ನಾಯ್ಡು ಜನವಿರೋಧಿ ನೀತಿಯೇ ಜಗನ್ ದಿಗ್ವಿಜಯಕ್ಕೆ ಕಾರಣ

ಸೋಮವಾರ, ಜೂನ್ 17, 2019
23 °C

ನಾಯ್ಡು ಜನವಿರೋಧಿ ನೀತಿಯೇ ಜಗನ್ ದಿಗ್ವಿಜಯಕ್ಕೆ ಕಾರಣ

Published:
Updated:

ಆಂಧ್ರಪ್ರದೇಶ: ಇಷ್ಟೊಂದು ಅಭೂತಪೂರ್ವ ಗೆಲುವು ದಾಖಲಿಸಲು ಹಾಗೂ ಸಿಎಂ ಚಂದ್ರಬಾಬು ನಾಯ್ಡು ಪಕ್ಷ ಹೀನಾಯ ಸೋಲು ಕಾಣಲು ಕಾರಣಗಳೇನು ಎಂಬ ಕುರಿತಾದ ಲೆಕ್ಕಾಚಾರಗಳು ಈಗ ಆಂಧ್ರ ರಾಜಕೀಯ ವಲಯದಲ್ಲಿ ನಡೆಯುತ್ತಿವೆ. ತಂದೆ ವೈ ಎಸ್ ರಾಜಶೇಖರ ರೆಡ್ಡಿ ಹೆಲಿಕಾಪ್ಟರ್‌‌ನಲ್ಲಿ ದುರ್ಮರಣಕ್ಕೀಡಾದ ನಂತರ ಆ ಪಕ್ಷದ ನೇತೃತ್ವ ವಹಿಸಿಕೊಂಡ ಜಗನ್ ಮೋಹನ್ ರೆಡ್ಡಿ ಈ ಮಟ್ಟಕ್ಕೆ ಬೆಳೆದು ನಿಲ್ಲಬೇಕಾದರೆ ಸಾಕಷ್ಟು ನೀರು ಕುಡಿದಿದ್ದಾರೆ. ಅಷ್ಟೇ ಪ್ರಮಾಣದ ಬೆವರು ಹರಿಸಿದ್ದಾರೆ.

ಇದಕ್ಕೆ ತಕ್ಕಂತೆ ಸಿಎಂ ಚಂದ್ರಬಾಬು ನಾಯ್ಡು ಅವರು ಕೆಲ ಯೋಜನೆಗಳ ಕುರಿತು ತಪ್ಪಾಗಿ ನಿರ್ಣಯ ತೆಗೆದುಕೊಂಡಿದ್ದೂ ಸಹ ಆಡಳಿತ ವಿರೋಧಿ ಅಲೆ ಬೃಹದಾಕಾರವಾಗಿ ಏಳಲು ಕಾರಣವಾಗಿವೆ. ಜಗನ್ ಮೋಹನ್ ರೆಡ್ಡಿಯ ಆಕ್ರಮಣಕಾರಿ ಚುನಾವಣಾ ಪ್ರಚಾರ, ಚಂದ್ರಬಾಬು ನಾಯ್ಡು ಅವರ ಜನವಿರೋಧಿ ನೀತಿ ನಿಯಮಗಳು, ಸರ್ಕಾರಿ ಯೋಜನೆಗಳ ಜಾರಿ ಮಾಡಿ ಅವುಗಳನ್ನು ರಿಯಲ್ ಎಸ್ಟೇಟ್ ವ್ಯವಹಾರವನ್ನಾಗಿ ಮಾಡಿರುವುದು, ನೀರಾವರಿ ಯೋಜನೆಗಳಲ್ಲಿ ಹೆಚ್ಚಿದ ಭ್ರಷ್ಟಾಚಾರ, ಚುನಾವಣಾ ಸಂದರ್ಭದಲ್ಲಿ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲ. ಜನರ ಕಷ್ಟಗಳಿಗೆ ಸರಿಯಾಗಿ ಸ್ಪಂದಿಸಲಿಲ್ಲ ಎಂಬ ಆರೋಪಗಳು ನಾಯ್ಡು ಟಿಡಿಪಿ ಧೂಳೀಪಟಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.

ತನ್ನ ತಂದೆ ಬಿಟ್ಟು ಹೋದ ಮುಖ್ಯಮಂತ್ರಿ ಪಟ್ಟಕ್ಕೆ ಏರಲೇಬೇಕು ಎಂದು ವೈಎಸ್ ಜಗನ್ ಮೋಹನ್ ರೆಡ್ಡಿ ಸಂಕಲ್ಪ ಮಾಡಿದಂತಿತ್ತು. ಅದರ ಪೂರ್ವಭಾವಿಯಾಗಿಯೇ ಕಳೆದ 2017 ರಿಂದ 2018ರವರೆಗೆ ಇಡೀ ಆಂಧ್ರಪ್ರದೇಶದ ಉದ್ದಗಲಕ್ಕೂ ಪಾದಯಾತ್ರೆ ಮಾಡಿದರು. ಆ ಸಂದರ್ಭದಲ್ಲಿ ಸುಮಾರು 3648 ಕಿಲೋಮೀಟರ್ ಪಾದಯಾತ್ರೆ ಮಾಡಿ, ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಜನರನ್ನು ಭೇಟಿ ಮಾಡಿದರು. ಅವರ ಕಷ್ಟಗಳಿಗೆ ಸ್ಪಂದಿಸಿದರು. ಇದೂ ಕೂಡ ಜಗನ್ ದಿಗ್ವಿಜಯಕ್ಕೆ ಕಾರಣವಾಗಿದೆ.

ಇದಲ್ಲದೆ, ಪಾದಯಾತ್ರೆ ಸಮಯದಲ್ಲಿ ರೈತರಿಗೆ ವಿಶೇಷ ಸವಲತ್ತು, ವೃದ್ದಾಪ್ಯ ವೇತನದಲ್ಲಿ ಹೆಚ್ಚಳ, ಆರೋಗ್ಯವಿಮೆ, ವಿದ್ಯಾರ್ಥಿಗಳಿಗೆ ಶಿಕ್ಷಣ ಶುಲ್ಕವನ್ನು ಹಿಂದಿರುಗಿಸುವುದು, ಬಡವರಿಗೆ ಮನೆಗಳು ಸೇರಿದಂತೆ ಒಂಬತ್ತು ಭರವಸೆಗಳನ್ನು ಈಡೇರಿಸುವುದಾಗಿ ಜಗನ್ ಪ್ರಮಾಣ ಮಾಡಿದ್ದು ಕೂಡ ಜಗನ್ ಗೆಲುವಿಗೆ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಜಗನ್ ಮೋಹನ್ ರೆಡ್ಡಿ ಯಾವ ಯಾವ ಜಿಲ್ಲೆಗಳಲ್ಲಿ ಪಾದಯಾತ್ರೆ ಕೈಗೊಂಡಿದ್ದರೋ ಅಲ್ಲೆಲ್ಲಾ ಮತಗಳು ಹರಿದು ಬಂದಿವೆ. ಸುಮಾರು 13 ಜಿಲ್ಲೆಗಳಲ್ಲಿ ವೈಎಸ್ ಆರ್ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಮತಗಳನ್ನು ಪಡೆದಿದ್ದಾರೆ. ಇದು ಪಾದಯಾತ್ರೆ ನಡೆಸಿ ಜನರ ಬಳಿಗೆ ತೆರಳಿದ ಪರಿಣಾಮವಾಗಿಯೇ ಸಾಧ್ಯವಾಗಿದೆ ಎನ್ನಲಾಗಿದೆ.

ಜಗನ್ ಮೋಹನ್ ರೆಡ್ಡಿಯ ಛಲ, ಪಟ್ಟು ಬಿಡದ ಹೋರಾಟಗಳು ಟಿಡಿಪಿ ಪಕ್ಷದ ಅಭ್ಯರ್ಥಿಗಳು ಯಾವ ಕಾರಣಕ್ಕೂ ಜಯಗಳಿಸಲಾರದ ಮಟ್ಟಕ್ಕೆ ತಂದು ನಿಲ್ಲಿಸಿದ್ದವು. ಅಂತಿಮವಾಗಿ ಆಂಧ್ರಪ್ರದೇಶದ ಮತದಾರ ಮತದಾನಕ್ಕಾಗಿ ಕಾದು ಜಗನ್ ಮೋಹನ್ ರೆಡ್ಡಿ ಪಕ್ಷಕ್ಕೆ ಮತ ನೀಡಿದ್ದಾರೆ. ಅಂತೂ ತನ್ನ ಹೋರಾಟದಿಂದಾಗಿಯೇ ಜಗನ್ ಆಂಧ್ರದ ಯುವ ಮುಖ್ಯಮಂತ್ರಿಯಾಗಿ ಜಗಮಗಿಸಲಿದ್ದಾರೆ.

" ನಾಯ್ಡು ಜನವಿರೋಧಿ ನೀತಿ, ಭ್ರಷ್ಟಾಚಾರವೇ ಟಿಡಿಪಿ ಇಷ್ಟೊಂದು ಹೀನಾಯ ಸೋಲಿಗೆ ಕಾರಣ " ಎಂದು ವೈಎಸ್ ಆರ್ ಪಿ ಮುಖಂಡ ಉಮ್ಮಾರೆಡ್ಡಿ ವೆಂಕಟೇಶ್ವರಲು ಅಭಿಪ್ರಾಯಪಟ್ಟಿದ್ದಾರೆ. ಜಗನ್ ಮುಖ್ಯಮಂತ್ರಿ ಹುದ್ದೆಗೆ ಸರಿಯಾದ ವ್ಯಕ್ತಿ ಎಂದು ಅವರು ಹೇಳಿದ್ದಾರೆ.

ಒಟ್ಟು ಆಂಧ್ರಪ್ರದೇಶದ 175  ಕ್ಷೇತ್ರಗಳಲ್ಲಿ 148 ವೈಎಸ್ ಆರ್ ಕಾಂಗ್ರೆಸ್ ಪಕ್ಷ ಮುಂದಿದೆ. 25 ಕ್ಷೇತ್ರಗಳಲ್ಲಿ ಟಿಡಿಪಿ ಮುಂದಿದೆ. 2 ಕ್ಷೇತ್ರಗಳಲ್ಲಿ ಇತರರು ಇದ್ದಾರೆ.

 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 11

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !