ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳದಲ್ಲಿ ನಾಳೆಯಿಂದ ಬಸ್ ಸಂಚಾರ: ಟಿಕೆಟ್ ದರ ಶೇ 50ರಷ್ಟು ಹೆಚ್ಚಳ

Last Updated 19 ಮೇ 2020, 10:57 IST
ಅಕ್ಷರ ಗಾತ್ರ

ಕೊಚ್ಚಿ: ಕೇರಳದಲ್ಲಿ ನಾಳೆಯಿಂದ ಬಸ್ ಸಂಚಾರ ಆರಂಭಗೊಳ್ಳಲಿದ್ದು, ಟಿಕೆಟ್ ದರ ಶೇ 50ರಷ್ಟು ಹೆಚ್ಚಿಸಲಾಗಿದೆ.

ಕನಿಷ್ಠ ದರವನ್ನೂ ₹8ರಿಂದ ₹12ಕ್ಕೆ ಹೆಚ್ಚಿಸಲಾಗಿದೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಎಲ್ಲ ಘಟಕಗಳಲ್ಲಿ ಮಾಸ್ಕ್ ಮತ್ತು ಸ್ಯಾನಿಟೈಸರ್‌ಗಳನ್ನು ವಿತರಿಸಲಾಗುತ್ತದೆ. ಸಿಬ್ಬಂದಿಗೆ ಮತ್ತು ಪ್ರಯಾಣಿಕರು ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

ಲಾಕ್‌ಡೌನ್ 4.0 ಯಲ್ಲಿ ಬಸ್ ಸಂಚಾರಕ್ಕೆ ವಿನಾಯಿತಿ ನೀಡಲಾಗಿರುವುದರಿಂದ ಅಂತರಜಿಲ್ಲಾ ಸಂಚಾರಕ್ಕೂ ಅನುಮತಿ ನೀಡಲಾಗಿದೆ. ಗರಿಷ್ಠ ಸಂಖ್ಯೆಯಲ್ಲಿ ಬಸ್‌ಗಳು ಸಂಚಾರ ನಡೆಸಲಿವೆ. ಸಂಚರಿಸಬೇಕಾದ ಮಾರ್ಗಗಳು ಮತ್ತು ಪ್ರಯಾಣದ ವೇಳಾಪಟ್ಟಿ ಅಂತಿಮಗೊಳಿಸಲು ಎಲ್ಲ ಡಿಪೊಗಳಿಗೆ ಸೂಚನೆ ನೀಡಲಾಗಿದೆ ಎಂದು ರಾಜ್ಯ ಸಾರಿಗೆ ಸಚಿವ ಎ.ಕೆ.ಶಶೀಂದ್ರನ್ ತಿಳಿಸಿದ್ದಾರೆ.

ಒಂದು ಬಸ್‌ನಲ್ಲಿ 25ಕ್ಕಿಂತ ಹೆಚ್ಚು ಪ್ರಯಾಣಿಕರನ್ನು ಕರೆದೊಯ್ಯುವಂತಿಲ್ಲ. ಎರಡು ಆಸನಗಳಲ್ಲಿ ಒಬ್ಬ ಪ್ರಯಾಣಿಕ ಕುಳಿತುಕೊಳ್ಳಬಹುದು.ಮೂರು ಆಸನಗಳಲ್ಲಿ ಇಬ್ಬರು ಪ್ರಯಾಣಿಕರು ಕುಳಿತುಕೊಳ್ಳಬಹುದಾಗಿದೆ. ಬಸ್ ಹತ್ತುವ ಮುನ್ನ ಸ್ಯಾನಿಟೈಸರ್‌ ಬಳಕೆ ಕಡ್ಡಾಯಗೊಳಿಸಲಾಗಿದೆ.

ಒಂದು ಬಸ್‌ನಲ್ಲಿ 25 ಜನರಿಗೆ ಮಾತ್ರವೇ ಅವಕಾಶ ನೀಡಿರುವುದರಿಂದ ಅರ್ಧದಷ್ಟು ಜನ ಮಾತ್ರ ಪ್ರಯಾಣಿಸಿದಂತಾಗುತ್ತದೆ. ಇದರಿಂದ ಸಾರಿಗೆ ನಿಗಮಕ್ಕೆ ದಿನವೊಂದಕ್ಕೆ ಸುಮಾರು ₹42 ಲಕ್ಷ ನಷ್ಟವಾಗಲಿದೆ ಎನ್ನಲಾಗಿದೆ.

ಸಂಚಾರ ಪುನರಾರಂಭಿಸುವ ಬಗ್ಗೆ ಖಾಸಗಿ ಬಸ್‌ ಮಾಲೀಕರು ಇನ್ನೂ ನಿರ್ಧಾರ ಕೈಗೊಂಡಿಲ್ಲ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT