ಬುಧವಾರ, ನವೆಂಬರ್ 13, 2019
23 °C
ಶಿವಸೇನಾ ಜೊತೆ ಚರ್ಚೆ ನಡೆಸಿಲ್ಲ: ಎನ್‌ಸಿಪಿ

ಪವಾರ್–ಸೋನಿಯಾ ಗಾಂಧಿ ಭೇಟಿ ನಾಳೆ: ಕುತೂಹಲಕರ ಘಟ್ಟದಲ್ಲಿ ಮಹಾರಾಷ್ಟ್ರ ಸರ್ಕಾರ

Published:
Updated:

ಮುಂಬೈ: ಮಹಾರಾಷ್ಟ್ರದಲ್ಲಿ ಬಿಜೆಪಿ ಹಾಗೂ ಶಿವಸೇನಾ ನಡುವಿನ ಹಗ್ಗಜಗ್ಗಾಟ ಮುಂದುವರಿದಿರುವ ನಡುವೆಯೇ, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಅವರು ಸೋಮವಾರ ದೆಹಲಿಯಲ್ಲಿ ಭೇಟಿ ಮಾಡಲಿದ್ದಾರೆ. 

ಎನ್‌ಸಿಪಿ ಮುಖಂಡ ಅಜಿತ್ ಪವಾರ್ ಅವರು ಉಭಯ ನಾಯಕರ ಭೇಟಿಯನ್ನು ಶನಿವಾರ ಖಚಿತಪಡಿಸಿದ್ದಾರೆ. ‘ಸೋನಿಯಾ– ಪವಾರ್ ಅವರು ಇತ್ತೀಚೆಗೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದು, ಸೋಮವಾರ ದೆಹಲಿಯಲ್ಲಿ  ಭೇಟಿಯಾಗಲಿದ್ದಾರೆ. ಅವರು ಏನು ಚರ್ಚೆ ಮಾಡುತ್ತಾರೆ ಎಂಬುದರ ಮೇಲೆ ಎಲ್ಲವೂ ಅವಲಂಬಿತವಾಗಿದೆ’ ಎಂದು ಅಜಿತ್ ಪವಾರ್ ಹೇಳಿದ್ದಾರೆ. 

ಚುನಾವಣೆ ಫಲಿತಾಂಶ ಪ್ರಕಟವಾದ ದಿನದಿಂದಲೂ ಪ್ರತಿಪಕ್ಷದಲ್ಲಿ ಕೂರುವುದಾಗಿ ಎರಡೂ ಪಕ್ಷಗಳು ಹೇಳುತ್ತಾ ಬಂದಿವೆ. 

ದೀಪಾವಳಿ ಶುಭಾಶಯ ಹೇಳುವ ನೆಪದಲ್ಲಿ ಶರದ್ ಪವಾರ್ ಅವರನ್ನು ಗುರುವಾರ ಭೇಟಿಯಾಗಿದ್ದ ಶಿವಸೇನೆಯ ಮುಖಂಡ ಸಂಜಯ್ ರಾವತ್, ‘ಸುಭದ್ರ ಸರ್ಕಾರ ರಚಿಸಲು ಶಿವಸೇನೆ ನಿರ್ಧರಿಸಿದಲ್ಲಿ, ಅಗತ್ಯ ಬಹುಮತವನ್ನು ಪಕ್ಷ ಪಡೆದುಕೊಳ್ಳಲಿದೆ’ ಎಂದು ಮಾಧ್ಯಮಗಳಿಗೆ ಹೇಳಿದ್ದರು. 

ವಿರೋಧ ಪಕ್ಷವಾಗಿ ಕೆಲಸ–‍‍‍‍ಪವಾರ್:  ನ್‌ಸಿಪಿ ಹಾಗೂ ಕಾಂಗ್ರೆಸ್ ಬೆಂಬಲದೊಂದಿಗೆ ಶಿವಸೇನೆಯು ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಮಾಡಲಿದೆ ಎಂಬ ವರದಿಗಳ ಬಗ್ಗೆ ಪ್ರತಿಕ್ರಿಯಿಸಿರುವ ಶರದ್‌ ಪವಾರ್‌ ಅವರು, ಈ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮುಖ್ಯಮಂತ್ರಿ ಪಟ್ಟಕ್ಕಾಗಿ ಬಿಜೆಪಿ–ಶಿವಸೇನಾ ನಡುವಿನ ಹಗ್ಗಜಗ್ಗಾಟ ಬಾಲಿಶ ಎಂದು ಅವರು ಹೇಳಿದ್ದಾರೆ.

ಸೇನಾ ಬೆಂಬಲಿಸುವಂತೆ ಕಾಂಗ್ರೆಸ್ ಸಂಸದನ ಮನವಿ
ಮುಂಬೈ (ಪಿಟಿಐ): ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ಹುಸೇನ್ ದಳವಾಯಿ ಅವರು ಪಕ್ಷದ ನಾಯಕಿ ಸೋನಿಯಾಗಾಂಧಿ ಅವರಿಗೆ ಶನಿವಾರ ಪತ್ರ ಬರೆದಿದ್ದು, ಸರ್ಕಾರ ರಚನೆ ಸಂಬಂಧ ಶಿವಸೇನಾ ಪ್ರಸ್ತಾವವಿಟ್ಟರೆ, ಅದನ್ನು ಬೆಂಬಲಿಸುವಂತೆ ಮನವಿ ಮಾಡಿದ್ದಾರೆ. 

ರಾಷ್ಟ್ರಪತಿ ಚುನಾವಣೆಯಲ್ಲಿ ಕಾಂಗ್ರೆಸ್‌ ಉಮೇದುವಾರರಿಗೆ ಶಿವಸೇನಾ ಬೆಂಬಲ ನೀಡಿದ್ದನ್ನು ದಳವಾಯಿ ಸ್ಮರಿಸಿದ್ದಾರೆ. ‘ಬಿಜೆಪಿ ಹಾಗೂ ಶಿವಸೇನಾ ವಿಭಿನ್ನ ಪಕ್ಷಗಳು. ಪ್ರತಿಭಾ ಪಾಟೀಲ್ ಹಾಗೂ ಪ್ರಣವ್ ಮುಖರ್ಜಿ ಅವರು ರಾಷ್ಟ್ರಪತಿಯಾಗಿ ಆಯ್ಕೆಯಾಗಲು ಸೇನಾದ ಬೆಂಬಲವಿತ್ತು. ಶಿವಸೇನಾ ಪಕ್ಷದ್ದು ಎಲ್ಲರನ್ನೂ ಒಳಗೊಳ್ಳುವ ರಾಜಕಾರಣ. ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕಾದರೆ, ಸೇನಾವನ್ನು ಬೆಂಬಲಿಸುವುದು ಅತ್ಯಗತ್ಯ’ ಎಂದು ದಳವಾಯಿ ಹೇಳಿದ್ದಾರೆ.

ಶಿವಸೇನಾಗೆ ಬೆಂಬಲ ನೀಡುವ ವಿಚಾರದಲ್ಲಿ ಕಾಂಗ್ರೆಸ್‌ನಲ್ಲಿ ಏಕಾಭಿಪ್ರಾಯ ಇಲ್ಲ. ಪಕ್ಷದ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ, ಸುಶೀಲ್‌ಕುಮಾರ್ ಶಿಂಧೆ, ಸಂಜಯ್ ನಿರುಪಮ್ ಅವರು ಬೆಂಬಲ ನೀಡುವುದನ್ನು ವಿರೋಧಿಸಿದ್ದಾರೆ. ದಳವಾಯಿ ಅವರ ನಿಲುವನ್ನು ಶಿವಸೇನಾ ಸ್ವಾಗತಿಸಿದೆ.

‘ರಾಷ್ಟ್ರಪತಿ ಜೇಬಿನಲ್ಲಿದ್ದಾರೆಯೆ?’
ಮುಂಬೈ:
ನವೆಂಬರ್ 7ರೊಳಗೆ ಸರ್ಕಾರ ರಚನೆ ಸಾಧ್ಯವಾಗದಿದ್ದರೆ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಹೇರಬೇಕಾಗಬಹುದು ಎಂದು ಬಿಜೆಪಿ ಮುಖಂಡ ಹಾಗೂ ಸಚಿವ ಸುಧೀರ್ ಮುನಗಂಟಿವಾರ್ ಅವರು ನೀಡಿರುವ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಶಿವಸೇನಾ, ‘ರಾಷ್ಟ್ರಪತಿಗಳು ನಿಮ್ಮ ಜೇಬಿನಲ್ಲಿದ್ದಾರೆಯೇ?’ ಎಂದು ಖಾರವಾಗಿ ಪ್ರಶ್ನಿಸಿದೆ.

ಶಿವಸೇನೆಯ ಮುಖವಾಣಿ ಸಾಮ್ನಾ ಪತ್ರಿಕೆಯಲ್ಲಿ ‘ಮಹಾರಾಷ್ಟ್ರಕ್ಕೆ ಅಪಮಾನ, ರಾಷ್ಟ್ರಪತಿ ನಿಮ್ಮ ಜೇಬಿನಲ್ಲಿದ್ದಾರೆಯೇ’ ಎಂಬ ತಲೆಬರಹದಲ್ಲಿ ಪ್ರಕಟವಾಗಿರುವ ಸಂಪಾದಕೀಯದಲ್ಲಿ, ಬಿಜೆಪಿಯ ಯತ್ನವನ್ನು ಬೆದರಿಕೆ ತಂತ್ರ ಎಂದು ಕರೆಯಲಾಗಿದೆ. ಇದು ಜನಾದೇಶಕ್ಕೆ ಮಾಡಿದ ಅಪಮಾನ ಎಂದೂ ಪತ್ರಿಕೆ ಹೇಳಿದೆ. 

‘ರಾಷ್ಟ್ರಪತಿಗಳು ನಿಮ್ಮ ಜೇಬಿನಲ್ಲಿದ್ದಾರೆಯೇ ಅಥವಾ ರಾಷ್ಟ್ರಪತಿಗಳ ಮೊಹರು ಮಹಾರಾಷ್ಟ್ರದ ಬಿಜೆಪಿ ಕಚೇರಿಯಲ್ಲಿ ಇದೆಯೇ?’ ಎಂದು ಕಟುಶಬ್ದಗಳಲ್ಲಿ ಬಿಜೆಪಿಯನ್ನು ಸೇನೆ ತರಾಟೆಗೆ ತೆಗೆದುಕೊಂಡಿದೆ. 

ಬಿಜೆಪಿಯಿಂದ ಕಾದು ನೋಡುವ ತಂತ್ರ
ಮುಖ್ಯಮಂತ್ರಿ ಪಟ್ಟಕ್ಕೆ ಪಟ್ಟು ಹಿಡಿದಿರುವ ಶಿವಸೇನೆಯು ಒಮ್ಮೆ ದೃಢ ನಿಲುವು ತಾಳುವ ಮತ್ತೊಮ್ಮೆ ಸಡಿಲಗೊಳಿಸುವ ಯತ್ನ ಮುಂದುವರಿಸಿದ್ದರೆ, ಅತ್ತ ಬಿಜೆಪಿ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದೆ.

ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಚಂದ್ರಕಾಂತ ಪಾಟೀಲ್ ಅವರು ಪಕ್ಷದ ಮುಖಂಡರಾದ ವಿ. ಸತೀಶ್ ಮತ್ತು ವಿಜಯ್ ಪುರಾಣಿಕ್ ಅವರನ್ನು ಭೇಟಿ ಮಾಡಿದರು. 

*
ಬಹುಮತ ಸಾಬೀತುಪಡಿಸಲು ಬಿಜೆಪಿಗೆ 15 ದಿನ ಸಮಯವಿರುತ್ತದೆ. ಅದು  ವಿಫಲವಾದರೆ ನಾವು ಬಹುಮತ ಸಾಬೀತು ಮಾಡುತ್ತೇವೆ.
-ಸಂಜಯ್ ರಾವತ್, ಶಿವಸೇನಾ ಮುಖಂಡ

*
ನಾನು ಅರಣ್ಯ ಸಚಿವ. ಗರ್ಜಿಸುವ ಹುಲಿಯನ್ನು (ಶಿವಸೇನೆ) ಶಾಂತಗೊಳಿಸುವುದು ಗೊತ್ತು. ಹುಲಿಯನ್ನು ನಮ್ಮ ಜತೆಗೇ ಕರೆದೊಯ್ಯುತ್ತೇವೆ.
-ಸುಧೀರ್ ಮುನಗಂಟಿವಾರ್, ಬಿಜೆಪಿ ಮುಖಂಡ ಹಾಗೂ ಸಚಿವ

*
ಬಿಜೆಪಿಯನ್ನು ಹೊರಗಿಟ್ಟು ಮಹಾರಾಷ್ಟ್ರದಲ್ಲಿ ಜನಪರ ಸರ್ಕಾರ ರಚನೆಗೆ ಶಿವಸೇನಾ ಸಿದ್ಧವಿದ್ದರೆ ಎನ್‌ಸಿಪಿ ಸಕಾರಾತ್ಮಕ ನಿರ್ಧಾರವನ್ನು ತೆಗೆದುಕೊಳ್ಳಲಿದೆ.
-ನವಾಬ್ ಮಲಿಕ್, ಎನ್‌ಸಿಪಿ ಮುಖ್ಯ ವಕ್ತಾರ

ಪ್ರತಿಕ್ರಿಯಿಸಿ (+)