ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಯಾಣ ಕರ್ನಾಟಕದ ಅಸ್ಮಿತೆಯ ‘ಮೋಡಿ’

ಕಲಬುರ್ಗಿ, ಯಾದಗಿರಿ, ಬೀದರ್‌ ಜಿಲ್ಲೆಗಳ ಅಭ್ಯರ್ಥಿಗಳ ಪ್ರಚಾರ ಸಭೆ
Last Updated 4 ಮೇ 2018, 10:03 IST
ಅಕ್ಷರ ಗಾತ್ರ

ಕಲಬುರ್ಗಿ: ಪ್ರಧಾನಿ ನರೇಂದ್ರ ಮೋದಿ ಅವರು ಕನ್ನಡದಲ್ಲಿಯೇ ಮಾತು ಆರಂಭಿಸಿದರು. ಆ ಮೂಲಕ ಕಲ್ಯಾಣ ಕರ್ನಾಟಕದ ಅಸ್ಮಿತೆಗೆ ಇನ್ನಷ್ಟು ಹತ್ತಿರವಾಗುವ ಯತ್ನ ಮಾಡಿದರು.

ನಗರದ ಎನ್‌.ವಿ. ಮೈದಾನದಲ್ಲಿ ಬುಧವಾರ ಕಲಬುರ್ಗಿ, ಯಾದಗಿರಿ, ಬೀದರ್‌ ಜಿಲ್ಲೆಗಳ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಏರ್ಪಡಿಸಿದ್ದ ಪ್ರಚಾರ ಸಭೆಗೆ ಅವರು ಬಂದಾಗ ಸೂರ್ಯ ನೆತ್ತಿಯ ಮೇಲಿದ್ದ.

ಮಧ್ಯಾಹ್ನ 12.37ಕ್ಕೆ ಮೋದಿ ಅವರು ವೇದಿಕೆ ಏರಿದಾಗ ತಾಪಮಾಣ 43.4 ಡಿಗ್ರಿ ಸೆಲ್ಸಿಯಸ್‌ ತಲುಪಿತ್ತು. ವೇದಿಕೆಯಲ್ಲಿ ಏ.ಸಿ. ಅಳವಡಿಸಿದ್ದರೂ ಕಲಬುರ್ಗಿಯ ಬಿಸಿಲು ಮೋದಿ ಅವರ ಬೆವರನ್ನೂ ಇಳಿಸಿತು. ಬೆವರಿನಿಂದ ಒದ್ದೆಯಾದ ಕನ್ನಡಕ ಮತ್ತು ಮುಖ ಒರೆಸಿಕೊಳ್ಳುತ್ತ ಮೋದಿ ಮಾತನಾಡಿದರು.

ಕಾರ್ಯಕ್ರಮ ನಿರೂಪಿಸಿದ ವಿಧಾನ ಪರಿಷತ್‌ ಸದಸ್ಯ ಅಮರನಾಥ ಪಾಟೀಲ ಅವರು, ‘ಆಪ್‌ ಆಯೇ. ಇಸ್ ಧೂಪ್‌ ಮೇ ಹೀ ಥಂಡಿ ಹವಾ ಮಿಲ್‌ಗಯೇ...’ ಎಂದು ಹೊಗಳಾರಂಭಿಸಿದರು.

ಸಮಯ ವ್ಯರ್ಥ ಮಾಡದ ಮೋದಿ ನೇರವಾಗಿ ಮೈಕ್‌ ಮುಂದೆ ಬಂದು ನಿಂತರು. ಉರಿ ಬಿಸಿಲಿನಲ್ಲಿಯೂ ಉತ್ಸಾಹದಿಂದ ನೆರೆದಿದ್ದ ಕಾರ್ಯಕರ್ತರನ್ನು ಕಂಡು ಉಲ್ಲಸಿತರಾಗಿ 34 ನಿಮಿಷ ಮಾತನಾಡಿದರು. ‘ಈ ಉರಿ ಬಿಸಿಲನ್ನು ಸಹಿಸಿಕೊಳ್ಳುತ್ತೇವೆ. ಆದರೆ, ಕಾಂಗ್ರೆಸ್‌ ಸರ್ಕಾರ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂಬುದು ನಿಮ್ಮೆಲ್ಲರ ನಿಲುವು ಅಲ್ಲವೇ?’ ಎಂದು ಕೇಳಿದರು.

‘ಕಲ್ಯಾಣ ಕರ್ನಾಟಕದ ನನ್ನ ಪ್ರೀತಿಯ ಸಹೋದರ, ಸಹೋದರಿಯರೆ. ನಿಮಗೆ ಶರಣು ಶರಣಾರ್ಥಿಗಳು. ರಾಷ್ಟ್ರಕೂಟರು ಆಳಿದ ನೆಲ ಇದು. ಸಂತ ಬಸವಣ್ಣ ನಡೆದಾಡಿದ ಪುಣ್ಯಭೂಮಿ. ಮಿತಾಕ್ಷರ ಗ್ರಂಥ ಬರೆದ ವಿಜ್ಞಾನೇಶ್ವರರ ನಾಡು. ಸ್ವಾತಂತ್ರ್ಯ ಸೇನಾನಿ ವೆಂಕಟಪ್ಪ ನಾಯಕ ಅವರ ಹೋರಾಟದ ನೆಲ. ಈ ಪುಣ್ಯ ಭೂಮಿಗೆ ನಮನಗಳು. ನಿಮಗೆ ನನ್ನ ಕೋಟಿ ಕೋಟಿ ನಮನಗಳು’ ಎಂದು ಕನ್ನಡದಲ್ಲಿಯೇ ಹೇಳುವ ಮೂಲಕ ಈ ಎಲ್ಲ ಸಮುದಾಯದವರನ್ನು ಖುಷಿ ಪಡಿಸುವ ಪ್ರಯತ್ನ ಮಾಡಿದರು.

ಮೋದಿ ಕನ್ನಡ ಮಾತು ಕೇಳಿ ಕಾರ್ಯಕರ್ತರು ‘ಮೋದಿ... ಮೋದಿ...’ ಎಂಬ ಘೋಷಣೆ ಕೂಗಿದರು. ಹೊಗಳಿಕೆಗೆ ಮುಗುಳ್ನಕ್ಕು ಮೋದಿ ಮಾತು ಮುಂದುವರಿಸಿದರು.

‘ಕ್ಷೇತ್ರದಲ್ಲಿ ಯಾರು ಸ್ಪರ್ಧಿಸಿದ್ದಾರೆ ಎಂಬುದು ಮುಖ್ಯವಲ್ಲ. ಕರ್ನಾಟಕದ ಯುವಜನತೆಯ ಭವಿಷ್ಯ ಬರೆಯುವ, ರೈತರ ಭಾಗ್ಯ ತೆರೆಯುವ, ಮಹಿಳೆಯರಿಗೆ ಗೌರವ ದೊರಕಿಸಿಕೊಡುವ ಚುನಾವಣೆ ಇದು. ಕರ್ನಾಕದಲ್ಲಿ ರಚನೆಯಾಗುವ ಬಿಜೆಪಿ ಸರ್ಕಾರದೊಂದಿಗೆ ನಾನು ಹೆಗಲಿಗೆ ಹೆಗಲು ಕೊಟ್ಟು ರಾಜ್ಯದ ಅಭಿವೃದ್ಧಿ ಶ್ರಮಿಸುತ್ತೇನೆ’ ಎಂದರು.

ಹೈದರಾಬಾದ್‌ ಕರ್ನಾಟಕದ ವಿಮೋಚನೆಗೆ ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ಅವರ ಕೊಡುಗೆ ಸ್ಮರಿಸಿದರು. ಈ ವಿಮೋಚನಾ ಹೋರಾಟದಲ್ಲಿ ಹುತಾತ್ಮರಾದವರಿಗೆ ನಮನ ಸಲ್ಲಿಸಿದರು. ‘ಕಾಂಗ್ರೆಸ್‌ ನಾಯಕ ‘ವಂದೇ ಮಾತರಂ’ ಗೀತೆಗೆ ಅವಮಾನ ಮಾಡಿದರು. ಅವರಿಂದ ದೇಶಭಕ್ತಿಯನ್ನು ನಿರೀಕ್ಷಿಸಲು ಹೇಗೆ ಸಾಧ್ಯ?’ ಎಂದು ಮೂದಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT