ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೌರತ್ವ ಮಸೂದೆಗೆ ವಿರೋಧ: ಮತ್ತೆ ವಿಭಜನೆಯತ್ತ ಭಾರತ ಎಂದ ಒವೈಸಿ

ಪೌರತ್ವ (ತಿದ್ದುಪಡಿ) ಮಸೂದೆ: ಪ್ರತಿ ಹರಿದು ಹಾಕಿದ ಎಐಎಂಐಎಂ ಸಂಸದ ಅಸಾದುದ್ದೀನ್‌ ಒವೈಸಿ
Last Updated 10 ಡಿಸೆಂಬರ್ 2019, 6:06 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭೆಯಲ್ಲಿ ಮಂಡನೆಯಾಗಿರುವ ಪೌರತ್ವ (ತಿದ್ದುಪಡಿ) ಮಸೂದೆಯು ಭಾರಿ ಗದ್ದಲಕ್ಕೆ ಕಾರಣವಾಗಿದೆ. ವಿರೋಧ ಪಕ್ಷಗಳಾದ ಕಾಂಗ್ರೆಸ್‌, ತೃಣಮೂಲ ಕಾಂಗ್ರೆಸ್‌, ಎನ್‌ಸಿಪಿ ಈ ಮಸೂದೆಯನ್ನು ‘ಸಂವಿಧಾನ ವಿರೋಧಿ’ ಎಂದು ಕರೆದಿವೆ.

ಲೋಕಸಭೆಯಲ್ಲಿ ಈ ವಿಷಯದ ಬಗ್ಗೆ ನಡೆದ ಚರ್ಚೆಯು ಭಾರಿ ಬಿಸಿ ಏರಿಸಿತು. ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಎಐಎಂಐಎಂ ಸಂಸದ ಅಸಾದುದ್ದೀನ್‌ ಒವೈಸಿ ಅವರು ಸರ್ಕಾರದ ವಿರುದ್ಧ ಹರಿಹಾಯ್ದರು. ಮುಸ್ಲಿಮರನ್ನು ‘ದೇಶರಹಿತ’ರನ್ನಾಗಿಸುವ ಹುನ್ನಾರವನ್ನು ಹೊಂದಿರುವ ಮಸೂದೆಯು ಮತ್ತೊಂದು ದೇಶ ವಿಭಜನೆಗೆ ಕಾರಣವಾಗಬಹುದು ಎಂದರು.

ಆಕ್ರೋಶಭರಿತರಾಗಿ ಮಾತನಾಡಿದ ಅವರು ಮಸೂದೆಯ ಪ್ರತಿಯನ್ನು ಹರಿದು ಹಾಕಿದರು. ಆಡಳಿತಾರೂಢ ಎನ್‌ಡಿಎ ಸದಸ್ಯರು ಈ ನಡೆಯನ್ನು ವಿರೋಧಿಸಿದರು. ಇದು ಸಂಸತ್ತಿಗೆ ಮಾಡಿದ ಅವಮಾನ ಎಂದರು.

ಕಾಂಗ್ರೆಸ್‌ ಸಂಸದ ಮನೀಶ್‌ ತಿವಾರಿ ಅವರು ಮಸೂದೆಯ ಮೇಲಿನ ಚರ್ಚೆ ಆರಂಭಿಸಿದರು. ಇದು ರಾಜಕೀಯ ಉದ್ದೇಶದ ಮಸೂದೆಯಾಗಿದ್ದು ಆ ಉದ್ದೇಶ ಏನು ಎಂಬುದು ಎಲ್ಲರಿಗೂ ತಿಳಿದಿದೆ ಎಂದು ಅವರು ಹೇಳಿದರು. ಆದರೆ, ಆ ಉದ್ದೇಶ ಏನು ಎಂಬುದನ್ನು ವಿವರಿಸಲಿಲ್ಲ.

ಸಂವಿಧಾನದ 14, 15, 25 ಮತ್ತು 26ನೇ ವಿಧಿಗೆ ಈ ಮಸೂದೆಯು ವಿರುದ್ಧವಾಗಿದೆ ಎಂದು ಅವರು ಪ್ರತಿಪಾದಿಸಿದರು. ಧರ್ಮ, ಜಾತಿ, ಬಣ್ಣಗಳ ತಾರತಮ್ಯ ಇಲ್ಲದೆ ಸಮಾನತೆ, ಕಾನೂನಿನ ಮುಂದೆ ಸಮಾನ ಅವಕಾಶ ನೀಡುವುದನ್ನು ಈ ವಿಧಿಗಳು ವಿವರಿಸುತ್ತವೆ.

ಸಂವಿಧಾನದ ಪ್ರಸ್ತಾವನೆಯಲ್ಲಿಯೇ‘ಜಾತ್ಯತೀತ’ ಎಂಬ ಪದ ಇದೆ. ಜಾತ್ಯತೀತತೆಯು ಸಂವಿಧಾನದಲ್ಲಿ ಅಡಕವಾಗಿ ಹೋಗಿರುವ ವಿಚಾರ. ನಿರಾಶ್ರಿತರನ್ನು ಧರ್ಮದ ಆಧಾರದಲ್ಲಿ ತಾರತಮ್ಯಕ್ಕೆ ಒಳಪಡಿಸಬಾರದು ಎಂದು ವಿಶ್ವಸಂಸ್ಥೆಯೂ ಹೇಳುತ್ತದೆ ಎಂದು ತಿವಾರಿ ವಿವರಿಸಿದರು.

ಎಐಎಡಿಎಂಕೆ, ಜೆಡಿಯು ಬೆಂಬಲ, ಟಿಆರ್‌ಎಸ್‌ ವಿರೋಧ

ಮಸೂದೆಯನ್ನು ಬೆಂಬಲಿಸುವ ಮತ್ತು ವಿರೋಧಿಸುವ ಪಕ್ಷಗಳು ಯಾವುವು ಎಂಬುದರ ಚಿತ್ರಣ ಬಹುತೇಕ ಸ್ಪಷ್ಟವಾಗಿದೆ. ಕೆ.ಚಂದ್ರಶೇಖರ ರಾವ್‌ ನೇತೃತ್ವದ ಟಿಆರ್‌ಎಸ್‌ ಮಸೂದೆಯನ್ನು ವಿರೋಧಿಸಲು ನಿರ್ಧರಿಸಿದೆ. ಬಿಜೆಡಿ ಈವರೆಗೆ ಮಸೂದೆಗೆ ವಿರೋಧ ವ್ಯಕ್ತಪಡಿಸಿತ್ತು. ಈಗ, ಬೆಂಬಲಿಸಲು ನಿರ್ಧರಿಸಿದೆ. ಎಐಎಡಿಎಂಕೆ ಮತ್ತು ಜೆಡಿಯು ಮಸೂದೆಗೆ ಬೆಂಬಲ ನೀಡಲಿವೆ.

ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಸೂದೆಯ ವಿರುದ್ಧ ಮತ ಹಾಕಬೇಕು ಎಂದು ತನ್ನ ಸದಸ್ಯರಿಗೆ ಟಿಆರ್‌ಎಸ್‌ ವಿಪ್‌ ಜಾರಿ ಮಾಡಿದೆ. ಆದರೆ, ಇತರ ಪಕ್ಷಗಳ ಬೆಂಬಲ ಇರುವುದರಿಂದ ಎರಡೂ ಸದನಗಳಲ್ಲಿ ಟಿಆರ್‌ಎಸ್‌ ವಿರೋಧದಿಂದ ಮಸೂದೆಯ ಅಂಗೀಕಾರಕ್ಕೆ ಯಾವುದೇ ತೊಂದರೆ ಆಗದು.

ಆರ್‌ಟಿಐ (ತಿದ್ದುಪಡಿ) ಮಸೂದೆಯ ವಿಚಾರದಲ್ಲಿ ಸರ್ಕಾರವನ್ನು ಟಿಆರ್‌ಎಸ್‌ ಬೆಂಬಲಿಸಿತ್ತು. ಆದರೆ, ತೆಲಂಗಾಣದಲ್ಲಿ ಮುಸ್ಲಿಂ ಜನಸಂಖ್ಯೆ ಗಣನೀಯವಾಗಿದೆ. ಆ ಕಾರಣಕ್ಕಾಗಿಯೇ ಟಿಆರ್‌ಎಸ್‌ ಈ ನಿಲುವಿಗೆ ಬಂದಿದೆ ಎಂದು ಹೇಳಲಾಗಿದೆ. ಲೋಕಸಭೆಯಲ್ಲಿ 11 ಮತ್ತು ರಾಜ್ಯಸಭೆಯಲ್ಲಿ ಆರು ಸಂಸದರನ್ನು ಟಿಆರ್‌ಎಸ್‌ ಹೊಂದಿದೆ.

ಜೆಡಿಯು ಮತ್ತು ಎಐಎಡಿಎಂಕೆ ಪಕ್ಷಗಳು ಆರಂಭದಲ್ಲಿ ಮಸೂದೆಯನ್ನು ವಿರೋಧಿಸಿದ್ದವು. ಆದರೆ, ಬಿಜೆಪಿ ನಾಯಕರ ಮನವೊಲಿಕೆ ಬಳಿಕ ನಿರ್ಧಾರ ಬದಲಿಸಿವೆ. ತಾವು ಎತ್ತಿದ್ದ ಆಕ್ಷೇಪಗಳನ್ನು ಸರಿಪಡಿಸಲಾಗಿದೆ ಎಂದು ಈ ಪಕ್ಷಗಳು ಹೇಳಿವೆ. ಶ್ರೀಲಂಕಾದ ತಮಿಳರನ್ನು ಮಸೂದೆಯ ವ್ಯಾಪ್ತಿಗೆ ತರಬೇಕು ಎಂದು ಡಿಎಂಕೆ ಆಗ್ರಹಿಸುತ್ತಿದೆ. ಅದನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ. ಹಾಗಾಗಿ, ಮಸೂದೆಗೆ ಎಐಎಡಿಎಂಕೆ ಬೆಂಬಲ ನೀಡಿದರೆ ಅದು ತಮಿಳುನಾಡು ರಾಜಕಾರಣದಲ್ಲಿ ಪ್ರತಿಫಲಿಸುವ ಸಾಧ್ಯತೆ ಇದೆ.

***

ಮಸೂದೆಯು ಸಂವಿಧಾನ ವಿರೋಧಿ, ಸಂವಿಧಾನದ ಸ್ಫೂರ್ತಿಗೆ ವಿರೋಧಿ ಮತ್ತು ಬಾಬಾ ಸಾಹೇಬ್‌ ಅಂಬೇಡ್ಕರ್‌ ಪ್ರತಿಪಾದಿಸಿದ ಸಿದ್ಧಾಂತಕ್ಕೆ ವಿರುದ್ಧವಾಗಿದೆ

- ಮನೀಶ್‌ ತಿವಾರಿ,ಕಾಂಗ್ರೆಸ್‌ ಸಂಸದ

***

ಹಿಂದುತ್ವದ ಆಧಾರದಲ್ಲಿ ದೇಶ ನಿರ್ಮಾಣ ಮಾಡುವ ಸಂಘ ಪರಿವಾರದ ಕಾರ್ಯಸೂಚಿಯನ್ನು ಪೂರ್ಣಗೊಳಿಸುವುದು, ಜನಾಂಗೀಯ ಶ್ರೇಷ್ಠತೆ ಪ್ರತಿಪಾದನೆ ಇದರ ಉದ್ದೇಶ

- ಮೊಹಮ್ಮದ್‌ ಸಲೀಂ, ಸಿಪಿಎಂ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT