ಮಂಗಳವಾರ, ಮಾರ್ಚ್ 9, 2021
18 °C

ರಾಹುಲ್‌ ವಿರುದ್ಧ ನಿತೀಶ್‌ ಕುಮಾರ್ ವಾಗ್ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಟ್ನಾ: ಭ್ರಷ್ಟ ಆರ್‌ಜೆಡಿ ಜತೆಗೆ ಸೇರುವ ಮೂಲಕ ತಮಗಿದ್ದ ಒಳ್ಳೆಯ ಹೆಸರನ್ನು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಕಳೆದುಕೊಂಡಿದ್ದಾರೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಹೇಳಿದ್ದಾರೆ.

‘ಕಳಂಕಿತ ರಾಜಕಾರಣಿಗಳ ಅನರ್ಹತೆಯ ಸುಪ್ರೀಂ ಕೋರ್ಟ್‌ ಆದೇಶವನ್ನು ರದ್ದು ಮಾಡುವ ಸುಗ್ರೀವಾಜ್ಞೆಯ ಪ‍್ರತಿಯನ್ನು ಹರಿದು ಹಾಕಿದ್ದ ವ್ಯಕ್ತಿ ರಾಹುಲ್‌. ಆದರೆ, ಲಾಲು ಪ್ರಸಾದ್‌ ಜತೆಗೆ ಕೈಜೋಡಿಸಿ ಈ ಹೆಸರನ್ನು ಕಳೆದುಕೊಂಡಿದ್ದಾರೆ’ ಎಂದು ಜನರ ಜತೆಗಿನ ಸಂವಾದದಲ್ಲಿ ನಿತೀಶ್‌ ಹೇಳಿದ್ದಾರೆ. 

ಇದೇ ಮೊದಲ ಬಾರಿ, ರಾಹುಲ್‌ ವಿರುದ್ಧ ನಿತೀಶ್‌ ಮಾತನಾಡಿದ್ದಾರೆ. 2015ರಲ್ಲಿ ಬಿಹಾರದ ಮುಖ್ಯಮಂತ್ರಿಯಾಗಲು ನಿತೀಶ್‌ಗೆ ರಾಹುಲ್‌ ಬೆಂಬಲ ಸೂಚಿಸಿದ್ದರು.

2015ರಲ್ಲಿ ಜೆಡಿಯು, ಆರ್‌ಜೆಡಿ ಮತ್ತು ಕಾಂಗ್ರೆಸ್‌ ಪಕ್ಷದ ಮೈತ್ರಿಗೆ ಕೆಲ ದಿನ ಮೊದಲು ರಾಹುಲ್‌ ಅವರನ್ನು ನಿತೀಶ್‌ ದೆಹಲಿಯಲ್ಲಿ ಭೇಟಿಯಾಗಿದ್ದರು. 2015ರ ವಿಧಾನಸಭಾ ಚುನಾವಣೆಯಲ್ಲಿ ತಮ್ಮನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಬೇಕು ಎಂದು ಲಾಲು ಮೇಲೆ ಒತ್ತಡ ಹೇರುವಂತೆ ನಿತೀಶ್‌ ಕೋರಿದ್ದರು. ರಾಹುಲ್‌ ಅವರ ಒತ್ತಡದಿಂದಾಗಿಯೇ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ನಿತೀಶ್‌ ಅವರನ್ನು ಲಾಲು ಒಪ್ಪಿಕೊಂಡಿದ್ದರು.

ಮಹಾ ಮೈತ್ರಿಗೆ ಸೀಟು ಹಂಚಿಕೆ ಬಿಕ್ಕಟ್ಟು

ಲೋಕಸಭಾ ಚುನಾವಣೆಗಾಗಿ ಉತ್ತರ ಪ್ರದೇಶದಲ್ಲಿ ಎಸ್‌ಪಿ–ಬಿಎಸ್‌ಪಿ ಮಾಡಿಕೊಂಡಿರುವ ಮಹಾಮೈತ್ರಿಗೆ ಸೀಟು ಹಂಚಿಕೆ ಬಿಕ್ಕಟ್ಟು ಎದುರಾಗಿದೆ. ಎರಡೂ ಪಕ್ಷಗಳು ಸ್ಪರ್ಧಿಸುವ ಕ್ಷೇತ್ರಗಳ ಪಟ್ಟಿ ಈಗಾಗಲೇ ಪ್ರಕಟ ಆಗಬೇಕಿತ್ತು. ಆದರೆ, ಭಿನ್ನಾಭಿಪ್ರಾಯದಿಂದಾಗಿ ಅದು ಮುಂದಕ್ಕೆ ಹೋಗಿದೆ ಎಂದು ಮೂಲಗಳು ಹೇಳಿವೆ. 

ಹತ್ತಕ್ಕೂ ಹೆಚ್ಚು ಕ್ಷೇತ್ರಗಳ ಬಗ್ಗೆ ಒಮ್ಮತಕ್ಕೆ ಬರಲು ಈ ಪಕ್ಷಗಳಿಗೆ ಸಾಧ್ಯವಾಗಿಲ್ಲ ಎನ್ನಲಾಗಿದೆ.

ಎಸ್‌ಪಿ ಗೆದ್ದ ಸ್ಥಾನಗಳು ಮತ್ತು ಎರಡನೇ ಸ್ಥಾನ ಪಡೆದ ಕ್ಷೇತ್ರಗಳಲ್ಲಿ ಆ ಪಕ್ಷವೇ ಸ್ಪರ್ಧಿಸಲಿದೆ. ಬಿಎಸ್‌ಪಿ ಎರಡನೇ ಸ್ಥಾನದಲ್ಲಿದ್ದ ಕ್ಷೇತ್ರಗಳಲ್ಲಿ ಆ ಪಕ್ಷ ಸ್ಪರ್ಧಿಸುವುದು ಎಂದು ಮಹಾಮೈತ್ರಿ ಘೋಷಣೆ ಸಂದರ್ಭದಲ್ಲಿ ನಿರ್ಧಾರ ಆಗಿತ್ತು. 

ಆದರೆ, ಎಸ್‌ಪಿ ಎರಡನೇ ಸ್ಥಾನದಲ್ಲಿದ್ದ ಕೆಲವು ಕ್ಷೇತ್ರಗಳಿಗೂ ಬಿಎಸ್‌ಪಿ ಬೇಡಿಕೆ ಇಟ್ಟಿದೆ. ಹಾಗೆಯೇ ಉತ್ತರ ಪ್ರದೇಶದ ಪೂರ್ವ ಭಾಗದ ಕೆಲವು ಕ್ಷೇತ್ರಗಳಿಗೆ ಎಸ್‌ಪಿ ಬೇಡಿಕೆ ಇರಿಸಿದೆ. ಮೈತ್ರಿಕೂಟದ ಇನ್ನೊಂದು ಪಕ್ಷ ಆರ್‌ಎಲ್‌ಡಿಗೆ ಎರಡು ಕ್ಷೇತ್ರ ನೀಡಲು ನಿರ್ಧರಿಸಲಾಗಿದೆ. ಆದರೆ, ಆ ಪಕ್ಷ ನಾಲ್ಕು ಕ್ಷೇತ್ರಗಳಿಗೆ ಪಟ್ಟು ಹಿಡಿದಿದೆ. ಹಾಗಾಗಿ ಬಿಕ್ಕಟ್ಟು ಸೃಷ್ಟಿಯಾಗಿದೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು