ಹುರಿಯತ್‌ ಮುಖಂಡರು ಸೇರಿದಂತೆ ಪ್ರತ್ಯೇಕತಾವಾದಿ ನಾಯಕರಿಗೆ ಗೃಹ ಬಂಧನ

* ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಕಣಿವೆ ರಾಜ್ಯದಲ್ಲಿ ಭಾರಿ ಬಿಗಿ ಬಂದೋಬಸ್ತ್‌

* ಅಖಿಲ ಭಾರತ ವೈದ್ಯಕೀಯ ಸಂಸ್ಥೆ (ಏಮ್ಸ್‌) ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ

* ಲಡಾಖ್‌ನ ಮೊದಲ ವಿಶ್ವವಿದ್ಯಾಲಯ ಉದ್ಘಾಟನೆ

ತೆಲಂಗಾಣ: ಬಿಜೆಪಿ ಏಕಾಂಗಿ
ಹೈದರಾಬಾದ್‌: ತೆಲಂಗಾಣದಲ್ಲಿ ಬಿಜೆಪಿ ಯಾವುದೇ ಪಕ್ಷದ ಜತೆಗೆ ಹೊಂದಾಣಿಕೆ ಅಥವಾ ಮೈತ್ರಿ ಮಾಡಿಕೊಳ್ಳುತ್ತಿಲ್ಲ. ಇಲ್ಲಿನ ಎಲ್ಲ 17 ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಭ್ರಷ್ಟಾಚಾರರಹಿತ ಆಡಳಿತ ಕೊಟ್ಟಿದ್ದಾರೆ ಹಾಗಾಗಿ ಬಿಜೆಪಿಗೆ ಆತ್ಮವಿಶ್ವಾಸ ಇದೆ ಎಂದು ಆ ಪಕ್ಷದ ಮುಖಂಡ ಬಂಡಾರು ದತ್ತಾತ್ರೇಯ ಹೇಳಿದ್ದಾರೆ.

ಕಳೆದ ಡಿಸೆಂಬರ್‌ನಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ತೆಲಂಗಾಣದಲ್ಲಿ ಒಂದು ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಗೆದ್ದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT