ಲೋಕಸಭಾ ಚುನಾವಣೆ: ಕೇರಳದಲ್ಲಿ ಖಾತೆ ತೆರೆಯಲು ಬಿಜೆಪಿ ತಂತ್ರ

7
ಪ್ರಸಿದ್ಧರ ಹೆಸರು ತೇಲಿಬಿಟ್ಟು ಪ್ರತಿಕ್ರಿಯೆ ಮೇಲೆ ನಿಗಾ: ತರೂರ್‌ಗೆ ಭಾರಿ ಸ್ಪರ್ಧೆ ಒಡ್ಡಲು ಯೋಜನೆ

ಲೋಕಸಭಾ ಚುನಾವಣೆ: ಕೇರಳದಲ್ಲಿ ಖಾತೆ ತೆರೆಯಲು ಬಿಜೆಪಿ ತಂತ್ರ

Published:
Updated:

ತಿರುವನಂತಪುರ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೇರಳದಲ್ಲಿ ಖಾತೆ ತೆರೆಯಲೇಬೇಕು ಎಂಬ ಹುರುಪಿನಲ್ಲಿ ಬಿಜೆಪಿ ಇದೆ. ತಿರುವನಂತಪುರ ಕ್ಷೇತ್ರದ ಮೇಲೆ ಭಾರಿ ನಿರೀಕ್ಷೆ ಇರಿಸಿಕೊಂಡಿದೆ. ಅದಕ್ಕಾಗಿ ಸಂಭಾವ್ಯ ಅಭ್ಯರ್ಥಿಗಳ ಒಂದೊಂದೇ ಹೆಸರು ತೇಲಿ ಬಿಟ್ಟು ಪ್ರತಿಕ್ರಿಯೆಗಳ ಮೇಲೆ ನಿಗಾ ಇಟ್ಟು ಕೂತಿದೆ.

ಈ ವರ್ಷ ಪದ್ಮಭೂಷಣ ಪುರಸ್ಕಾರಕ್ಕೆ ಪಾತ್ರರಾದ ನಟ ಮೋಹನ್‌ಲಾಲ್‌ ಮತ್ತು ಇಸ್ರೊದ ಮಾಜಿ ವಿಜ್ಞಾನಿ ನಂಬಿ ನಾರಾಯಣನ್‌, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌, ನಟ ಮತ್ತು ರಾಜ್ಯಸಭಾ ಸದಸ್ಯ ಸುರೇಶ್‌ ಗೋಪಿ, ರಾಜ್ಯ ಪೊಲೀಸ್‌ನ ಮಾಜಿ ಮುಖ್ಯಸ್ಥ ಟಿ.ಪಿ. ಸೆನ್‌ಕುಮಾರ್‌, ಮಿಜೋರಾಂ ರಾಜ್ಯಪಾಲ ಕುಮ್ಮನಂ ಜಶೇಖರನ್‌ ಹೆಸರುಗಳು ಈಗಾಗಲೇ ಚರ್ಚೆಯಾಗುತ್ತಿವೆ.

ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ವಿರುದ್ಧ ಷಡ್ಯಂತ್ರ: ಚುನಾವಣಾ ಆಯೋಗಕ್ಕೆ ದೂರು​

ತಿರುವನಂತಪುರ ಕ್ಷೇತ್ರವನ್ನು ಕಳೆದ ಎರಡು ಅವಧಿಯಿಂದ ಕಾಂಗ್ರೆಸ್‌ನ ಶಶಿ ತರೂರ್‌ ಪ್ರತಿನಿಧಿಸುತ್ತಿದ್ದಾರೆ.
ಮುಂಬರುವ ಚುನಾವಣೆಯಲ್ಲಿಯೂ ಅವರು ಸ್ಪರ್ಧಿಸುವುದು ಬಹುತೇಕ ಖಚಿತ. 

ದೊಡ್ಡ ದೊಡ್ಡ ಹೆಸರುಗಳನ್ನೇ ಮುಂದೆ ಬಿಟ್ಟು ಜನರ ಪ್ರತಿಕ್ರಿಯೆ ಗಮನಿಸುವುದು ಬಿಜೆಪಿಯ ಕಾರ್ಯತಂತ್ರ ಎಂದು ಬಿಜೆಪಿ ಮೂಲಗಳು ಹೇಳುತ್ತಿವೆ. ಈ ಎಲ್ಲ ಪ್ರತಿಕ್ರಿಯೆಗಳನ್ನು ವಿಶ್ಲೇಷಿಸಿ ಗೆಲ್ಲುವ ಸಾಧ್ಯತೆ ಇರುವ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಬಿಜೆಪಿ ಉದ್ದೇಶಿಸಿದೆ. ಪ್ರಸಿದ್ಧ ವ್ಯಕ್ತಿಗಳು ಸ್ಪರ್ಧಿಸುವ ಬಗ್ಗೆ ವದಂತಿಗಳು ಹರಿದಾಡುತ್ತಿದ್ದರೂ ಬಿಜೆಪಿ ಮುಖಂಡರು ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. 

ಮೋಹನ್‌ಲಾಲ್‌ ಹೆಸರು ಎರಡು ತಿಂಗಳ ಹಿಂದೆ ಜೋರಾಗಿ ಕೇಳಿಬಂತು. ಆಗ, ಅವರೇ ಅದನ್ನು ಅಲ್ಲಗಳೆ
ದಿದ್ದರು. ಇತ್ತೀಚಿನ ದಿನಗಳಲ್ಲಿ ಅವರ ಹೆಸರು ಮತ್ತೆ ಕೇಳಿ ಬರುತ್ತಿದೆ. ಮೋಹನ್‌ಲಾಲ್‌ ಹೆಸರು ಪರಿಶೀಲನೆಯಲ್ಲಿದೆ ಎಂದು ಬಿಜೆಪಿಯ ಹಿರಿಯ ಮುಖಂಡ ಒ.ರಾಜಗೋಪಾಲ್‌ ಅವರು ಮಾಧ್ಯಮಕ್ಕೆ ಇತ್ತೀಚೆಗೆ ಹೇಳಿದ್ದಾರೆ. 

ಇದನ್ನೂ ಓದಿ: ರಾಹುಲ್‌ ವಿರುದ್ಧ ನಿತೀಶ್‌ ಕುಮಾರ್ ವಾಗ್ದಾಳಿ​

ನಿರ್ಮಲಾ ಸೀತಾರಾಮನ್‌ ಹೆಸರು ಇತ್ತೀಚೆಗೆ ಕೇಳಿ ಬಂತು. ಆದರೆ, ‘ಇಲ್ಲಿಂದ ಸ್ಪರ್ಧಿಸುವ ಇಚ್ಛೆ ಇಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಒಖಿ ಚಂಡಮಾರುತ ಕೇರಳ ಕರಾವಳಿಗೆ ಅಪ್ಪಳಿಸಿದ ಸಂದರ್ಭದಲ್ಲಿ ಈ ಪ್ರದೇಶದಲ್ಲಿ ನಿರ್ಮಲಾ ಸುತ್ತಾಡಿ ಜನರಿಗೆ ಸಾಂತ್ವನ ಹೇಳಿದ್ದರು. ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಜನರ ಆಕ್ರೋಶಕ್ಕೆ ತುತ್ತಾಗಿದ್ದರು. ಈ ಕಾರಣದಿಂದ ತಿರುವನಂತಪುರ ಕ್ಷೇತ್ರದ ಸಂಭಾವ್ಯ ಅಭ್ಯರ್ಥಿಯಾಗಿ ನಿರ್ಮಲಾ ಹೆಸರು ಕೇಳಿ ಬಂದಿದೆ ಎನ್ನಲಾಗಿದೆ. 

ಈ ಕ್ಷೇತ್ರದಲ್ಲಿ ಭಾರಿ ಜನಪ್ರಿಯತೆ ಇರುವ ಸ್ಥಳೀಯ ನಾಯಕರು ಯಾರೂ ಸದ್ಯ ಬಿಜೆಪಿಯಲ್ಲಿ ಇಲ್ಲ. 2014ರ ಲೋಕಸಭಾ ಚುನಾವಣೆಯಲ್ಲಿ ಒ.ರಾಜಗೋಪಾಲ್‌ ಅವರು ಶಶಿ ತರೂರ್‌ಗೆ ಭಾರಿ ಸ್ಪರ್ಧೆ ಒಡ್ಡಿದ್ದರು. 2016ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಈ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಒಂದು ಕ್ಷೇತ್ರದಿಂದ ಗೆದ್ದು ಕೇರಳದ ಮೊದಲ ಬಿಜೆಪಿ ಶಾಸಕ ಎನಿಸಿಕೊಂಡಿದ್ದಾರೆ. ಈಗ ಮಿಜೋರಾಂ ರಾಜ್ಯಪಾಲರಾಗಿರುವ ಕುಮ್ಮನಂ ರಾಜಶೇಖರನ್‌ ಅವರು ತಿರುವನಂತಪುರ ವಿಧಾನಸಭಾ ಕ್ಷೇತ್ರದಲ್ಲಿ 2016ರಲ್ಲಿ ಎರಡನೇ ಸ್ಥಾನಕ್ಕೆ ಬಂದಿದ್ದರು. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !