ಕಾವಲುಗಾರನ ಬಯ್ಯುವ ಕಳ್ಳರು: ಪ್ರಧಾನಿ

7
ದೇಶದ ಜನರಿಗೆ ಕಲಬೆರಕೆ ಸರ್ಕಾರ ಬೇಕಾಗಿಲ್ಲ

ಕಾವಲುಗಾರನ ಬಯ್ಯುವ ಕಳ್ಳರು: ಪ್ರಧಾನಿ

Published:
Updated:
Prajavani

ನವದೆಹಲಿ: ದೇಶದ ಮೇಲೆ ತುರ್ತುಪರಿಸ್ಥಿತಿ ಹೇರಿ, ನ್ಯಾಯಾಂಗದ ಮೇಲೆ ದಬ್ಬಾಳಿಕೆ ನಡೆಸಿ, ಸೇನೆಯನ್ನು ಅವಮಾನಿಸಿದ ಕಾಂಗ್ರೆಸ್‌ ಪಕ್ಷವು ತಮ್ಮ ಮೇಲೆ ಸಂಸ್ಥೆಗಳನ್ನು ನಾಶ ಮಾಡಿದ ಆರೋಪ ಹೊರಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ರಾಷ್ಟ್ರಪತಿಯವರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ವಿರೋಧ ಪಕ್ಷಗಳ ಮೇಲೆ ವಾಗ್ದಾಳಿ ನಡೆಸಲು ಬಳಸಿಕೊಂಡರು. 

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಪದೇ ಪದೇ ಪ್ರಸ್ತಾಪಿಸುತ್ತಿರುವ ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದದ ವಿಚಾರದಲ್ಲಿಯೂ ಕಾಂಗ್ರೆಸ್‌ ವಿರುದ್ಧ ಪ್ರಧಾನಿ ಹರಿಹಾಯ್ದರು. ಕಾಂಗ್ರೆಸ್ ಪಕ್ಷಕ್ಕೆ ಭಾರತದ ವಾಯುಪಡೆಯು ಬಲವಾಗಿರುವುದು ಬೇಕಿಲ್ಲ ಎಂದರು. 

‘ರಫೇಲ್‌ ಒಪ್ಪಂದ ವಿಚಾರದಲ್ಲಿ ಅವರು ಇಷ್ಟೊಂದು ಆತ್ಮವಿಶ್ವಾಸದಲ್ಲಿ ಯಾಕೆ ಮಾತನಾಡುತ್ತಿದ್ದಾರೆ ಎಂಬ ಪ್ರಶ್ನೆ ನನ್ನಲ್ಲಿ ಮೂಡಿತ್ತು. ಅಷ್ಟೊಂದು ವರ್ಷ ಅವರು ಅಧಿಕಾರದಲ್ಲಿದ್ದಾಗ ಒಂದೇ ಒಂದು ರಕ್ಷಣಾ ಒಪ್ಪಂದವೂ ಪ್ರಾಮಾಣಿಕವಾಗಿ ನಡೆದಿಲ್ಲ ಎಂಬುದನ್ನು ನನಗೆ ನೆನಪಾಯಿತು. ಒಬ್ಬರು ಮಾಮಾ, ಇನ್ನೊಬ್ಬರು ಚಾಚಾ ಬರುತ್ತಲೇ ಇದ್ದರು’ ಎಂದು ಮೋದಿ ಹೇಳಿದರು. 

ಬಿಜೆಪಿ ವಿರೋಧಿ ಪಕ್ಷಗಳ ಮಹಾಮೈತ್ರಿ ಪ್ರಯತ್ನವನ್ನೂ ಮೋದಿ ಅವರು ಹಂಗಿಸಿದರು. ದೇಶದ ಜನರಿಗೆ ಕಲಬೆರಕೆ ಸರ್ಕಾರ ಬೇಕಾಗಿಲ್ಲ. ಯಾಕೆಂದರೆ ಬಹುಮತ ಇರುವ ಎನ್‌ಡಿಎ ಸರ್ಕಾರ ಯಾವ ರೀತಿ ಕೆಲಸ ಮಾಡಿದೆ ಎಂಬುದನ್ನು ಅವರು ನೋಡಿದ್ದಾರೆ ಎಂದರು. 

ಚುನಾವಣಾ ವರ್ಷದಲ್ಲಿ ರಾಜಕೀಯ ಪಕ್ಷಗಳ ನಾಯಕರು ಅನಿವಾರ್ಯವಾಗಿ ಪ್ರತಿಸ್ಪರ್ಧಿ ನಾಯಕರ ಮೇಲೆ ಆರೋಪಗಳನ್ನು ಮಾಡಬೇಕಾಗುತ್ತದೆ. ಆದರೆ, ಮೋದಿ ಮತ್ತು ಬಿಜೆಪಿಯನ್ನು ತೆಗಳುವ ಭರದಲ್ಲಿ ಭಾರತದ ಮೇಲೆಯೂ ಕೆಲವರು ದಾಳಿ ನಡೆಸುತ್ತಿದ್ದಾರೆ ಎಂದರು. 

ರಾಜ್ಯ ಸರ್ಕಾರಗಳನ್ನು ವಜಾ ಮಾಡಲು ಕಾಂಗ್ರೆಸ್‌ ಪಕ್ಷವು ಸಂವಿಧಾನದ 356ನೇ ವಿಧಿಯನ್ನು ಹಲವು ಬಾರಿ ದುರ್ಬಳಕೆ ಮಾಡಿಕೊಂಡಿದೆ. ಇಂದಿರಾ ಗಾಂಧಿ ಅವರೊಬ್ಬರೇ 50 ಬಾರಿ ರಾಜ್ಯ ಸರ್ಕಾರಗಳನ್ನು ವಜಾ ಮಾಡಿದ್ದಾರೆ ಎಂದು ಮೋದಿ ಹೇಳಿದರು. 

ಸತ್ಯವನ್ನು ಆಲಿಸುವ ವಿರೋಧ ಪಕ್ಷಗಳ ಸಾಮರ್ಥ್ಯವೇ ಕುಂದಿದೆ ಎಂದು ಮೋದಿ ಅವರು ವಿಷಾದ ವ್ಯಕ್ತಪಡಿಸಿದರು. ಕಾಂಗ್ರೆಸ್‌ ಪಕ್ಷವು ಚುನಾವಣಾ ಆಯೋಗ ಮತ್ತು ವಿದ್ಯುನ್ಮಾನ ಮತಯಂತ್ರಗಳನ್ನೇ ಪ್ರಶ್ನಿಸಿದೆ. ಆದರೆ, ಸಂಸ್ಥೆಯನ್ನು ನಾಶ ಮಾಡಿದ್ದು ಮೋದಿ ಎಂದು ಆರೋಪಿಸುತ್ತಿದೆ ಎಂದರು. 

ನ್ಯಾಯಾಂಗದ ಮೇಲೆ ದೌರ್ಜನ್ಯ ಎಸಗಿದ್ದು ಕಾಂಗ್ರೆಸ್‌, ಆದರೆ, ಸಂಸ್ಥೆ ನಾಶ ಮಾಡಿದ್ದು ಮೋದಿ, ಯೋಜನಾ ಆಯೋಗವನ್ನು ವಿದೂಷಕರ ಕೂಟ ಎಂದದ್ದು ಕಾಂಗ್ರೆಸ್‌, ಆದರೆ ಸಂಸ್ಥೆಯನ್ನು ನಾಶ ಮಾಡಿದ್ದು ಮೋದಿ ಎಂದು ಅವರು ವ್ಯಂಗ್ಯವಾಡಿದರು. 

ತೃಣಮೂಲ ಕಾಂಗ್ರೆಸ್‌ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಕೋಲ್ಕತ್ತದಲ್ಲಿ ನಡೆಸಿದ ಬಿಜೆಪಿ ವಿರೋಧಿ ಪಕ್ಷಗಳ ಸಮಾವೇಶವನ್ನೂ ಮೋದಿ ಲೋಕಸಭೆಯಲ್ಲಿ ಟೀಕಿಸಿದರು. ‘ಕೋಲ್ಕತ್ತದಲ್ಲಿ ಸೇರಿದ್ದ ಜನರ ಕಲಬೆರಕೆ ಸರ್ಕಾರವನ್ನು ಜನರು ಬಯಸುತ್ತಿಲ್ಲ’ ಎಂದು ಹೇಳಿದರು. 

ಬಿ.ಸಿ., ಎ.ಡಿ.,ಗೆ ಹೊಸ ಅರ್ಥ: ಕಾಲ ಸೂಚಕವಾದ ಬಿ.ಸಿ., ಮತ್ತು ಎ.ಡಿ. ಸಂಕ್ಷಿಪ್ತಾಕ್ಷರಗಳನ್ನೂ ಕಾಂಗ್ರೆಸ್‌ ವಿರುದ್ಧದ ವಾಗ್ದಾಳಿಗೆ ಮೋದಿ ಬಳಸಿಕೊಂಡರು. ಬಿ.ಸಿ. ಎಂದರೆ ಬಿಫೋರ್‌ ಕಾಂಗ್ರೆಸ್‌ (ಕಾಂಗ್ರೆಸ್‌ಗೆ ಮೊದಲು) ಮತ್ತು ಎ.ಡಿ. ಎಂದರೆ ಆಫ್ಟರ್‌ ಡೈನಾಸ್ಟಿ (ವಂಶಾಡಳಿತದ ಬಳಿಕ) ಎಂದು ಅವರು ವಿವರಿಸಿದರು. 

**

ಬಲವಾದ ವಾಯುಪಡೆಯನ್ನು ಭಾರತವು ಹೊಂದುವುದು ಕಾಂಗ್ರೆಸ್‌ಗೆ ಬೇಕಿಲ್ಲ. ಇದು ನಾನು ಮಾಡುತ್ತಿರುವ ಗಂಭೀರವಾದ ಆರೋಪ
– ನರೇಂದ್ರ ಮೋದಿ, ಪ್ರಧಾನಿ

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 0

  Frustrated
 • 5

  Angry

Comments:

0 comments

Write the first review for this !