ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಂ ಪಟ್ಟ ಉಳಿಸಿಕೊಳ್ಳಲು ಉದ್ಧವ್ ಠಾಕ್ರೆ‌ಗೆ ಅವಕಾಶ

Last Updated 2 ಮೇ 2020, 3:23 IST
ಅಕ್ಷರ ಗಾತ್ರ

ನವದೆಹಲಿ: ಮಹಾರಾಷ್ಟ್ರ ವಿಧಾನಪರಿಷತ್ತಿನಲ್ಲಿ ಖಾಲಿ ಇರುವ ಒಂಬತ್ತು ಸ್ಥಾನಗಳಿಗೆ ಮೇ 21ರಂದು ಚುನಾವಣೆ ನಡೆಸುವುದಾಗಿ ಭಾರತೀಯ ಚುನಾವಣಾ ಆಯೋಗ ಶುಕ್ರವಾರ ತಿಳಿಸಿದೆ. ಇದರಿಂದಾಗಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರು ತಮ್ಮ ಸ್ಥಾನದಲ್ಲಿ ಮುಂದುವರಿಯುವುದಕ್ಕೆ ಸಂಬಂಧಿಸಿ ಇದ್ದ ಅನಿಶ್ಚಿತ ಸ್ಥಿತಿಗೆ ತೆರೆ ಬಿದ್ದಿದೆ.

ವಿಧಾನಸಭೆ ಚುನಾವಣೆಯ ಬಳಿಕ ಮಹಾರಾಷ್ಟ್ರದ ರಾಜಕೀಯ ಸಮೀಕರಣದಲ್ಲಿ ಉಂಟಾದ ಬದಲಾವಣೆಗಳ ಪರಿಣಾಮ, 2019ರ ನವೆಂಬರ್‌ 28ರಂದು ಶಿವಸೇನಾದ ಮುಖ್ಯಸ್ಥ ಉದ್ಧವ್‌ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಯಾವುದೇ ಸದನದ ಸದಸ್ಯರಲ್ಲದ ಅವರು ಮೇ 27ರೊಳಗೆ ಸದನವನ್ನು ಪ್ರವೇಶಿಸಬೇಕಾಗಿದೆ. ಮಹಾರಾಷ್ಟ್ರ ವಿಧಾನಪರಿಷತ್ತಿನಲ್ಲಿ ಒಂಬತ್ತು ಸ್ಥಾನಗಳು ಖಾಲಿ ಇರುವುದರಿಂದ ಮತ್ತು ಮಹಾ ವಿಕಾಸ ಆಘಾಡಿಗೆ ಸಾಕಷ್ಟು ಸಂಖ್ಯಾಬಲ ಇರುವುದರಿಂದ ಉದ್ಧವ್‌ ಅವರ ಆಯ್ಕೆಗೆ ಅಡೆತಡೆ ಇರಲಿಲ್ಲ. ಆದರೆ, ಏಪ್ರಿಲ್‌ 3ರಂದು ನಡೆಯಬೇಕಾಗಿದ್ದ ಚುನಾವಣೆಗಳನ್ನು ಕೊರೊನಾ ವೈರಸ್‌ ಕಾರಣದಿಂದ ಮುಂದೂಡಲಾಗಿತ್ತು.

ರಾಜ್ಯಪಾಲರ ಕೋಟಾದ ಎರಡು ಸ್ಥಾನಗಳುವಿಧಾನಪರಿಷತ್ತಿನಲ್ಲಿ ಖಾಲಿ ಇದ್ದು, ಅದರಲ್ಲಿ ಒಂದಕ್ಕೆ ಉದ್ಧವ್‌ ಅವರನ್ನು ನಾಮನಿರ್ದೇಶನ ಮಾಡುವಂತೆ ರಾಜ್ಯ ಸಚಿವ ಸಂಪುಟವು ಎರಡು ಬಾರಿ ರಾಜ್ಯಪಾಲ ಬಿ.ಎಸ್‌. ಕೋಶಿಯಾರಿ ಅವರಿಗೆ ಪ್ರಸ್ತಾವ ಸಲ್ಲಿಸಿತ್ತು. ಆದರೆ ರಾಜ್ಯಪಾಲರು ಈ ವಿಚಾರವಾಗಿ ಯಾವುದೇ ತೀರ್ಮಾನ ಕೈಗೊಂಡಿರಲಿಲ್ಲ. ಇದಾದ ಬಳಿಕ, ಉದ್ಧವ್‌ ಅವರು ಪ್ರಧಾನಿ ಮೋದಿ ಅವರ ಜತೆ ಈ ವಿಚಾರವಾಗಿ ದೂರವಾಣಿ ಮಾತುಕತೆ ನಡೆಸಿದ್ದರು ಎಂದು ಶಿವಸೇನಾದ ಮೂಲಗಳು ತಿಳಿಸಿವೆ.

ಈ ತಿಂಗಳ 27ರೊಳಗೆ ವಿಧಾನ ಸಭೆಗೆ ಆಯ್ಕೆಯಾಗದಿದ್ದಲ್ಲಿ ಉದ್ಧವ್‌ ಅವರು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯಬೇಕಾಗುತ್ತದೆ. ದೇಶದಾದ್ಯಂತ ಲಾಕ್‌ಡೌನ್‌ ಘೋಷಣೆಯಿಂದಾಗಿ ಚುನಾವಣೆ ಮುಂದೂಡುತ್ತಲೇ ಹೋಗಿ, ರಾಜ್ಯದಲ್ಲಿ ಅನಿಶ್ಚಿತ ವಾತಾವರಣ ನಿರ್ಮಾಣವಾಗಿತ್ತು. ಆಯೋಗವು ಈಗ ಚುನಾವಣೆಯ ದಿನಾಂಕವನ್ನು ಘೋಷಿಸಿರುವುದರಿಂದ ವಿಧಾನಪರಿಷತ್‌ ಪ್ರವೇಶಿಸಲು
ಉದ್ಧವ್‌ ಅವರ ಹಾದಿ ಸುಗಮವಾದಂತಾಗಿದೆ.

‘ಮೇ 4ರಂದು ಚುನಾವಣೆಯ ಅಧಿಸೂಚನೆ ಹೊರಡಿಸಲಾಗುವುದು. ನಾಮಪತ್ರ ಸಲ್ಲಿಕೆಗೆ ಮೇ 11 ಕೊನೆಯ ದಿನವಾಗಿರುತ್ತದೆ. ಮೇ 21ರಂದೇ ಸಂಜೆ 4 ಗಂಟೆಗೆ ಮತ ಎಣಿಕೆ ನಡೆಯಲಿದೆ’ ಎಂದು ಚುನಾವಣಾ ಆಯುಕ್ತರಾದ ಅಶೋಕ್‌ ಲವಾಸ ಹಾಗೂ ಸುಶೀಲ್‌ಚಂದ್ರ ತಿಳಿಸಿದ್ದಾರೆ.

ಪಕ್ಷಗಳ ಬಲಾಬಲ
ಬಿಜೆಪಿ ಮತ್ತು ಎನ್‌ಸಿಪಿಯ ತಲಾ ಮೂವರು ಸದಸ್ಯರು, ಕಾಂಗ್ರೆಸ್‌ನ ಇಬ್ಬರು ಹಾಗೂ ಶಿವಸೇನಾದ ಒಬ್ಬ ಸದಸ್ಯರ ಅವಧಿ ಪೂರ್ಣಗೊಂಡಿದ್ದರಿಂದ, ಮಹಾರಾಷ್ಟ್ರ ವಿಧಾನಪರಿಷತ್ತಿನ ಒಂಬತ್ತು ಸ್ಥಾನಗಳು ಏಪ್ರಿಲ್‌ 24ರಂದು ಖಾಲಿಯಾಗಿದ್ದವು.

ಈ ಸ್ಥಾನಗಳಿಗೆ ನಡೆಯುವ ಚುನಾವಣೆಗೆ ವಿಧಾನಸಭೆಯ ಸದಸ್ಯರ ಮತದಾರರಾಗಿದ್ದಾರೆ. ಮಹಾರಾಷ್ಟ್ರ ವಿಧಾನಸಭೆಯಲ್ಲಿ 288 ಸದಸ್ಯರಿದ್ದು, ಪರಿಷತ್ತಿಗೆ ಆಯ್ಕೆಯಾಗಲು ಕನಿಷ್ಠ 29 ಮತಗಳನ್ನು ಪಡೆಯುವುದು ಅಗತ್ಯ.

ಈ ನಡುವೆ, 105 ಸದಸ್ಯಬಲ ಹೊಂದಿರುವ ಬಿಜೆಪಿಯು ಪಕ್ಷದಿಂದ ನಾಲ್ವರು ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಹೇಳಿದೆ. ಆರು ಸ್ಥಾನಗಳನ್ನು ಗೆಲ್ಲಬೇಕಾದರೆ ಮಹಾ ವಿಕಾಸ ಆಘಾಡಿಗೆ 174 ಮತಗಳ ಅಗತ್ಯವಿದೆ. ಕಳೆದ ವರ್ಷ ನಡೆದಿದ್ದ ವಿಶ್ವಾಸಮತದ ಸಂದರ್ಭದಲ್ಲಿ ಆಘಾಡಿ ಪರವಾಗಿ 169 ಮತಗಳು ಬಂದಿದ್ದವು.

ಪಕ್ಷ ಬಲಾಬಲ: ಬಿಜೆಪಿ 105, ಶಿವಸೇನಾ 56, ಎನ್‌ಸಿಪಿ 54, ಕಾಂಗ್ರೆಸ್‌ 44, ಬಹುಜನ ವಿಕಾಸ ಅಘಾಡಿ 3, ಇತರ ಪಕ್ಷಗಳು 13, ಪಕ್ಷೇತರರು 13

ನಿರ್ಧಾರಕ್ಕೆ ಮಹಾ ವಿಕಾಸ ಆಘಾಡಿ ಸ್ವಾಗತ
ಮುಂಬೈ:
ಚುನಾವಣಾ ಆಯೋಗದ ನಿರ್ಧಾರಕ್ಕೆ ಮಹಾ ವಿಕಾಸ ಆಘಾಡಿ (ಎಂವಿಎ) ಸಂತಸ ವ್ಯಕ್ತಪಡಿಸಿದೆ. ಶಿವಸೇನಾ ಮುಖಂಡ ಸಂಜಯ್ ರಾವುತ್‌ ಅವರು ಟ್ವೀಟ್‌ ಮೂಲಕ ಆಯೋಗಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ.

‘ಖಾಲಿ ಇರುವ ಒಂಬತ್ತು ಸ್ಥಾನಗಳಲ್ಲಿ, ಕಾಂಗ್ರೆಸ್‌, ಶಿವಸೇನಾ ಹಾಗೂ ಎನ್‌ಸಿಪಿಗಳಿಗೆ ತಲಾ ಎರಡು ಸ್ಥಾನಗಳನ್ನು ಗೆಲ್ಲಲು ಅವಕಾಶವಿದೆ’ ಎಂದು ಕಾಂಗ್ರೆಸ್‌ನ ರಾಜ್ಯ ಘಟಕದ ಅಧ್ಯಕ್ಷ ಬಾಳಾಸಾಹಬ್‌ ಥೋರಟ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT