ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೋದಿ, ಭಾರತದ ಪ್ರಧಾನ ವಿಭಜಕ’

ಟೈಮ್ ವಾರಪತ್ರಿಕೆಯ ಪ್ರಧಾನ ಲೇಖನದಲ್ಲಿ ಟೀಕೆ
Last Updated 11 ಮೇ 2019, 4:57 IST
ಅಕ್ಷರ ಗಾತ್ರ

ನವದೆಹಲಿ:ಅಮೆರಿಕದ ‘ಟೈಮ್’ ವಾರಪತ್ರಿಕೆಯು ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಇಂಡಿಯಾ’ಸ್ ಡಿವೈಡರ್‌ ಇನ್‌ ಚೀಫ್’ (ಭಾರತದ ಪ್ರಧಾನ ವಿಭಜಕ) ಎಂದು ಕರೆದಿರುವ ಲೇಖನವನ್ನು ಪ್ರಕಟಿಸಿದೆ.ಮೇ 20ರ ಸಂಚಿಕೆಯ ಏಷ್ಯಾ ಆವೃತ್ತಿಯಲ್ಲಿ ಇದೇ ಹೆಸರಿನಲ್ಲಿ ಮುಖ್ಯಲೇಖನ ಪ್ರಕಟವಾಗಿದೆ.

ಕಾದಂಬರಿಕಾರ ಮತ್ತು ಪತ್ರಕರ್ತ ಅತೀಶ್ ತಸೀರ್ ಬರೆದಿರುವ ಈ ಲೇಖನವು ಈಗ ಆನ್‌ಲೈನ್‌ನಲ್ಲಿ ಲಭ್ಯವಿದೆ. ಮುದ್ರಿತ ಪ್ರತಿ ಇನ್ನಷ್ಟೇ ಮಾರುಕಟ್ಟೆಗೆ ಬರಬೇಕಿದೆ.

‘ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತವು ಈಗ ಸಾರ್ವತ್ರಿಕ ಚುನಾವಣೆ ಎದುರಿಸುತ್ತಿದೆ. ಆದರೆ ಭಾರತವು ಈ ಹಿಂದೆಂದಿಗಿಂತ ಈಗ ಹೆಚ್ಚು ವಿಭಜನೆಯಾಗಿದೆ’ ಎಂದು ಲೇಖನವನ್ನು ಆರಂಭಿಸಲಾಗಿದೆ.

‘ಒಮ್ಮೆ ಪ್ರಬಲ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದ ಭಾರತವು ಈಗ ಓಲೈಕೆ ರಾಜಕಾರಣವಾಗಿ ಕುಗ್ಗಿಹೋಗಿದೆ’ ಎಂದು ಲೇಖನದಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.‌

‘2014ರಲ್ಲಿ ಮೋದಿಯ ಗೆಲುವಿನ ನಂತರ ದೇಶದ ಮೂಲ ಸ್ವರೂಪಕ್ಕೆ ಧಕ್ಕೆಯಾಗಿದೆ. ಭಾರತೀಯತೆ, ಭಾರತದ ಸಂಸ್ಥಾಪಕರು, ದೇಶದ ಅಲ್ಪಸಂಖ್ಯಾತರು, ಸಾಂವಿಧಾನಿಕ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಮತ್ತು ಮಾಧ್ಯಮಗಳ ಬಗ್ಗೆಯೂ ಅಪನಂಬಿಕೆಯನ್ನು ಹುಟ್ಟುಹಾಕಲಾಗಿದೆ. ಮೋದಿಯ ಆಡಳಿತದ ಅವಧಿಯಲ್ಲಿ ಈ ಅಪನಂಬಿಕೆ ವಿಪರೀತ ಹೆಚ್ಚಾಗಿದೆ’ ಎಂದು ಲೇಖನದಲ್ಲಿ ಆರೋಪಿಸಲಾಗಿದೆ.

‘ಮೋದಿ ನೇತೃತ್ವದ ಸರ್ಕಾರವು ಭಾರತದಲ್ಲಿ ಹಿಂದು ಮತ್ತು ಮುಸ್ಲಿಮರ ನಡುವೆ ಉದ್ದೇಶಪೂರ್ವಕವಾಗಿ ಧಾರ್ಮಿಕ ಒಡಕನ್ನು ಸೃಷ್ಟಿಮಾಡಿದೆ. ಹಿಂದು–ಮುಸ್ಲಿಮರ ನಡುವಣ ಭ್ರಾತೃತ್ವವನ್ನು ಪ್ರೋತ್ಸಾಹಿಸುವ ಸಂಬಂಧ ಮೋದಿ ಸ್ವಲ್ಪವೂ ಇಚ್ಛಾಶಕ್ತಿ ತೋರಿಲ್ಲ. ಭಾರತದಲ್ಲಿ ಜಾತ್ಯಾತೀತತೆಯ ಪದರದ ಕೆಳಗೆ ಧಾರ್ಮಿಕ ರಾಷ್ಟ್ರೀಯವಾದ, ಮುಸ್ಲಿಂ ವಿರೋಧಿ ಭಾವ ಮತ್ತು ಜಾತೀವಾದ ಮಡುಗಟ್ಟಿದೆ. 2014ರಲ್ಲಿ ಮೋದಿಯ ಗೆಲುವು ಈ ಅಂಶಗಳನ್ನು ಸಾಬೀತುಮಾಡಿವೆ’ ಎಂದು ಲೇಖನದಲ್ಲಿ ವಿಶ್ಲೇಷಿಸಲಾಗಿದೆ.

‘ಭಾರತೀಯರಲ್ಲಿ ರಾಜಕೀಯ ಭಿನ್ನತೆ ಇತ್ತು. ಆದರೆ ಮೋದಿಯ ಆಡಳಿತದಲ್ಲಿ ಆ ಭಿನ್ನತೆಯು ಕೇವಲ ಎಡಪಂಥ ಅಥವಾ ಬಲಪಂಥವಾಗಿ ಉಳಿದಿಲ್ಲ. ಆದರೆ ಅದು ಕಡುಮೂಲಭೂತವಾಗಿ ಮಾರ್ಪಟ್ಟಿದೆ. ಭಾರತದಲ್ಲಿ ‘ವಿಷಯುಕ್ತ ಧಾರ್ಮಿಕ ರಾಷ್ಟ್ರೀಯವಾದ’ ಹುಟ್ಟುಪಡೆಯಲು ಮೋದಿ ಕಾರಣವಾಗಿದ್ದಾರೆ.ತೇಜಸ್ವಿ ಸೂರ್ಯ ಅವರಂತಹ ಯುವನಾಯಕನನ್ನು ಬಿಜೆಪಿ ಈ ಚುನಾವಣೆಯಲ್ಲಿ ಕಣಕ್ಕೆ ಇಳಿಸಿದೆ. ‘ನೀವು ಮೋದಿಯ ಜತೆ ಇದ್ದರೆ, ಅದು ಭಾರತದ ಜತೆಗಿದ್ದಂತೆ. ನೀವು ಮೋದಿಯ ಜತೆ ಇಲ್ಲದಿದ್ದರೆ, ಭಾರತದ ವಿರೋಧಿಗಳನ್ನು ಬೆಂಬಲಿಸಿದಂತೆ’ ಎಂದು ತೇಜಸ್ವಿ2019ರ ಮಾರ್ಚ್‌ನ ತಮ್ಮ ಭಾಷಣವೊಂದರಲ್ಲಿ ಹೇಳಿದ್ದರು. ವಿಷಯುಕ್ತ ಧಾರ್ಮಿಕ ರಾಷ್ಟ್ರೀಯವಾದವನ್ನು ತೇಜಸ್ವಿ ಅವರ ಭಾಷಣ ಪ್ರತಿನಿಧಿಸುತ್ತದೆ’ ಎಂದು ಲೇಖನದಲ್ಲಿ ವಿಶ್ಲೇಷಿಸಲಾಗಿದೆ.

‘ಭಾರತದ ಒಟ್ಟು ಜನಸಂಖ್ಯೆಯಲ್ಲಿ ಮುಸ್ಲಿಮರ ಪ್ರಮಾಣ ಶೇ 14. ಮೋದಿಯ ಆಡಳಿತದಲ್ಲಿ ಗೋಮಾತೆ ಹೆಸರಿನಲ್ಲಿ ಮುಸ್ಲಿಮರ ಮೇಲೆ ಸಾಕಷ್ಟು ಹಲ್ಲೆ ನಡೆದಿದೆ. ಗುಂಪು ಹಲ್ಲೆಗಳ ಮೂಲಕ ಮುಸ್ಲಿಮರನ್ನು ಹತ್ಯೆ ಮಾಡಲಾಗಿದೆ. ಇಂತಹ ಪ್ರತಿ ಹತ್ಯೆಗೂ ಭಾರತದ ನಾಯಕತ್ವವು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಒಮ್ಮೆ ದ್ವೇಷವನ್ನು ಬಿತ್ತಿದರೆ ಸಾಕು, ಅದು ಅದನ್ನು ಬಿತ್ತಿದವರ ನಿಯಂತ್ರಣದಿಂದಲೂ ತಪ್ಪಿಸಿಕೊಳ್ಳುತ್ತದೆ. ಮೋದಿಯ ವಿಚಾರದಲ್ಲೂ ಆಗಿದ್ದೂ ಇದೆ. ಮುಸ್ಲಿಮರ ಮೇಲೆ ಹಲ್ಲೆ ನಡೆಸುತ್ತಿದ್ದ ಗುಂಪು, ದಲಿತರ ಮೇಲೂ ಹಲ್ಲೆ ನಡೆಸಲು ಆರಂಭಿಸಿತು. ಮೋದಿಯ ತವರು ರಾಜ್ಯ ಗುಜರಾತ್‌ನಲ್ಲಿ 2016ರಲ್ಲಿ ಮೇಲ್ಜಾತಿಯ ಹಿಂದೂಗಳು ದಲಿತರನ್ನು ಬೆತ್ತಲೆ ಮಾಡಿ ಹಲ್ಲೆ ನಡೆಸಿದ್ದು ಇದಕ್ಕೆ ಸಾಕ್ಷಿ. ದಲಿತರ ಮತಗಳನ್ನು ಕಡೆಗಣಿಸುವ ಸ್ಥಿತಿಯಲ್ಲಿ ಬಿಜೆಪಿ ಇಲ್ಲ. ಆದರೆ ಇಂತಹ ಹಲ್ಲೆಗಳ ಮೇಲೆ ನಿಯಂತ್ರಣ ಸಾಧ್ಯವಿಲ್ಲ ಎಂಬುದು ಗೊತ್ತಾದ ಮೇಲೆ ಬಿಜೆಪಿ ದಿಗಿಲುಗೊಂಡಿದೆ’ ಎಂದು ಲೇಖಕ ಹೇಳಿದ್ದಾರೆ.

‘ಸುಧಾರಣೆಯ ಭರವಸೆ ಮೋದಿ’

‘ಮೋದಿ: ಭಾರತದ ಆರ್ಥಿಕತೆಯ ಸುಧಾರಣೆಯ ಭರವಸೆ’ ಎಂಬ ಲೇಖನವನ್ನೂ ಟೈಮ್ ವಾರಪತ್ರಿಕೆ ಪ್ರಕಟಿಸಿದೆ. ಇಯಾನ್ ಬ್ರೆಮರ್ ಬರೆದಿರುವ ಈ ಲೇಖನ ಆನ್‌ಲೈನ್‌ನಲ್ಲಿ ಲಭ್ಯವಿದೆ.

ಭಾರತೀಯರಲ್ಲಿ ಮೋದಿ ಭರವಸೆ ಮೂಡಿಸಿದ್ದಾರೆ. ಆರ್ಥಿಕತೆ, ರಾಷ್ಟ್ರೀಯ ಭದ್ರತೆ ಮತ್ತು ವಿದೇಶಾಂಗ ನೀತಿಯಲ್ಲಿ ಮೋದಿ ಗಣನೀಯ ಸುಧಾರಣೆ ತಂದಿದ್ದಾರೆ ಎಂದು ಬಹುತೇಕ ಭಾರತೀಯರು ಭಾವಿಸಿದ್ದಾರೆ. ದೇಶದಲ್ಲಿ ಇನ್ನಷ್ಟು ಬದಲಾವಣೆ ಆಗಬೇಕು ಎಂದು ಭಾರತೀಯರು ಬಯಸುತ್ತಾರೆ. ಆ ಬದಲಾವಣೆಯನ್ನು ಸಾಧಿಸುವ ಶಕ್ತಿ ಇರುವುದು ನರೇಂದ್ರ ಮೋದಿಗೆ ಮಾತ್ರ ಎಂದೂ ಈ ಭಾರತೀಯರು ನಂಬಿದ್ದಾರೆ ಎಂದು ಲೇಖನದಲ್ಲಿ ವಿವರಿಸಲಾಗಿದೆ.

ಮಮತಾ ಬ್ಯಾನರ್ಜಿ ಲೇವಡಿ

‘ಮೋದಿ ಬಾಬು, ಯಾರೂ ಯಾಕೆ ನಿಮ್ಮನ್ನು ಗೌರವಿಸುವುದಿಲ್ಲ?’ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಲೇವಡಿ ಮಾಡಿದ್ದಾರೆ.

ಟೈಮ್ ವಾರಪತ್ರಿಕೆಯಲ್ಲಿ ಪ್ರಕಟವಾದ ‘ಇಂಡಿಯಾಸ್ ಡಿವೈಡರ್ ಇನ್‌ ಚೀಫ್’ ಲೇಖನಕ್ಕೆ ಮಮತಾ ಈ ಪ್ರತಿಕ್ರಿಯೆ ನೀಡಿದ್ದಾರೆ.

‘ಮೋದಿ ವಿಭಜನಾ ರಾಜಕಾರಣ ಮಾಡುತ್ತಾರೆ. ಹೀಗಾಗಿ ವಿಶ್ವದ ಖ್ಯಾತ ಪತ್ರಿಕೆಯೊಂದು ಮೋದಿಯನ್ನು ‘ಡಿವೈಡರ್ ಪ್ರೈಮ್ ಮಿನಿಸ್ಟರ್’ ಎಂದು ಕರೆದಿದೆ. ಒಬ್ಬ ಪ್ರಧಾನಿಗೆ ಎಲ್ಲೆಡೆ ಗೌರವ ದೊರೆಯಬೇಕು. ಆದರೆ ಮೋದಿ ಬಾಬು ಅವರೇ, ಯಾರೂ ಯಾಕೆ ನಿಮ್ಮನ್ನು ಗೌರವಿಸುವುದಿಲ್ಲ’ ಎಂದು ಮಮತಾ ಲೇವಡಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT