ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಡಿಎ ರಫೇಲ್‌ ಶೇ 2.8 ಅಗ್ಗ

ಬಹುನಿರೀಕ್ಷಿತ ಸಿಎಜಿ ವರದಿ ರಾಜ್ಯಸಭೆಯಲ್ಲಿ ಮಂಡನೆ
Last Updated 14 ಫೆಬ್ರುವರಿ 2019, 4:21 IST
ಅಕ್ಷರ ಗಾತ್ರ

ನವದೆಹಲಿ: ಫ್ರಾನ್ಸ್‌ನ ಡಾಸೋ ಏವಿಯೇಷನ್‌ನಿಂದ ₹59 ಸಾವಿರ ಕೋಟಿ ವೆಚ್ಚದಲ್ಲಿ 36 ರಫೇಲ್‌ ಯುದ್ಧ ವಿಮಾನಗಳನ್ನು ಖರೀದಿಸಲು ಎನ್‌ಡಿಎ ಸರ್ಕಾರವು ಮಾಡಿಕೊಂಡಿರುವ ಒಪ್ಪಂದವು 2007ರಲ್ಲಿ ಯುಪಿಎ ಸರ್ಕಾರದ ಮುಂದೆ ಆ ಕಂಪನಿಯು ಇಟ್ಟಿದ್ದ ದರಕ್ಕಿಂತ ಶೇ 2.86ರಷ್ಟು ಕಡಿಮೆ ಎಂದು ಮಹಾಲೇಖಪಾಲರ (ಸಿಎಜಿ) ವರದಿ ಹೇಳಿದೆ.

ಬಹುಕಾಲದಿಂದ ಎದುರು ನೋಡಲಾಗುತ್ತಿದ್ದ ಸಿಎಜಿ ವರದಿಯನ್ನು 16ನೇ ಲೋಕಸಭೆಯ ಕೊನೆಯ ಅಧಿವೇಶನದ ಕೊನೆಯ ದಿನವಾದ ಬುಧವಾರ ಸಂಸತ್ತಿನಲ್ಲಿ ಮಂಡಿಸಲಾಗಿದೆ. ಯುಪಿಎ ಸರ್ಕಾರ ಒಪ್ಪಿಕೊಂಡಿದ್ದ ಬೆಲೆ ಮತ್ತು ಇತರ ಷರತ್ತುಗಳು ಹಾಗೂ ಎನ್‌ಡಿಎ ಸರ್ಕಾರ ಮಾಡಿಕೊಂಡಿರುವ ಒಪ್ಪಂದವನ್ನು ಸಿಎಜಿ ವರದಿಯಲ್ಲಿ ತುಲನೆ ಮಾಡಲಾಗಿದೆ.ಎನ್‌ಡಿಎ ಸರ್ಕಾರವು ಡಾಸೋ ಕಂಪನಿಗೆ ಹಲವು ರಿಯಾಯಿತಿಗಳನ್ನು ನೀಡಿದೆ ಎಂದೂ ವರದಿ ಹೇಳಿದೆ.

ಭಾರಿ ರಾಜಕೀಯ ಚರ್ಚೆಗೆ ಕಾರಣವಾಗಿದ್ದ ದರ ವಿವರಗಳನ್ನು ವರದಿಯು ಒಳಗೊಂಡಿಲ್ಲ. ಈ ಮಾಹಿತಿಯನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ರಕ್ಷಣಾ ಸಚಿವಾಲಯ ಹಿಂದೆಯೇ ಹೇಳಿತ್ತು. ಹಾಗಾಗಿ ಶೇಕಡವಾರು ಪ್ರಮಾಣದಲ್ಲಿ ದರ ವಿವರಗಳ ಹೋಲಿಕೆ ಮಾಡಲಾಗಿದೆ.

2007ರಲ್ಲಿ ಚರ್ಚೆಯಾಗಿದ್ದ ದರಕ್ಕಿಂತ ಶೇ 9ರಷ್ಟು ಕಡಿಮೆಗೆ ರಫೇಲ್‌ ವಿಮಾನಗಳನ್ನು ಖರೀದಿಸುವ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂಬ ರಕ್ಷಣಾ ಸಚಿವಾಲಯದ ಹೇಳಿಕೆಯನ್ನು ಸಿಎಜಿ ವರದಿಯು ಅಲ್ಲಗಳೆದಿದೆ.

ಒಪ್ಪಂದಕ್ಕೆ ಫ್ರಾನ್ಸ್‌ ಸರ್ಕಾರದ ಖಾತರಿ ಇಲ್ಲ. ಅದರ ಬದಲಿಗೆ, ಭರವಸೆ ಪತ್ರಕ್ಕೆ (ಲೆಟರ್‌ ಆಫ್‌ ಕಂಫರ್ಟ್‌) ಎನ್‌ಡಿಎ ಸರ್ಕಾರ ತೃಪ್ತವಾಗಿದೆ. ಹಾಗೆಯೇ, ಹೆಚ್ಚಿನ ಸುರಕ್ಷತೆಗಾಗಿ ಎಸ್ಕ್ರೊ ಖಾತೆಯ (ಷರತ್ತುಬದ್ಧ ಹಣ ಪಾವತಿ ವ್ಯವಸ್ಥೆ) ಮೂಲಕ ಹಣ ಪಾವತಿ ಮಾಡಲಾಗುವುದು ಎಂಬ ರಕ್ಷಣಾ ಸಚಿವಾಲಯದ ಷರತ್ತನ್ನೂ ಡಾಸೋ ಒಪ್ಪಿಲ್ಲ ಎಂದು ಸಿಎಜಿ ವರದಿ ಹೇಳಿದೆ.

ಒಪ್ಪಂದದ ಭಾರತೀಯ ಪಾಲುದಾರ ಸಂಸ್ಥೆಯಾಗಿ ಅನಿಲ್‌ ಅಂಬಾನಿ ಅವರ ರಿಲಯನ್ಸ್‌ ಡಿಫೆನ್ಸ್‌ ಕಂಪನಿಯನ್ನು ಆಯ್ಕೆ ಮಾಡಿಕೊಂಡಿರುವುದು ಭಾರಿ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದೆ. ಆದರೆ, ಸಿಎಜಿ ವರದಿಯಲ್ಲಿ ಭಾರತೀಯ ಪಾಲುದಾರ ಸಂಸ್ಥೆಯ ಆಯ್ಕೆಯ ಬಗ್ಗೆ ಏನನ್ನೂ ಹೇಳಲಾಗಿಲ್ಲ.

*ಹೊಸ ಒಪ್ಪಂದದ ಪ್ರಕಾರ ದರ ಕಡಿಮೆ ಮತ್ತು ವಿಮಾನಗಳು ಬೇಗ ಪೂರೈಕೆಯಾಗಲಿದೆ ಎಂದು ಪ್ರಧಾನಿ ವಾದಿಸಿದ್ದರು. ಈ ಎರಡೂ ವಾದ ಮುರಿದು ಬಿದ್ದಿವೆ

– ರಾಹುಲ್‌ ಗಾಂಧಿ, ಕಾಂಗ್ರೆಸ್‌ ಅಧ್ಯಕ್ಷ

*ಸುಪ್ರೀಂ ಕೋರ್ಟ್‌, ಸಿಎಜಿ ಯಾವುದೂ ಸರಿ ಇಲ್ಲ, ಒಂದು ವಂಶ ಮಾತ್ರ ಸರಿ ಎನ್ನಲಾಗದು. ಸತ್ಯಮೇವ ಜಯತೇ ಎಂಬುದನ್ನು ಸಿಎಜಿ ವರದಿಯು ಮತ್ತೆ ದೃಢಪಡಿಸಿದೆ

– ಅರುಣ್‌ ಜೇಟ್ಲಿ, ಕೇಂದ್ರ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT