ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಹುಲ್‌ ಗಾಂಧಿ ‘ಟ್ಯೂಬ್‌ಲೈಟ್‌‘: ಪ್ರಧಾನಿ ಮೋದಿ

Last Updated 6 ಫೆಬ್ರುವರಿ 2020, 18:30 IST
ಅಕ್ಷರ ಗಾತ್ರ

ನವದೆಹಲಿ: ವಿರೋಧ ಪಕ್ಷದ ನಾಯಕರ ಮೇಲೆಪದೇ ಪದೇ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಅವರನ್ನು ‘ಟ್ಯೂಬ್‌ಲೈಟ್‌’ ಎಂದು ಕರೆದರು. ಲೋಕಸಭೆಯಲ್ಲಿ ತಮ್ಮ ಭಾಷಣಕ್ಕೆ ಪ್ರತಿಕ್ರಿಯಿಸಲು ಅವರಿಗೆ 30–40 ನಿಮಿಷಗಳು ಬೇಕಾಯಿತು ಎಂದು ವ್ಯಂಗ್ಯವಾಡಿದರು.

ನಿರುದ್ಯೋಗದ ಸಮಸ್ಯೆ ಕುರಿತು ರಾಹುಲ್‌ ಗಾಂಧಿ ಅವರು ಪ್ರಶ್ನಿಸುತ್ತಿದ್ದಂತೆ, ‘ಕಾಂಗ್ರೆಸ್‌ ನಾಯಕರ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೆ. ಈ ಪ್ರಶ್ನೆ ಕೇಳಲು ಅವರಿಗೆ 30 ರಿಂದ 40 ನಿಮಿಷಗಳು ಬೇಕಾಯಿತು. ನನ್ನ ಮಾತಿನ ಮೂಲಕ ವಿದ್ಯುತ್‌ ತಲುಪಲು ಅವರಿಗೆ ಬಹಳ ಸಮಯ ಬೇಕಾಯಿತು. ಅನೇಕ ಟ್ಯೂಬ್‌ಲೈಟ್‌ಗಳು ಹೀಗೆ ಇರುತ್ತವೆ’ ಎಂದು ಹೇಳಿದ ಮೋದಿ ಅವರ ಮಾತಿಗೆ, ಎನ್‌ಡಿಎ ಸದಸ್ಯರು ನಗೆಯಾಡಿದರು.

ರಾಹುಲ್‌ ಗಾಂಧಿ ಅವರ ಹೆಸರನ್ನು ಪ್ರಸ್ತಾಪಿಸದೇ, ಕಾಂಗ್ರೆಸ್‌ ನಾಯಕರ ಟೀಕೆಗಳನ್ನು ಪ್ರಸ್ತಾಪಿಸಿದ ಮೋದಿ, ‘ಉದ್ಯೋಗದ ಸಮಸ್ಯೆ ತೀವ್ರವಾಗಿದ್ದು, ಯುವಕರು ಮೋದಿಯನ್ನು ಕೋಲುಗಳಿಂದ ಬಡಿಯಲಿದ್ದಾರೆ ಎಂದು ಹೇಳಿದ್ದಾರೆ. ಇದಕ್ಕಾಗಿ ನಾನು ಸೂರ್ಯ ನಮಸ್ಕಾರಗಳನ್ನು ಇನ್ನೂ ಹೆಚ್ಚು ಮಾಡುತ್ತೇನೆ. ಇದರಿಂದ ನನ್ನ ಬೆನ್ನು ಗಟ್ಟಿಯಾಗಲಿದ್ದು, ಕೋಲುಗಳ ಬಡಿತವನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.

‘ಆರು ತಿಂಗಳಲ್ಲಿ ಮೋದಿ ಅವರನ್ನು ಕೋಲುಗಳಿಂದ ಬಡಿಯುತ್ತೇವೆ ಎಂದು ಕಾಂಗ್ರೆಸ್‌ ನಾಯಕರೊಬ್ಬರು ಪ್ರಣಾಳಿಕೆಯಲ್ಲಿ ಹೇಳಿದ್ದಾರೆ. ಇದು ಅಸಾಧ್ಯ ಎಂದು ಊಹಿಸಬಲ್ಲೆ. ಆದ್ದರಿಂದಲೇ ಇದಕ್ಕಾಗಿ ತಯಾರಿ ನಡೆಸಲು ಅವರಿಗೆ ಆರು ತಿಂಗಳು ಬೇಕಾಗಿದೆ’ ಎಂದು ಕುಟುಕಿದರು.

‘ಕಳೆದ 20 ವರ್ಷಗಳಿಂದ ನಾನು ನಿಂದನೆಗೆ ಒಳಗಾಗಿದ್ದೇನೆ. ನಿಂದನೆ ಮತ್ತು ದಂಡ ನಿರೋಧಕವನ್ನು ಹೊಂದಿದ್ದೇನೆ’ ಎಂದು ಹೇಳಿದರು.

ಹಾಸ್ಯದ ಮನಸ್ಥಿತಿಯಲ್ಲಿದ್ದ ಮೋದಿ ಭಾಷಣಕ್ಕೆ ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ ಅವರು ಪದೇ ಪದೇ ಎದ್ದು ನಿಂತು ಅಡ್ಡಿಪಡಿಸಿದರು. ತಮ್ಮ ಸರ್ಕಾರದ ‘ಫಿಟ್‌ ಇಂಡಿಯಾ’ ಅಭಿಯಾನವನ್ನು ಸಂಸತ್ತಿನಲ್ಲಿ ಪ್ರಚಾರ ಮಾಡುತ್ತಿದ್ದಾರೆ ಎಂದು ಪ್ರಧಾನಿ ಹೇಳಿದರು.

ದೇಶದಲ್ಲಿರುವ ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸಲಾಗುವುದು. ಆದರೆ, ನಿಮ್ಮ ಪಕ್ಷದವರ ನಿರುದ್ಯೋಗವನ್ನು ಬಗೆಹರಿಸುವುದಿಲ್ಲ ಎಂದು ಚೌಧರಿ ಅವರ ಪ್ರಶ್ನೆಗೆ ಮೋದಿ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT