ಬುಧವಾರ, ಆಗಸ್ಟ್ 4, 2021
25 °C

ಅಸ್ಸಾಂ: ಅನಿಲ ಬಾವಿಯಲ್ಲಿ ಭಾರಿ ಬೆಂಕಿ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

Assam fire

ಗುವಾಹಟಿ: ಅಸ್ಸಾಂನ ಪೂರ್ವ ಭಾಗದಲ್ಲಿರುವ ಆಯಿಲ್‌ ಇಂಡಿಯಾ ಲಿಮಿಟೆಡ್‌ನ (ಒಐಎಲ್‌) ನೈಸರ್ಗಿಕ ಅನಿಲ ಬಾವಿಯಲ್ಲಿ ಮಂಗಳವಾರ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಈ ಬಾವಿಯಿಂದ ಕಳೆದ 14 ದಿನಗಳಿಂದ ಅನಿಯಂತ್ರಿತವಾಗಿ ನೈಸರ್ಗಿಕ ಅನಿಲ ಸೋರಿಕೆಯಾಗುತ್ತಿದೆ.

ಟಿನ್ಸುಕಿಯಾ ಜಿಲ್ಲೆಯ ಬಾಗ್ಜನ್‌ ತೈಲ ಕ್ಷೇತ್ರದ ಅನಿಲ ಬಾವಿಯಲ್ಲಿ ಮೇ 27 ರಿಂದ ಅನಿಲ ಸೋರಿಕೆ ಆಗುತ್ತಿದೆ. ಸೋರಿಕೆಯನ್ನು ನಿಯಂತ್ರಿಸಲು ಸಿಂಗಪುರದ ತಜ್ಞರ ಮತ್ತು ಸ್ಥಳೀಯ ಎಂಜಿನಿಯರ್‌ಗಳ ತಂಡವು ಪ್ರಯತ್ನದಲ್ಲಿ ತೊಡಗಿದ್ದಾಗಲೇ ಮಂಗಳವಾರ ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. 

ಮೈಲಿ ದೂರದವರೆಗೆ ದಟ್ಟವಾಗಿ ಕಪ್ಪು ಹೊಗೆ ಆವರಿಸಿದೆ. ಸುತ್ತಲಿರುವ ಸ್ಥಳೀಯರು ಬೇರೆಕಡೆಗೆ ಸ್ಥಳಾಂತರವಾಗುತ್ತಿರುವುದು ಕಂಡುಬಂಡಿದ್ದು, ಆಕಾಶದೆತ್ತರಕ್ಕೆ ಬೆಂಕಿ ಜ್ವಾಲೆ ಕಾಣಿಸುತ್ತಿದೆ. ಸ್ಫೋಟದ ಶಬ್ದ ಕೇಳಿ ಬಂದಿದೆ ಎಂದು ನಿವಾಸಿಗಳು ಹೇಳಿದ್ದಾರೆ.

ಅನಿಲ ಪೂರೈಕೆ ಮಾರ್ಗದ ಜೋಡಣೆ ಕೆಲಸವು ಅಂತಿಮ ಹಂತ ತಲುಪಿದೆ ಎಂದು ಒಐಎಲ್‌ ಘೋಷಿಸಿದ ಕೆಲವೇ ನಿಮಿಷಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಎನ್‌ಡಿಆರ್‌ಎಫ್‌ ಮತ್ತು ಇತರೆ ರಕ್ಷಣಾ ಸಂಸ್ಥೆಗಳ ಸೇವೆಗೆ ಒತ್ತಾಯಿಸಲಾಗಿದ್ದು, ಮಧ್ಯಾಹ್ನ 3ರ ವರೆಗೆ ಬೆಂಕಿ ನಿಯಂತ್ರಣಕ್ಕೆ ಬಂದಿರಲಿಲ್ಲ. 

ಅಸ್ಸಾಂ ಮುಖ್ಯಮಂತ್ರಿ ಸರ್ವಾನಂದ ಸೋನೊವಾಲ್‌ ಅವರು ಕೇಂದ್ರದ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್‌ ಅವರೊಂದಿಗೆ ಈ ಕುರಿತು ಚರ್ಚಿಸಿದ್ದು, ಬೆಂಕಿ ನಿಯಂತ್ರಿಸಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ಹಾಗೂ ಸ್ಥಳೀಯರ ಸುರಕ್ಷತೆಗೂ ಕ್ರಮ ತೆಗೆದುಕೊಳ್ಳಬೇಕು ಎಂದು ಕೋರಿದ್ದಾರೆ.

ತೈಲ ಬಾವಿಯ ಸಮೀಪದ ಭತ್ತದ ಗದ್ದೆಗಳು, ಕೊಳಗಳು ಕಲುಷಿತಗೊಂಡಿವೆ. ಚಹಾ ತೋಟಗಳಲ್ಲಿ ಸಹ ಅನಿಲದ ಕಣಗಳು ವ್ಯಾಪಿಸಿವೆ ಎಂದು ಬೆಳೆಗಾರರು ದೂರಿದ್ದಾರೆ. ಈ ಪ್ರದೇಶದಲ್ಲಿ ಆತಂಕ ಮನೆ ಮಾಡಿದೆ. 

ಘಟನಾ ಸ್ಥಳದ 1.5 ಕಿ.ಮೀ. ವ್ಯಾಪ್ತಿಯಲ್ಲಿ ವಾಸಿಸುವ ಕನಿಷ್ಠ 6,000 ಜನರನ್ನು ಸ್ಥಳಾಂತರಿಸಿ ಪರಿಹಾರ ಶಿಬಿರಗಳಲ್ಲಿ ಇರಿಸಲಾಗಿದೆ. ಸಂತ್ರಸ್ತ ಕುಟುಂಬಗಳಿಗೆ ತಲಾ ₹30,000 ಪರಿಹಾರವನ್ನು ಒಐಎಲ್‌ ಘೋಷಿಸಿದೆ ಎಂದು ಎನ್‌ಡಿಟಿವಿ ವರದಿ ತಿಳಿಸಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು