ಮೋದಿ ವರ್ಚಸ್ಸು 2014ಕ್ಕೆ ಹೋಲಿಸಿದರೆ ಈಗ ಕುಂದಿದೆ: ಓವೈಸಿ

ಬುಧವಾರ, ಏಪ್ರಿಲ್ 24, 2019
29 °C

ಮೋದಿ ವರ್ಚಸ್ಸು 2014ಕ್ಕೆ ಹೋಲಿಸಿದರೆ ಈಗ ಕುಂದಿದೆ: ಓವೈಸಿ

Published:
Updated:
Prajavani

ಹೈದರಾಬಾದ್‌: ‘ಈ ಚುನಾವಣೆಯ ಬಳಿಕ ಮೋದಿ ‘ಮಾಜಿ ಪ್ರಧಾನಿ’ ಆಗುವುದು ಖಚಿತ’ ಎಂದು ಎಐಎಂಐಎಂ ಪಕ್ಷದ ಮುಖಂಡ ಅಸಾದುದ್ದೀನ್‌ ಓವೈಸಿ ಹೇಳಿದ್ದಾರೆ.

ಹೈದರಾಬಾದ್‌ ಲೋಕಸಭಾ ಕ್ಷೇತ್ರದಿಂದ ಸತತವಾಗಿ ನಾಲ್ಕನೇ ಬಾರಿ ಗೆಲುವು ದಾಖಲಿಸುವ ವಿಶ್ವಾಸದಲ್ಲಿರುವ ಓವೈಸಿ, ಚುನಾವಣಾ ಪ್ರಚಾರದ ಮಧ್ಯೆ ‘ಪ್ರಜಾವಾಣಿ’ ಜೊತೆ ಮಾತುಕತೆ ನಡೆಸಿದರು. ಮಾತುಕತೆ ಸಂದರ್ಭದಲ್ಲಿ ಅವರು ವ್ಯಕ್ತಪಡಿಸಿರುವ ಅಭಿಪ್ರಾಯಗಳ ವಿವರ ಇಲ್ಲಿದೆ.

‘ಈ ಚುನಾವಣೆಯ ನಂತರ ದೇಶ ಹೊಸ ಪ್ರಧಾನಿಯನ್ನು ಕಾಣಲಿದೆ. ಅವರು ಬಿಜೆಪಿಯವರಾಗಲಿ ಕಾಂಗ್ರೆಸ್‌ ಪಕ್ಷದವರಾಗಲಿ ಆಗಿರುವುದಿಲ್ಲ ಎಂಬುದು ಖಚಿತ. ಮೋದಿಯ ವರ್ಚಸ್ಸು ಈಗ ಕಡಿಮೆಯಾಗಿದೆ. 2014ರಲ್ಲಿ ಅವರು ಇಲ್ಲಿಗೆ ಪ್ರಚಾರಕ್ಕಾಗಿ ಬಂದಿದ್ದಾಗ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು. ಈ ಬಾರಿ ಅವರು ಇಲ್ಲಿಗೆ ಬಂದಾಗ ಜನರನ್ನು ಸೇರಿಸಲು ಬಿಜೆಪಿಯವರು ಹೆಣಗಾಡಿದ್ದರು. ಇಲ್ಲಿ ಮಾತ್ರವಲ್ಲ ದೇಶದ ಎಲ್ಲೂ ಈಗ ‘ಮೋದಿ ಅಲೆ’ ಕಾಣಿಸುತ್ತಿಲ್ಲ.

‘ನಾನು ಮೋದಿಯನ್ನು ಟೀಕಿಸುತ್ತಲೇ ಇರುತ್ತೇನೆ, ಯಾಕೆಂದರೆ ನಾವು ವಿರೋಧ ಪಕ್ಷದಲ್ಲಿರುವವರು. ಮೋದಿಯ ವೈಫಲ್ಯಗಳನ್ನು ಜನರಿಗೆ ತಿಳಿಸುವ ಹೊಣೆ ನಮ್ಮ ಮೇಲಿದೆ. ಕಳೆದ ಐದು ವರ್ಷಗಳಲ್ಲಿ ಅವರು ಏನೇನು ಮಾಡಿದ್ದಾರೆ ಎಂಬುದು ಜನರಿಗೆ ತಿಳಿಯಬೇಕು. ಪುನಃ ಅವರನ್ನು ಆಯ್ಕೆ ಮಾಡಬೇಕೇ, ಬೇಡವೇ ಎಂಬುದನ್ನು ತೀರ್ಮಾನಿಸಲು ಜನರಿಗೆ ನಾವು ನೆರವಾಗಬೇಕು.

‘ಕೆ. ಚಂದ್ರಶೇಖರ ರಾವ್‌ (ಕೆಸಿಆರ್‌) ಪ್ರಧಾನಿಯಾಗಲು ಸೂಕ್ತ ವ್ಯಕ್ತಿ. ಯಾಕೆಂದರೆ ಅವರು ಮೋದಿಗಿಂತಲೂ ವಿಶಾಲ ಹೃದಯದವರು ಮತ್ತು ಮೋದಿಗಿಂತಲೂ ದೊಡ್ಡ ಹಿಂದೂ ಆಗಿದ್ದಾರೆ. ಇವರಿಬ್ಬರ ನಡುವೆ ಭೂಮಿ– ಆಕಾಶಗಳ ಅಂತರವಿದೆ. ಆದ್ದರಿಂದ ತೆಲಂಗಾಣದ ಪ್ರತಿಯೊಬ್ಬ ಮತದಾರರೂ ಕೆಸಿಆರ್‌ಗೆ ಮತ ನೀಡಬೇಕು ಎಂದು ನಾನು ಬಯಸುತ್ತೇನೆ.

‘ಆಂಧ್ರಪ್ರದೇಶದ ವಿಚಾರಕ್ಕೆ ಬಂದರೆ, ಈ ಬಾರಿ ಜಗನ್‌ಮೋಹನ್‌ ರೆಡ್ಡಿ ಇಲ್ಲಿ ಮುಖ್ಯಮಂತ್ರಿ ಆಗುವುದು ಖಚಿತ. ಚಂದ್ರಬಾಬು ನಾಯ್ಡು ಜನರ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ. ಈವರೆಗೂ ಮುಸ್ಲಿಮರನ್ನು ದೂರವಿಟ್ಟಿದ್ದ ನಾಯ್ಡುಗೆ ಚುನಾವಣೆ ಸಮೀಪಿಸಿದಾಗ ಒಮ್ಮೆಲೇ ಮುಸ್ಲಿಮರ ಮೇಲೆ ಪ್ರೀತಿ ಹುಟ್ಟಿದೆ. ‘ನಾವು ಅಧಿಕಾರಕ್ಕೆ ಬಂದರೆ ಮುಸ್ಲಿಂ ವ್ಯಕ್ತಿಯನ್ನು ಉಪಮುಖ್ಯಮಂತ್ರಿ ಮಾಡುತ್ತೇವೆ’ ಎಂದಿದ್ದಾರೆ. ಆದರೆ ಅವರನ್ನು ಈಗ ಯಾರೂ ನಂಬುತ್ತಿಲ್ಲ.

‘ಆಂಧ್ರಕ್ಕೆ ವಿಶೇಷ ರಾಜ್ಯ ಸ್ಥಾನ ನೀಡಬೇಕು ಎಂಬ ಬೇಡಿಕೆ ನಮ್ಮದೂ ಆಗಿದೆ. ನಾಲ್ಕು ವರ್ಷಗಳ ಕಾಲ ಎನ್‌ಡಿಎ ಒಳಗಿದ್ದ ನಾಯ್ಡು ಅವರು ಈ ಸ್ಥಾನ ಪಡೆಯಲು ವಿಫಲರಾಗಿದ್ದಾರೆ. ಜಗನ್‌ಮೋಹನ್‌ ರೆಡ್ಡಿ ಮುಖ್ಯಮಂತ್ರಿ ಆದರೆ ಖಂಡಿತವಾಗಿ ಆ ಬೇಡಿಕೆಯನ್ನು ಈಡೇರಿಸುತ್ತಾರೆ’.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 6

  Angry

Comments:

0 comments

Write the first review for this !