ಭಾನುವಾರ, ಆಗಸ್ಟ್ 1, 2021
27 °C
ಗಾಲ್ವನ್‌ ಸಂಘರ್ಷ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಕರೆದಿದ್ದ ಸರ್ವಪಕ್ಷ ಸಭೆಯಲ್ಲಿ ಮಿಶ್ರ ಪ್ರತಿಕ್ರಿಯೆ

ಚೀನಾ-ಭಾರತದ ಗಡಿ ಪ್ರಕರಣ: ‘ಗುಪ್ತಚರ ಲೋಪ ಕಾರಣವೇ?’

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತ–ಚೀನಾ ಗಡಿ ಸಂಘರ್ಷ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಕರೆದಿದ್ದ ಸರ್ವಪಕ್ಷ ಸಭೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ಚೀನಾ ಸೈನಿಕರು ಆಕ್ರಮಿಸಿಕೊಂಡಿರುವ ನೆಲವನ್ನು ಮರುವಶಕ್ಕೆ ಪಡೆಯಬೇಕು ಎಂದು ಕೆಲವು ಪಕ್ಷಗಳು ಒತ್ತಾಯಿಸಿದವು. ಇನ್ನೂ ಕೆಲವು ಪಕ್ಷಗಳು, ಚೀನಾ ಜತೆಗೆ ವಾಣಿಜ್ಯ ಸಂಬಂಧ ಕಡಿದುಕೊಳ್ಳಬೇಕು ಎಂದು ಒತ್ತಾಯಿಸಿದವು. ಇನ್ನೂ ಕೆಲವು ಪಕ್ಷಗಳು ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ಬಗೆ ಯಾವುದು ಎಂದೂ ಪ್ರಶ್ನಿಸಿದವು.

ಗುಪ್ತಚರ ಲೋಪದಿಂದ ಈ ಸಂಘರ್ಷ ಎದುರಾಯಿತೇ ಎಂದು ಕಾಂಗ್ರೆಸ್ ಪ್ರಶ್ನಿಸಿತು. ಇಲ್ಲಿ ಆಗಿರುವ ಲೋಪಗಳ ಬಗ್ಗೆ ತನಿಖೆ ನಡೆಸಲು ಸಮಿತಿ ರಚಿಸುತ್ತೀರಾ ಎಂದು ಸಿಪಿಎಂ ಪ್ರಶ್ನಿಸಿತು.

‘ದೇಶದ ಗುಪ್ತಚರ ವ್ಯವಸ್ಥೆ ವಿಫಲವಾಗಿದೆಯೇ? ಭಾರತದ ನೆಲಕ್ಕೆ ಚೀನಾ ಸೈನಿಕರು ನುಗ್ಗಿದ್ದು ಯಾವಾಗ? ಇದು ಗುಪ್ತಚರ ಇಲಾಖೆಗೆ ಗೊತ್ತಾಗಲಿಲ್ಲವೇ’ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿದರು.

‘ಮುಂದೆ ಏನು ಎಂಬುದೇ ಈಗಿನ ಪ್ರಶ್ನೆ. ಈ ವಿಚಾರವನ್ನು ಬಗೆಹರಿಸಿ
ಕೊಳ್ಳುವ ವಿಧಾನ ಯಾವುದು’ ಎಂದು ಅವರು ಪ್ರಶ್ನಿಸಿದರು. ‘ಗುಪ್ತಚರ ಇಲಾಖೆಯ ವೈಫಲ್ಯದಿಂದ ನಮ್ಮ 20 ಸೈನಿಕರು ಪ್ರಾಣ ಕಳೆದುಕೊಳ್ಳುವಂತಾಯಿತು. ಚೀನಾವನ್ನು ಅಲ್ಲಿಂದ ವಾಪಸ್ ಕಳುಹಿಸಿ, ನಮ್ಮ ನೆಲವನ್ನು ಮತ್ತೆ ವಶಕ್ಕೆ ಪಡೆಯುವ ಭರವಸೆಯನ್ನು
ನೀವು ನೀಡಬೇಕಾಗಿದೆ’ ಎಂದು ಸೋನಿಯಾ ಅವರು ಪ್ರಧಾನಿಗೆ ಹೇಳಿದರು.

‘ಕಾರ್ಗಿಲ್ ಸೇನಾ ಕಾರ್ಯಾಚರಣೆ ವೇಳೆ ಆಗಿದ್ದ ಲೋಪಗಳ ಬಗ್ಗೆ ತನಿಖೆ ನಡೆಸಲು ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರ ತನಿಖಾ ಸಮಿತಿ ರಚಿಸಿತ್ತು. ಈಗಿನ ಸಂಘರ್ಷಕ್ಕೆ ಕಾರಣವಾದ ಲೋಪಗಳು ಯಾವುವು ಎಂಬುದನ್ನು ಪತ್ತೆ ಮಾಡಲು ಸರ್ಕಾರ ತನಿಖಾ ಸಮಿತಿಯನ್ನು ರಚಿಸುತ್ತದೆಯೇ’ ಎಂದು ಸಿಪಿಎಂನ ಸೀತಾರಾಂ ಯೆಚೂರಿ ಪ್ರಶ್ನಿಸಿದರು. ಲೋಪಗಳು ಪತ್ತೆಯಾದರೆ, ಮುಂದೆ ಹೀಗಾಗದಂತೆ ತಡೆಯಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

‘ಭಾರತದಲ್ಲಿ ಚೀನಾದ ಹಲವು ಕಂಪನಿಗಳು ನಿರ್ಮಾಣ ಕಾರ್ಯ ನಡೆಸುತ್ತಿವೆ. ಇಂತಹ ಯೋಜನೆಗಳಿಂದ ಚೀನಾ ಕಂಪನಿಗಳನ್ನು ಹೊರಗಿಡಬೇಕು. ರಸ್ತೆ, ಜಲಸಾರಿಗೆ, ವಾಯುಯಾನ ಮತ್ತು ದೂರಸಂಪರ್ಕ ಕ್ಷೇತ್ರಗಳಲ್ಲಿ ಚೀನಾದ ಕಂಪನಿಗಳು ಮೇಲುಗೈ ಸಾಧಿಸಿವೆ. ಈ ಕ್ಷೇತ್ರಗಳಿಂದಲೂ ಚೀನಾದ ಕಂಪನಿಗಳನ್ನು ಹೊರಗಿಡಬೇಕು’ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಒತ್ತಾಯಿಸಿದರು.

‘ಭಾರತದ ಗಾಲ್ವನ್ ಕಣಿವೆಗೆ ನುಗ್ಗಿರುವ ಚೀನಾದ ಸೈನಿಕರನ್ನು ಅಲ್ಲಿಂದ ತಕ್ಷಣವೇ ತೆರವು ಮಾಡಬೇಕು. ಭಾರತದ ನೆಲವನ್ನು ಮರಳಿ ವಶಕ್ಕೆ ಪಡೆದುಕೊಳ್ಳಬೇಕು’ ಎಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಒತ್ತಾಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು