ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಧ್ಯ ಪ್ರದೇಶ | ಹಿಂದಿರುಗಿದ ಆರು ಶಾಸಕರು: ಕಮಲನಾಥ್ ಸದ್ಯಕ್ಕೆ ಪಾರು

Published : 4 ಮಾರ್ಚ್ 2020, 19:45 IST
ಫಾಲೋ ಮಾಡಿ
Comments

ಭೋಪಾಲ್‌: ಮಧ್ಯ ಪ್ರದೇಶದ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಪತನವಾಗುವ ಸ್ಥಿತಿಗೆ ಕಾರಣವಾಗಿದ್ದ ‘ಒತ್ತೆ ನಾಟಕ’ 24 ತಾಸುಗಳಲ್ಲಿ ಕೊನೆಯಾಗಿದೆ. ಬಿಜೆಪಿಯ ಮುಖಂಡರು ತಮ್ಮ ಬಳಿ ಇರಿಸಿಕೊಂಡಿದ್ದಾರೆ ಎಂದು ಹೇಳಲಾಗಿದ್ದ ಆರು ಶಾಸಕರು ಬುಧವಾರ ಸಂಜೆ ವಿಶೇಷ ವಿಮಾನದಲ್ಲಿ ಭೋಪಾಲ್‌ಗೆ ಹಿಂದಿರುಗಿದ್ದಾರೆ. ಇವರೆಲ್ಲರೂ ಗುರುಗ್ರಾಮದ ಪಂಚತಾರಾ ಹೋಟೆಲ್‌ನಲ್ಲಿ ಇದ್ದರು ಎಂದು ಮೂಲಗಳು ಹೇಳಿವೆ.

ಹಾಗಿದ್ದರೂ ನಾಲ್ವರು ಶಾಸಕರು ಇನ್ನೂ ಸಂಪರ್ಕಕ್ಕೆ ಸಿಕ್ಕಿಲ್ಲ. ಅವರನ್ನು ಗುರುಗ್ರಾಮದಿಂದ ಬೆಂಗಳೂರಿಗೆ ಬಲವಂತವಾಗಿ ಕರೆದೊಯ್ಯಲಾಗಿದೆ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ದಿಗ್ವಿಜಯ್‌ ಸಿಂಗ್‌ ಆರೋಪಿಸಿದ್ದಾರೆ. ಕಮಲನಾಥ್‌ ನೇತೃತ್ವದ ಸರ್ಕಾರವನ್ನು ಬೀಳಿಸುವುದಕ್ಕಾಗಿ ಈ ಶಾಸಕರಿಗೆ ₹25 ಕೋಟಿಯಿಂದ ₹35 ಕೋಟಿವರೆಗೆ ಲಂಚದ ಆಮಿಷ ಒಡ್ಡಲಾಗಿದೆ ಎಂದು ಅವರು ಹೇಳಿದ್ದಾರೆ.

ಶಾಸಕರ ಖರೀದಿಯ ಈ ಆರೋಪವನ್ನು ಬಿಜೆಪಿ ಅಲ್ಲಗಳೆದಿದೆ. ಕಾಂಗ್ರೆಸ್ ಪಕ್ಷದೊಳಗಿನ ಬಣ ರಾಜಕಾರಣವೇ ಈಗಿನ ಬಿಕ್ಕಟ್ಟಿಗೆ ಕಾರಣ ಎಂದು ಬಿಜೆಪಿ ಮುಖಂಡರು ಆಪಾದಿಸಿದ್ದಾರೆ.

ಹಿಂದಿರುಗಿರುವ ಶಾಸಕರಲ್ಲಿ ಎಸ್‌ಪಿಯ ಒಬ್ಬರು, ಬಿಎಸ್‌ಪಿಯ ಇಬ್ಬರು ಮತ್ತು ಕಾಂಗ್ರೆಸ್‌ನ ಮೂವರು ಸೇರಿದ್ದಾರೆ. ಬೆಂಗಳೂರಿಗೆ ಕರೆದೊಯ್ಯಲಾಗಿದೆ ಎಂದು ಹೇಳಲಾಗಿರುವ ಶಾಸಕರಲ್ಲಿ ಮೂವರು ಕಾಂಗ್ರೆಸ್‌ನವರು ಮತ್ತು ಒಬ್ಬರು ಪಕ್ಷೇತರರು ಎಂದು ಹೇಳಲಾಗಿದೆ.

ಹಿಂದಿರುಗಿದ ಆರು ಶಾಸಕರನ್ನು ಮುಖ್ಯಮಂತ್ರಿ ಕಮಲನಾಥ್‌ ನಿವಾಸಕ್ಕೆ ನೇರವಾಗಿ ಕರೆದೊಯ್ಯಲಾಗಿದೆ. ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ದೀಕ್‌ ಬವರಿಯ ಸಮ್ಮುಖದಲ್ಲಿ ಈ ಶಾಸಕರ ಜತೆಗೆ ಮಾತುಕತೆ ನಡೆದಿದೆ.

ಈಗಿನ ವಿದ್ಯಮಾನದಲ್ಲಿ ಬಿಜೆಪಿಯ ಪಾತ್ರದ ಬಗ್ಗೆ ಆ ಪಕ್ಷದಲ್ಲಿ ಒಮ್ಮತದ ಅಭಿಪ್ರಾಯ ಇಲ್ಲ. ಶಾಸಕರ ಭಿನ್ನಮತದಲ್ಲಿ ತಮಗೆ ಯಾವುದೇ ಪಾತ್ರ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಮತ್ತು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ವಿ.ಡಿ. ಶರ್ಮಾ ಹೇಳಿದ್ದಾರೆ. ಆದರೆ, ಕಾಂಗ್ರೆಸ್‌ನ 15ರಿಂದ 20 ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆ ಎಂದು ಬಿಜೆಪಿಯ ಹಿರಿಯ ಮುಖಂಡ ನರೋತ್ತಮ ಮಿಶ್ರಾ ಹೇಳಿದ್ದಾರೆ.

ತಮ್ಮ ಸರ್ಕಾರ ಸುಭದ್ರವಾಗಿದ್ದು ಐದು ವರ್ಷದ ಅವಧಿ ಪೂರೈಸಲಿದೆ ಎಂದು ಕಮಲನಾಥ್‌ ಹೇಳಿದ್ದಾರೆ.

ಕಾಂಗ್ರೆಸ್‌ ಸರ್ಕಾರಕ್ಕೆ ಬೆಂಬಲ ನೀಡುತ್ತಿರುವ ಎಂಟರಿಂದ ಹತ್ತು ಶಾಸಕರನ್ನು ಬಿಜೆಪಿ ಮುಖಂಡರು ಕರೆದೊಯ್ದಿದ್ದಾರೆ. ಇವರನ್ನು ಹರಿಯಾಣದ ಹೋಟೆಲ್‌ನಲ್ಲಿ ಇರಿಸಲಾಗಿದೆ ಎಂಬ ಸುದ್ದಿ ಮಂಗಳವಾರ ರಾತ್ರಿಯೇ ಹಬ್ಬಿತ್ತು.

ಮಧ್ಯ ಪ್ರದೇಶದ ಇಬ್ಬರು ಸಚಿವರು ಬುಧವಾರ ಬೆಳಿಗ್ಗೆಯೇ ಗುರುಗ್ರಾಮದ ಹೋಟೆಲ್‌ಗೆ ಹೋಗಿದ್ದಾರೆ. ಆದರೆ, ಅಲ್ಲಿ ಬಿಎಸ್‌ಪಿ ಶಾಸಕಿ ರಮಾ ಬಾಯಿ ಮಾತ್ರ ಸಿಕ್ಕಿದ್ದಾರೆ.

ಆಮಿಷದ ವಿಡಿಯೊ
ಕಮಲನಾಥ್‌ ಅವರ ಸರ್ಕಾರವನ್ನು ಬೀಳಿಸಿದರೆ ₹100 ಕೋಟಿ ಮತ್ತು ಮುಂದೆ ರಚನೆಯಾಗುವ ಸರ್ಕಾರದಲ್ಲಿ ಸಚಿವ ಸ್ಥಾನ ನೀಡುವುದಾಗಿ ನರೋತ್ತಮ ಮಿಶ್ರಾ ಅವರು ಆಮಿಷ ಒಡ್ಡಿದ್ದಾರೆ ಎಂದು ಹೇಳಲಾಗುವ ವಿಡಿಯೊವೊಂದನ್ನು ಬಿಡುಗಡೆ ಮಾಡಲಾಗಿದೆ. ವ್ಯಾಪಂ ಹಗರಣವನ್ನು ಬಯಲು ಮಾಡಲು ನೆರವಾಗಿದ್ದ ವ್ಯಕ್ತಿಯೊಬ್ಬರು ಈ ವಿಡಿಯೊ ಬಿಡುಗಡೆ ಮಾಡಿದ್ದಾರೆ.

ಈ ವಿಡಿಯೊದ ಅಸಲಿತನವನ್ನು ದೃಢೀಕರಿಸಿಲ್ಲ. ಆದರೆ, ಈ ವಿಡಿಯೊ ನಕಲಿಯಾಗಿದ್ದು, ದಾರಿ ತಪ್ಪಿಸುವ ಉದ್ದೇಶ ಹೊಂದಿದೆ ಎಂದು ಬಿಜೆಪಿ ಹೇಳಿದೆ.

**

ಬೆಂಗಳೂರಿನಲ್ಲಿ ಶಾಸಕರು?
ಮಧ್ಯ ಪ್ರದೇಶದ ಬೆಳವಣಿಗೆಯು, ಕರ್ನಾಟಕದಲ್ಲಿ ಅಧಿಕಾರದಲ್ಲಿದ್ದ ಜೆಡಿಎಸ್‌–ಕಾಂಗ್ರೆಸ್‌ ಸರ್ಕಾರದ ಪತನವನ್ನು ನೆನಪಿಸುವಂತಿದೆ. ಈಗ, ಅಲ್ಲಿನ ನಾಲ್ವರು ಶಾಸಕರನ್ನು ಬೆಂಗಳೂರಿಗೆ ಕಳುಹಿಸಲಾಗಿದೆ ಎಂದು ಹೇಳಲಾಗುತ್ತಿದೆ. ಈ ಶಾಸಕರು ಎಲ್ಲಿದ್ದಾರೆ ಎಂಬ ಖಚಿತ ಮಾಹಿತಿ ದೊರೆತಿಲ್ಲ. ಇವರನ್ನು ಚಿಕ್ಕಮಗಳೂರಿನ ರೆಸಾರ್ಟ್‌ ಒಂದರಲ್ಲಿ ಇರಿಸಲಾಗಿದೆ ಎಂದು ಕರ್ನಾಟಕದ ಹಿರಿಯ ಸಚಿವರೊಬ್ಬರು ಹೇಳಿದ್ದಾರೆ. ಆದರೆ, ಅವರು ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ ಖಾಸಗಿ ವಿಲ್ಲಾದಲ್ಲಿತಂಗಿದ್ದಾರೆ ಎಂದು ಬೇರೊಂದು ಮೂಲ ಹೇಳಿದೆ.

**
ಸದಸ್ಯರ ಒಟ್ಟು ಸಂಖ್ಯೆ: 230
ಕಾಂಗ್ರೆಸ್: 114
ಬಿಎಸ್‌ಪಿ: 2
ಎಸ್‌ಪಿ: 1
ಪಕ್ಷೇತರರು: 4
ಬಿಜೆಪಿ: 107
ತೆರವಾಗಿರುವ ಸ್ಥಾನಗಳು: 2

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT