ಶನಿವಾರ, ಮಾರ್ಚ್ 28, 2020
19 °C

ಮಹದಾಯಿ ತೀರ್ಪು: ಗೋವಾ ಬಿಜೆಪಿ ಸರ್ಕಾರದ ಮೇಲೆ ಮುಗಿಬಿದ್ದ ವಿರೋಧ ಪಕ್ಷಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಣಜಿ: ಮಹದಾಯಿ ವಿಚಾರದಲ್ಲಿ ಗೋವಾ ಜನರ ಹಿತಾಸಕ್ತಿಯನ್ನು ಕಾಪಾಡುವಲ್ಲಿ ವಿಫಲವಾಗಿದೆ ಎಂದು ವಿರೋಧ ಪಕ್ಷಗಳು ಗೋವಾ ಬಿಜೆಪಿ ಸರ್ಕಾರವನ್ನು ಟೀಕಿಸಿದವೆ.

ಮಹದಾಯಿ ನ್ಯಾಯಾಧಿಕರಣ ಮಂಡಳಿ ನೀಡಿರುವ ಅಂತಿಮ ಐ ತೀರ್ಪನ್ನು ಜಾರಿಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ಸರ್ಕಾರ ಸಲ್ಲಿಸಿರುವ ಅರ್ಜಿಯನ್ನು ಗುರುವಾರ ಸುಪ್ರೀಂ ಕೋರ್ಟ್‌ ಮಾನ್ಯ ಮಾಡಿದ್ದು, ಐ ತೀರ್ಪಿಗೆ ಅನುಗುಣವಾಗಿ ಮಹದಾಯಿ ನದಿ ನೀರನ್ನು ಹಂಚಿಕೊಳ್ಳುವಂತೆ ಮಧ್ಯಂತರ ತೀರ್ಪು ನೀಡಿದೆ.  

ಸುಪ್ರೀಂ ತೀರ್ಪಿನ ಬಗ್ಗೆ ಪಕ್ಷವು ಪತ್ರಿಕಾಗೊಷ್ಠಿ ನಡೆಸಲಿದೆ ಎಂದು ಬಿಜೆಪಿ ವಕ್ತಾರ ದತ್ತಪ್ರಸಾದ್ ನಾಯ್ಕ್‌ ಹೇಳಿದ್ದು, ಗೋವಾಗೆ ಕರಾಳ ದಿನ ಎಂದು ವಿರೋದ ಪಕ್ಷದ ನಾಯಕ ದಿಗಂಬರ ಕಾಮತ್ ಹೇಳಿದ್ದಾರೆ.

ಮಹದಾಯಿ ಪ್ರಕರಣದಲ್ಲಿ ಸುಪ್ರೀಂ ತೀರ್ಪಿನ ಬಗ್ಗೆ ರಾಜ್ಯ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಕಾಮತ್ ಅವರು ಟೀಕಿಸಿದ್ದಾರೆ.

ಸುಪ್ರೀಂ ತೀರ್ಪು ನಮ್ಮ ಜೀವ ನದಿ ಮಹದಾಯಿಯ ನೀರನ್ನು ಕರ್ನಾಟಕಕ್ಕೆ ನೀಡುವಾಗ ಗೋವಾ ಸರ್ಕಾರ ಮೌನವಾಗಿದೆ ಇಂದು ರಾಜ್ಯಕ್ಕೆ ಕರಾಳ ದಿನ ಎಂದು ಅವರು ಗೋವಾ ಸರ್ಕಾರವನ್ನು ಟೀಕಿಸಿದರು. 

ಮಹದಾಯಿ ವಿಚಾರವನ್ನು ಗಂಭೀರವಾಗಿ ಪರಿಗಣಿಸದ ಬಿಜೆಪಿ ಸರ್ಕಾರದ ವಿರುದ್ಧ ಜನಾಂದೋಲನವನ್ನು ನಾವು ಇನ್ನಷ್ಟು ತೀವ್ರಗೊಳಿಸಲಿದ್ದೇವೆ ಎಂದು ಕಾಮತ್ ಹೇಳಿದ್ದಾರೆ. 

ಮಹದಾಯಿ ನೀರು ಹಂಚಿಕೆ ವಿಚಾರದಲ್ಲಿ ಗೋವಾ, ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳ ನಡುವೆ ಕಾನೂನು ಸಮರ ನಡೆಯುತ್ತಿದೆ.   

ಗೋವಾದ ಬಿಜೆಪಿ ಸರ್ಕಾರವು ಕರ್ನಾಟಕ ಸರ್ಕಾರದ ಕೈ ಗೊಂಬೆಯಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಗೋವಾ ಫವರ್ಡ್‌ ಪಾರ್ಟಿಯ ಅಧ್ಯಕ್ಷ ವಿಜಯ್‌ ಸರ್ದೇಸಾಯಿ ಆರೋಪಿಸಿದ್ದಾರೆ.

ಮಹದಾಯಿ ನ್ಯಾಯಾಧಿಕರಣ ಮಂಡಳಿಯ ತೀರ್ಪನ್ನು ಜಾರಿಗೊಳಿಸುವಂತೆ ಕರ್ನಾಟಕ ಸರ್ಕಾರ ಕೇಳಿಕೊಂಡಿದ್ದಾಗ, ಗೋವಾ ಸರ್ಕಾರ ಯಾವುದೇ ತಕರಾರು ಅರ್ಜಿ ಸಲ್ಲಿಸಲಿಲ್ಲ,ಆದ್ದರಿಂದ ಕರ್ನಾಟಕವು ಅಧಿಕೃತವಾಗಿ ಕಳಸಾ–ಬಂಡೂರಿ ಯೋಜನೆಯನ್ನು ಮುಂದುವರಿಸಬಹುದು ಎಂದು ಬಸವರಾಜ ಬೊಮ್ಮಾಯಿ(ಕರ್ನಾಟಕ ನೀರಾವರಿ ಸಚಿವ) ಅವರಿಗೆ ಪ್ರಕಾಶ್ ಜಾವ್ಡೇಕರ್‌  24/12/19 ರಂದು ನೀಡಿರುವ ಪತ್ರ ಸಹಿತ ಸರ್ದೇಸಾಯಿ ಟ್ವೀಟ್ ಮಾಡಿದ್ದಾರೆ.

ಮಹದಾಯಿ ವಿಚಾರದಲ್ಲಿ ಬಿಜೆಪಿ ಸರ್ಕಾರವು ರಾಜ್ಯಕ್ಕೆ ವಿಶ್ವಾಸದ್ರೋಹ ಮಾಡಿದ್ದು, ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಅವರು ರಾಜಿನಾಮೆ ನೀಡಬೇಕು ಎಂದು ಎಎಪಿ ಆಗ್ರಹಿಸಿದೆ.

ಮಹದಾಯಿ ಹೋರಾಟದ ಎಲ್ಲ ಹಂತಗಳಲ್ಲಿ ರಾಜ್ಯದ ಹಿತಾಸಕ್ತಿಯನ್ನು ಕಾಪಾಡುವಲ್ಲಿ ಸರ್ಕಾರವು ವಿಫಲವಾಗಿದೆ ಎಂದು ಎಎಪಿ ವಕ್ತಾರ ವಾಲ್ಮೀಕಿ ನಾಯ್ಕ್‌ ಹೇಳಿದ್ದಾರೆ. ‌

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು