ಬುಧವಾರ, ಸೆಪ್ಟೆಂಬರ್ 22, 2021
21 °C

ಬದುಕಿನ 'ಶಾಂತ' ಮಾಸ್ಟರ್ - ಹಿರಣ್ಣಯ್ಯ ತಮ್ಮ ಪತ್ನಿ ಬಗ್ಗೆ ಹೇಳಿದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Behind every successful man  there is a woman- ಅಂದರೆ ‘ಪ್ರತಿಯೊಬ್ಬ ಸಾಧಕನ ಹಿಂದೆ ಒಬ್ಬ ನಾರೀಮಣಿ ಇರುತ್ತಾಳೆ’ ಇದೊಂದು ಜಗತ್ತು ಒಪ್ಪಿರುವ ಲೋಕೋಕ್ತಿ. ಇದು ನಿಜವೂ ಇರಬಹುದು. ಇರಬಹುದು ಎಂಬ ಅರ್ಧೋಕ್ತಿ ಏಕೆ ಎನ್ನಬಹುದು.
ಅಲ್ಲಾ ಸಾರ್, ಮದುವೆಯೇ ಆಗದ ಎಷ್ಟೋ ಗಂಡಸರು ‘ಸಾಧಕ’ರಾಗಿಲ್ಲವೇ? ಅವರ ಅಭಿಪ್ರಾಯದ್ಲಲಿ ‘ನಾರೀಮಣಿ’ ಎಂಬುದನ್ನು ಹೇಗೆ ಅರ್ಥೈಸಬೇಕು. ಅಂಥವರಿಗಾಗಿ ಅರ್ಧೋಕ್ತಿ.

ನನ್ನ ಮಟ್ಟಿಗೆ ಹೇಳುವುದಾದರೆ ‘ಸಾಧಕನ ಹಿಂದೆ’ ಅಲ್ಲ, ‘ಮುಂದೆ’ ಎಂದಿರಬೇಕು.ಆಗಲೇ ಆ ಪಾತ್ರಕ್ಕೆ ಅಷ್ಟೊಂದು ಗೌರವ ಸ್ಥಾನ ಕೊಟ್ಟಂತೆ. ಕಾರಣ ನಮ್ಮ ಬಳ್ಳಾರಿ ಬೀಚಿ ಹೇಳುತ್ತಿದ್ದ- ‘ಮನೆ ನಿಂತಿರುವುದು ಮಡದಿಯಿಂದ, ಬಿದ್ದರೆ ಗಂಡನ ತಲೇ ಮೇಲೆ’ ಎಂದು.
ಎಷ್ಟೊಂದು ಸರಿ ಅಲ್ಲವೇ ಈ ಮಾತು. ನಮ್ಮ ‘ಕಪಿಮುಷ್ಟಿ’ ನಾಟಕಜಲ್ಲಿನ ಒಂದು ಕಂದ ಪದ್ಯದ ಉಲ್ಲೇಖ ಇಲಿ ಪ್ರಸ್ತುತ-
ಮಾತೆಯಿಂದಲೇ ಎಲ್ಲ ಕಾರಣ/
ಮಾತೆಯಿಂದಲೇ ಮನೆಯ ತೋರಣ/
ಮಾತೆಯೇ ಮನೆಮನೆಯ ಚೇತನ/
ಮಾತೆ ಒಲಿದರೆ ಬಾಳು ಪೂರ್ಣ/
ಮಾತೆ ಮುನಿದರೆ ಮನೆಯೆ ಮಸಣ/
ಮಾತೆಗೇ ಶರಣೆಂದು ಬೇಡೆ ಮನನವಾಗುವುದ್ಲೆಲಾ ಸಂಪೂರ್ಣ/
ಇಲ್ಲಿ ‘ಮಾತೆ’ ಎಂಬುದನ್ನು ನಾರೀಮಣಿ ಎಂದೇ ತಿಳಿಯಬೇಕು. ಅದರ್‍ಲಲೂ ಸಾಧಕನೊಬ್ಬನಿಗೆ ಹೆಣ್ಣೊಂದು ಸ್ಫೂರ್ತಿಯಾಗಿ, ಪ್ರೇರಕವೆನಿಸುವ ಹಾಗೂ ಪೂರಕವಾಗುವ ಸತ್ಯಕ್ಕೆ, ‘ಕಾಂತಾ ಸಂಹಿತೆ’ಯ ಶ್ರೇಷ್ಠತೆಯೇ ಸಾಕ್ಷಿ. ನನ್ನ ಬದುಕ್ಲಲಿ ‘ನನ್ನವಳೇ’ ನನಗೆ ಸಾಥಿ- ಅದರಲ್ಲೂ ನಾನೇನಾದರೂ ಸಾಧಿಸ್ದಿದರಂತೂ ಅದರ ಪೂರ್ಣ ಹೊಣೆಗಾರಿಕೆ ಅವಳದ್ದೇ. ಆ ಕೀರ್ತಿಗೆ ಅವಳೇ
ಅಧಿಪತಿ ಎಂದು ನಾನು ಯಾವ ಸಂಕೋಚವೂ ಇಲ್ಲದಂತೆ ಒಪ್ಪುವೆನು. ನಾನವಳನ್ನು ಲಗ್ನವಾದಾಗ ನನಗೆ 22-23 ವರ್ಷ, ಅವಳಿಗೆ 15-16 ವರ್ಷ. ದೊಡ್ಡಬಿದರೆ ಗ್ರಾಮದಲ್ಲಿ (ಚಿಕ್ಕನಾಯಕನಹಳ್ಳಿ) ಹುಟ್ಟಿ ಹುಳಿಯಾರು-ಚಿಕ್ಕನಾಯಕನ ಹಳ್ಳಿಯಂಥಾ ಕಡೆ ವ್ಯಾಸಂಗ ಮಾಡಿ, ತನ್ನ ಮಿಡಲ್‌ಸ್ಕೂಲ್ ದಾಟುವಷ್ಟರ್‍ಲಲಿ ಅವಳು ‘ಕನ್ಯಾವಸ್ಥೆ’ಯನ್ನೇ’ ದಾಟಬೇಕಾಯ್ತು. 1958 ಡಿಸೆಂಬರ್ 20  ಲಗ್ನವಾಗಿ, ತೀರ್ಥಹಳ್ಳಿ ಮೊಕ್ಕಾಂಗೆ ನಾಟಕವಾಡಲು ಬಂದೆವು. ನಮ್ಮ ಹನಿಮೂನ್ ಊರುಗಳೋ, ಉಡುಪಿ, ಶೃಂಗೇರಿ, ಹೊರನಾಡು, ಕ್ಲೊಲೂರು, ಧರ್ಮಸ್ಥಳ ಮೊದಲಾದ ತೀರ್ಥಯಾತ್ರಾ ಸ್ಥಳಗಳೇ. ಆದರಿಂದಲೇ ಏನೋ ನಮ್ಮಿಬ್ಬರ ಮತ್ತು ನಮ್ಮ ಮಕ್ಕಳ ರಕ್ತದಲ್ಲೇ ದೈವಭಕ್ತಿ ಸೇರಿಕೊಂಡಿದೆ. ನನ್ನವಳಿಗೆ ಮಿತವಾದ ವಿದ್ಯಾಭ್ಯಾಸ ಮತ್ತು ಹಳ್ಳಿ ವಾಸವ್ದಾದರಿಂದ, ಸಮಾಜದ ಇತರೆ ವಿಚಾರಗಳ ಬಗ್ಗೆ ಪರಿಜ್ಞಾನ ಶೂನ್ಯ. ನಾನೋ ವೃತ್ತಿ ನಾಟಕದವನಾಗಿ ‘ಸಕಲಕಲಾವ್ಲಲಭ’ನಾಗಿದ್ದೆ. ತಾಯಿ ಹಾಲು, ಹಸುವಿನ ಹಾಲು ಮಾತ್ರ ಕಂಡಿದ್ದ ನನ್ನಾಕೆಗೆ, ನನ್ನ ‘ಆಲ್ಕೋಹಾಲ್’ ಪರಿಚಯ ಹೇಗೆ ತಾನೆ ಇದ್ದೀತು! ಶಾಲಾ ಆಟದಮೈದಾನವಷ್ಟನ್ನೇ ಸುತ್ತಾಡ್ದಿದವಳಿಗೆ, ನನ್ನ ಕುದುರೆ ಓಟದ ರೇಸ್ ಮೈದಾನದ ಬಗ್ಗೆ ಗೊತ್ತೆಷ್ಟು?  ಊಟದೆಲೆ ಬಿಟ್ಟರೆ ವೀಳ್ಯದೆಲೆಯಷ್ಟನ್ನೇ ಬಲ್ಲವಳಿಗೆ, ನನ್ನ ಇಸ್ಪೀಟಿನ ಹದಿಮೂರು ಎಲೆಯಬಲೆಯೇನ ಬಲ್ಲಳು? ನನ್ನೊಡನೆ ಕೂಡಿ ಒಡನಾಡುವ ಹೆಣ್ಣುಗಳನ್ನು ಪಾತ್ರಧಾರಿಗಳೆಂದಷ್ಟೇ ತಿಳಿದ ಅವಳಿಗೆ, ಅವರು ಪಾತರಗಿತ್ತಿಯರು ಎಂದು ಯಾರಾದರೂ ಅಂದರೂ ನಂಬಲಾರದಷ್ಟು ಸಂಪ್ರದಾಯ ಸಂಪದ್ಭರಿತಳಾಗ್ದಿದಳು. ಆದರೂ ಅವಳಿಗೆ ಇವೆಲ್ಲದರ ಬಗ್ಗೆ ತಿಳಿದಾಗ ಹಗೆತನ ಸಾಧಿಸಲಿಲ್ಲ. ಬದಲಾಗಿ ಅವಕ್ಕೇ ಒಗ್ಗಿದಂತೆ ನಟಿಸಿದಳು.

ಅಂದರೆ ಈ ನನ್ನ ಎಲ್ಲಾ ರಾಕ್ಷಸಗುಣಗಳ ಬಗೆಗಿನ ಅವಳ ಅಜ್ಞಾನ ಸ್ಥಿತಿ ಇದ್ದುದು ಕೇವಲ ಕೆಲವೇ ಕಾಲ. ಅದರ್‍ಲಲೂ ವೃತ್ತಿ ನಾಟಕ ಕಂಪನಿಯೆಂದರೇನು ಸಾಮಾನ್ಯವೇ? ಅದೊಂದು ‘ಸಂಚಾರಿ ವಿಶ್ವವಿದ್ಯಾಲಯ’ವಿದ್ದಂತೆ. ಬೇಕು ಬೇಡದ ಸಕಲ ಕಲ್ಯಾಣಗುಣಗಳನ್ನೂ ಕಲಿಸುವ ತಾಣ. ‘ಮೂಕಂಕರೋತಿ ವಾಚಾಲಂ, ಪಂಗುಂ ಲಂಘಯತೇ ಗಿರಿಂ’ ಎಂಬಂತೆ, ಪೂರ್ವಾಶ್ರಮದ ಕಾಳಿದಾಸನನ್ನು ಶ್ರಿಮಾತಾ ತನ್ನ ಆಶೀರ್ವಾದದಿಂದ ಪರಮೋಚ್ಛ ಪಂಡಿತನನ್ನಾಗಿಸಿದಂತೆ, ನಮ್ಮ ಮಿತ್ರಮಂಡಲಿಯ ಪೂರ್ಣಕಟಾಕ್ಷದಿಂದಾಗಿ, ನನ್ನವಳು ಜೀವನದ ಒಳಾಂತರ್ಯವನ್ನು, ಎಂಥಾ ಪರಮ ರಾಕ್ಷಸನನ್ನೂ ಪಳಗಿಸಿ, ಬದಲಿಸಿ ವಿಜಯವನ್ನು ಸಾಧಿಸುವ ಪರಿಯನ್ನು ಕೆಲವೇ ಕಾಲದ್ಲಲಿ ಕಲಿತು, ಅದನ್ನು ನನ್ನ ಮೇಲೆ ಪ್ರಯೋಗಿಸಲು ಸನ್ನದ್ಧಳಾದಳು. ಸೋತು ಗ್ಲೆಲುವ ಸಹನಾವಿದ್ಯೆ ಕರಗತವಾಗಿತ್ತು. ಸಂಸಾರಕ್ಕೆ ಹೆಣ್ಣಿನಾಗಮನ, ಗಂಡನನ್ನು ಬದುಕಿಗೆ ಹದಗೊಳಿಸಿ ಮುನ್ನಡೆಸುವುದಕ್ಕೇ ಹೊರತು, ಮನೆ-ಮನಗಳನ್ನು ಒಡೆದು ಆಳುವ ರೀತಿ ನೀತಿಗಲ್ಲ ಎಂಬರ್ಥದ ಕಾಲದಲ್ಲಿ ನಮ್ಮ ಮದುವೆ ಆಗಿತ್ತು.

ದುಡಿದು ತರುವ ಗಂಡಿಗಿಂತ, ಅದನ್ನು ಹಿಡಿದು ಹಂಚಿ, ಲೌಕಿಕವಾಗಿ, ಪಾರಮಾರ್ಥಿಕವಾಗಿ ವಂಶಾಭಿವೃದ್ಧಿಗೆ ಸೂತ್ರಧಾರಳೇ ಹೆಣ್ಣೆಂದಾಗ, ಆಕೆಯ ಸ್ಥಾನಕ್ಕೆ ಸಮನುಂಟೆ. ಇಂದು ಇದೆಲ್ಲಾ  ‘ಸ್ತ್ರೀದಾಸ್ಯ ಪರಂಪರೆ’ ಎಂದು ಕರೆಸಿಕೊಂಡು ಸಂಸಾರಗಳು ಮೂರಾಬಟ್ಟೆಯಾಗಿವೆ. ನನ್ನ ಯಾವ ಅವಗುಣಗಳನ್ನೂ ಹಠಮಾರಿತನದಿಂದ ಅವಹೇಳನ ಮಾಡಿ ಹೀಯಾಳಿಸದೇ,ಎಲ್ಲಕ್ಕೂ ಮನೆಯ್ಲಲೇ ಅವಕಾಶವನ್ನು ಕಲ್ಪಿಸಿಕೊಟ್ಟು, ಕ್ರಮೇಣ ನನಗೇ ಅವುಗಳ ಮೇಲೆ ಅಸಡ್ಡೆ ಬರುವಂತೆ ಮಾಡಿದಳು- ಅದೂ ನನಗೆ ಅರಿವ್ಲಿಲದಂತೆ. ಸಾಮಾನ್ಯವಾಗಿ ಈ ದುಶ್ಚಟವಿರುವವರು ಅವನ್ನು ದ್ವೇಷಿಸುವವರನ್ನೇ ದ್ವೇಷಿಸುವುದು, ಬೇಡವೆಂದಷ್ಟೂ ಅದನ್ನೇ ಇನ್ನೂ ಹೆಚ್ಚುಹೆಚ್ಚು ಮಾಡಲು ಆರಂಭಿಸುವುದು, ನಾನಾ ನೆಪಗಳ-ಕಾರಣಗಳ ನೆಪವೊಡ್ಡಿ, ಪದೇಪದೇ ತನ್ನ ಚಟಗಳತ್ತ ಜಾರುವುದು ಸರ್ವೇ ಸಾಮಾನ್ಯ. ಅವಕ್ಕೆಲ್ಲಾ  ನಾನೂ ಏನೂ ಹೊರತಾಗಿರಲ್ಲಿಲ. ಇದನ್ನರಿತ ನನ್ನವಳು ನನ್ನ ಚಟಗಳತ್ತ ಒಲವೂ ಇಲ್ಲಾ, ದ್ವೇಷವೂ ಇಲ್ಲ  ಎಂಬಂತಿದ್ದು, ನನ್ನ ತಪ್ಪುಗಳು ನನ್ನ ಅರಿವಿಗೇ ಬರುವಂತೆ ಬದುಕನ್ನು ಹೆಣೆದಳು. ಉದಾಹರಣೆಗೆ- 1970 ರಲ್ಲಿ  ನನ್ನ ವ್ಯವಹಾರದ ಒಂದು ದೊಡ್ಡ ಮೊತ್ತ ನನ್ನ ಕೈಗೆ ಬಂತು. ಸುಮಾರು ಸಾವಿರಗಳಿದ್ದ ಅದನ್ನು ಒಳಗಿಡಲು ಹೇಳಿದೆ. ಅದು ನಮ್ಮ ಮನೆಯ ಪದ್ದತಿ ಅಂದಿಗೂ ಮತ್ತು ಇಂದಿಗೂ ಸಹ. ಅಂದು ನಾನೊಬ್ಬನೇ ದುಡಿಯುತ್ತ್ದಿದ ಕಾಲ, ಇಂದು ನಾನು ಹಾಗೂ ನನ್ನ ಮೂರು ಗಂಡು ಮಕ್ಕಳು. ನಮ್ಮದು ಅವಿಭಕ್ತ ಕುಟುಂಬ. ನಾಲ್ಕೂ ಜನರ ದುಡಿಮೆಯನ್ನೂ ಮತ್ತು ಬರುವ ಬಾಡಿಗೆಯನ್ನೂ ನನ್ನವಳ ಕೈಗೆ ಹಾಕಿ ಬಿಡುತ್ತೇವೆ. ಅದನ್ನವಳು ದೇವರ ಬಳಿಯಿಟ್ಟು ಮಂಗಳದ್ರವ್ಯಗಳನ್ನು ಹಾಕಿ, ನಂತರ ತೆಗೆದು ಒಂದು ಪುಟ್ಟ ಗಾದ್ರೆಜ್ ಪೆಟ್ಟಿಗೆಗೆ ಹಾಕುವಳು. ಅದರಿಂದ ಯಾರಿಗೆಷ್ಟು ಹಣ ಬೇಕಾದರೂ ಸರಿ, ಅವಳನ್ನು ಕೇಳಿ ಪಡೆದು ಖರ್ಚುಮಾಡಿ ಅವಳಿಗೆ ಪಟ್ಟಿಕೊಟ್ಟರಾಯ್ತು. ಸರಿ, ಅಂದು ನನ್ನ ದೊಡ್ಡ ಮೊತ್ತವನ್ನೂ ಹಾಗೇ ಮಾಡಿದಳು.

ಅಂದು ಶುಕ್ರವಾರ. ಮಾರನೆಯ ಶನಿವಾರ ಮತ್ತು ಭಾನುವಾರ ನನ್ನ ರೇಸಿನಾಟದ ದಿನ. ನಾನು ಮಾಮೂಲಾಗಿ ಎರಡು ದಿನವೂ ರೇಸಿಗೆ ಹೋಗಿ, ಅಲಿರುವ ನಮ್ಮ ಬುಕ್ಕಿಗಳ ಬಳಿಯಲ್ಲಿನ ಅಕೌಂಟ್‌ನಲ್ಲಿ ಬರೆಸುತ್ತಾ ಆಡುವುದು. ಸೋಮವಾರದಂದು ಸೋಲು ಗೆಲುವುಗಳ ಲೆಕ್ಕಾಚಾರ ಮಾಡಿ ಹಣ ಕಟ್ಟುವುದು. ಇದು ಪದ್ದತಿ.  ಆ ಬಾರಿ ಎರಡು ದಿನಗಳಿಂದ ಹಲವು ಸಾವಿರ ಸೋತಿದ್ದೆ. ಸೋಮವಾರ ನನ್ನವಳನ್ನೂ ಕಾರಿನಲ್ಲಿ ಕೂರಿಸಿಕೊಂಡು, ಬಂದ್ದಿದ ದೊಡ್ಡ ಮೊತ್ತವನ್ನು ತೆಗೆಸಿಕೊಂಡು ಹೋದೆ. ನನ್ನವಳನ್ನು ಕಾರಲ್ಲೇ ಕೂರಿಸಿ ಹಣ ಪೂರ್ತಿ ಕಟ್ಟಿ ಬಂದೆ. ಬರುವಾಗ ನನ್ನ ಮನಸ್ಸಿನ್ಲಲಿ ಒಂದು ರೀತಿ ಭಯ, ಅಳುಕು, ನಾಚಿಕೆ. ಕಾರಣ ಕ್ಷಣದ ಹಿಂದೆ ಸಾವಿರಾರು ರೂ. ತುಂಬ್ದಿದ ಚೀಲ, ಕ್ಷಣಮಾತ್ರದಲ್ಲಿ  ಖಾಲಿಖಾಲಿಯಾಗಿಸಿದ ನಾನು ನನ್ನವಳ ಮುಖಕ್ಕೆ ಮುಖವನ್ನು ಕೊಟ್ಟು ಮಾತಾಡುವುದಾದರೂ ಹೇಗೆ ಎಂದು. ಮೌನವಾಗಿ ಬಂದು ಕೂತೆ. ಶಾಂತಾ ಏನೇನೂ ಆಗ್ಲಿಲವೆಂಬಂತೆ, ‘ಹೋಗೋಣವೇ? ಎಲ್ಲಾದರೂ ಹೋಟೆಲ್ ಬಳಿ ನಿಲ್ಲಿಸಿ. ನನಗೆ ಹಸಿವು. ಏನಾದರೂ ತಿನ್ನೋಣ’ ಅಂದಳು. ನಾನು ಕತ್ತೆತ್ತಿ ಅವಳ ಮುಖವನ್ನು ದಿಟ್ಟಿಸಿದೆ. ಒಂದಿನಿತೂ ವಿಕಾರವ್ಲಿಲದ ಅದೇ ನಗುಮುಖ, ಮನೆಯಿಂದ ಹೊರಟಾಗಿನದೇ ಮಂದಹಾಸ. ಯಾಕೋ ನನಗೇ ನಾಚಿಕೆಯಾದಂತಾಯ್ತು. ಮನಸ್ಸನ್ನು ಹಗುರಾಗಿಸಿಕೊಳ್ಳಲು ಕೇಳಿದೆ-’ಏನೇ? ನಿನ್ನ ಮನಸ್ಸಿಗೆ ಏನೂ ಆಗ್ಲಿಲವೇ?’ ‘ಏನಾಗ ಬೇಕಿತ್ತು?’ ಅವಳ ಮರು ಪ್ರಶ್ನೆ. ‘ಅಲ್ಲಾ ಅಷ್ಟೊಂದು ಹಣ, ಕ್ಷಣಾರ್ಧದಲ್ಲಿ ಹೋಗಿದ್ದೇಕ್ಕೆ?’ ಅಂಜುತ್ತಲೇ ಕೇಳಿದೆ. ಅದಕ್ಕೆ ಅವಳು-‘ಅಲ್ರೀ ದುಡಿಯೋರು ನೀವು, ಕಳೆಯೋರೂ ನೀವೇ. ನಾನೇನಾದರೂ ನಮ್ಮಪ್ಪನ ಮನೆಯಿಂದ ತಂದಿದ್ನೆ? ಎದೆರಕ್ತ ಬಸಿದು ದುಡಿಯೋರ್ಗೆ ಇಲ್ಲದ ಚಿಂತೆ, ಬರೀ ಎಣಿಸಿ ಖರ್ಚು ಮಾಡೋಳು ನನಗ್ಯಾಕೆ ಬೇಕು ಹೇಳಿ?’ -ಅಲ್ಲಾಡಿ ಹೋದೆ. ಅವಳ ಎರಡೂ ಕೈಗಳನ್ನು ಹಿಡಿದುಕೊಂಡು ಹೇಳಿದೆ- ‘ಶಾಂತಾ, ಇಷ್ಟು ವರ್ಷಗಳ ರೇಸೊಳಗಿನ ಸೋಲು ನನಗೆ ಸೋಲೆನಿಸಿದ್ದಿಲ್ಲ, ಆದರೆ ಈ ನಿನ್ನ ಒಂದೇ ಒಂದು ತಾಳ್ಮೆಯ ಮಾತಿನ ಮುಂದೆ, ನಾನು ಮಂಡಿಯೂರಿ ಸಂತೋಷದಿಂದ ಸೋಲೊಪ್ಪಿಕೊಳ್ಳುತ್ತೇನೆ. ಇದೇ ಕೊನೆ ಕಣೇ, ಇನ್ನು ಮುಂದೆ ಇದರತ್ತ ತಲೆಹಾಕಿ ಮಲಗೋಲ್ಲ. ಇದು ಸತ್ಯ’. ಅದೇ ಕೊನೆಯಾಯ್ತು. ಇಲ್ಲಿಯವರೆಗೂ ಅತ್ತ ಮೈಯಿರಲಿ, ಮನವೂ ಚಿಂತಿಸಿಲ್ಲ. ನಮ್ಮ ಬದುಕಲ್ಲಿ ಇದೊಂದು ಅತ್ಯಂತ ಮಾಮೂಲೀ ಘಟನೆ.

ಜಗತ್ತು ಒಪ್ಪುವ ಮಾತೊಂದಿದೆ- Mother is the Truth, Father is the opinion ಅಂತ. ಎಷ್ಟು ಸತ್ಯ ಈ ಮಾತು. ಪರಮಾತ್ಮ ಮನುಷ್ಯನನ್ನು ಹುಟ್ಟಿಸುವಾಗ ಹೇಳಿದನಂತೆ- ‘ನೋಡು ಜಗತ್ತಿನ್ಲಲಿ ಇರುವ ನಾನಾ ಸತ್ಯಗಳ ಪೈಕಿ, ಎರಡು ಸತ್ಯ ನಿನಗೆ ತಿಳಿಸುತ್ತೇನೆ. ಒಂದು ‘ಮಾತೆ’ ಮತ್ತೊಂದು ‘ಮರಣ’. ಇವೆರಡರ ನಡುವೆ ಬೇಕಾದಷ್ಟು ‘ಸತ್ಯ’ಗಳನ್ನು ಅಡಗಿಸಿಟ್ಟಿದ್ದೇನೆ- ಅವನ್ನು ಹುಡುಕು’ ಎಂದು ಹೇಳಿ ಕಳುಹಿಸಿದನಂತೆ. ಆದರೆ ಈ ಮನುಷ್ಯ ಸಿಕ್ಕ ಸತ್ಯಗಳೆಲ್ಲವನ್ನೂ ತುಳಿಯುತ್ತಾ ಸಾಗಿದ್ದಾನೆ. ಮಕ್ಕಳಿಗೆ ತಂದೆಯನ್ನು ತೋರಿಸಿದವಳು ತಾಯಿಯೇ. ಅದನ್ನು ನಂಬಿ ನಾವು ಜೀವನವಿಡೀ ಸಾಗುತ್ತೇವೆ. ಆದರೆ ನನ್ನವಳು ನನ್ನ ಐದು ಮಕ್ಕಳಿಗೆ ತಂದೆಯಾಗಿ ಮಾತ್ರ ನನ್ನನ್ನು ತೋರಿಸಲ್ಲಿಲ, ಅದಕ್ಕೂ ಹೆಚ್ಚಾಗಿ ತನ್ನ ಕರ್ತವ್ಯವನ್ನು ಮಾಡಿ, ಜಗತ್ತಿನ ತಾಯಂದಿರಿಗೇ ಮಾದರಿಯಾಗ್ದಿದಾಳೆ. ಸಾಮಾನ್ಯವಾಗಿ ಮನುಷ್ಯ ಹೆಣ್ಣಾಗಲೀ,ಗಂಡಾಗಲೀ ದುಶ್ಚಟಗಳಿಗೆ ಬಲಿಯಾಗುವುದು ಸಹಜ. ಅದರ್‍ಲಲೂ ಗಂಡಸರು ಸ್ವಲ್ಪ ಮುಂದು ಅನ್ನಿ. ನಾನೆಷ್ಟು ಮುಂದು ಎಂಬುದನ್ನು ಈಗಾಗಲೇ ಹೇಳ್ದಿದೇನೆ. ಇದು ನನ್ನ ಒಬ್ಬನ ಮನೆಯ ಕಥೆಯಲ್ಲ. ಎಲ್ಲರ ಮನೆಯ ಕಾವಲಿಯೂ ತೂತೇ. ನನ್ನವಳು ನನ್ನ ಐದು ಮಕ್ಕಳಿಗೆ ತಂದೆಯಾಗಿ ನನ್ನನ್ನುತೋರಿಸುವಾಗ, ನನ್ನ ದುಶ್ಚಟಗಳ ಬಗ್ಗೆ ಹೇಳಿ, ನನ್ನನ್ನು ಒಬ್ಬ ಖಳನಾಯಕನನ್ನಾಗಿ ಬಿಂಬಿಸಲಿಲ್ಲ. ಬದಲಿಗೆ ನನಗೆ ಬಂದ್ದಿದ ಬಿರುದು ಬಾವಲಿಗಳು, ಹೊದಿಸ್ದಿದ ಸಾವಿರಾರು ಶಾಲುಗಳು, ಕೊಟ್ಟಿದ್ದ  ಸನ್ಮಾನ ಪತ್ರಗಳು-ನೆನಪಿನ ಕಾಣಿಕೆಗಳು, ರಂಗದ ಮೇಲಿನ ನನ್ನ ಪಾತ್ರಗಳಿಗೆ ಜನರೀವ ಚಪ್ಪಾಳೆಗಳು, ನಾನು ಮಾಡ್ದಿದ ಉಪನ್ಯಾಸಗಳ ಸರಮಾಲೆಗಳು ಇವನ್ನೇ ತೋರಿಸಿ, ಅವರ ದೃಷ್ಟಿಯಲ್ಲಿ ನನ್ನನ್ನು ಒಬ್ಬ ಅಸಾಮಾನ್ಯ ವ್ಯಕ್ತಿಯನ್ನಾಗಿಸಿ, ತೋರಿಸಿ ಅವರಿಗೆ ನಾನೇ ಮಾದರಿಯೆಂಬಂತೆ ರೂಪಿಸಿದ್ದಳು. ಆದರಿಂದಲೇ, ಇಂದಿಗೂ ನಮ್ಮ ಕುಟುಂಬದ ಬಿಗಿ ಉಳಿದಿದೆ. ಈ ಭಾವ ಅವರ ಮನದ್ಲಲಿ ಎಷ್ಟು ಆಳವಾಗಿ ಬೇರೂರಿದೆಯೆಂದರೆ, ನಾನೇ ಅದನ್ನು ಬದಲಿಸಲಾರೆ.

ಇದು ಪ್ರತಿ ಸಂಸಾರದ ಒಡತಿಯ ಕರ್ತವ್ಯವಲ್ಲವೆ? ಕುಟುಂಬದಲ್ಲಿ ಹೆಂಡತಿಯ ಮಾನವನ್ನು ಗಂಡನೂ, ಗಂಡನದನ್ನು ಹೆಂಡತಿಯೂ ಕಳೆದರೆ ಇನ್ನೇನಿದೆ. ವಚನಕಾರರು ಹೇಳಿರುವಂತೆ-
‘ಒಲೆ ಹತ್ತಿ ಉರಿದಡೆ ನಿಲಬಹುದ್ಲಲದೆ, ಧರೆ ಹತ್ತಿ ಉರಿದಡೆ ನಿಲಲಹುದೆ?’ ಎಂಬಂತಾಗದೇ?
ಮನೆಯೊಡತಿ ಅವಳೇ ಆದರೂ ಎಲ್ಲವನ್ನೂ ತಾನೇ ನಿಭಾಯಿಸಿಕೊಂಡು ಹೋಗುತ್ತಿದ್ದರೂ ಏನೊಂದನ್ನೂ ನನ್ನ ಗಮನಕ್ಕೆ ತಾರದೇ ಮಾಡುವುದಿಲ್ಲ. ಮಕ್ಕಳ ದೃಷ್ಟಿಯಲ್ಲಷ್ಟೇ ಅಲ್ಲ, ಮನೆಗೆ ಬಂದಿರುವ ಮೂವರು ಸೊಸೆಯರು ಮತ್ತು ಇಬ್ಬರು ಅಳಿಯಂದಿರ (ಅದರಲ್ಲಿ ನಮ್ಮ ಹಿರಿಯ ಅಳಿಯ, ಅವಳ ತಮ್ಮನೇ ಆದರಿಂದ ಅವನನ್ನು ಹೊರತು ಪಡಿಸಿ) ದೃಷ್ಟಿಯಲ್ಲೂ ಸಹ ಈ ಪ್ರಕ್ರಿಯೆ ನಡೆಸಿದ್ದಾಳೆ. ನಾನು ಹಿಂದೆ ರೇಸು, ಇಸ್ಪೀಟು ಆಡುತ್ತಿದ್ದಾಗ ಎಂದೋ ಒಮ್ಮೊಮ್ಮೆ ಗೆಲುವನ್ನು ಸಾಧಿಸಿ ತರುತ್ತಿದ್ದ  ಹಣವನ್ನು ಹಾಕಲೆಂದೇ ಒಂದು ಬೇರೆ ಸಣ್ಣ ಕಬ್ಬಿಣದ ಪೆಟ್ಟಿಗೆ ತರಿಸಿ, ಅದರಲ್ಲಿ ಆ ಹಣವನ್ನು ಹಾಕುತ್ತಿದ್ದಳು. ಒಮ್ಮೊಮ್ಮೆ ಮನೆಯ್ಲಲಿ ಹಣಕ್ಕೆ ತೀರಾ ತಾಪತ್ರಯವೆನಿಸಿದಾಗ, ಪಕ್ಕದಮನೆಗೆ ಹೇಳಿ ಕಳುಹಿಸಿ ಹತ್ತಿಪ್ಪತ್ತು ರೂ.ಗಳನ್ನು ಕೈ ಸಾಲ ತರಿಸುತ್ತಿದ್ದಳೇ ವಿನಾ ಇನ್ನೊಂದು ಪೆಟ್ಟಿಗೆಯಲ್ಲಿನ ಹತ್ತು ಪೈಸೆ ತೆಗೆಯುತ್ತಿರಲಿಲ್ಲ.

ಮಕ್ಕಳೇನಾದರೂ ಕಾರಣವನ್ನು ಕೇಳಿದರೆ- ‘ಅದು ನಿಮ್ಮಪ್ಪನ ಹಣ. ಯಾವಾಗ ಲೆಕ್ಕ ಕೇಳಿಬಿಡುತ್ತಾರೋ ಏನೋ. ಯಾಕೆ ಬೇಕಪ್ಪ’ ಅಂದು ಬಿಡುತ್ತಿದ್ದಳು. ನಾನೇ ಏನಾದರೂ ಕೇಳಿದರೆ- ‘ಅಲ್ಲಾರೀ ಈಗಿನ ಕಾಲದಲ್ಲಿ ಹಾಲು ಕುಡಿದ ಮಕ್ಕಳೇ ಬದುಕೋದು ಕಷ್ಟ. ಅಂಥದ್ದರಲ್ಲಿ ನಮ್ಮ ಮಕ್ಕಳಿಗೆ ವಿಷದ ಹಾಲು ಕೊಡಲೇ? ಎಷ್ಟು ಜನರ ನಿಟ್ಟುಸಿರು ಹೊತ್ತು ಬಂದಿವೆಯೋ ಏನೋ ಆ ದರಿದ್ರ ದುಡ್ಡು?’ ಅಂದು ನನ್ನ ಮುಖವನ್ನೂ ನೋಡದೇ ಹೋಗಿ ಬಿಡುತ್ತಿದ್ದಳು ನನ್ನ ಮುಖ ಆ ಮಾತು ಕೇಳಿದ ಮೇಲೆ ಹೇಗಾಗಿರುತ್ತಿತ್ತು ಅಂತಾ ಅವಳಿಗೆ ಆ ಕಡೆಯೇ ಕಾಣುತ್ತಿತ್ತು. ನಮ್ಮ ಲಂಚಕೋರರ, ಭ್ರಷ್ಟಾಚಾರಿಗಳ ಮನೆಯವರು ಇಂಥಾ ಒಂದು ಮೌನ ‘ಗೃಹ ಚಳವಳಿ’ ಆರಂಭಿಸಲಿ-ಆಗ ನನ್ನ ನಾಟಕಗಳಾಗಲೀ ಅಣ್ಣಾ ಹಜಾರೆಯವರ ಉಪವಾಸವಾಗಲೀ ಬೇಕೇ ಇಲ್ಲ. ಪರಿಪೂರ್ಣ ಬದಲಾವಣೆಯಾಗದ್ದಿದರೂ ಅದರ ಆರಂಭವಾದರೂ ಆದೀತು.

ನನ್ನ ‘ತೀರ್ಥಯಾತ್ರೆ’ 1950 ರಿಂದ ಆರಂಭವಾದದ್ದು. 1983ರಲ್ಲಿ ಅದರ ಉದ್ಯಾಪನೆಯಾಯ್ತು. ಸತತವಾಗಿ 33 ವರ್ಷಗಳ ಸಂಗಾತಿಯಾಗಿತ್ತು. ಅನೇಕರಂತೆ ನನ್ನದು ಏಕಕಾಲ ಅಥವಾ ದ್ವಿಕಾಲದ ಸಂಧ್ಯಾವಂದನೆಯಾಗಿದ್ದಿಲ್ಲ . ಕ್ರಮವಾಗಿ ‘ತ್ರಿಕಾಲ’ದ್ಲಲೂ ನಡೆದಿತ್ತು. ಅದರ ಸೇವನೆ. ರಂಗಭೂಮಿಯಲ್ಲಂತೂ ಆಕೀಕಡೆ ಸೈಡ್‌ವಿಂಗ್ಸ್‌ನಲ್ಲಿ ಇಬ್ಬರು ಗ್ಲಾಸಿನಲ್ಲಿ ಸುರಿದು ಹಿಡಿದಿರಬೇಕು. ಮಾತಿನ ಮಧ್ಯೆ ಬಂದು ಲಬಕ್ ಎಂದು ಸುರಿದುಕೊಂಡು ಹೋಗುತ್ತಿದ್ದೆ. 

ನನ್ನವಳು ಹರಕೆ ಹೊತ್ತಳು, ವೈದ್ಯರ ಕೈಲಿ ಹೇಳಿಸಿದಳು, ಮಿತ್ರಸಂಹಿತೆಯಾಯ್ತು- ಪ್ರಭುಸಂಹಿತೆಯೂ ಆಯ್ತು, ಕಟ್ಟಕಡೆಗೊಂದು ದಿನ ತಾನೇ ಧೈರ್ಯ ಮಾಡಿ ರಮಿಸಿ ಹೇಳಿದಳು. ನನ್ನ ಬಾಯಿಂದ ಬಂದ ಮುಕ್ತಾಫಲ- ‘ನೋಡು ಶಾಂತಾ, ಎಲ್ಲವನ್ನೂ ನೀನು ಬೇಡುವುದು ಯಾರ ಬಳಿಯಲ್ಲಿ? ದೇವಿಯ ಬಳಿಯ್ಲಲಿ ತಾನೇ. ಸರಿ ಮತ್ತೆ. ಇದನ್ನೂ ಅವಳನ್ನೇ ಕೇಳು. ಎಲ್ಲವನ್ನೂ ಕೊಟ್ಟಿರುವವಳು ಇದನ್ನೂ ಕೊಡಬಹುದು’ ಅಂದು ಬಿಟ್ಟೆ. ಬಹುಶಃ ಅವಳು ಹಾಗೇ ಮಾಡಿಯೂ ಮಾಡಿರಬಹುದು.

ನನ್ನ ಮೊಟ್ಟ ಮೊದಲ ವಿದೇಶ ಪ್ರವಾಸ 1983ರಲ್ಲಿ. ಉತ್ತರ ಅಮೆರಿಕಾದ್ಲಲಿನ ‘ತ್ರಿವೇಣಿ' ವಿಶ್ವಕನ್ನಡ ಸಮ್ಮೇಳನ’ದ ಅಧ್ಯಕ್ಷನಾಗಿಯೂ ಕರ್ನಾಟಕದ ಸಾಂಸ್ಕೃತಿಕ ರಾಯಭಾರಿಯಾಗಿಯೂ ಹೋದೆ. ನ್ಯೂಜೆರ್ಸಿಯ ಟ್ರೆಂಟನ್ ಕಾಲೇಜಿನ ಬಯಲು ರಂಗ ಮಂದಿರದ್ಲಲಿನ ಮೂರು ದಿನಗಳ ಸಮ್ಮೇಳನ, ನನ್ನ ಮೂರು ನಾಟಕಗಳು, ಸಮ್ಮೇಳನಾಧ್ಯಕ್ಷರ ಭಾಷಣ ಎಲ್ಲವೂ ಮುಗಿದು ಬಾಲ್ಟಿಮೋರಿನ ಡಾ. ರಾಮಯ್ಯನವರ ಹಾಗೂ ಮೇರಿಲ್ಯಾಂಡ್‌ನ ರಾಜೂ ಕೃಷ್ಣಮೂರ್ತಿಗಳ ಸಹಕಾರದಿಂದಾಗಿ, ಅಮೆರಿಕದ ಎಲಾ ಮುಖ್ಯ ನಗರಗಳ್ಲಲೂ ನಮ್ಮ ನಾಟಕಗಳು ಮತ್ತು ನನ್ನ ಉಪನ್ಯಾಸಗಳು ನಡೆದವು. ಸುಮಾರು 35 ಸಾವಿರ ಮೈಲು ಸುತ್ತಾಡಿ, 14- 15ವಾರಗಳಿದ್ದು, ನವೆಂಬರ್‌ನಲ್ಲಿ ನಮ್ಮ ತಂಡ ಭಾರತಕ್ಕೆ ಹಿಂತಿರುಗುವ ದಿನ ಬಂತು. ಅಂದು ನ್ಯೂಯಾರ್ಕ್‌ನ ಜೆ.ಎಫ್. ಕೆನಡಿ ವಿಮಾನ ನಿಲ್ದಾಣದ್ಲಲಿ ನಮ್ಮನ್ನು ಬೀಳ್ಕೊಡಲು 30-40 ಅನ್ನದಾತರ ಆಗಮನವಾಗಿತ್ತು. ಕಟ್ಟಕಡೆಯ ವಂದನೆಯ ಕಾಲದಲ್ಲಿ ಅಲ್ಲಿಯ ಅಭಿಮಾನಿಗಳು ಮತ್ಯಾವಾಗ ಸ್ವಾಮಿ ನಿಮ್ಮಾಗಮನ? ಅನ್ನಲು, ನಾನು ಇನ್ನೆಲ್ಲಿಯ ಪುನರಾಗಮನ ಅಂದೆ. ಅದಕ್ಕವರು, ‘No, No, we are  going to have Master  Hirannaiah  in America but without  alcohol ಅಂದರು. ನಾನವರ ಮುಖ ದಿಟ್ಟಿಸಲು, ‘ಹೌದ್ರೀ, ನಮ್ಮಂಥಾ ಒಬ್ಬ ಡಾಕ್ಟರ್ ಸತ್ತರೆ ಇನ್ನು ಸಾವಿರ ಡಾಕ್ಟರ್‌ಗಳು ಹುಟ್ತಾರೆ. ಆದರೆ ನೀವಿಲ್ಲವಾದರೆ ಇನ್ನೊಬ್ಬ ಹಿರಣ್ಣಯ್ಯ ಸಿಗ್ಲೋಲಾರಿ, ಮರೀಬೇಡಿ’ ಅಂದರು.

ವಿಮಾನ ಹೊರಟಿತು. ನನ್ನ ಮನಸ್ಸು ಮಾತ್ರ ಅಲ್ಲೇ ಉಳಿಯಿತು, ಅವರ ಕಡೆಯ ಮಾತಿನೊಂದಿಗೆ. 24 ತಾಸುಗಳ ಪಯಣ. ಅದರಲ್ಲಿ ಹದಿನೆಂಟೂವರೆ ತಾಸು ಗಗನದಲ್ಲೇ. ಉದ್ದಕ್ಕೂ ನ್ದಿದೆಯೂ ಬಾರದೇ, ಕುಡಿದುಣ್ಣಲೂ ಆಗದೇ ಒಂದೇ ಚಿಂತೆ. ಅದೇ ಮಾತು. ನನಗನ್ನಿಸಿತು. ಅಲ್ಲಿದ್ದದ್ದು ನಾನು ಬರೀ ನಾಲ್ಕಾರು ತಿಂಗಳು ಮಾತ್ರ. ಅವರದ್ಲೆಲಾ ಅಷ್ಟೇ ಪರಿಚಯ. ಅವರೆನಗೆ ಕೊಟ್ಟಿರುವುದು ಅಗಣಿತ. ಬದಲಾಗಿ ನಾನವರಿಗೆ ಕೊಟ್ಟಿರುವುದೋ ಬರೀ ನಗು...ನಗು... ಅಷ್ಟೇ. ಇಷ್ಟಕ್ಕೂ ಅವರ್‍ಲೆಲಾ ಯಾರಯಾರ ಮಕ್ಕಳೋ. ಅಂಥವರ ಬಾಯಿಯಿಂದ ಇಂಥಾ ಬೇಡಿಕೆಯಾದರೆ, ಇನ್ನು ನನ್ನನ್ನೇ ನಂಬಿರುವ ‘ನನ್ನವಳು, ನನ್ನ ಮಕ್ಕಳು ಮತ್ತು ಅಖಂಡ ಕರ್ನಾಟಕದ ತುಂಬಾ ಇರುವ ನನ್ನ ಪೂಜ್ಯ ‘ಅನ್ನದಾತ’ರ ಮನದ್ಲಲಿ ಈ ಮಾತು, 33 ವರ್ಷಗಳಲ್ಲಿ ಅದೆಷ್ಟು ಬಾರಿ ಮಿಡಿದಿರಬಹುದು? ಕಣ್ಣಲ್ಲಿ ಅದೆಷ್ಟು ನೀರು ಹರಿದಿರಬಹುದು? ಅನ್ನ, ಅರಿವೆ, ಅರಿವು, ಆಶ್ರಯಾದಿಗಳನ್ನಿತ್ತು ನಂಬಿ ಪೋಷಿಸಿರುವ ನನ್ನ ನಾಡಿಗೇನು ವಾಪಸು ಕೊಟ್ಟಿದ್ದೇನೆ? ಅವರ ಮಧ್ಯೆ ಬದುಕಿನ ಪರ್ಯಂತ ಬಾಳಲು ನನಗೆಷ್ಟು ಅರ್ಹತೆಯಿದೆ?’ ಈ ಎಲಾ ಪ್ರಶ್ನೆಗಳೂ ಒಮ್ಮೆಗೇ ನನ್ನನ್ನು ಕಾಡತೊಡಗಿತು.

1983-84ರಲ್ಲೇ ನನ್ನ ಎರಡನೆಯ ಪುತ್ರಿಯ ಲಗ್ನ ನಿಶ್ಚಯವಾಯ್ತು. ಆಗ ನಾವು ಅರಸೀಕೆರೆಯ್ಲಲಿ ಮೊಕ್ಕಾಂ ಮಾಡ್ದಿದೆವು. ನನ್ನನ್ನು ಕಾಡ್ದಿದ ಪ್ರಶ್ನೆಗಳೇ ಉತ್ತರವನ್ನೂ ಹೊತ್ತು ತಂದ್ದಿದವೋ ಏನೋ-ನನ್ನವಳಿಗೆ ಹೇಳಿದೆ.  ಅಂದು ಭಾನುವಾರ. ಸಂಜೆ 7 ಕ್ಕೆ ನಾಟಕ. 5 ಘಂಟೆಗೆ ಥಿಯೇಟರ್‌ಗೆ ಹೊರಟೆ. ಮೂಲೆಯ್ಲಲಿ ಚೀಲದಲ್ಲಿನ ಒಂದು ಬಾಟಲ್ ವಿಸ್ಕಿ ನನ್ನನ್ನೇ ನೋಡುತ್ತಾ ಕೂತಿತ್ತು. ನನ್ನವಳಿಗೆ ಅಂದೆ- ‘ಶಾಂತಾ, ಅದನ್ನು (ಗುಂಡನ್ನು)ಹೊರಗಿಡು. ಸಾಕು’ ಅಂದವನೇ ಹೊರಟೆ.

ಮನಸ್ಸಿನಲ್ಲಿ ಏನೋ ಒಂದು ವಿಧವಾದ ಅವ್ಯಕ್ತಾನಂದ. ಏನನ್ನೋ ಸಾಧಿಸಿ ಗೆದ್ದ ಸಂತೋಷ. ಎಲ್ಲವನ್ನೂ ಕೊಟ್ಟಿದ್ದ ನನ್ನ ಸಮಾಜಕ್ಕೆ ಅದು ನನ್ನಲ್ಲಿ  ಇಟ್ಟಿರುವ ನಂಬಿಕೆಗೆ ಒಂದು ಚಿಕ್ಕ ಕಾಣಿಕೆಯಿತ್ತ ಖುಷಿ. ಇಪ್ಪತ್ತೈದು ವರ್ಷ ನನ್ನನ್ನು ಸಹಿಸಿದ ನನ್ನವಳಿಗಿತ್ತ ಒಂದು ಪುಟ್ಟ ‘ತೋಫ’.
‘ಸೋತು ಗೆದ್ದವಳು ಅವಳು, ಗೆದ್ದೆನೆಂಬ ಭ್ರಮೆಯಲ್ಲಿದ್ದ ನನಗಿದು ಒಂದು ಮಧುರವಾದ ಸೋಲು'
 
ಶುಭಮಸ್ತು.

ನಿಮ್ಮವನೇ ಆದ
ಮಾಸ್ಟರ್ ಹಿರಣ್ಣಯ್ಯ

(ಮಯೂರ ಅಕ್ಟೋಬರ್  2011ರ ಸಂಚಿಕೆಯ ‘ಸಖೀಗೀತ’ ಅಂಕಣದಲ್ಲಿ ಪ್ರಕಟವಾದ ಬರಹ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು