ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ಪಷ್ಟ ಬಹುಮತ ಅಭಿವೃದ್ಧಿಗೆ ಸಿಕ್ಕ ಮಾನ್ಯತೆ’:ರಾಷ್ಟ್ರಪತಿ ಕೋವಿಂದ್ ಪ್ರತಿಪಾದನೆ

ಭ್ರಷ್ಟಾಚಾರ ವಿರುದ್ಧ ಕಟ್ಟುನಿಟ್ಟಿನ ಕ್ರಮ l ಸರ್ವರ ಸಬಲೀಕರಣ
Last Updated 20 ಜೂನ್ 2019, 20:23 IST
ಅಕ್ಷರ ಗಾತ್ರ

ನವದೆಹಲಿ: ‘ಭ್ರಷ್ಟಾಚಾರ ತಡೆಗೆ ಕಠಿಣ ಕ್ರಮ, ತ್ರಿವಳಿ ತಲಾಖ್‌ ಸೇರಿ ಸಾಮಾಜಿಕ ಪಿಡುಗುಗಳ ನಿರ್ಮೂಲನೆ ಮತ್ತು 2022ರ ವೇಳೆಗೆ ಸರ್ವರ ಸಬಲೀಕರಣಕ್ಕೆ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಒತ್ತುನೀಡಲಿದೆ’ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಗುರುವಾರ ಪ್ರತಿಪಾದಿಸಿದರು.

‘ನರೇಂದ್ರ ಮೋದಿ ಸರ್ಕಾರಕ್ಕೆ ದೊರೆತ ಸ್ಪಷ್ಟ ಬಹುಮತ, 2014ರಲ್ಲಿ ಸರ್ಕಾರ ಆರಂಭಿಸಿದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮುಂದುವರಿಸಲು ದೊರೆತಿರುವ ಜನಾದೇಶವಾಗಿದೆ’ ಎಂದು ಅವರು ಪ್ರತಿಪಾದಿಸಿದರು.

ಸಂಸತ್ತಿನ ಜಂಟಿ ಅಧಿವೇಶನದಲ್ಲಿ ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಭಾಷಣ ಮಾಡಿದ ಅವರು, ಮೋದಿ ನೇತೃತ್ವದ ಸರ್ಕಾರದ ಸಾಧನೆ ಹಾಗೂ ಗುರಿಗಳನ್ನು ಪಟ್ಟಿಮಾಡಿದರು.

ಪ್ರಧಾನಿ ನರೇಂದ್ರ ಮೋದಿ, ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು, ಸಂಸತ್ತಿನ ಉಭಯ ಸದನಗಳ ಸದಸ್ಯರು ಉಪಸ್ಥಿತರಿದ್ದರು. ಸರ್ಕಾರದ ಸಾಧನೆ ಮತ್ತು ಅಭಿವೃದ್ಧಿ ಕಾರ್ಯಗಳನ್ನು ರಾಷ್ಟ್ರಪತಿ ಉಲ್ಲೇಖಿಸಿದಾಗ ಆಡಳಿತ ಪಕ್ಷದ ಸದಸ್ಯರು ಮೇಜು ಕುಟ್ಟಿ ಹರ್ಷ ವ್ಯಕ್ತಪಡಿಸಿದರು.

‘ತ್ರಿವಳಿ ತಲಾಖ್‌ ಮತ್ತು ನಿಖಾ ಹಲಾಲ್‌’ ಸಾಮಾಜಿಕ ಪಿಡುಗುಗಳು. ಇವುಗಳ ನಿರ್ಮೂಲನೆಗೆ ಸರ್ಕಾರದ ಬದ್ಧವಾಗಿದೆ. ಭ್ರಷ್ಟಾಚಾರದ ಪಿಡುಗನ್ನು ಹತ್ತಿಕ್ಕುವ ಕ್ರಮಗಳನ್ನುಸರ್ಕಾರ ಇನ್ನಷ್ಟು ಬಿಗಿಗೊಳಿಸಲಿದೆ ಎಂದರು.

‘ಈಚೆಗೆ ನಡೆದ ಲೋಕಸಭೆ ಚುನಾವಣೆಯು ಪ್ರಜಾಪ್ರಭುತ್ವದ ವಿಶ್ವಾಸಾರ್ಹತೆಯನ್ನು ಇನ್ನಷ್ಟು ಹೆಚ್ಚಿಸಿದೆ. ಮಹಿಳೆಯರು ಸಹ ಹೆಚ್ಚಿನ ಪ್ರಮಾಣದಲ್ಲಿ ಮತ ಚಲಾಯಿಸಿದ್ದಾರೆ. ಒಟ್ಟಾರೆ 61 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ ಎಂದು ರಾಷ್ಟ್ರಪತಿ ಮೆಚ್ಚುಗೆ ವ್ಯಕ್ತಪಡಿಸಿದರು.

ಸರ್ಕಾರ ಸಿದ್ಧಪಡಿಸಿದ ಭಾಷಣವನ್ನು ಓದಿದ ರಾಷ್ಟ್ರಪತಿ ಅವರು ಸರ್ಕಾರದ ಆದ್ಯತೆಗಳನ್ನು ಪಟ್ಟಿಮಾಡಿದರು. ‘ದೇಶದ ಪ್ರತಿಯೊಬ್ಬರ ಸಬಲೀಕರಣ ಸರ್ಕಾರದ ಪ್ರಮುಖ ಗುರಿ. ಜಾತಿ, ಧರ್ಮದ ಆಧಾರದಲ್ಲಿ ತಾರತಮ್ಯಕ್ಕೆ ಅವಕಾಶವಿಲ್ಲದೆ, 2022ರ ವೇಳೆಗೆ ನವಭಾರತ ನಿರ್ಮಿಸಲಾಗುವುದು’ ಎಂದರು.

‘ಜನರು ಚುನಾವಣೆಯ ಮೂಲಕ ಸ್ಪಷ್ಟ ಬಹುಮತ ನೀಡಿದ್ದಾರೆ. ಮೊದಲ ಅವಧಿಯಲ್ಲಿನ ಸರ್ಕಾರದ ಸಾಧನೆಗಳ ಮೌಲ್ಯಮಾಪನ ಮಾಡಿದ ಜನರು, ಎರಡನೇ ಅವಧಿಗೆ ಇನ್ನಷ್ಟು ಬಲ ನೀಡಿದ್ದಾರೆ. ಈ ಮೂಲಕ 2014ರಲ್ಲಿ ಆರಂಭಿಸಿದ ಅಭಿವೃದ್ಧಿ ಕಾರ್ಯಗಳ ಮುಂದುವರಿಕೆಗೆ ಅನುಮೋದನೆ ನೀಡಿದ್ದಾರೆ’ ಎಂದರು.

ಏಕಕಾಲದ ಚುನಾವಣೆ ಅಗತ್ಯ: ‘ಒಂದು ದೇಶ, ಒಂದು ಚುನಾವಣೆ’ ಚಿಂತನೆಯಡಿ ಏಕಕಾಲದಲ್ಲಿ ಲೋಕಸಭೆ ಮತ್ತು ವಿಧಾನಸಭೆಗಳಿಗೆ ಚುನಾವಣೆ ನಡೆಸುವ ಮೋದಿ ಸರ್ಕಾರದ ಚಿಂತನೆಗೆ ಹೆಚ್ಚಿನ ಒತ್ತು ನೀಡಿದ ರಾಷ್ಟ್ರಪತಿ, ‘ಏಕಕಾಲದ ಚುನಾವಣೆ ಈ ಹೊತ್ತಿನ ಅಗತ್ಯ. ಅಭಿವೃದ್ಧಿಯ ದೃಷ್ಟಿಕೋನ ಹೊಂದಿರುವ ಈ ಚಿಂತನೆಗೆ ಸದನದ ಎಲ್ಲಾ ಸದಸ್ಯರು ದನಿಗೂಡಿಸಬೇಕು ಎಂಬುದು ನನ್ನ ಮನವಿ ಎಂದು ತಿಳಿಸಿದರು.

‘ಲೋಕಸಭೆಗೆ ಈ ಬಾರಿ ಶೇ 50ಕ್ಕೂ ಹೆಚ್ಚು ಸದಸ್ಯರು ಮೊದಲ ಬಾರಿಗೆ ಆಯ್ಕೆಯಾಗಿದ್ದಾರೆ. 78 ಮಹಿಳೆಯರ ಉಪಸ್ಥಿತಿ ಇದೆ. ಇದು, ಲೋಕಸಭೆ ಇತಿಹಾಸದಲ್ಲಿಯೇ ಅತ್ಯಧಿಕ. ಇದು ಹೊಸ ಭಾರತದ ಚಿತ್ರಣವನ್ನೇ ನೀಡುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.

‘ಮರಳಿ ಅಧಿಕಾರಕ್ಕೆ ಬಂದ 21 ದಿನಗಳ ಅತ್ಯಲ್ಪ ಅವಧಿಯಲ್ಲಿ ‘ನವ ಭಾರತ’ ನಿರ್ಮಾಣದ ಸಂಕಲ್ಪ ಮಾಡಿರುವ ಸರ್ಕಾರ, ಕೃಷಿಕರು, ಯೋಧರು, ವಿದ್ಯಾರ್ಥಿಗಳು, ಉದ್ಯಮಶೀಲರು, ಮಹಿಳೆಯರು ಹಾಗೂ ಸಮಾಜದ ಎಲ್ಲ ವರ್ಗಗಳಿಗೆ ಅನ್ವಯಿಸಿ ನಿರ್ಧಾರ ಕೈಗೊಂಡಿದ್ದು, ಅದನ್ನು ಜಾರಿಗೆ ತರಲಿದೆ ಎಂದರು.

ಭದ್ರತೆಗೆ ಆದ್ಯತೆ: ‘ದೇಶದ ಭದ್ರತೆಯೇ ಪರಮೋಚ್ಚ ಆದ್ಯತೆ’ ಎಂದ ಅವರು, ಸರ್ಜಿಕಲ್‌ ದಾಳಿ, ಪಾಕಿಸ್ತಾನದಲ್ಲಿನ ಉಗ್ರರ ಶಿಬಿರಗಳ ಮೇಲಿನ ವಾಯುದಾಳಿಯನ್ನು ಉಲ್ಲೇಖಿಸಿದರು.

‘ಭಯೋತ್ಪಾದನೆ ಕುರಿತ ಭಾರತದ ನಿಲುವನ್ನು ವಿಶ್ವವೇ ಬೆಂಬಲಿಸುತ್ತಿದೆ. ಜೆಇಎಂ ಮುಖ್ಯಸ್ಥ ಮಸೂದ್‌ ಅಜರ್‌ನನ್ನು ‘ಜಾಗತಿಕ ಭಯೋತ್ಪಾದಕ’ ಎಂದು ವಿಶ್ವಸಂಸ್ಥೆ ಘೋಷಿಸಿರುವುದೇ ಇದಕ್ಕೆ ನಿದರ್ಶನ’ ಎಂದು ಹೇಳಿದರು.

ಕೃಷಿ: ₹ 24 ಲಕ್ಷ ಕೋಟಿ ಹೂಡಿಕೆ
ಗ್ರಾಮೀಣ ಅರ್ಥ ವ್ಯವಸ್ಥೆ ಗಟ್ಟಿಗೊಂಡರೆ ಮಾತ್ರ ರಾಷ್ಟ್ರದ ಅರ್ಥವ್ಯವಸ್ಥೆ ಧೃಡವಾಗುತ್ತದೆ. ಈ ನಿಟ್ಟಿನಲ್ಲಿ ಕೃಷಿ ವಲಯದಲ್ಲಿ ಉತ್ಪಾದಕತೆ ಹೆಚ್ಚಿಸಲು ಕೇಂದ್ರ ಸರ್ಕಾರ ಬರುವ ವರ್ಷಗಳಲ್ಲಿ ₹ 25 ಲಕ್ಷ ಕೋಟಿ ಹೂಡಿಕೆ ಮಾಡಲಿದೆ.

ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಈ ಅಂಶವನ್ನು ಉಲ್ಲೇಖಿಸಿದ ರಾಷ್ಟ್ರಪತಿ, ಕೃಷಿಕರಿಗೆ ವಾರ್ಷಿಕ ₹ 6000 ಆರ್ಥಿಕ ನೆರವು ನೀಡುವ ಯೋಜನೆಯನ್ನು ಉಲ್ಲೇಖಿಸಿದರು.

ಭಾರತ ಸ್ವಾತಂತ್ರ್ಯದ 75ನೇ ವರ್ಷ ಪೂರ್ಣಗೊಳಿಸುವ 2022ರ ವೇಳೆಗೆ ಕೃಷಿಕರ ಆದಾಯವನ್ನು ದುಪ್ಪಟ್ಟುಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಕಳೆದ ಐದು ವರ್ಷಗಳಲ್ಲಿ ಕೈಗೊಂಡಿದೆ ಎಂದರು.

ಸರ್ಕಾರದ ಗುರಿಗಳು
* 2022ರ ವೇಳೆಗೆ ಗ್ರಾಮೀಣ ಪ್ರದೇಶದಲ್ಲಿ 1,50,000 ಆರೋಗ್ಯ ಕೇಂದ್ರಗಳ ಸ್ಥಾಪನೆ
* 2022ರ ವೇಳೆಗೆ 35,000 ಕಿ.ಮೀ ಹೆದ್ದಾರಿ ಅಭಿವೃದ್ಧಿ
* 2022ರ ವೇಳೆಗೆ ‘ಮಾನವ ಸಹಿತ ಗಗನಯಾನ’
* 2024ರವೇಳೆಗೆ 50,000 ಸ್ಟಾರ್ಟ್‌ಅಪ್‌ಗಳಿಗೆ ಚಾಲನೆ
* 2024ರ ವೇಳೆಗೆ ಉನ್ನತ ಶಿಕ್ಷಣದಲ್ಲಿ ಹೆಚ್ಚವರಿ 2 ಕೋಟಿ ಸೀಟುಗಳ ಸೇರ್ಪಡೆ
* 2024ರ ವೇಳೆಗೆ ₹ 350 ಲಕ್ಷ ಕೋಟಿ ಗಾತ್ರದ ಆರ್ಥಿಕ ವ್ಯವಸ್ಥೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT