ಮಂಗಳವಾರ, ಸೆಪ್ಟೆಂಬರ್ 28, 2021
22 °C

ಯುದ್ಧನೌಕೆಯನ್ನು ಟ್ಯಾಕ್ಸಿಯಂತೆ ಬಳಸಿದ್ದ ರಾಜೀವ್‌: ಮೋದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ರಾಜೀವ್‌ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಯುದ್ಧ ನೌಕೆ ‘ಐಎನ್‌ಎಸ್‌ ವಿರಾಟ್‌’ ಅನ್ನು ಗಾಂಧಿ ಕುಟುಂಬದ ವಿಹಾರಕ್ಕಾಗಿ ಬಳಸಲಾಗಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಆರೋಪಿಸಿದ್ದಾರೆ. ರಾಜೀವ್‌ ಅವರು ಸಾಯುವ ಹೊತ್ತಿಗೆ ‘ಭ್ರಷ್ಟಾಚಾರಿ ನಂ. 1’ ಆಗಿದ್ದರು ಎಂದು ಇತ್ತೀಚೆಗಷ್ಟೇ ಮೋದಿ ಅವರು ಆಪಾದಿಸಿದ್ದರು.

ಕಾಂಗ್ರೆಸ್‌ ನಾಯಕರು ಯಾರ ಹೆಸರಿನಲ್ಲಿ ಮತ ಕೇಳುತ್ತಾರೆಯೋ ಆ ನಾಯಕರ ‘ದುರಾಚಾರ’ವನ್ನು ಬಯಲು ಮಾಡಿದರೆ ಸಿಟ್ಟು ಬರುವುದು ಏಕೆ ಎಂದು ಮೋದಿ ಪ್ರಶ್ನಿಸಿದ್ದಾರೆ.

‘ಭಾರತದ ಪ್ರಮುಖ ಯುದ್ಧ ನೌಕೆಯೊಂದು ನಾಯಕರ ರಜೆ ಕಳೆಯಲು ಟ್ಯಾಕ್ಸಿಯ ರೀತಿಯಲ್ಲಿ ಬಳಕೆಯಾಗಿರಬಹುದು ಎಂದು ಎಂದಾದರೂ ಊಹಿಸಿದ್ದೀರಾ? ಒಂದು ವಂಶವು ಅದನ್ನೂ ಮಾಡಿದೆ’ ಎಂದು ಪ್ರಧಾನಿ ಹೇಳಿದ್ದಾರೆ.

ನೌಕಾಪಡೆಯು ಗಾಂಧಿ ಕುಟುಂಬದ ಆತಿಥ್ಯ ವಹಿಸುವಂತೆ ಮಾಡಲಾಗಿತ್ತು. ಆ ರಜಾ ವಿಹಾರದಲ್ಲಿ ರಾಜೀವ್‌ ಅವರ ಅತ್ತೆ ಮನೆಯವರೂ ಇದ್ದರು. ಅವರ ಸೇವೆಗೆ ಸೇನೆಯ ಹೆಲಿಕಾಪ್ಟರನ್ನು ಕೂಡ ನಿಯೋಜಿಸಲಾಗಿತ್ತು. ಒಂದು ಕುಟುಂಬವಷ್ಟೇ ಮುಖ್ಯವಾದರೆ ದೇಶದ ಭದ್ರತೆ ಅಪಾಯಕ್ಕೆ ಒಳಗಾಗುತ್ತದೆ ಎಂದು ಮೋದಿ ಹೇಳಿದರು. 

‘ಟ್ಯಾಕ್ಸಿಯ ರೀತಿಯಲ್ಲಿ ಬಳಸುವ ಮೂಲಕ ಐಎನ್‌ಎಸ್ ವಿರಾಟ್‌ಗೆ ಅವಮಾನ ಮಾಡಲಾಗಿದೆ. ರಾಜೀವ್‌ ಮತ್ತು ಅವರ ಕುಟುಂಬ 10 ದಿನ ರಜೆ ಕಳೆಯಲು ಇದನ್ನು ಬಳಸಲಾಗಿದೆ. ದೇಶದ ಭದ್ರತೆಗೆ ಬಳಕೆಯಾಗಬೇಕಿದ್ದ ನೌಕೆಯನ್ನು ಕುಟುಂಬದ ರಜೆಗಾಗಿ ಬಳಸಲಾಯಿತು. ನೌಕೆಯನ್ನು ದ್ವೀಪವೊಂದರ ಬಳಿ 10 ದಿನ ಉಳಿಸಿಕೊಳ್ಳಲಾಗಿತ್ತು’ ಎಂದು ಮೋದಿ ಹೇಳಿದ್ದಾರೆ.

ರಾಜೀವ್‌ ಗಾಂಧಿಯ ಮಾವನ ಮನೆಯವರು ಇಟಲಿಯಿಂದ ಬಂದಿದ್ದರು. ಅವರನ್ನು ಯುದ್ಧ ನೌಕೆಯಲ್ಲಿ ಕರೆದೊಯ್ಯುವ ಮೂಲಕ ದೇಶದ ಭದ್ರತೆ ವಿಚಾರದಲ್ಲಿ ರಾಜಿ ಮಾಡಿಕೊಂಡಂತೆ ಆಗಲಿಲ್ಲವೇ ಎಂಬುದು ಕಾಡುವ ಪ್ರಶ್ನೆ ಎಂದು ಮೋದಿ ಹೇಳಿದರು.

ಐಎನ್‌ಎಸ್‌ ವಿರಾಟ್‌ ಅನ್ನು 1987ರಲ್ಲಿ ಭಾರತೀಯ ನೌಕಾಪಡೆಗೆ ಸೇರಿಸಲಾಗಿತ್ತು. 2016ರ ವರೆಗೆ ಸುಮಾರು 30 ವರ್ಷ ಇದು ನೌಕಾಪಡೆಯ ಸೇವೆಯಲ್ಲಿತ್ತು.

1984ರಿಂದ 89ರವರೆಗೆ ಪ್ರಧಾನಿಯಾಗಿದ್ದ ರಾಜೀವ್‌ ಅವರು ‘ಭ್ರಷ್ಟಾಚಾರಿ ನಂ. 1’ ಆಗಿದ್ದರು ಎಂದು ಮೋದಿ ಆರೋಪಿಸಿದ್ದಕ್ಕೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಮತ್ತು ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಕೆಲದಿನಗಳ ಹಿಂದೆ ಅಸಮಾಧಾನ ವ್ಯಕ್ತಪಡಿಸಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು