ಶುಕ್ರವಾರ, ಸೆಪ್ಟೆಂಬರ್ 17, 2021
26 °C

ಆಜಂಗಡ ಕ್ಷೇತ್ರದಿಂದ ಅಖಿಲೇಶ್‌ ಕಣಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲಖನೌ: ಸಮಾಜವಾದಿ ಪಕ್ಷದ (ಎಸ್‌ಪಿ) ಅಧ್ಯಕ್ಷ ಅಖಿಲೇಶ್‌ ಯಾದವ್‌ ಉತ್ತರ ಪ್ರದೇಶದ ಆಜಂಗಡ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ಈ ಮೂಲಕ ಅವರು ಯಾವ ಕ್ಷೇತ್ರ ಆಯ್ಕೆ ಮಾಡಿಕೊಳ್ಳಬಹುದೆಂಬ ಊಹಾಪೋಹಗಳಿಗೆ ಭಾನುವಾರ ಪಕ್ಷವು ತೆರೆ ಎಳೆದಿದೆ.

ಅಖಿಲೇಶ್‌ ತಂದೆ ಹಾಗೂ ಪಕ್ಷದ ಪೋಷಕ ಮುಲಾಯಂ ಸಿಂಗ್‌ ಯಾದವ್‌ 2014ರ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದರು. ಮೋದಿ ಅಲೆಯ ನಡುವೆಯೂ ಅವರು 63 ಸಾವಿರ ಮತಗಳಿಂದ ಗೆಲುವು ದಾಖಲಿಸಿದ್ದರು.

ಅಖಿಲೇಶ್‌ ಅವರು ಕನೌಜ್‌ ಕ್ಷೇತ್ರದಿಂದ ಸ್ಪರ್ಧಿಸಬಹುದೆಂಬ ಸುದ್ದಿಗಳು ಬಂದಿದ್ದವು. ಈ ಕ್ಷೇತ್ರದಲ್ಲಿ ಅವರ ಪತ್ನಿ ಡಿಂಪಲ್ ಹಾಲಿ ಸದಸ್ಯೆಯಾಗಿದ್ದಾರೆ.

ತೀಕ್ಷ್ಣ ಹೇಳಿಕೆಗಳಿಂದಲೇ ಹೆಸರಾಗಿರುವ ಪಕ್ಷದ ಇನ್ನೊಬ್ಬ ನಾಯಕ ಅಜಂ ಖಾನ್‌ ಅವರು ರಾಂಪುರ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ಈ ಕ್ಷೇತ್ರದಿಂದ ಬಾಲಿವುಡ್‌ ನಟಿ ಹಾಗೂ ಮಾಜಿ ಸಂಸದೆ ಜಯಪ್ರದಾ ಬಿಜೆಪಿಯಿಂದ ಕಣಕ್ಕಿಳಿಯಲಿದ್ದಾರೆ ಎಂಬ ಮಾತುಗಳು ಹರಡಿವೆ. ಈ ಕ್ಷೇತ್ರದಲ್ಲಿ ಶೇ 52ರಷ್ಟು ಮುಸ್ಲಿಂ ಮತದಾರರಿದ್ದು, ಅಜಂ ಸ್ಪರ್ಧೆಯಿಂದ ಕ್ಷೇತ್ರದಲ್ಲಿ ಮಾತ್ರವಲ್ಲ, ಮಧ್ಯ ಉತ್ತರಪ್ರದೇಶದಲ್ಲೂ ಮುಸ್ಲಿಂ ಮತಗಳನ್ನು ಬಾಚಿಕೊಳ್ಳಬಹುದೆಂಬ ವಿಶ್ವಾಸವನ್ನು ಎಸ್‌ಪಿ ಹೊಂದಿದೆ.

ಆಜಂಗಢ ಸುರಕ್ಷಿತ ಕ್ಷೇತ್ರ ಮಾತ್ರವಲ್ಲ, ಇಲ್ಲಿ ಸ್ಪರ್ಧಿಸುವುದರಿಂದ ರಾಜ್ಯದ ಪೂರ್ವಭಾಗದಲ್ಲಿ ಪಕ್ಷಕ್ಕೆ ಹಾಗೂ ಮಹಾಮೈತ್ರಿ ಕೂಟಕ್ಕೆ ಹೆಚ್ಚಿನ ಬೆಂಬಲ ದೊರೆಯಬಹುದೆಂಬ ಕಾರಣಕ್ಕೆ ಅಖಿಲೇಶ್‌ ಈ ಕ್ಷೇತ್ರ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಕಳೆದ ಚುನಾವಣೆಯಲ್ಲಿ ಮೋದಿ ಅಲೆಯಿಂದಾಗಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಪ್ರಾಬಲ್ಯ ಸಾಧಿಸಿತ್ತು.

ತಾರಾ ಪ್ರಚಾರಕರ ಪಟ್ಟಿ ತಿದ್ದುಪಡಿ; ಮುಲಾಯಂ ವಾಪಸ್‌ 

ಲಖನೌ: ಟೀಕೆಗಳ ಸುರಿಮಳೆ ಎದುರಿಸಿದ ಸಮಾಜವಾದಿ ಪಕ್ಷವು, ಪಕ್ಷದ ವರಿಷ್ಠ ಮುಲಾಯಂ ಅವರಿಗೆ ತಾರಾ ಪ್ರಚಾರಕರ ಪಟ್ಟಿಯಲ್ಲಿ ಮತ್ತೆ ಸ್ಥಾನ 
ನೀಡಿದೆ. 

ಭಾನುವಾರ ಬಿಡುಗಡೆ ಮಾಡಲಾದ 40 ತಾರಾ ಪ್ರಚಾರಕರ ಪಟ್ಟಿಯಲ್ಲಿ ಮುಲಾಯಂ ಹೆಸರು ಇರಲಿಲ್ಲ. ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ಪತ್ನಿ ಡಿಂಪಲ್ ಯಾದವ್, ನಟಿ–ರಾಜಕಾರಣಿ ಜಯಾ ಬಚ್ಚನ್ ಹಾಗೂ ಪಕ್ಷದ ಪ್ರಧಾನ ಕಾರ್ಯದರ್ಶಿ ರಾಮ್‌ ಗೋಪಾಲ್ ಯಾದವ್‌ಗೆ ಸ್ಥಾನ ನೀಡಲಾಗಿತ್ತು. 

‘ಇದು ಮುಲಾಯಂ ಅವರಿಗೆ ಮಾಡಿದ ಅವಮಾನ’ ಎಂದು ಮುಲಾಯಂ ಅವರ ಸಹೋದರ ಹಾಗೂ ಎಸ್‌ಪಿ ಬಂಡಾಯ ನಾಯಕ ಶಿವಪಾಲ್ ಯಾದವ್ ಪ್ರತಿಕ್ರಿಯಿಸಿದ್ದರು.

ಕಾರ್ತಿ ಚಿದಂಬರಂಗೆ ಶಿವಗಂಗಾ ಟಿಕೆಟ್

ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಅವರ ಮಗ ಕಾರ್ತಿ ಚಿದಂಬರಂಗೆ ತಮಿಳುನಾಡಿನ ಶಿವಗಂಗಾ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಲಾಗಿದೆ. ಶುಕ್ರವಾರ ಪ್ರಕಟವಾಗಿದ್ದ ಪಟ್ಟಿಯಲ್ಲಿ ಶಿವಗಂಗಾ ಕ್ಷೇತ್ರದ ಟಿಕೆಟ್ ಘೋಷಿಸಿರಲಿಲ್ಲ. ಚಿದಂಬರಂ ಅವರು ರಾಜ್ಯಸಭಾ ಸದಸ್ಯರಾಗಿದ್ದಾರೆ. ಹಾಗಾಗಿ, ಅವರ ಮಗನಿಗೆ ಟಿಕೆಟ್ ನೀಡುವುದು ಸರಿಯಲ್ಲ ಎಂಬ ಕಾರಣಕ್ಕೆ ಅವರ ಹೆಸರನ್ನು ತಡೆಹಿಡಿಯಲಾಗಿತ್ತು. ಭಾನುವಾರ ಬಿಡುಗಡೆಯಾದ ಪಟ್ಟಿಯಲ್ಲಿ ಕಾರ್ತಿ ಚಿದಂಬರಂ ಸ್ಥಾನ ಗಿಟ್ಟಿಸಿದ್ದಾರೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುಕುಲ್ ವಾಸ್ನಿಕ್ ಹಾಗೂ ಗುಜರಾತ್‌ ಕಾಂಗ್ರೆಸ್ ಉಸ್ತುವಾರಿ ರಾಜೀವ್ ಸತಾವ್ ಅವರಿಗೆ ಟಿಕೆಟ್ ಸಿಕ್ಕಿಲ್ಲ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು