ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ - ಶಿವಸೇನಾ ಬೇಗುದಿ: ನೆನಪಾಗುತ್ತಿದ್ದಾರೆ ಮಹಾಜನ್, ಬಾಳ ಠಾಕ್ರೆ

ಮಹಾರಾಷ್ಟ್ರ ರಾಜಕೀಯ ವಿಶ್ಲೇಷಣೆ
Last Updated 11 ನವೆಂಬರ್ 2019, 7:20 IST
ಅಕ್ಷರ ಗಾತ್ರ

ಮಹಾರಾಷ್ಟ್ರದಲ್ಲಿ ಬಿಜೆಪಿ ಹಾಗೂ ಶಿವಸೇನಾ ನಡುವಿನ ಸುದೀರ್ಘ ಕಾಲದ ಮೈತ್ರಿ ಭಂಗವಾಗುವ ಹಂತದಲ್ಲಿದೆ. ಎನ್‌ಡಿಎ ಮಿತ್ರಕೂಟದಿಂದ ಹೊರಬರುವ ಶಿವಸೇನಾ ನಿರ್ಧಾರವು ಪಕ್ಷಕ್ಕೆ ಅಪಾಯಕಾರಿಯಾಗಿದ್ದರೂ, ಅದೊಂದು ಸಾಕಷ್ಟು ಯೋಚಿಸಿ ಕೈಗೊಂಡ ನಿರ್ಧಾರವಾಗಿದೆ ಎಂದು ಕಾಣಿಸುತ್ತಿದೆ.

2014ರಲ್ಲಿ ಎರಡೂ ಪಕ್ಷಗಳು ಪ್ರತ್ಯೇಕವಾಗಿಯೇ ಚುನಾವಣಾ ಕಣಕ್ಕಿಳಿದಿದ್ದವು ಮತ್ತು ಚುನಾವಣೋತ್ತರ ಕಾಲದಲ್ಲಿ ಶಿವಸೇನಾವು ಬಿಜೆಪಿ ಸರ್ಕಾರ ಸೇರಿಕೊಂಡಿತ್ತು, ಅದು ಕೂಡ ದೇವೇಂದ್ರ ಫಡಣವೀಸ್ ಅವರು ಸರಕಾರ ರಚಿಸಿದ ಬಳಿಕ. ಅಂದು ಉಪ ಮುಖ್ಯಮಂತ್ರಿ ಸ್ಥಾನ ತಮ್ಮ ಪಕ್ಷಕ್ಕೆ ಕೊಟ್ಟಿಲ್ಲ ಎಂಬುದನ್ನೇ ಶಿವಸೇನಾ, ಮೊದಲ ಅವಮಾನ ಎಂದು ಪರಿಗಣಿಸಿದೆ.

ವಾಸ್ತವ ಸಂಗತಿಯೆಂದರೆ, ಬಿಜೆಪಿ - ಶಿವಸೇನೆ ಹಿಂದೆ ಮೈತ್ರಿಕೂಟದ ಮೂಲಕ ಚುನಾವಣೆಗೆ ಹೋಗಿ ಗೆದ್ದಾಗಲೆಲ್ಲ, ಕಡಿಮೆ ಸಂಖ್ಯೆಯ ಸ್ಥಾನ ಪಡೆದವರಿಗೆ ಉಪಮುಖ್ಯಮಂತ್ರಿ ಸ್ಥಾನ ದೊರೆಯುತ್ತಿತ್ತು. 1995-99ರ ಅವಧಿಯ ಸರ್ಕಾರದಲ್ಲಿ ಶಿವಸೇನಾದ ಗೋಪೀನಾಥ ಮುಂಡೆ ನಂ.2 ಸ್ಥಾನದಲ್ಲಿದ್ದರು ಮತ್ತು ಗೃಹ ಖಾತೆಯಂತಹಾ ಮಹತ್ವದ ಸಚಿವಾಲಯದ ಉಸ್ತುವಾರಿಯನ್ನೂ ಪಡೆದುಕೊಂಡಿದ್ದರು. ಆ ಕಾಲದಲ್ಲೆಲ್ಲಾ, ಗರಿಷ್ಠ ಸಂಖ್ಯೆಯ ಸ್ಥಾನ ಪಡೆದ ಪಕ್ಷಕ್ಕೆ ಮುಖ್ಯಮಂತ್ರಿ ಕುರ್ಚಿ ಮತ್ತು ಕಡಿಮೆ ಸ್ಥಾನ ಪಡೆದವರಿಗೆ ಉಪಮುಖ್ಯಮಂತ್ರಿ ಸ್ಥಾನ ಎಂಬುದರ ಬಗ್ಗೆ ಅಂದಿನ ಶಿವಸೇನಾ - ಬಿಜೆಪಿ ನಾಯಕರಾದ ಬಾಳ ಠಾಕ್ರೆ ಹಾಗೂ ಪ್ರಮೋದ್ ಮಹಾಜನ್ ಅವರು ಸ್ಪಷ್ಟ ನಿಲುವು ಹೊಂದಿದ್ದರು.

ಉಭಯ ಪಕ್ಷಗಳ ನಡುವೆ ವಿವಾದ ಏರ್ಪಟ್ಟಾಗಲೆಲ್ಲಾ ಬಿಜೆಪಿಯ ಟ್ರಬಲ್ ಶೂಟರ್, ದಿವಂಗತ ಪ್ರಮೋದ್ ಮಹಾಜನ್ ಅವರು, ಶಿವಸೇನಾ ಸುಪ್ರೀಂ ನಾಯಕ ಬಾಳ ಠಾಕ್ರೆ ಅವರ ಬಳಿ ಸಮಾಲೋಚಿಸಿ, ವಿವಾದಕ್ಕೆ ಪರಿಹಾರ ಕಲ್ಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದರು. ಅವರಿಬ್ಬರ ಚಾಣಾಕ್ಷತೆಯನ್ನು ಬಿಜೆಪಿ ಮತ್ತು ಶಿವಸೇನಾ ಈಗ ಮಿಸ್ ಮಾಡಿಕೊಳ್ಳುತ್ತಿದೆ, ಈ ಕಾರಣಕ್ಕಾಗಿ ಚುನಾವಣೆಯಲ್ಲಿ ಯಾರ ವಿರುದ್ಧ ಪ್ರಬಲ ಹೋರಾಟ ನಡೆಸಿದ್ದರೋ, ಅಧಿಕಾರಕ್ಕಾಗಿ ಅವರ ಜತೆಗೇ ಕೈಜೋಡಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ.

ವಿಶೇಷವೆಂದರೆ, ಮಹಾರಾಷ್ಟ್ರದ ಮತ್ತೊಂದು ಮೈತ್ರಿಕೂಟವಾದ ಕಾಂಗ್ರೆಸ್-ಎನ್‌ಸಿಪಿ ಜೋಡಿಯಲ್ಲೂ ಹೆಚ್ಚು ಸ್ಥಾನ ಗೆದ್ದವರಿಗೆ ಸಿಎಂ ಪದವಿ ಎಂಬ ಪರಂಪರೆ ಮುಂದುವರಿದಿತ್ತು.

ಆದರೆ ಕೇಸರಿ ಪಕ್ಷಗಳ ಮಿತ್ರಕೂಟದ ಎರಡನೇ ಅಧ್ಯಾಯದಲ್ಲಿ, ಅಂದರೆ ಕಳೆದ ಬಾರಿ ಬಿಜೆಪಿಯು ಉಪಮುಖ್ಯಮಂತ್ರಿ ಹುದ್ದೆಯನ್ನೇ ರದ್ದುಪಡಿಸಿತ್ತು. ಅಷ್ಟೇ ಅಲ್ಲದೆ, ಗೃಹ, ಕಂದಾಯ, ನಗರಾಭಿದ್ಧಿ, ವಸತಿ ಮತ್ತು ಜಲಸಂಪನ್ಮೂಲದಂತಹಾ ಪ್ರಮುಖ ಖಾತೆಗಳನ್ನು ಶಿವಸೇನಾ ಪಕ್ಷಕ್ಕೆ ನಿರಾಕರಿಸಿತ್ತು. ಇದು ಅದಕ್ಕೆ ಮತ್ತೊಂದು ಅವಮಾನ ಎಂದೇ ವಿಶ್ಲೇಷಿಸಲಾಗುತ್ತಿದೆ.

2014ರಲ್ಲಿ ಉಪಮುಖ್ಯಮಂತ್ರಿ ಸ್ಥಾನ ನಿರಾಕರಿಸಿದಾಗ, ಶಿವಸೇನಾದಲ್ಲಿದ್ದ ಸಾಮಾನ್ಯ ನಂಬಿಕೆಯೆಂದರೆ, "ಅವರು ನಮಗೆ ಉಪಮುಖ್ಯಮಂತ್ರಿ ಸ್ಥಾನ ಕೊಡಲಿಲ್ಲ, 2019ರಲ್ಲಿ ನಾವು ಮುಖ್ಯಮಂತ್ರಿ ಪದವಿಯನ್ನೇ ಪಡೆಯುತ್ತೇವೆ" ಎಂಬ ಛಲವು ಕಾರ್ಯಕರ್ತರಲ್ಲಿತ್ತು.

ಕಳೆದ ಫೆಬ್ರವರಿ ತಿಂಗಳಲ್ಲಿ ಶಿವಸೇನಾ ಮತ್ತು ಬಿಜೆಪಿ ಮಧ್ಯೆ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಾಗಿ ಮೈತ್ರಿ ಕುರಿತು ಮಾತುಕತೆಗಾಗಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಬಂದಿದ್ದಾಗ, 50:50 ಅಧಿಕಾರ ಹಂಚಿಕೆ ಮತ್ತು ಮುಖ್ಯಮಂತ್ರಿ ಪದವಿಯ ಸರದಿಯ ಪ್ರಸ್ತಾಪವನ್ನು ಶಿವಸೇನೆ ತನ್ನ ಪ್ರಮುಖ ಬೇಡಿಕೆಯಾಗಿ ಮುಂದಿಟ್ಟಿತ್ತು.

ತಮಗೆ ಮುಖ್ಯಮಂತ್ರಿ ಪಟ್ಟವು ಪೂರ್ಣಾವಧಿಗೆ ಅಥವಾ ಕನಿಷ್ಠ ಪಕ್ಷ, ಅರ್ಧ ಅವಧಿಗೆ ದೊರೆತೇ ದೊರೆಯುತ್ತದೆ ಎಂದು ಶಿವಸೇನೆ ಹೇಳುತ್ತಾ ಹೋಯಿತಾದರೂ, ಬಿಜೆಪಿ ನಾಯಕತ್ವವು ಇದಕ್ಕೆಂದೂ ಸೊಪ್ಪು ಹಾಕಿರಲಿಲ್ಲ. ಲೋಕಸಭೆ ಚುನಾವಣೆಯ ಕೊನೆಯ ಚರಣದಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು "ನಾನು ಪುನಃ ಬರುತ್ತೇನೆ" ಅಂತ ಹೇಳುತ್ತಲೇ ಬಂದಿದ್ದರು. ಶಿವಸೇನಾ ಇದನ್ನು ಮೌನವಾಗಿ ಕೇಳಿಸುತ್ತಲೇ ಇತ್ತು. ಕೆಲವು ಮುಖಂಡರಂತೂ, "ಹೇಗೆ ಮರಳಿ ಮುಖ್ಯಮಂತ್ರಿಯಾಗುತ್ತೀರಿ ಅಂತ ನಾವೂ ನೋಡುತ್ತೇವೆ" ಎಂದು ಕುದಿಯುತ್ತಿದ್ದರು.

ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಎದುರಾಗಿ ಶಿವಸೇನಾವು ಮುಖ್ಯಸ್ಥ ಉದ್ಧವ್ ಠಾಕ್ರೆಯ ಪುತ್ರ ಆದಿತ್ಯ ಠಾಕ್ರೆಯನ್ನು ಮುಂದಿಟ್ಟು, ಈ ಬಾರಿ ಹೊಸ ಮಹಾರಾಷ್ಟ್ರ ಎಂಬ ಸ್ಲೋಗನ್ ಜತೆಗೆ ಕಣಕ್ಕಿಳಿಯಿತು. ಬಿಜೆಪಿ-ಶಿವಸೇನಾ ಎರಡೂ ಪಕ್ಷಗಳ ನಡುವಿನ ಅಸಮಾಧಾನವು ಚುನಾವಣೆಗಳ ಸಂದರ್ಭದಲ್ಲೇ ಬಹಿರಂಗಗೊಂಡಿತ್ತು. ಅದೆಂದರೆ, ಉಭಯ ಪಕ್ಷಗಳೂ ಪ್ರತ್ಯೇಕವಾಗಿ ಮಹಾ ಜನಾದೇಶ ಯಾತ್ರಾ ಹಾಗೂ ಜನ ಆಶೀರ್ವಾದ ಯಾತ್ರಾ ಹೆಸರುಗಳಲ್ಲಿ ರಾಜ್ಯದಾದ್ಯಂತ ಚುನಾವಣಾ ಪ್ರಚಾರ ನಡೆಸಿದ್ದವು.

ಈಗ ಅತಂತ್ರ ವಿಧಾನಸಭೆ ಸೃಷ್ಟಿಯಾಗಿದ್ದು, ತಮಗೆ ರೊಟೇಶನ್ ಆಧಾರದಲ್ಲಿ ಮುಖ್ಯಮಂತ್ರಿ ಪಟ್ಟ ಸಿಗಬೇಕು ಎಂಬುದು ಶಿವಸೇನಾ ಬೇಡಿಕೆಯನ್ನು ಬಿಜೆಪಿ ನಿರಾಕರಿಸಿದ ಹಿನ್ನೆಲೆಯಲ್ಲಿ, ಹೊಸ ಮೈತ್ರಿಯ ಸಾಧ್ಯತೆ ರೂಪುಗೊಳ್ಳುತ್ತಿದೆ. ಏಕೈಕ ಅತಿದೊಡ್ಡ ಪಕ್ಷ ಬಿಜೆಪಿಯು ಸರ್ಕಾರ ರಚನೆಗಾಗಿ ಆಹ್ವಾನ ಬಂದರೂ ಅದನ್ನು ಸ್ವೀಕರಿಸದೆ, ಸಂಖ್ಯಾಬಲವಿಲ್ಲ, ಹೀಗಾಗಿ ಸರ್ಕಾರ ರಚಿಸುವುದಿಲ್ಲ ಎಂದು ಹೇಳಿದ್ದರೆ, ಎರಡನೇ ಅತಿದೊಡ್ಡ ಪಕ್ಷ ಶಿವಸೇನಾ ಈಗ ತನ್ನ ಪ್ರಯತ್ನ ಆರಂಭಿಸಿದೆ. ಇದುವರೆಗಿನ ಬದ್ಧ ವೈರಿಗಳಂತೇ ಕಚ್ಚಾಡುತ್ತಿದ್ದ ಎನ್‌ಸಿಪಿ ಹಾಗೂ ಕಾಂಗ್ರೆಸ್ ಬೆಂಬಲವಿಲ್ಲದೆ ಸರ್ಕಾರ ರಚಿಸುವುದು ಅದಕ್ಕೂ ಸಾಧ್ಯವಿಲ್ಲ.

ರಾಷ್ಟ್ರಪತಿ ಆಳ್ವಿಕೆ ಜಾರಿಯಾದಲ್ಲಿ, ಕುದುರೆ ವ್ಯಾಪಾರಕ್ಕೂ ಅವಕಾಶ ಮಾಡಿಕೊಟ್ಟಂತಾಗಬಹುದು ಎಂಬ ಮತ್ತೊಂದು ಸಾಧ್ಯತೆಯೂ ಇದೆ. ಮತ್ತೆ ಚುನಾವಣೆಗೆ ಹೋಗಲು ಇಚ್ಛಿಸದವರು ಬಿಜೆಪಿಗೆ ಜಿಗಿಯಬಹುದೇ? ಆಪರೇಶನ್ ಕಮಲ ನಡೆಯುವುದೇ? ಅಥವಾ ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡುವ ಉದ್ದೇಶದಿಂದ, ಒಲ್ಲದ ಮನಸ್ಸಿನಿಂದ ಎನ್‌ಸಿಪಿ - ಕಾಂಗ್ರೆಸ್ ಪಕ್ಷಗಳು ಶಿವಸೇನೆಗೆ ಮುಖ್ಯಮಂತ್ರಿ ಪಟ್ಟ ಕೊಡುತ್ತವೆಯೇ? ಕಾದು ನೋಡಬೇಕಾದ ಸಂಗತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT