ಗುರುವಾರ , ಜುಲೈ 16, 2020
24 °C
ಕಾರ್ಮಿಕರಿಗೆ ಒಂದು ವಾರ ಕಾಲಾವಕಾಶ ನೀಡಬೇಕಿತ್ತು

ವಲಸೆಗಾರರ ಸಂಕಷ್ಟ ‘ಮಾನವ ನಿರ್ಮಿತ ದೊಡ್ಡ ದುರಂತ’: ರಾಮಚಂದ್ರ ಗುಹಾ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಲಾಕ್‌ಡೌನ್‌ನಲ್ಲಿ ಲಕ್ಷಾಂತರ ಬಡ ಜನರು ಅನುಭವಿಸಿದ ನೋವು, ದೇಶ ವಿಭಜನೆಯ ನಂತರ ಭಾರತದಲ್ಲಿ ನಡೆದ ‘ಮಾನವ ನಿರ್ಮಿತ ದೊಡ್ಡ ದುರಂತ’ ಎಂದು ಖ್ಯಾತ ಇತಿಹಾಸಕಾರ ಮತ್ತು ಅರ್ಥಶಾಸ್ತ್ರಜ್ಞ ರಾಮಚಂದ್ರ ಗುಹಾ ಅಭಿಪ್ರಾಯ ಪಟ್ಟಿದ್ದಾರೆ. 

ದೇಶದ ಇತರ ಜನರ ಮೇಲೂ ಸಾಮಾಜಿಕ ಮತ್ತು ಮಾನಸಿಕ ಪರಿಣಾಮಗಳಾಗುತ್ತವೆ ಎಂದು ಎಚ್ಚರಿಸಿದ ಅವರು, ‘ಲಾಕ್‌ಡೌನ್ ಘೋಷಣೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ವಲಸೆ ಕಾರ್ಮಿಕರಿಗೆ ತಮ್ಮ ಮನೆಗಳಿಗೆ ಮರಳಲು ಕನಿಷ್ಠ ಒಂದು ವಾರ ಕಾಲಾವಕಾಶ ನೀಡಿದ್ದರೆ ವಲಸೆ ಕಾರ್ಮಿಕರ ದುರಂತಗಳನ್ನು ತಪ್ಪಿಸಬಹುದಿತ್ತು ಅಥವಾ ಕಡಿಮೆ ಮಾಡಬಹುದಿತ್ತು’ ಎಂದು  ಹೇಳಿದ್ದಾರೆ.

‘ಪ್ರಧಾನಿ ಅವರು ಇಂಥ ನಿರ್ಧಾರಗಳನ್ನು ಹೇಗೆ ತೆಗೆದುಕೊಂಡರು ಎಂಬ ಬಗ್ಗೆ ನನಗೆ ತಿಳಿದಿಲ್ಲ. ಅವರು ತಿಳಿವಳಿಕೆಯುಳ್ಳ ಅಧಿಕಾರಿಗಳೊಂದಿಗೆ ಸಮಾಲೋಚಿಸಿದ್ದರೆ ಅಥವಾ ತಮ್ಮ ಸಂಪುಟದ ಸಚಿವರಿಂದ ಸಲಹೆ ಪಡೆದಿದ್ದರೆ ಅಥವಾ ಏಕಪಕ್ಷೀಯವಾಗಿ ವರ್ತಿಸಿದ್ದಾರೆಯೇ?’ ಎಂದು ಗುಹಾ ಅವರು ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ಪ್ರಶ್ನಿಸಿದ್ದಾರೆ. 

‘ಈಗಲೂ ಪ್ರಧಾನಿ ಅವರು ಸಮಾಲೋಚನಾ ವಿಧಾನವನ್ನು ಅನುಸರಿಸಿದರೆ, ಪರಿಸ್ಥಿತಿಯನ್ನು ಸ್ವಲ್ಪಮಟ್ಟಿಗಾದರೂ ನಿಯಂತ್ರಿಸಬಹುದು. ಪ್ರತಿಪಕ್ಷಗಳು ಸೇರಿದಂತೆ ದೇಶದಲ್ಲಿರುವ ಹಿರಿಯರಿಂದ ಅವರು ಸಲಹೆಗಳನ್ನು ಪಡೆಯಬಹುದು. ಆದರೆ, ಅವರು ಹಾಗೆ ಮಾಡುವುದಿಲ್ಲ. ಕೇಂದ್ರ ಸೃಷ್ಟಿಸಿರುವ ಬಿಕ್ಕಟ್ಟನ್ನು ಅವರ ಸಚಿವರು ರಾಜ್ಯಗಳಿಗೆ ವರ್ಗಾಯಿಸುವಲ್ಲಿ ನಿರತರಾಗಿದ್ದಾರೆ. ಲಾಕ್‌ಡೌನ್ ಪರಿಣಾಮಗಳ ಬಗ್ಗೆ ಮೋದಿ ಮತ್ತು ಅವರ ಸಲಹೆಗಾರರು ಯೋಚಿಸಲಿಲ್ಲವೇ ಎಂಬುದು ರಹಸ್ಯವಾಗಿದೆ. ಈ ಮಾನವ ದುರಂತದ ನೇರ ಜವಾಬ್ದಾರಿಯನ್ನು ಅವರು ಹೊತ್ತುಕೊಳ್ಳಲಿ’ ಎಂದು ಗುಹಾ ಒತ್ತಾಯಿಸಿದ್ದಾರೆ.

‘ಲಾಕ್‌ಡೌನ್ ಬಹುಶಃ ವಿಭಜನೆಯಷ್ಟು ಕೆಟ್ಟದ್ದಲ್ಲ. ಏಕೆಂದರೆ ಆ ಸಮಯಯದಲ್ಲಿ ಭೀಕರ ಕೋಮು ಹಿಂಸಾಚಾರವೂ ನಡೆದಿತ್ತು. ಆದರೆ, ವಿಭಜನೆಯ ನಂತರ ಭಾರತದಲ್ಲಿ ನಡೆದ ಮಾನವ ನಿರ್ಮಿತ ಅತಿ ದೊಡ್ಡ ದುರಂತವಿದು. ಅಂದು ನೆಹರೂ, ಪಟೇಲ್ ಮತ್ತು ಅಂಬೇಡ್ಕರ್ ಅವರಂಥ ಉನ್ನತ ರಾಜಕಾರಣಿಗಳಿದ್ದರು. ಅಷ್ಟೇ ಅಲ್ಲ ಕಮಲಾದೇವಿ ಚಟ್ಟೋಪಾಧ್ಯಾಯ, ಮೃದುಲಾ ಸಾರಾಭಾಯಿ ಅವರಂಥ ನಿಸ್ವಾರ್ಥ ಸಾಮಾಜಿಕ ಕಾರ್ಯಕರ್ತರಿದ್ದರು. ಈ ನಾಯಕರು ಭಾರತವನ್ನು ಒಗ್ಗೂಡಿಸಲು ಮತ್ತು ಅದರ ಆರ್ಥಿಕತೆಯನ್ನು ಪುನರ್ ಪ್ರತಿಷ್ಠಾಪಿಸಲು ತಮ್ಮ ವೈಯಕ್ತಿಕ ಮತ್ತು ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿರಿಸಿದ್ದರು’ ಎಂದು ಹೇಳಿದ್ದಾರೆ.

‘ಕೇಂದ್ರದ ಚಿಂತನೆಗಳು ಶೀಘ್ರದಲ್ಲಿ ಬದಲಾಗದಿದ್ದರೆ, ನಮ್ಮ ಭವಿಷ್ಯ ಭೀಕರವಾಗಲಿದೆ’ ಎಂದೂ ಅವರು ಎಚ್ಚರಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು