ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳಕ್ಕೆ ಮುಂಗಾರು ಸಿಂಚನ: ರಾಜ್ಯಕ್ಕೆ 5ರಂದು ಪ್ರವೇಶ

ಈ ವರ್ಷ ಸಾಧಾರಣ ಮಳೆ
Last Updated 1 ಜೂನ್ 2020, 20:00 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ನೈರುತ್ಯ ಮುಂಗಾರು ಮಾರುತವು ಸೋಮವಾರ ಕೇರಳವನ್ನು ಪ್ರವೇಶಿಸಿದೆ. ಜೂನ್ 5ರಂದು ಕರ್ನಾಟಕ
ವನ್ನು ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಕೇರಳದ ಹಲವೆಡೆ ಸೋಮವಾರ ಭಾರಿ ಮಳೆಯಾಗಿದೆ. ಭಾರಿ ಮಳೆಯ ಕಾರಣ ಕೋಯಿಕ್ಕೋಡ್‌ನಲ್ಲಿ ಕಟ್ಟೆಚ್ಚರವಹಿಸಲಾಗಿದೆ. ಕರ್ನಾಟಕದ ಹಲವೆಡೆ ಉತ್ತಮ ಮಳೆಯಾಗಿದೆ. ಉಡುಪಿ ಜಿಲ್ಲೆಯ ಕೋಟದಲ್ಲಿ ಸೋಮವಾರ 10 ಸೆಂ.ಮೀ ಗರಿಷ್ಠ ಮಳೆಯಾಗಿದೆ. ಕಾರವಾರ 7, ಬೆಳಗಾವಿ, ಪಾವಗಡ 6, ಹೊನ್ನಾವರ, ನರಗುಂದ 5, ಚಿಕ್ಕೋಡಿ,ಗೋಕರ್ಣ, ಕೊಲ್ಲೂರು, ಸಿಂಧನೂರು, ಹೊಸಪೇಟೆ, ಕೊಪ್ಪ, ತುಮಕೂರಿನಲ್ಲಿ ತಲಾ 3, ನಿಪಾಣಿ, ಕಲಬುರ್ಗಿ, ತೀರ್ಥಹಳ್ಳಿ, ರಾಯಚೂರು, ಮುಧೋಳದಲ್ಲಿ ತಲಾ 2 ಸೆಂ.ಮೀ. ಮಳೆಯಾಗಿದೆ.

ಈ ಭಾರಿ ಮುಂಗಾರು ಮಳೆಯು ಉತ್ತಮವಾಗಿರಲಿದ್ದು, ವಾಡಿಕೆಯಷ್ಟು ಮಳೆಯಾಗಲಿದೆ.1961–2010ರ ನಡುವಣ 50 ವರ್ಷಗಳ ದೀರ್ಘಾವಧಿ ಸರಾಸರಿ ಮಳೆಯ ಪ್ರಮಾಣ 88 ಸೆಂ.ಮೀ. ಇದೆ. ಈ ಭಾರಿ ದೀರ್ಘಾವಧಿ ಸರಾಸರಿಯ ಶೇ 103ರಷ್ಟು ಮಳೆಯಾಗಲಿದೆ. ಇದರಲ್ಲಿ ಶೇ 8ರಷ್ಟು ವ್ಯತ್ಯಾಸ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ ಮತ್ತು ಈಶಾನ್ಯ ಭಾರತದ ರಾಜ್ಯಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗುವ ನಿರೀಕ್ಷೆ ಇದೆ. ಆದರೆ ದೇಶದ ಯಾವ ರಾಜ್ಯದಲ್ಲೂ ಬರದ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇಲ್ಲ ಎಂದು ಹವಾಮಾನ ಇಲಾಖೆ ಹೇಳಿದೆ.

‘ವಾಡಿಕೆಯಷ್ಟು ಮಳೆಯಾಗುವ ಸಾಧ್ಯತೆ ಪ್ರಮಾಣ ಶೇ 41ರಷ್ಟು. ವಾಡಿಕೆಗಿಂತ ಅಧಿಕ ಮಳೆಯಾಗುವ ಸಾಧ್ಯತೆ ಪ್ರಮಾಣ ಶೇ 25ರಷ್ಟು. ವಾಡಿಕೆಗಿಂತ ಭಾರಿ ಅಧಿಕ ಮಳೆಯಾಗುವ ಸಾಧ್ಯತೆ ಪ್ರಮಾಣ ಶೇ 14ರಷ್ಟು ಇದೆ. ವಾಡಿಕೆಗಿಂತ ಕಡಿಮೆ ಮಳೆಯಾಗುವ ಸಾಧ್ಯತೆ ಪ್ರಮಾಣ ಶೇ 15ರಷ್ಟು ಮತ್ತು ಮಳೆ ಕೊರತೆಯಾಗುವ ಸಾಧ್ಯತೆ ಪ್ರಮಾಣ ಶೇ 5ರಷ್ಟು ಮಾತ್ರ’ ಎಂದು ಭೂವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಎಂ.ರಾಜೀವನ್ ಹೇಳಿದ್ದಾರೆ.

ದಕ್ಷಿಣದಲ್ಲಿ ವಾಡಿಕೆ ಮಳೆ
* 50 ವರ್ಷಗಳ ದೀರ್ಘಾವಧಿ ಸರಾಸರಿಯ (ಲಾಂಗ್ ಪೀರಿಯಡ್ ಆವರೇಜ್–ಎಲ್‌ಪಿಎ) ಆಧಾರದಲ್ಲಿ ಮಳೆಯ ಪ್ರಮಾಣವನ್ನು ನಿರ್ಧರಿಸಲಾಗುತ್ತದೆ.

* 96%–104% ರಷ್ಟು ಎಲ್‌ಪಿಎ ಮಳೆಯನ್ನು ವಾಡಿಕೆ ಮಳೆ ಎಂದು ಗುರುತಿಸಲಾಗುತ್ತದೆ. ದಕ್ಷಿಣ ಭಾರತದಲ್ಲಿ ಎಲ್‌ಪಿಎಯ ಶೇ 102ರಷ್ಟು ಮಳೆಯಾಗುವ ನಿರೀಕ್ಷೆ ಇದೆ. ಒಟ್ಟಾರೆ ಇಡೀ ಭಾರತದಲ್ಲಿ ಎಲ್‌ಪಿಎಯ ಶೇ 103ರಷ್ಟು ಮಳೆಯಾಗುವ ನಿರೀಕ್ಷೆ ಇದೆ.

* ಎಲ್‌ಪಿಎಯ ಶೇ 96ಕ್ಕಿಂತ ಕಡಿಮೆ ಮಳೆಯನ್ನು ವಾಡಿಕೆಗಿಂತ ಕಡಿಮೆ ಮಳೆ ಎಂದು ಗುರುತಿಸಲಾಗುತ್ತದೆ. ಪೂರ್ವ ಮತ್ತು ಈಶಾನ್ಯ ಭಾರತದ ರಾಜ್ಯಗಳಲ್ಲಿ ಎಲ್‌ಪಿಎಯ ಶೇ 96ರಷ್ಟು ಮಳೆಯಾಗುವ ನಿರೀಕ್ಷೆ ಇದೆ.

* ಎಲ್‌ಪಿಎಯ ಶೇ 104–110ರಷ್ಟು ಮಳೆಯನ್ನು ವಾಡಿಕೆಗಿಂತ ಅಧಿಕ ಎಂದು ಪರಿಗಣಿಸಲಾಗುತ್ತದೆ. ಉತ್ತರ ಭಾರತದ ಹಲವೆಡೆ ಎಲ್‌ಪಿಎಯ ಶೇ 107ರಷ್ಟು ಮಳೆಯಾಗಲಿದೆ.

* ಎಲ್‌ಪಿಎಯ ಶೇ 110ಕ್ಕಿಂತಲೂ ಹೆಚ್ಚು ಮಳೆಯಾದರೆ ಅದನ್ನು ವಾಡಿಕೆಗಿಂತ ಭಾರಿ ಮಳೆ ಎಂದು ಗುರುತಿಸಲಾಗುತ್ತದೆ. ದೇಶದ ಯಾವ ಪ್ರದೇಶದಲ್ಲೀ ಈ ಬಾರಿ, ಭಾರಿ ಮಳೆಯಾಗುವುದಿಲ್ಲ ಎಂದು ಹವಾಮಾನ ಇಲಾಖೆ ಹೇಳಿದೆ.

ರಾಜ್ಯಕ್ಕೆ 5ರಂದು ಪ್ರವೇಶ ನಿರೀಕ್ಷೆ
ಜೂನ್ 5ರಂದು ಮುಂಗಾರು ಕರ್ನಾಟಕವನ್ನು ಪ್ರವೇಶಿಸುವ ನಿರೀಕ್ಷೆ ಇದೆ. ಆದರೆ ಇದಕ್ಕೂ ಮುನ್ನ ರಾಜ್ಯದ ಬಹುತೇಕ ಎಲ್ಲೆಡೆ ಮಳೆಯಾಗುವ ನಿರೀಕ್ಷೆ ಇದೆ. ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿದಿರುವ ಕಾರಣ ರಾಜ್ಯದಲ್ಲಿ ಜೂನ್ 2 ಮತ್ತು 3ರಂದು ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಮೀನುಗಾರರಿಗೆ ಎಚ್ಚರಿಕೆ

ಕರಾವಳಿ ಭಾಗದಲ್ಲಿ ಗಂಟೆಗೆ 40ರಿಂದ 60 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಮೀನುಗಾರರು ಕಡಲಿಗೆ ಇಳಿಯದಂತೆ ಇಲಾಖೆ ಸೂಚಿಸಿದೆ. ವಾಯುಭಾರ ಕುಸಿತದಿಂದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಲಿದ್ದು, ಎರಡು ದಿನಗಳವರೆಗೆ 'ಆರೆಂಜ್ ಅಲರ್ಟ್' ಘೋಷಿಸಲಾಗಿದೆ. ಬೆಳಗಾವಿ, ಧಾರವಾಡ, ಹಾವೇರಿ, ಕಲಬುರ್ಗಿ, ರಾಯಚೂರು ಹಾಗು ವಿಜಯಪುರದಲ್ಲಿ ಮಂಗಳವಾರ ಗುಡುಗು, ಸಿಡಿಲು ಸಹಿತ ಮಳೆಯಾಗಲಿದ್ದು, ಈ ಜಿಲ್ಲೆಗಳಲ್ಲಿ 'ಯೆಲ್ಲೊ ಅಲರ್ಟ್' ಘೋಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT