ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ಹಯ್ಯಾ ಸ್ಪರ್ಧೆಗೆ ತೇಜಸ್ವಿ ವಿರೋಧ: ಬೇಗುಸರಾಯ್‌ನಲ್ಲಿ ಅತೃಪ್ತಿ ಅಲೆ

ಬಿಜೆಪಿ ಅಭ್ಯರ್ಥಿ ಗಿರಿರಾಜ್‌ಗೆ ಸಿಟ್ಟು
Last Updated 18 ಮಾರ್ಚ್ 2019, 20:17 IST
ಅಕ್ಷರ ಗಾತ್ರ

ಪಟ್ನಾ: ಬಿಹಾರದ ಬೇಗುಸರಾಯ್‌ ಲೋಕಸಭಾ ಕ್ಷೇತ್ರವು ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ ಮತ್ತು ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್‌ ಇಬ್ಬರ ನಿದ್ದೆಯನ್ನೂ ಕೆಡಿಸಿದೆ. ಪರಸ್ಪರ ವಿರುದ್ಧ ಧ್ರುವಗಳಾಗಿರುವ ಈ ಇಬ್ಬರ ಚಿಂತೆಗೆ ಕಾರಣಗಳು ಮಾತ್ರ ಭಿನ್ನ, ಭಿನ್ನ.

ನವಾದಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಗಿರಿರಾಜ್‌ ಅವರಿಗೆ ಈ ಬಾರಿ ಅಲ್ಲಿಂದ ಟಿಕೆಟ್‌ ನಿರಾಕರಿಸಲಾಗಿದೆ. ಕೇಂದ್ರ ಸಚಿವರಾಗಿರುವ ಬಿಹಾರದ ಎಲ್ಲ ಸಂಸದರಿಗೂ ಅವರು ಪ್ರತಿನಿಧಿಸುತ್ತಿರುವ ಕ್ಷೇತ್ರಗಳಿಂದಲೇ ಪುನರಾಯ್ಕೆಗೆ ಅವಕಾಶ ಕೊಡಲಾಗಿದೆ. ರಾಧಾ ಮೋಹನ್‌ ಸಿಂಗ್‌, ಆರ್‌.ಕೆ.ಸಿಂಗ್‌, ರಾಮ್‌ ಕೃಪಾಲ್ ಯಾದವ್‌ ಮತ್ತು ಅಶ್ವಿನಿ ಚೌಬೆ ಅವರು ತಮ್ಮ ಕ್ಷೇತ್ರಗಳಿಂದಲೇ ಕಣಕ್ಕೆ ಇಳಿಯಲಿದ್ದಾರೆ. ಆದರೆ, ನವಾದಾ ಕ್ಷೇತ್ರವನ್ನು ಮಿತ್ರ ಪಕ್ಷ ಜೆಡಿಯುಗೆ ಬಿಟ್ಟುಕೊಡ ಲಾಗಿದೆ. ಹಾಗಾಗಿ ಬೇಗುಸರಾಯ್‌ನಿಂದ ಸ್ಪರ್ಧಿಸುವಂತೆ ಗಿರಿರಾಜ್‌ಗೆ ಪಕ್ಷ ಸೂಚಿಸಿದೆ.

ಬೇಗುಸರಾಯ್‌ ಬಿಜೆಪಿಗೆ ಸುಲಭ ಗೆಲುವಿನ ಕ್ಷೇತ್ರ ಅಲ್ಲ. 1960ರ ದಶಕದಿಂದಲೂ ಎಡಪಕ್ಷಗಳ ಪ್ರಾಬಲ್ಯದ ವಿಧಾನಸಭಾ ಕ್ಷೇತ್ರಗಳು ಇಲ್ಲಿ ಇವೆ.

ಮೇಲ್ಜಾತಿಯ ಭೂಮಿಹಾರ್‌ ಸಮುದಾಯದ ಜನರು ಇಲ್ಲಿ ಬಹುಸಂಖ್ಯಾತರು. ಗಿರಿರಾಜ್‌ ಅವರೂ ಇದೇ ಸಮುದಾಯಕ್ಕೆ ಸೇರಿದವರು. ಆ ಕಾರಣಕ್ಕಾಗಿಯೇ ಗಿರಿರಾಜ್‌ ಅವರನ್ನು ಇಲ್ಲಿಂದ ಕಣಕ್ಕೆ ಇಳಿಸಲು ಬಿಜೆಪಿ ಮುಂದಾಗಿದೆ.

‘ಭೂಮಿಹಾರ್‌ ಸಮುದಾಯಕ್ಕೆ ಸೇರಿದವನು ಎಂಬ ಕಾರಣಕ್ಕೆ ಬೇಗುಸರಾಯ್‌ನಿಂದ ಸ್ಪರ್ಧಿಸಬೇಕು ಎನ್ನುತ್ತಿದ್ದಾರೆ. ಹಾಗಾದರೆ, ಹಿಂದೂ ಆಗಿರುವ ನಾನು ಮುಸ್ಲಿಂ ಪ್ರಾಬಲ್ಯದ ಅರಾರಿಯಾ ಕ್ಷೇತ್ರದಿಂದಲೂ ಸ್ಪರ್ಧಿಸಬಹುದಲ್ಲವೇ’ ಎಂದು ಗಿರಿರಾಜ್‌ ಪ್ರಶ್ನಿಸಿದ್ದಾರೆ. ತಮ್ಮ ಅತೃಪ್ತಿಯನ್ನು ಅವರು ಮುಚ್ಚಿಡುವ ಪ್ರಯತ್ನವನ್ನೇನೂ ಮಾಡುತ್ತಿಲ್ಲ.

ಆಪ‍್ತನಿಗಾಗಿ ತೇಜಸ್ವಿ ಪಟ್ಟು:ತೇಜಸ್ವಿಯ ಅಸಮಾಧಾನಕ್ಕೆ ಬೇರೆ ಕಾರಣ ಇದೆ. ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ನಾಯಕರಾಗಿದ್ದ ಕನ್ಹಯ್ಯಾ ಕುಮಾರ್‌ ಅವರನ್ನು ಬೇಗುಸರಾಯ್‌ನಿಂದ ಕಣಕ್ಕೆ ಇಳಿಸಬೇಕು ಎಂದು ಸಿಪಿಐ ಪಟ್ಟು ಹಿಡಿದಿದೆ. ಬಿಹಾರದ ಮಹಾಮೈತ್ರಿಕೂಟದಲ್ಲಿ ಸಿಪಿಐ ಕೂಡ ಭಾಗ.

ಕನ್ಹಯ್ಯಾ ಅವರು ಬೇಗುಸರಾಯ್‌ನಿಂದ ಸ್ಪರ್ಧಿಸಬೇಕು ಎಂಬುದಕ್ಕೆ ಸಿಪಿಐ ಹಲವು ಕಾರಣ ಕೊಟ್ಟಿದೆ. ‘ಕನ್ಹಯ್ಯಾ ಬೇಗುಸರಾಯ್‌ನವರು. ಅವರ ತಂದೆ–ತಾಯಿ ಆ ಕ್ಷೇತ್ರದ ವ್ಯಾಪ್ತಿಯಲ್ಲಿಯೇ ವಾಸಿಸುತ್ತಿದ್ದಾರೆ. ಉತ್ತಮ ಭಾಷಣಕಾರರಾಗಿರುವ ಕನ್ಹಯ್ಯಾ ಸ್ಥಳೀಯ ಆಡುಭಾಷೆಯಲ್ಲಿ ಜನರೊಂದಿಗೆ ಸಂಪರ್ಕ ಸಾಧಿಸಬಲ್ಲರು. ಅದಲ್ಲದೆ, ಕನ್ಹಯ್ಯಾ ಅವರು ಭೂಮಿಹಾರ್‌ ಸಮುದಾಯಕ್ಕೆ ಸೇರಿದವರು. ಈ ಸಮುದಾಯದ ಮತದಾರರ ಸಂಖ್ಯೆ ಮೂರು ಲಕ್ಷಕ್ಕೂ ಹೆಚ್ಚು’ ಎಂದು ಸಿಪಿಐ ಮುಖಂಡ ಸತ್ಯನಾರಾಯಣ ಸಿಂಗ್‌ ಹೇಳುತ್ತಾರೆ.

ಆದರೆ, ಬೇಗುಸರಾಯ್‌ನಿಂದ ಕನ್ಹಯ್ಯಾ ಅವರನ್ನು ಕಣಕ್ಕೆ ಇಳಿಸಲು ತೇಜಸ್ವಿಗೆ ಇಷ್ಟ ಇಲ್ಲ. 2014ರ ಚುನಾವಣೆಯಲ್ಲಿ ಅಲ್ಪ ಅಂತರದಿಂದ ಸೋತ ಜೆಡಿಯುನ ತನ್ವೀರ್‌ ಅಖ್ತರ್‌ ಅವರಿಗೆ ಟಿಕೆಟ್‌ ನೀಡಬೇಕು ಎಂಬುದು ತೇಜಸ್ವಿ ಲೆಕ್ಕಾಚಾರ.ತೇಜಸ್ವಿ ಬೇಡಿಕೆಗೆ ಮಣಿಯಲು ಸಿಪಿಐ ಒಪ್ಪಿಲ್ಲ. ತಮ್ಮ ಆಪ್ತ ತನ್ವೀರ್‌ ಅವರನ್ನು ಕೈಬಿಡಲು ತೇಜಸ್ವಿ ಸಿದ್ಧರಿಲ್ಲ. ಹಾಗಾಗಿ, ಮತದಾನಕ್ಕೆ ಮೊದಲೇ ಮಹಾಮೈತ್ರಿ ಕುಸಿದು ಬಿದ್ದರೂ ಆಶ್ಚರ್ಯ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT