ಶುಕ್ರವಾರ, ಫೆಬ್ರವರಿ 26, 2021
29 °C

ಖಾಸಗಿ ಉದ್ಯೋಗಗಳಲ್ಲಿ ಸ್ಥಳೀಯರಿಗೆ ಶೇ 75 ಮೀಸಲು ಭರವಸೆ: ಕಾಂಗ್ರೆಸ್ ಚಿಂತನೆ

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

Maharashtra Elections

ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಮಧ್ಯಪ್ರದೇಶ ಮತ್ತು ಗುಜರಾತ್‌ ವಿಧಾನಸಭೆ ಚುನಾವಣೆಗಳಲ್ಲಿ ಪ್ರಯೋಗಿಸಿದ್ದ ಅಸ್ತ್ರಗಳನ್ನು ಈ ಬಾರಿ ಮಹಾರಾಷ್ಟ್ರದಲ್ಲಿಯೂ ಪ್ರಯೋಗಿಸಲು ಕಾಂಗ್ರೆಸ್ ಚಿಂತನೆ ನಡೆಸಿದೆ.

ಎರಡೂ ರಾಜ್ಯಗಳಲ್ಲಿ ಕಾಂಗ್ರೆಸ್ ನಿರುದ್ಯೋಗ ಭತ್ಯೆ ಮತ್ತು ಉದ್ಯೋಗ ಸೃಷ್ಟಿಯ ವಿಷಯಗಳನ್ನು ದೊಡ್ಡ ದನಿಯಲ್ಲಿ ಪ್ರಸ್ತಾಪಿಸಿತ್ತು. ಮಹಾರಾಷ್ಟ್ರದಲ್ಲಿ ಚುನಾವಣೆ ಪ್ರಣಾಳಿಕೆ ಬಿಡುಗಡೆಗೆ ಸಿದ್ಧತೆ ಮಾಡಿಕೊಳ್ಳುತ್ತಿರುವ ಕಾಂಗ್ರೆಸ್ ಇದೇ ವಿಷಯಗಳತ್ತ ಗಮನ ನೀಡಲು ಮುಂದಾಗಿದೆ.

ಇದನ್ನೂ ಓದಿ: ಬಂತು ಚುನಾವಣೆ: ಮಹಾರಾಷ್ಟ್ರ, ಹರಿಯಾಣದಲ್ಲಿ ರೂಪುಗೊಂಡಿದೆ ಕಾರ್ಯತಂತ್ರ

ಖಾಸಗಿ ಕಂಪನಿಗಳ ಉದ್ಯೋಗಗಳಲ್ಲಿ ಸ್ಥಳೀಯರಿಗೆ ಶೇ 75ರಷ್ಟು ಮೀಸಲಾತಿ, ವಿದ್ಯಾವಂತ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು ₹5000 ನಿರುದ್ಯೋಗ ಭತ್ಯೆ, ಖಾಲಿ ಇರುವ ಸರ್ಕಾರಿ ಹುದ್ದೆಗಳ ಭರ್ತಿಯಂಥ ಭರವಸೆ ನೀಡಲು ಗಂಭೀರ ಚಿಂತನೆ ಸಾಗಿದೆ.

‘ಮಣ್ಣಿನ ಮಕ್ಕಳ’ ವಿಚಾರವನ್ನು ಚುನಾವಣೆಯಲ್ಲಿ ಪ್ರಮುಖವಾಗಿ ಪ್ರಸ್ತಾಪಿಸುವುದು ಮತ್ತು ‘ನಿರುದ್ಯೋಗ ಭತ್ಯೆ’ಯಿಂದ ಯುವಜನರನ್ನು ಓಲೈಸುವುದು ಕಾಂಗ್ರೆಸ್ ಪಕ್ಷದ ಉದ್ದೇಶ. ‘ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಸಿಕ್ಕರೆ ಶೇ 75ರಷ್ಟು ಉದ್ಯೋಗಗಳನ್ನು ಸ್ಥಳೀಯರಿಗೆ ಮೀಸಲಿಡುವ ಕಾನೂನು ಜಾರಿ ಮಾಡಲಾಗುವುದು’ ಎಂಬ ಮಹಾರಾಷ್ಟ್ರ ಯುವ ಕಾಂಗ್ರೆಸ್ ಅಧ್ಯಕ್ಷ ಸತ್ಯಜಿತ್ ತಂಬೆ ಅವರ ಹೇಳಿಕೆಯನ್ನು ‘ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.

‘ಒಂದು ದೇಶ, ಒಂದು ಚಿಂತನೆ’ ಎನ್ನುವ ಧ್ಯೇಯಕ್ಕೆ ಕಾಂಗ್ರೆಸ್ ಬದ್ಧವಾಗಿದೆ ಎನ್ನುವ ತಂಬೆ, ಅದೇ ಹೊತ್ತಿಗೆ ‘ಖಾಸಗಿ ಕಂಪನಿಗಳು ಸ್ಥಳೀಯರಿಗೆ ಉದ್ಯೋಗ ನೀಡುತ್ತಿಲ್ಲ. ಇತರ ರಾಜ್ಯಗಳಿಂದ ಕಡಿಮೆ ಸಂಬಳಕ್ಕೆ ಬರುವ ನೌಕರರಿಗೆ ಆದ್ಯತೆ ಕೊಡುತ್ತಿವೆ. ಇದರಿಂದ ಸ್ಥಳೀಯ ಯುವಕರು ಕೌಶಲವಿದ್ದರೂ ಸಣ್ಣಪುಟ್ಟ ಕೆಲಸಗಳಿಗೆ ಸೀಮಿತವಾಗಬೇಕಾದ ಪರಿಸ್ಥಿತಿ ಒದಗಿದೆ’ ಎಂದು ವಿಷಾದಿಸುತ್ತಾರೆ.

ಮಹಾಪರೀಕ್ಷಾ ಪೋರ್ಟಲ್ ಬಳಕೆಯನ್ನೂ ನಿಲ್ಲಿಸುವುದಾಗಿ ಕಾಂಗ್ರೆಸ್‌ ಭರವಸೆ ನೀಡುವ ನಿರೀಕ್ಷೆ ಇದೆ. ವಿವಿಧ ಹುದ್ದೆಗಳ ನೇಮಕಾತಿಗೆ ಈ ಪೋರ್ಟಲ್ ಮೂಲಕ ಪರೀಕ್ಷೆ ನಡೆಯುತ್ತಿತ್ತು. ಹಲವು ವಿವಾದಗಳಿಗೂ ಇದು ಕಾರಣವಾಗಿತ್ತು. ನೇಮಕಾತಿ ಪರೀಕ್ಷೆಗಳಿಗೆ ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದೂ ಕಾಂಗ್ರೆಸ್ ಘೋಷಿಸುವ ಸಾಧ್ಯತೆ ಇದೆ.

ಸರ್ಕಾರದಲ್ಲಿ ಖಾಲಿಯಿರುವ 1.91 ಲಕ್ಷ ಸರ್ಕಾರಿ ಉದ್ಯೋಗಗಳನ್ನು ಭರ್ತಿ ಮಾಡಲಾಗುವುದು. ನಿರುದ್ಯೋಗಿ ವಿದ್ಯಾವಂತ ಯುವಕರಿಗೆ ₹5000 ನಿರುದ್ಯೋಗ ಭತ್ಯೆ ನೀಡಲಾಗುವುದು ಎಂದು ಕಾಂಗ್ರೆಸ್ ಈಗಾಗಲೇ ಘೋಷಿಸಿದೆ. ಈಚೆಗೆ ವಿಧಾನಸಭೆ ಚುನಾವಣೆ ನಡೆದಿದ್ದ ರಾಜಸ್ಥಾನ ಮತ್ತು ಮಧ್ಯ ಪ್ರದೇಶ ರಾಜ್ಯಗಳಲ್ಲಿಯೂ ನಿರುದ್ಯೋಗವನ್ನು ಕಾಂಗ್ರೆಸ್ ಚುನಾವಣೆ ವಿಷಯವಾಗಿಸಿ, ಜನರ ಮನ್ನಣೆ ಗಳಿಸುವಲ್ಲಿ ಯಶಸ್ವಿಯಾಗಿತ್ತು.

ರಾಜ್‌ಠಾಕ್ರೆ ನಾಯಕತ್ವದ ಮಹಾರಾಷ್ಟ್ರ ನವ ನಿರ್ಮಾಣ ಸೇನೆ (ಎಂಎನ್‌ಎಸ್‌) ಮತ್ತು ಶಿವಸೇನೆ ಈ ಹಿಂದೆ  ಖಾಸಗಿ ಉದ್ಯೋಗಗಳಲ್ಲಿ ಮೀಸಲಾತಿಗೆ ಆಗ್ರಹಿಸಿದ್ದವು. ಆಗ ಅಧಿಕಾರದಲ್ಲಿದ್ದ ಕಾಂಗ್ರೆಸ್ ಈ ವಿಷಯವನ್ನು ನಿರ್ಲಕ್ಷಿಸಿತ್ತು. ಅದರೆ ಈಗ ಕಾಂಗ್ರೆಸ್‌ ಉದ್ಯೋಗ ಕಡಿತ, ನಿರುದ್ಯೋಗ ಪ್ರಮಾಣದಲ್ಲಿ ಹೆಚ್ಚಳದಂಥ ವಿಷಯಗಳನ್ನು ಮುನ್ನೆಲೆಗೆ ತರಲು ಯತ್ನಿಸುತ್ತಿದೆ.

ಕಳೆದ ಜೂನ್ ತಿಂಗಳಲ್ಲಿ ಕಮಲ್ ನಾಥ್ ನೇತೃತ್ವದ ಮಧ್ಯ ಪ್ರದೇಶ ಸರ್ಕಾರವು ರಾಜ್ಯದ ಯುವಕರಿಗೆ ಖಾಸಗಿ ಕ್ಷೇತ್ರಗಳಲ್ಲಿ ಶೇ 70ರಷ್ಟು ಉದ್ಯೋಗ ಮೀಸಲಿಡುವ ನಿರ್ಧಾರ ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು