ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯಕ್ಕಾಗಿ ಪತ್ನಿಯನ್ನು ತ್ಯಜಿಸಿದ ವ್ಯಕ್ತಿ: ಪ್ರಧಾನಿ ವಿರುದ್ಧ ಮಾಯಾವತಿ ಟೀಕೆ

‘ದೇಶಕ್ಕೀಗ ಚಾಯ್‌ವಾಲಾ ಅಥವಾ ಚೌಕೀದಾರ ಬೇಕಾಗಿಲ್ಲ. ನಿಜವಾದ ಪ್ರಧಾನಿ ಬೇಕು’
Last Updated 15 ಮೇ 2019, 2:00 IST
ಅಕ್ಷರ ಗಾತ್ರ

ಲಖನೌ (ಪಿಟಿಐ): ‘ರಾಜಕೀಯಕ್ಕಾಗಿ ಪತ್ನಿಯನ್ನು ತ್ಯಜಿಸಿದ ವ್ಯಕ್ತಿ’ ಎಂದು ಸೋಮವಾರ ಪ್ರಧಾನಿ ಮೋದಿ ಅವರನ್ನು ಟೀಕಿಸಿದ್ದ ಬಿಎಸ್‌ಪಿ ಅಧ್ಯಕ್ಷೆ ಮಾಯಾವತಿ ಅವರು ಮಂಗಳವಾರವೂ ವಾಗ್ದಾಳಿಯನ್ನು ಮುಂದುವರಿಸಿದ್ದಾರೆ. ‘ದೇಶಕ್ಕೀಗ ಚಾಯ್‌ವಾಲಾ ಅಥವಾ ಚೌಕೀದಾರ ಬೇಕಾಗಿಲ್ಲ. ಒಬ್ಬ ನಿಜವಾದ ಪ್ರಧಾನಿ ಬೇಕಾಗಿದ್ದಾರೆ’ ಎಂದಿದ್ದಾರೆ.

ಮಾಧ್ಯಮಗೋಷ್ಠಿಯೊಂದರಲ್ಲಿ ಮೋದಿಯನ್ನು ಟೀಕಿಸಿದ ಮಾಯಾವತಿ, ‘ದೇಶ ಈಗಾಗಲೇ ಸೇವಕ, ಪ್ರಧಾನ ಸೇವಕ, ಚಾಯ್‌ವಾಲಾ, ಚೌಕೀದಾರನ ಹೆಸರಿನಲ್ಲಿ ಹಲವು ಪ್ರಧಾನಿಗಳನ್ನು ಕಂಡಾಗಿದೆ. ಈ ಎಲ್ಲರೂ ದೇಶದ ಜನರ ಹಾದಿ ತಪ್ಪಿಸಿದ್ದಾರೆ. ದ್ವಿಮುಖ ವ್ಯಕ್ತಿತ್ವವನ್ನು ಇಟ್ಟುಕೊಂಡು ಇನ್ನು ಮುಂದೆ ಜನರನ್ನು ವಂಚಿಸಲು ಸಾಧ್ಯವಾಗಲಾರದು ಎಂದಿದ್ದಾರೆ.

‘ಮೋದಿ ಸರ್ಕಾರ ಈಗ ಮುಳುಗುತ್ತಿರುವ ಹಡಗು. ಅವರ ಸೈದ್ಧಾಂತಿಕ ಮಾರ್ಗದರ್ಶಕ ಸಂಸ್ಥೆ ಆರ್‌ಎಸ್‌ಎಸ್‌ ಸಹ ಈಗ ‘ದೇಶಕ್ಕೆ ನಿಜವಾದ ಪ್ರಧಾನಿ ಬೇಕಾಗಿದ್ದಾರೆ’ ಎನ್ನುತ್ತಿದೆ. ಬಿಜೆಪಿಯ ಪ್ರಚಾರ ರ್‍ಯಾಲಿಗಳಲ್ಲಿ ಈಗ ಆರ್‌ಎಸ್‌ಎಸ್‌ ಕಾರ್ಯಕರ್ತರು ಕಾಣಿಸುತ್ತಿಲ್ಲ. ಸರ್ಕಾರದ ಬಗ್ಗೆ ಜನರು ವ್ಯಕ್ತಪಡಿಸಿರುವ ಅಸಮಾಧಾನ ಹಾಗೂ ಕೊಟ್ಟ ಭರವಸೆಗಳನ್ನು ಈಡೇರಿಸುವಲ್ಲಿ ಸರ್ಕಾರ
ವಿಫಲವಾದದ್ದೇ ಈ ಬೆಳವಣಿಗೆಗೆ ಕಾರಣ. ಈಗ ಮೋದಿಯವರಿಗೆ ಬೆವರಿಳಿಯಲು ಆರಂಭವಾಗಿದೆ’ ಎಂದರು.

ಚುನಾವಣಾ ಪ್ರಚಾರದ ಸಂದರ್ಭದಲ್ಲಿ ರಾಜಕೀಯ ನಾಯಕರು ದೇವಸ್ಥಾನಗಳಿಗೆ ಭೇಟಿ ನೀಡುವುದನ್ನು ವಿರೋಧಿಸಿದ ಮಾಯಾವತಿ, ‘ದೇವಸ್ಥಾನಗಳಿಗೆ ಭೇಟಿ ನೀಡುವುದು ಕೆಲವರಿಗೆ ಫ್ಯಾಷನ್‌ ಆಗಿದೆ. ಚುನಾವಣಾ ಆಯೋಗ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಮತ್ತು ಇಂಥ ನಾಯಕರಿಗೆ ನಿಷೇಧ ಹೇರಬೇಕು’ ಎಂದು ಅವರು ಹೇಳಿದರು.

ಬೇನಾಮಿ ಆಸ್ತಿ ಹೊಂದಿದ್ದರೆ ಪತ್ತೆ ಮಾಡಿ: ಪ್ರಧಾನಿ

ತನ್ನ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುತ್ತಿರುವ ವಿರೋಧಪಕ್ಷಗಳಿಗೆ ಉತ್ತರಪ್ರದೇಶದ ಬಲಿಯದಲ್ಲಿ ಆಯೋಜಿಸಿದ್ದ ರ್‍ಯಾಲಿಯಲ್ಲಿ ಪ್ರತ್ಯುತ್ತರ ನೀಡಿದ ಪ್ರಧಾನಿ ಮೋದಿ, ‘ನಾನು ಅಕ್ರಮವಾಗಿ ಯಾವುದೇ ಆಸ್ತಿಪಾಸ್ತಿ ಗಳಿಸಿದ್ದರೆ, ವಿದೇಶದಲ್ಲಿ ಹಣ ಇಟ್ಟಿದ್ದರೆ ಸಾಬೀತುಪಡಿಸಿ’ ಎಂದು ಸವಾಲೆಸೆದಿದ್ದಾರೆ.

‘ಮಹಾಕಲಬೆರಕೆ’ಗಳಿಗೆ (ಮಹಾಮೈತ್ರಿ) ನಾನು ಮುಕ್ತ ಸವಾಲು ಹಾಕುತ್ತಿದ್ದೇನೆ, ನನ್ನನ್ನು ನಿಂದಿಸುವ ಬದಲು, ಅವರಿಗೆ ಧೈರ್ಯವಿದ್ದರೆ ನನ್ನ ಸವಾಲನ್ನು ಸ್ವೀಕರಿಸಬೇಕು. ನಾನು ಯಾವುದೇ ಬೇನಾಮಿ ಆಸ್ತಿ ಹೊಂದಿದ್ದರೆ, ಫಾರ್ಮ್‌ ಹೌಸ್‌, ಬಂಗ್ಲೆ ಅಥವಾ ವಾಣಿಜ್ಯ ಸಂಕೀರ್ಣ ನಿರ್ಮಿಸಿದ್ದರೆ, ಯಾವುದಾದರೂ ವಿದೇಶಿ ಬ್ಯಾಂಕ್‌ನಲ್ಲಿ ಹಣ ಇಟ್ಟಿದ್ದರೆ, ವಿದೇಶದಲ್ಲಿ ಆಸ್ತಿ ಖರೀದಿಸಿದ್ದರೆ, ಲಕ್ಷಾಂತರ ರೂಪಾಯಿ ಮೌಲ್ಯದ ವಾಹನ ಖರೀದಿಸಿದ್ದರೆ ಅದನ್ನು ಪತ್ತೆಮಾಡಿ ಬಹಿರಂಗಪಡಿಸಲಿ’ ಎಂದರು.

‘ನಾನು ಯಾವತ್ತೂ ಶ್ರೀಮಂತನಾಗಬೇಕೆಂಬ ಕನಸು ಕಂಡವನಲ್ಲ. ಅಂಥ ಉದ್ದೇಶವೂ ಇಲ್ಲ. ಬಡವರ ಅಭಿವೃದ್ಧಿ ಮತ್ತು ಮಾತೃಭೂಮಿಯ ಗೌರವ ಮತ್ತು ರಕ್ಷಣೆಯೇ ನಮ್ಮ ಪರಮ ಉದ್ದೇಶ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT