ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯವೋ.. ಆಡಳಿತವೋ?– ರಾಜಕೀಯ ದ್ವಂದ್ವ

Last Updated 17 ನವೆಂಬರ್ 2018, 14:48 IST
ಅಕ್ಷರ ಗಾತ್ರ

ಬೆಂಗಳೂರು:ಪ್ರಭಾವಿ ನಾಯಕ ಅನಂತಕುಮಾರ್(59) ಅವರ ಅಕಾಲಿಕ ನಿಧನದ ಬಳಿಕ ಅವಿರತ ದುಡಿಮೆ ಮತ್ತು ಆರೋಗ್ಯಕ್ಕೆ ಸಂಬಂಧಿಸಿದಂತೆ ಚರ್ಚೆ ಜೋರಾಗಿದೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರದಲ್ಲಿ ಬಿಜೆಪಿಯ ಹಲವು ಪ್ರಮುಖ ನಾಯಕರು ಗಂಭೀರ ಆರೋಗ್ಯ ಸಮಸ್ಯೆಗೆ ಒಳಗಾಗಿದ್ದರು. ಸೂಕ್ತ ಚಿಕಿತ್ಸೆ ಹಾಗೂ ವಿಶ್ರಾಂತಿಯ ಬಳಿಕ ಮತ್ತೆ ಜವಾಬ್ದಾರಿ ಮುಂದುವರಿಸುತ್ತಿದ್ದಾರೆ. ಆದರೆ, ಅನಂತಕುಮಾರ್...

ಕರ್ನಾಟಕ ಚುನಾವಣೆಯ ಸಮಯ; ಕೆಮ್ಮು ಕಾಡುತ್ತಿದ್ದರೂ ದೂಳಿನ ಪರಿಣಾಮವೆಂದೇ ಆರೋಗ್ಯ ತಪಾಸಣೆ, ವಿಶ್ರಾಂತಿ ಮುಂದೂಡಿದ್ದರು ಕೇಂದ್ರ ರಾಸಾಯನಿಕ, ರಸಗೊಬ್ಬರ ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಅನಂತಕುಮಾರ್‌. ಅವರಿಗೆ ಶ್ವಾಸಕೋಶದ ಕ್ಯಾನ್ಸರ್ (ಅಡೆನೊಕಾರ್ಸಿನೊಮಾ) ಇರುವುದು ಪತ್ತೆಯಾದ ಆರು ತಿಂಗಳಲ್ಲಿ ಮೃತಪಟ್ಟಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಲಂಡನ್‌, ಅಮೆರಿಕಕ್ಕೆ ಹೋದರೂ ಕೊನೆಯ ಹಂತದಲ್ಲಿದ್ದ ಕ್ಯಾನ್ಸರ್ ದೇಹದಿಂದ ದೂರವಾಗಲೇ ಇಲ್ಲ. ಅನಂತಕುಮಾರ್ ಅವರ ಆರೋಗ್ಯ ಸ್ಥಿತಿಯ ಕುರಿತು ಕೊನೇವರೆಗೂ ಗುಟ್ಟಾಗಿಯೇ ಇಡಲಾಗಿತ್ತು. ಅಂತ್ಯಕ್ರಿಯೆಯ ಬಳಿಕ ಅವರು ನಿರ್ವಹಿಸುತ್ತಿದ್ದ ಖಾತೆಗಳನ್ನು ಸದಾನಂದಗೌಡ ಹಾಗೂ ನರೇಂದ್ರ ತೋಮರ್‌ಗೆ ಹೆಚ್ಚುವರಿಯಾಗಿ ವಹಿಸಲಾಗಿದೆ.

ಪ್ರಜಾಪ್ರಭುತ್ವದಲ್ಲಿ ಪ್ರಮುಖ ಜವಾಬ್ದಾರಿ ವಹಿಸುತ್ತಿರುವ ನಾಯಕರ ಆರೋಗ್ಯ ಸ್ಥಿತಿಯ ಕುರಿತು ಸಾರ್ವಜನಿಕರ ಗಮನಕ್ಕೆ ತರುವುದು ಮುಖ್ಯವಲ್ಲವೇ? ಅನೇಕ ರಾಷ್ಟ್ರಗಳಲ್ಲಿ ಇದನ್ನು ತಪ್ಪದೇ ಅನುಸರಿಲಾಗುತ್ತದೆ. ಜನರಿಗೆ ತನ್ನ ಪ್ರತಿನಿಧಿಯ ಆರೋಗ್ಯದ ಬಗ್ಗೆ ತಿಳಿಯುವುದನ್ನು ಸರ್ಕಾರಗಳು ಮರೆಮಾಚುವಂತಿಲ್ಲ. ಅಮೆರಿಕದಂತಹ ರಾಷ್ಟ್ರಗಳಲ್ಲಿ ನಾಯಕರ ಆರೋಗ್ಯ ಸಂಬಂಧಿಸಿದಂತೆ ಶಿಷ್ಟಾಚಾರ ಪ್ರಕ್ರಿಯೆಯನ್ನು ಅನುಸರಿಸಲಾಗುತ್ತದೆ; ಪ್ರಕಟಣೆ ನೀಡಲಾಗುತ್ತದೆ.

ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿ ತನ್ನ ಹೆಸರು, ವಿದ್ಯಾರ್ಹತೆ, ಆಸ್ತಿ, ಕ್ರಿಮಿನಲ್‌ ಪ್ರಕರಣ ವಿಚಾರಗಳನ್ನು ಬಹಿರಂಗ ಪಡಿಸುವಂತೆಯೇ ಆರೋಗ್ಯ ಸ್ಥಿತಿ; ಪ್ರಸ್ತುತ ಎದುರಿಸುತ್ತಿರುವ ಆರೋಗ್ಯ ಸಮಸ್ಯೆ, ಪಡೆದಿರುವ ಚಿಕಿತ್ಸೆ, ಒಳಗಾಗಿರುವ ಶಸ್ತ್ರ ಚಿಕಿತ್ಸೆಯ ವಿವರ ತಿಳಿಸುವುದು ಅಮುಖ್ಯವೇ? ಮತದಾರರು ನೀಡುವ ಹೊಣೆ ನಿರ್ವಹಿಸುವಷ್ಟು ಆರೋಗ್ಯ ದೃಢವಾಗಿರುವುದನ್ನು ಬಹಿರಂಗಪಡಿಸುವುದಕ್ಕೆ ಯಾವ ನಾಯಕರೂ ಮನಸ್ಸು ಮಾಡಿಲ್ಲವೇಕೆ? ರಾಜಕೀಯ ಪಕ್ಷಗಳು ತನ್ನ ಮುಖಂಡರ ಆರೋಗ್ಯದ ವಿಚಾರದ ಬಗ್ಗೆ ಕನಿಷ್ಠ ಆದ್ಯತೆ ನೀಡುತ್ತಿವೆಯೇ?

ಜನನಾಯಕರ ಆರೋಗ್ಯ ಗೌಪ್ಯ!: ಕೇಂದ್ರ ಸಂಪುಟ ದರ್ಜೆ ಸಚಿವರಂಥ ಪ್ರಮುಖ ಜವಾಬ್ದಾರಿ ನಿರ್ವಹಿಸುತ್ತಿದ್ದವರ ಆರೋಗ್ಯ ಸ್ಥಿತಿಯ ಬಗ್ಗೆ ಜನರಿಗೆ ಸುಳಿವೂ ಸಿಗದಂತೆ ಗೌಪ್ಯತೆ ಕಾಪಾಡುವ ಪರಿಪಾಠ ಇದೇ ಮೊದಲಲ್ಲ. ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದ ವಿತ್ತ ಸಚಿವ ಅರುಣ್‌ ಜೇಟ್ಲಿ(65) ಪ್ರಮುಖ ನಿರ್ಧಾರಗಳನ್ನು ಮನೆಯಲ್ಲಿ ಕುಳಿತೇ ತೆಗೆದುಕೊಳ್ಳುತ್ತಿದ್ದರು. 2018ರ ಏಪ್ರಿಲ್‌ನಲ್ಲಿ ಜೇಟ್ಲಿ ದೆಹಲಿಯಲ್ಲಿನ ಉತ್ತರ ಬ್ಲಾಕ್‌ನ ಕಚೇರಿಗೆ ಕಾಲಿಟ್ಟಿರಲಿಲ್ಲ. ದಿನೇದಿನೇ ಉಲ್ಬಣಿಸುತ್ತಿದ್ದ ಮೂತ್ರಪಿಂಡ ಸಮಸ್ಯೆಯಿಂದಾಗಿ ಹಣಕಾಸು ಮತ್ತು ಕಾರ್ಪೊರೇಟ್‌ ವ್ಯವಹಾರಗಳ ನಿರ್ವಹಣೆ ಸವಾಲಿನ ಹಾದಿಯಾಗಿತ್ತು. ಉತ್ತರ ಪ್ರದೇಶದಿಂದ ರಾಜ್ಯಸಭೆ ಆಯ್ಕೆಯಾಗಿದ್ದ ಅವರು, ಏಮ್ಸ್‌ನಲ್ಲಿ ಡಯಾಲಿಸಿಸ್‌ಗೆ ಒಳಗಾಗಿ ಕೆಲ ದಿನಗಳ ವರೆಗೂ ವಿಶ್ರಾಂತಿ ಪಡೆದು, ಏಪ್ರಿಲ್‌ 15ರಂದು ವಿಶೇಷ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರು.

ಮೂತ್ರಪಿಂಡ ಸಮಸ್ಯೆಗೆ ಶಸ್ತ್ರಚಿಕಿತ್ಸೆ ಅನಿವಾರ್ಯವೆಂದು ತಿಳಿದ ಬಳಿಕವೂ ಸರ್ಕಾರ ಜೇಟ್ಲಿ ಆರೋಗ್ಯದ ಬಗ್ಗೆ ತುಟಿಬಿಚ್ಚಿರಲಿಲ್ಲ. ‘ಮೂತ್ರಪಿಂಡಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳಿರುವುದರಿಂದ ವೈದ್ಯರ ಸಲಹೆಯಂತೆ ಸದ್ಯ ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿರುವುದಾಗಿ’ ಜೇಟ್ಲಿ ಟ್ವೀಟಿಸಿದ್ದರು. ಮೇ ತಿಂಗಳಲ್ಲಿ ದೆಹಲಿಯ ಏಮ್ಸ್‌ನಲ್ಲಿ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾದರು ಹಾಗೂ ವೈದ್ಯರು ಕನಿಷ್ಠ 3 ತಿಂಗಳ ವಿಶ್ರಾಂತಿ ಹೇಳಿದ್ದರು. ಶಸ್ತ್ರಚಿಕಿತ್ಸೆ ನಂತರದಲ್ಲಿ ಹಣಕಾಸು ಖಾತೆಯನ್ನು ಹೆಚ್ಚುವರಿಯಾಗಿ ಪಿಯೂಶ್‌ ಗೋಯಲ್‌ ಅವರಿಗೆ ನೀಡಲಾಯಿತು. ಸಾರ್ವಜನಿಕ ಸಭೆ, ಕಾರ್ಯಕ್ರಮಗಳಿಂದ ದೂರ ಉಳಿದ ಜೇಟ್ಲಿ ಆಗಸ್ಟ್‌ 23ರಂದು ಮತ್ತೆ ವಿತ್ತ ಖಾತೆ ಜವಾಬ್ದಾರಿ ವಹಿಸಿದರು. ಹಣಕಾಸು ವಿಷಯಗಳಿಗೆ ಸಂಬಂಧಿಸಿದ ಕೆಲವು ಕಾರ್ಯಕ್ರಮಗಳಲ್ಲಿ ಇಬ್ಬರೂ ಸಚಿವರು ಕಾಣಿಸಿಕೊಂಡು ಇರುಸುಮುರುಸು ಅನುಭವಿಸಿದ್ದರು.

2014ರಲ್ಲಿ ಮಧುಮೇಹ ಸಮಸ್ಯೆಯಿಂದ ಜೇಟ್ಲಿ ತೂಕದಲ್ಲಿ ಹೆಚ್ಚಳವಾಗಿ, ಅದನ್ನು ನಿಯಂತ್ರಿಸುವುದಕ್ಕಾಗಿ 2014ರಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. 2005ರಲ್ಲಿ ಅವರಿಗೆಹೃದಯ ಶಸ್ತ್ರಕ್ರಿಯೆಯೂ ನಡೆದಿತ್ತು.

ತಜ್ಞರು ಹೇಳುವುದೇನು?

ಸರ್ಕಾರದ ವ್ಯವಸ್ಥೆಯಲ್ಲಿ ಕೇಂದ್ರ ಸಚಿವರೊಬ್ಬರು ತೀವ್ರ ಅನಾರೋಗ್ಯದ ಕಾರಣದಿಂದ ದೀರ್ಘ ಕಾಲದವರೆಗೂ ಸಚಿವಾಲಯದ ಕಾರ್ಯಗಳಲ್ಲಿ ಭಾಗಿಯಾಗಲು ಸಾಧ್ಯವಾಗದೇ ಹೋದರೆ, ಶೀಘ್ರವೇ ಅವರು ನಿರ್ವಹಿಸುತ್ತಿದ್ದ ಖಾತೆಗಳನ್ನು ಮತ್ತೊಬ್ಬರಿಗೆ ವಹಿಸಲಾಗುತ್ತದೆ. ಸರ್ಕಾರದ ಆಡಳಿತದಲ್ಲಿ ಅಡೆತಡೆಗಳು ಎದುರಾಗದಂತೆ ಸುಗಮ ನಿರ್ವಹಣೆಗಾಗಿ ರಾಷ್ಟ್ರಪತಿಗಳು ಖಾತೆ ಪುನರ್ವಿಂಗಡಣೆ ಮಾಡಿ ಆದೇಶಿಸುತ್ತಾರೆ. ಆದರೆ, ಸರ್ಕಾರ ಸಹ ತನ್ನ ಸಚಿವರ ಆರೋಗ್ಯ ಸ್ಥಿತಿಯ ಬಗ್ಗೆ ಮಾಹಿತಿ ಬಹಿರಂಗಪಡಿಸಿ, ಖಾತೆಯ ಜವಾಬ್ದಾರಿ ಮತ್ತೊಬ್ಬರಿಗೆ ವಹಿಸಿರುವುದನ್ನು ತಿಳಿಸಬೇಕಾಗುತ್ತದೆ.

ಹೆಚ್ಚು ದಿನ ಬದುಕಿರಲಾರೆ...!

ಚುನಾವಣಾ ಪ್ರಚಾರದಿಂದ ಹಿಡಿದು ಈವರೆಗಿನ ಸಾರ್ವಜನಿಕ ಸಮಾರಂಭಗಳಲ್ಲಿ ಎಚ್‌.ಡಿ.ಕುಮಾರಸ್ವಾಮಿ(58) ಭಾವನಾತ್ಮಕ ಭಾಷಣ ಮಾಡುತ್ತ, ’ನಾನು ಎಷ್ಟು ದಿನ ಬದುಕಿರುತ್ತೇನೋ ಗೊತ್ತಿಲ್ಲ...ಅನುಭವಿಸುತ್ತಿರುವ ಕಷ್ಟ ಹೇಳಿಕೊಳ್ಳಲು ಆಗುತ್ತಿಲ್ಲ..’ ಎಂದೆಲ್ಲ ಆಗಾಗ್ಗೆ ಹೇಳಿಕೊಳ್ಳತ್ತಲೇ ಇದ್ದಾರೆ. ಹೃದಯ ಸಮಸ್ಯೆಯಿಂದ ಬಳಲುತ್ತಿರುವ ಅವರು ರಾಜ್ಯ ವಿಧಾನಸಭೆ ಚುನಾವಣೆಗೂ ಮುನ್ನ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಬೆಂಗಳೂರು ಹಾಗೂ ಸಿಂಗಾಪುರದಲ್ಲಿ ಚಿಕಿತ್ಸೆ ಪಡೆದಿದ್ದರು.

ಟಿಪ್ಪು ಜಯಂತಿ ಸಂದರ್ಭದಲ್ಲಿ ಕೆಲವು ದಿನಗಳ ವರೆಗೆ ವೈದ್ಯರ ಸಲಹೆ ಮೇರೆಗೆ ವಿಶ್ರಾಂತಿ ಪಡೆಯಲು ಸಾರ್ವಜನಿಕ ಕಾರ್ಯಕ್ರಮಗಳಿಂದ ಬ್ರೇಕ್‌ ತೆಗೆದುಕೊಂಡಿದ್ದರು. ಪ್ರಮುಖವಾದ ಖಾತೆಗಳ ಹೊಣೆಯೊಂದಿಗೆ ಆಡಳಿತ ನಡೆಸುವುದು ಸವಾಲಿನದು. ಒತ್ತಡ, ಉದ್ವೇಗಗಳಿಗೆ ಒಳಗಾಗದೆ ಆಡಳಿತ ನಡೆಸದಿದ್ದರೆ ಆರೋಗ್ಯಕ್ಕೆ ಪೆಟ್ಟು ತಪ್ಪಿದ್ದಲ್ಲ ಎಂಬುದು ಈಗಾಗಲೇ ಹಲವು ನಾಯಕರ ಪ್ರಕರಣಗಳಿಂದ ಸ್ಪಷ್ಟವಾಗಿದೆ.

ಬಿಜೆಪಿ ಮುಷ್ಠಿ ಸಡಿಲಾಗುವ ಆತಂಕ

ಗೋವಾ ಮುಖ್ಯಮಂತ್ರಿ ಹಾಗೂ ಮಾಜಿ ರಕ್ಷಣಾ ಸಚಿವ ಮನೋಹರ್‌ ಪರ್ರೀಕ್ಕರ್‌(62) ಮೇದೋಜೀರಕ ಗ್ರಂಥಿ(ಪ್ಯಾಂಕ್ರಿಯಾಸ್) ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ರಕ್ಷಣಾ ಸಚಿವ ಸ್ಥಾನದಿಂದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿದ ಕೆಲವೇ ತಿಂಗಳಲ್ಲಿ ಪರ್ರೀಕ್ಕರ್‌ ಆರೋಗ್ಯ ತೀವ್ರ ಹದಗೆಟ್ಟಿತು. ಕ್ಯಾನ್ಸರ್‌‍‍ಪತ್ತೆಯಾಗಿ ಕೆಲ ಸಮಯದಲ್ಲಿ ಅಮೆರಿಕದಲ್ಲಿಯೂ ಚಿಕಿತ್ಸೆ ಪಡೆದು ಮರಳಿದರು. ಸಭೆಗಳಲ್ಲಿ ಹಾಗೂ ಆಡಳಿತ ಕಾರ್ಯಗಳಲ್ಲಿ ಭಾಗಿಯಾಗುವುದು ಅವರಿಗೆ ಸಾಧ್ಯವಾಗಿರಲಿಲ್ಲ. ದೇಶಕ್ಕೆ ಮರಳಿ ಮತ್ತೆ ದೆಹಲಿಯ ಏಮ್ಸ್‌ನಲ್ಲಿ ಚಿಕಿತ್ಸೆ ಮುಂದುವರಿಸಿ, ಪ್ರಸ್ತುತ ಗೋವಾದಲ್ಲಿ ಜವಾಬ್ದಾರಿ ನಿರ್ವಹಿಸುವ ಪ್ರಯತ್ನದಲ್ಲಿದ್ದಾರೆ.

ಈವರೆಗೂ ಅವರ ನಾಯಕತ್ವ ಬದಲಾವಣೆ ಬಗ್ಗೆ ಬಿಜೆಪಿ ಯಾವುದೇ ನಿರ್ಧಾರ ಪ್ರಕಟಿಸಿಲ್ಲ. ಇದೇ ವರ್ಷ ಮಾರ್ಚ್‌ನಲ್ಲಿ ಚಿಕಿತ್ಸೆಗೆ ತೆರಳುವಾರ ರಾಜ್ಯ ಸಂಪುಟ ದರ್ಜೆಯ ಮೂವರು ಹಿರಿಯ ಸಚಿವರ ಸಮಿತಿಯೊಂದನ್ನು ರಚಿಸಿದ್ದ ಪರ್ರೀಕ್ಕರ್‌, ಗೋವಾ ಆಡಳಿತದ ಉಸ್ತುವಾರಿ ಹೊಣೆ ನೀಡಿದ್ದರು. ಪರ್ರೀಕ್ಕರ್‌ ನಾಯಕತ್ವಬದಲಿಸಿದರೆ ಆಡಳಿತದ ಹಿಡಿತ ತಪ್ಪುವ ಆತಂಕದಲ್ಲಿದೆ ಬಿಜೆಪಿ.

ಚುನಾವಣೆಯಲ್ಲಿ ಗೆಲುವು ಸಾಧಿಸಲು ಬಿಜೆಪಿ ಕಾರ್ಯಕರ್ತರು, ಮುಖಂಡರು ದಿನದ 18 ಗಂಟೆ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿರುವ ಅಮಿತ್‌ ಶಾ; ‘ಪರ್ರೀಕ್ಕರ್‌ ಗೋವಾ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ’ ಎಂಬ ಮಾತನ್ನು ಈ ವರೆಗೂ ಬದಲಿಸಿಲ್ಲ. ಆರೋಗ್ಯವೋ ಆಡಳಿತವೋ ಎಂಬ ಜಿದ್ದಾಜಿದ್ದಿನ ಪ್ರಶ್ನೆಗೆ ಇಲ್ಲಿ ಉತ್ತರಿಸುವವರೇ ಇಲ್ಲ.

ಯಾರಿಗಿಲ್ಲ 'ಮಧುಮೇಹ’

ನಲವತ್ತು ವರ್ಷ ದಾಟಿದ ವ್ಯಕ್ತಿಯಲ್ಲಿ ಮಧುಮೇಹ ಆಶ್ರಯ ಪಡೆದುಕೊಳ್ಳುವುದು ಸಾಮಾನ್ಯ ಎಂಬಂತಾಗಿದೆ.ಒತ್ತಡ, ಆಯಾಸ ಹಾಗೂ ಅನಿಯಮಿತ ಆಹಾರ ಕ್ರಮದಿಂದಾಗಿ ಬಹುಬೇಗ ರಾಜಕೀಯ ಮುಖಂಡರನ್ನು ಈ ಸಮಸ್ಯೆ ಆವರಿಸಿಕೊಳ್ಳುತ್ತಿದೆ. ‘ತನ್ನ ಕ್ಷೇತ್ರದಲ್ಲಿ ಹೆಚ್ಚು ಓಡಾಡಿದರೆ ಸುಸ್ತು, ಸಮಸ್ಯೆಗಳನ್ನು ನಿರಂತರ ಆಲಿಸಿದರೆ ತಲೆ ಸುತ್ತು, ಪರಿಹಾರಕ್ಕೆ ಯೋಚಿಸಿದರೆ ಲೋ ಶುಗರ್‌, ಯೋಜನೆಗಳ ವಿಷಯ ಬಂದರೆ ಹೈಬಿಪಿ,...’ ಇದು ಎಲ್ಲ ರಾಜ್ಯಗಳ, ಬಹುತೇಕ ಜನನಾಯಕರ ಸಮಸ್ಯೆ.

ಮಧುಮೇಹ ಸಮಸ್ಯೆಯಿಂದಾಗಿ ಮೂತ್ರಪಿಂಡ ವೈಫಲ್ಯಕ್ಕೆ ಒಳಗಾಗಿ ನಿತ್ಯ ಡಯಾಲಿಸಿಸ್‌ಗೆ ಒಳಗಾಗಿ, 2016ರ ಡಿಸೆಂಬರ್‌ನಲ್ಲಿ ಮೂತ್ರಪಿಂಡ ಕಸಿ ಶಸ್ತ್ರಚಕಿತ್ಸೆಗೆ ಒಳಗಾದವರು ವಿದೇಶಾಂಗ ವ್ಯವಹಾರಗಳ ಖಾತೆ ಸಚಿವೆ ಸುಷ್ಮಾ ಸ್ವರಾಜ್‌(66). ಟ್ವಿಟರ್‌ನಲ್ಲಿ ತನ್ನ ಆರೋಗ್ಯ ಸಮಸ್ಯೆ ಬಗ್ಗೆ ಸುಷ್ಮಾ ಹಂಚಿಕೊಂಡಿದ್ದರು. ಅವರಿಗೆ ಮೂತ್ರಪಿಂಡ ದಾನ ಮಾಡುವುದಾಗಿ ಅನೇಕ ಅಭಿಮಾನಿಗಳು ಟ್ವಿಟರ್‌ ಮೂಲಕವೇ ಕಾಳಜಿ ವ್ಯಕ್ತಪಡಿಸಿದ್ದರು.

ರಾಜಕೀಯದಂತಹ ಕ್ಷೇತ್ರದಲ್ಲಿ ದಣಿವರಿಯದೆ ನಡೆಸಬೇಕಾದ ಕಾರ್ಯದಲ್ಲಿ ಆರೋಗ್ಯ ನಿರ್ಲಕ್ಷ್ಯಕ್ಕೆ ಒಳಗಾಗುವುದು ಸಹಜ. ಪ್ರಧಾನಿ ನರೇಂದ್ರ ಮೋದಿ(68) ಇಡೀ ವಿಶ್ವದ ಜನತೆಗೆ ಯೋಗ ಅಭ್ಯಾಸ ಮಾಡುವ ಮೂಲಕ ಸದೃಢರಾಗಿರಿ ಎಂದು ಆಗಾಗ್ಗೆ ಸಲಹೆ ನೀಡುತ್ತಿರುತ್ತಾರೆ. ಅವರ ಟ್ವಿಟರ್‌ ಖಾತೆಯ ಮೂಲಕ ಯೋಗದ ಆಸನಗಳಿಗೆ ಸಂಬಂಧಿಸಿದ ಆ್ಯನಿಮೇಟೆಡ್‌ ವಿಡಿಯೊಗಳನ್ನು ಪ್ರಕಟಿಸಿದ್ದಾರೆ. ಇದು ಸಚಿವರು ಸೇರಿದಂತೆ ಎಲ್ಲರೂ ಅನ್ವಯಿಸಿಕೊಳ್ಳಬೇಕಷ್ಟೆ.

ಕೇಜ್ರಿವಾಲ್‌ ಬೆನ್ನಿಗಂಟಿದ ಕೆಮ್ಮು

ದೆಹಲಿ ಮುಖ್ಯಮಂತ್ರಿ, ಎಎಪಿ ಮುಖಂಡ ಅರವಿಂದ ಕೇಜ್ರಿವಾಲ್‌(50) ಸಹ ಅತಿಯಾದ ಮಧುಮೇಹದಿಂದ ಬಳಲುತ್ತಿದ್ದಾರೆ.

ನಿಯಂತ್ರಣಕ್ಕೆ ಬರದೆ ಆಗಾಗ್ಗೆ ಏರಿಕೆಯಾಗುವ ಮಧುಮೇಹಕ್ಕೆ ಚಿಕಿತ್ಸೆ ಪಡೆಯಲು ಹತ್ತಾರು ದಿನ ಬೆಂಗಳೂರಿನ ಜಿಂದಾಲ್‌ಗೆ ಬಂದು ಹೋಗುತ್ತಿರುತ್ತಾರೆ. ಇವರು ಪ್ರಕೃತಿ ಚಿಕಿತ್ಸೆ ಮೂಲಕ ತನ್ನ ಸಮಸ್ಯೆಗಳಿಗೆ ಪರಿಹಾರ ಕಾಣುತ್ತಿದ್ದಾರೆ. ಅವರು ಸಿಎಂ ಆದಾಗಲಿಂದಲೂ ಮಧುಮೇಹ, ಕೆಮ್ಮು ಸಮಸ್ಯೆಗೆ ಪ್ರಕೃತಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವರ್ಷಕ್ಕೆ ಕನಿಷ್ಠ ಎರಡು ಬಾರಿ, ಪ್ರತಿ ಸಲ ವಾರದಿಂದ ಹತ್ತು ದಿನಗಳವರೆಗೆ ಚಿಕಿತ್ಸೆಗೆ ಒಳಗಾಗುತ್ತಿದ್ದಾರೆ.

ಉಪರಾಷ್ಟ್ರಪತಿಗೆ ಬಾಲ್‌ ಬ್ಯಾಡ್ಮಿಂಟನ್ ಪ್ರೀತಿ

ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು(68)

ಅಧಿಕಾರ ಸ್ವೀಕರಿಸಿದ ನಂತರದಲ್ಲಿಏಮ್ಸ್‌ನಲ್ಲಿ ದೇಹದ ಸಂಪೂರ್ಣ ಪರೀಕ್ಷೆಗೆ ಒಳಗಾಗಿದ್ದರು. ಕಳೆದ ವರ್ಷ ಹೃದಯ ಸಂಬಂಧಿ ಸಮಸ್ಯೆಯಿಂದ ಏಮ್ಸ್‌ಗೆ ದಾಖಲಾಗಿದ್ದರು. ಆಂಜಿಯೋಗ್ರಫಿ ನಡೆಸಿದ್ದ ವೈದ್ಯರು ಸ್ಟೆಂಟ್‌ ಅಳವಡಿಸಿದ್ದರು. ಪೂರ್ಣಚೇತರಿಸಿ ಕೊಂಡಿರುವಂತೆ ಕಾಣುವ ಅವರು, ‘ನಿತ್ಯ ಬಾಲ್‌ ಬ್ಯಾಡ್ಮಿಂಟನ್‌ ಆಡುವುದೇ ತನ್ನ ಆರೋಗ್ಯದ ಗುಟ್ಟು’ ಎಂದು ಹೇಳಿಕೊಳ್ಳುತ್ತಾರೆ. ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಅವರನ್ನು ಬಿಟ್ಟಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT