ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋವಾ ಮುಖ್ಯಮಂತ್ರಿ ಮನೋಹರ್‌ ಪರ್ರೀಕರ್‌ ಮತ್ತೆ ಆಸ್ಪತ್ರೆಗೆ

48 ಗಂಟೆಗಳ ನಿಗಾ
Last Updated 24 ಫೆಬ್ರುವರಿ 2019, 3:51 IST
ಅಕ್ಷರ ಗಾತ್ರ

ಪಣಜಿ: ಗೋವಾ ಮುಖ್ಯಮಂತ್ರಿ ಮನೋಹರ್‌ ಪರ್ರೀಕರ್‌ ಭಾನುವಾರ ರಾತ್ರಿ ಗೋವಾ ಮೆಡಿಕಲ್‌ ಕಾಜೇಜು ಮತ್ತು ಆಸ್ಪತ್ರೆ(ಜಿಎಂಸಿಎಚ್‌)ಗೆ ದಾಖಲಾಗಿದ್ದಾರೆ.

ಯುಜಿಐ(ಅಪ್ಪರ್‌ ಗ್ಯಾಸ್ಟ್ರೋಇನ್ಟೆಸ್ಟೈನಲ್‌) ಎಂಡೊಸ್ಕೋಪಿಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ, ಮುಂದಿನ 48 ಗಂಟೆಗಳ ವರೆಗೂ ಆರೋಗ್ಯದ ಮೇಲೆ ನಿಗಾ ವಹಿಸಲಾಗಿದೆ ಎಂದು ಮುಖ್ಯಮಂತ್ರಿಗಳ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

ಗೋವಾ ಮುಖ್ಯಮಂತ್ರಿ ಹಾಗೂ ಮಾಜಿ ರಕ್ಷಣಾ ಸಚಿವ ಮನೋಹರ್‌ ಪರ್ರೀಕರ್‌(63) ಮೇದೋಜೀರಕ ಗ್ರಂಥಿ(ಪ್ಯಾಂಕ್ರಿಯಾಸ್) ಕ್ಯಾನ್ಸರ್‌ಗೆ ಈಗಾಗಲೇ ಅಮೆರಿಕ ಹಾಗೂ ದೆಹಲಿ ಏಮ್ಸ್‌ನಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಕಳೆದ ಒಂದು ವರ್ಷದಿಂದ ಪ್ಯಾಂಕ್ರಿಯಾಸ್‌ನಲ್ಲಿ ಉಂಟಾದ ತೊಂದರೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಬಳಿಕ ಅವರ ಖಾಸಗಿ ನಿವಾಸದಲ್ಲಿ ಚೇತರಿಸಿಕೊಳ್ಳುತ್ತಿದ್ದರು.

ಜಿಎಂಸಿಎಚ್‌ಗೆ ಭೇಟಿ ನೀಡಿದ ರಾಜ್ಯದ ಆರೋಗ್ಯ ಸಚಿವ ವಿಶ್ವಜಿತ್‌ ರಾಣೆ, ’ಮುಖ್ಯಮಂತ್ರಿ ಅವರಿಗೆ ಪ್ರತ್ಯೇಕ ಕೊಠಡಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಗ್ಯ ಸ್ಥಿರವಾಗಿದ್ದು, ಸುಧಾರಿಸಿಕೊಳ್ಳುತ್ತಿದ್ದಾರೆ’ ಎಂದು ಪ್ರತಿಕ್ರಿಯಿಸಿದ್ದಾರೆ.

‘ನಾನು ಅವರಲ್ಲಿ ಮಾತನಾಡಿದ್ದೇನೆ, ನಾಳೆ ಅವರು ಮನೆಗೆ ಮರಳಿದ್ದಾರೆ, ಇಲ್ಲಿಗೆ ಪರೀಕ್ಷೆಗಾಗಿ ಬಂದಿದ್ದಾರೆ. ಅವರೊಬ್ಬ ಹೋರಾಟಗಾರ, ಆತಂಕಪಡುವ ಅಗತ್ಯವಿಲ್ಲ’ ಎಂದಿದ್ದಾರೆ.

ರಾಜ್ಯದ ನಗರಗಳ ಅಭಿವೃದ್ಧಿ ಮತ್ತು ಯೋಜನಾ ಸಚಿವ ವಿಜಯಿ ಸರ್ದೇಸಾಯಿ ಅವರೊಂದಿಗೆ ಶನಿವಾರ ಸಂಖ್ಯೆ ಆಡಳಿತ ಮತ್ತು ರಾಜಕೀಯದ ಮಾತುಕತೆ ನಡೆಸಿದ್ದ ಮನೋಹರ್‌ ಪರ್ರೀಕರ್‌, ರಾತ್ರಿ 10 ಗಂಟೆಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ.

2018ರ ಫೆ,14ರಂದು ಅನಾರೋಗ್ಯದಿಂದಾಗಿ ಜಿಎಂಸಿಎಚ್‌ಗೆ ದಾಖಲಿಸಲಾಗಿತ್ತು. ಅಲ್ಲಿಂದ ಮುಂಬೈನ ಲೀಲಾವತಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಕೆಲವು ದಿನಗಳ ಚಿಕಿತ್ಸೆ ಪಡೆದು, 2018ರ ಫೆ.20ರಂದು ಗೋವಾ ರಾಜ್ಯ ಬಜೆಟ್‌ ಮಂಡಿಸಲು ವಿಧಾನಸಭೆಗೆ ಹಾಜರಾದರು. 2018ರ ಮಾರ್ಚ್‌ 3ರಂದು ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿದ ಅವರು, ಜೂನ್‌ 14ರಂದು ಹಿಂದಿರುಗಿದರು.

ಮುಂದೆ, 2018ರ ಜುಲೈ 19ರಿಂದ ಆಗಸ್ಟ್‌ 3ರ ವರೆಗೂ ನಡೆದ ಮುಂಗಾರು ಅಧಿವೇಶನದಲ್ಲಿ ಭಾಗಿಯಾದರು. ಮತ್ತೆ ಆಗಸ್ಟ್‌ 10ರಂದು ಆರೋಗ್ಯ ತಪಾಸಣೆಗಾಗಿ ಅಮೆರಿಕಕ್ಕೆ ತೆರಳಿದರು. ಆಗಸ್ಟ್‌ 22ರಂದು ಗೋವಾಗೆ ವಾಪಸ್‌ ಆದ ಅವರಿಗೆ ಮನೆಯಲ್ಲಿಯೇ ಅಗತ್ಯ ಚಿಕಿತ್ಸೆ ಪಡೆಯುತ್ತಿದ್ದರು. ಸೆಪ್ಟೆಂಬರ್‌ 15ರಂದು ದೆಹಲಿಯ ಏಮ್ಸ್‌ನಲ್ಲಿ ಸುಮರು 1 ತಿಂಗಳು ಚಿಕಿತ್ಸೆ ಪಡೆದರು. 2018ರ ಅಕ್ಟೋಬರ್‌ 14ರಂದು ಗೋವಾಗೆ ಮರಳಿ ಖಾಸಗಿ ನಿವಾಸದಿಂದಲೇ ರಾಜ್ಯದ ಆಡಳಿತ ನಡೆಸಿದರು.

ಎರಡೂವರೆ ತಿಂಗಳ ಅಂತರದ ಬಳಿಕ ಪರ್ರೀಕರ್‌, 2019ರ ಜನವರಿ 2ರಂದು ಮುಖ್ಯಮಂತ್ರಿ ಕಚೇರಿಗೆ ಹಾಜರಾಗುವ ಮೂಲಕ ಎಲ್ಲರನ್ನೂ ನಿಬ್ಬೆರಗಾಗಿಸಿದರು. ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರೊಂದಿಗೆ ಮಾಂಡೋವಿ ನದಿಯ ಮೂರನೇ ಸೇತುವೆ ಉದ್ಘಾಟನೆಯನ್ನು ಜ.27ರಂದು ನೆರವೇರಿಸಿದರು. ಜ.29ರಂದು ಬಜೆಟ್‌ ಅಧಿವೇಶದಲ್ಲಿ ಭಾಗಿಯಾಗಿ, ಜ.30ರಂದು ರಾಜ್ಯ ಬಜೆಟ್‌ ಮಂಡಿಸಿದರು. ಜ.31ರಂದು ಅವರನ್ನು ದೆಹಲಿ ಏಮ್ಸ್‌ಗೆ ದಾಖಲಿಸಲಾಯಿತು ಹಾಗೂ 2019ರ ಫೆ.5ರ ವರೆಗೂ ಚಿಕಿತ್ಸೆ ಪಡೆದರು.

2019ರ ಫೆ.9ರಂದು ಅಮಿತ್‌ ಶಾ ನೇತೃತ್ವದಲ್ಲಿ ಅಟಲ್‌ ಬೂತ್‌ ಕಾರ್ಯಕರ್ತರ ಸಮ್ಮೇಳನದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದರು. ಈಗ ಮತ್ತೆ(ಫೆ.23) ಆಸ್ಪತ್ರೆಗೆ ದಾಖಲಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT