ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಬಂಧ ತೆರವು: ಸಹಜತೆಯತ್ತ ಜೀವನ– ಬಸ್‌, ಆಟೊ, ಕ್ಯಾಬ್‌ ಸಂಚಾರಕ್ಕೆ ಅವಕಾಶ

ಮಾಲ್‌, ಸಿನಿಮಾ ಮಂದಿರಗಳ ಮೇಲೆ ನಿರ್ಬಂಧ l ಹೋಟೆಲ್‌ನಲ್ಲಿ ಪಾರ್ಸೆಲ್‌ ಮಾತ್ರ
Last Updated 19 ಮೇ 2020, 1:06 IST
ಅಕ್ಷರ ಗಾತ್ರ

ಬೆಂಗಳೂರು: ಮಾಲ್, ಚಿತ್ರಮಂದಿರ, ಶಾಲಾ– ಕಾಲೇಜು, ಹೋಟೆಲ್‌ಗಳನ್ನು ಬಿಟ್ಟು ಉಳಿದ ಎಲ್ಲ ಚಟುವಟಿಕೆಗಳಿಗೂ ಮಂಗಳವಾರದಿಂದಲೇ ಅನುಮತಿ ನೀಡಲಾಗಿದೆ. ಸುಮಾರು ಎರಡು ತಿಂಗಳು ಲಾಕ್‌ಡೌನ್‌ನಿಂದ ತತ್ತರಿಸಿದ್ದ ರಾಜ್ಯ ಸಹಜ ಜೀವನದತ್ತ ಮರಳಲಿದೆ.

ಕೆಂಪು ವಲಯ ಮತ್ತು ಕಂಟೈನ್‌‌ಮೆಂಟ್ ವಲಯ ಬಿಟ್ಟು ಉಳಿದ ಕಡೆ ಎಲ್ಲ ಮಾದರಿಯ ವಾಹನ ಸಂಚಾರಕ್ಕೆ ಹಾಗೂ ಹೇರ್‌ಕಟ್ಟಿಂಗ್‌ ಸಲೂನ್‌, ಸ್ಪಾ ಮತ್ತು ಎಲ್ಲ ರೀತಿಯ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ.

ಲಾಕ್‌ಡೌನ್‌ ಮಾರ್ಗಸೂಚಿಯ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಂಪುಟದ ಹಿರಿಯ ಸಚಿವರು ಮತ್ತು ಅಧಿಕಾರಿಗಳ ಜತೆ ಸೋಮವಾರ ಚರ್ಚೆ ನಡೆಸಿದರು. ಬಹುಪಾಲು ನಿರ್ಬಂಧಗಳನ್ನು ತೆಗೆಯುವ ತೀರ್ಮಾನ ಕೈಗೊಂಡರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಎಲ್ಲ ರೀತಿಯ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ನೀಡಿದ್ದೇವೆ. ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಖಾಸಗಿ ಬಸ್‌ಗಳು, ಕ್ಯಾಬ್‌, ಟ್ಯಾಕ್ಸಿ ಮತ್ತು ಆಟೊಗಳ ಓಡಾಟಕ್ಕೂ ಅನುಮತಿ ನೀಡಲಾಗಿದೆ’ ಎಂದರು.

‘ಬಸ್‌ಗಳಲ್ಲಿ 30 ಪ್ರಯಾಣಿಕರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಬಸ್‌ಗಳಲ್ಲಿ ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್‌ ಹಾಕಿಕೊಳ್ಳಬೇಕು’ ಎಂದರು.

ಬಸ್‌ ಪ್ರಯಾಣ ದರ ಏರಿಕೆ ಇಲ್ಲ:ರಾಜ್ಯರಸ್ತೆ ಸಾರಿಗೆ ಸಂಸ್ಥೆ ನಷ್ಟದಲ್ಲಿ ಇದ್ದರೂ ಬಸ್‌ ಪ್ರಯಾಣ ದರ ಏರಿಕೆ ಮಾಡುವುದಿಲ್ಲ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

ಭಾನುವಾರ ರಾಜ್ಯದಲ್ಲಿ ಸಂಪೂರ್ಣ ಲಾಕ್‌ಡೌನ್‌

ಪ್ರತಿ ಭಾನುವಾರ ರಾಜ್ಯದಲ್ಲಿ ಸಂಪೂರ್ಣ ಲಾಕ್‌ಡೌನ್‌ ಇರುತ್ತದೆ. ತುರ್ತು ಸೇವೆಗಳನ್ನು ಬಿಟ್ಟು ಯಾವುದೇ ಚಟುವಟಿಕೆಗಳಿಗೂ ಅವಕಾಶ ಇರುವುದಿಲ್ಲ ಎಂದು ಯಡಿಯೂರಪ್ಪ ತಿಳಿಸಿದರು. ಸೋಮವಾರದಿಂದ ಶನಿವಾರದವರೆಗೆ ರಾತ್ರಿ 7 ಗಂಟೆಯಿಂದ ಬೆಳಿಗ್ಗೆ 7 ಗಂಟೆಯವರೆಗೆ ಎಲ್ಲ ಚಟುವಟಿಕೆಗಳ ಮೇಲೆ ನಿರ್ಬಂಧವಿರುತ್ತದೆ ಎಂದರು.

ಉದ್ಯಾನಗಳಲ್ಲಿ ವಿಹಾರ: ಉದ್ಯಾನಗಳಲ್ಲಿ ವಿಹಾರಕ್ಕೆ ಬೆಳಿಗ್ಗೆ 7 ರಿಂದ 9 ಗಂಟೆಯವರೆಗೆ ಸಂಜೆ 4 ರಿಂದ 7 ಗಂಟೆವರೆಗೆ ಸಮಯ ನಿಗದಿ.

ಮದುವೆಗಳಿಗೆ ಅವಕಾಶ

ಲಾಕ್‌ಡೌನ್‌ನಿಂದ ಸಾಕಷ್ಟು ವಿವಾಹಗಳು ಮುಂದೂಡಿಕೆ ಆಗಿರುವುದರಿಂದ ಷರತ್ತುಬದ್ಧ ಅನುಮತಿ ನೀಡಲು ಸರ್ಕಾರ ತೀರ್ಮಾನಿಸಿದೆ. ಲಾಕ್‌ಡೌನ್‌ ನಿಯಮಾವಳಿಗಳನ್ನು ಪಾಲಿಸಿ ಮದುವೆ ನಡೆಸಬಹುದು. 50 ಜನ ಮಾತ್ರ ಪಾಲ್ಗೊಳ್ಳಬೇಕು.

4 ರಾಜ್ಯಗಳ ಜನರಿಗೆ ಪ್ರವೇಶವಿಲ್ಲ

ಕೋವಿಡ್‌–19 ಹರಡುವಿಕೆ ನಿಯಂತ್ರಿಸಲು ಗುಜರಾತ್‌, ಮಹಾರಾಷ್ಟ್ರ, ಕೇರಳ ಮತ್ತು ತಮಿಳುನಾಡಿನಿಂದ ಬರುವ ಜನರಿಗೆ ಮೇ 31 ರವರೆಗೆ ಅವಕಾಶವಿರುವುದಿಲ್ಲ ಎಂದು ಯಡಿಯೂರಪ್ಪ ಟ್ವೀಟ್‌ ಮೂಲಕ ತಿಳಿಸಿದ್ದಾರೆ.

ಹೊರ ರಾಜ್ಯ ಮತ್ತು ಹೊರ ದೇಶಗಳಲ್ಲಿ ಸಿಲುಕಿರುವ ಕನ್ನಡಿಗರನ್ನು ಕರೆದುಕೊಂಡು ಬಂದಾಗ ಕಡ್ಡಾಯವಾಗಿ ಕ್ವಾರಂಟೈನ್‌ಗೆ ಒಳಪಡಿಸಲಾಗುವುದು ಎಂದು ಹೇಳಿದ್ದಾರೆ.

ಯಾವುದಕ್ಕೆ ನಿರ್ಬಂಧ?

ಎಲ್ಲ ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನಗಳ ಸಂಚಾರ. (ವೈದ್ಯಕೀಯ ಉದ್ದೇಶದ ಹಾರಾಟಗಳಿಗೆ ಅವಕಾಶವಿದೆ)

ಮೆಟ್ರೊ ರೈಲು, ಶಾಲೆ–ಕಾಲೇಜು, ತರಬೇತಿ, ಕೋಚಿಂಗ್‌ ಸೆಂಟರ್‌ಗಳು. (ಆನ್‌ಲೈನ್‌ ಮೂಲಕ ಪಾಠ– ಪ್ರವಚನ ನಡೆಸಬಹುದು)

ಹೋಟೆಲ್‌‌, ರೆಸ್ಟೋರೆಂಟ್‌ಗಳು (ಪಾರ್ಸೆಲ್‌ಗೆ ಮಾತ್ರ ಅವಕಾಶ)

ಸಿನಿಮಾ ಮಂದಿರಗಳು, ಶಾಪಿಂಗ್‌ ಮಾಲ್‌ಗಳು, ಜಿಮ್, ಈಜುಕೊಳಗಳು, ಮನರಂಜನಾ ಪಾರ್ಕ್‌, ಬಾರ್‌, ಪಬ್

ಸ್ಪೋರ್ಟ್‌ ಕಾಂಪ್ಲೆಕ್ಸ್‌ಗಳಲ್ಲಿ ಕ್ರೀಡಾ ಚಟುವಟಿಕೆ ನಡೆಸಬಹುದು. ಆದರೆ, ಪ್ರೇಕ್ಷಕರಿಗೆ ಪ್ರವೇಶ ಇಲ್ಲ

ಸಾಮಾಜಿಕ, ರಾಜಕೀಯ, ಕ್ರೀಡೆ, ಮನರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮ ಮತ್ತು ಸಮಾವೇಶಗಳು ಇಲ್ಲ

ಅಂತರ ಜಿಲ್ಲಾ ಸಂಚಾರಕ್ಕೆ ಪಾಸ್‌ ಬೇಕಿಲ್ಲ

ಜಿಲ್ಲೆಗಳ ಮಧ್ಯೆ ಬಸ್ಸು, ನಗರ ಸಾರಿಗೆ, ಗ್ರಾಮಾಂತರ ಸಾರಿಗೆ ಖಾಸಗಿ ಬಸ್‌ಗಳು ಮಂಗಳವಾರದಿಂದ ಸಂಚರಿಸಲಿವೆ. ವ್ಯಕ್ತಿಗಳ ಮಧ್ಯೆ ಅಂತರ ಕಾಯ್ದುಕೊಳ್ಳಬೇಕು. ಮಾಸ್ಕ್‌ ಕಡ್ಡಾಯ. ಟ್ಯಾಕ್ಸಿಗಳಲ್ಲಿ ಚಾಲಕ, ಇಬ್ಬರು ಪ್ರಯಾಣಿಕರು, ಆಟೊಗಳಲ್ಲಿ ಚಾಲಕ ಮತ್ತು ಇಬ್ಬರು ಪ್ರಯಾಣಿಕರು, ಮ್ಯಾಕ್ಸಿಕ್ಯಾಬ್‌ಗಳಲ್ಲಿ ಪ್ರಯಾಣಿಕರು ಅಂತರ ಕಾಯ್ದಕೊಂಡು ಸಂಚರಿಸಬಹುದು ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌ ತಿಳಿಸಿದ್ದಾರೆ.

'ರಾಜ್ಯದಲ್ಲಿ ಮೇ 19ರಿಂದ ರೈಲುಗಳ ಸಂಚಾರ ಆರಂಭಿಸುವ ಕುರಿತು ನಿರ್ಧಾರ ಕೈಗೊಂಡಿಲ್ಲ'

ಬೆಳಗಾವಿ: ‘ರಾಜ್ಯದಲ್ಲಿ ಮೇ 19ರಿಂದ ರೈಲುಗಳ ಸಂಚಾರ ಆರಂಭಿಸುವ ಕುರಿತು ನಿರ್ಧಾರ ಕೈಗೊಂಡಿಲ್ಲ' ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ತಿಳಿಸಿದರು. 'ಪ್ರಜಾವಾಣಿ' ಜೊತೆ ಮಾತನಾಡಿದ ಅವರು, ‘ರೈಲುಗಳ ಸಂಚಾರ ಕುರಿತು ಕೇಂದ್ರ ಸರ್ಕಾರ ನಿರ್ಧಾರ ಮಾಡುತ್ತದೆಯೇ ಹೊರತು ರಾಜ್ಯ ಸರ್ಕಾರಗಳಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT