ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಿಟ್ಜರ್‌ಲೆಂಡ್‌ ಸರ್ಕಾರದ ಪಾಲಾಗುವುದೇ ಭಾರತೀಯರ ಹಣ

Last Updated 10 ನವೆಂಬರ್ 2019, 19:30 IST
ಅಕ್ಷರ ಗಾತ್ರ

ನವದೆಹಲಿ/ ಜೂರಿಚ್‌: ಸ್ವಿಟ್ಜರ್‌ಲೆಂಡ್‌ನ ಬ್ಯಾಂಕುಗಳಲ್ಲಿ ಭಾರತ ಮೂಲದವರು ಹೊಂದಿದ್ದ ಹತ್ತಕ್ಕೂ ಹೆಚ್ಚು ಸುಪ್ತ ಖಾತೆಗಳಲ್ಲಿರುವ ಹಣಕ್ಕೆ ವಾರಸುದಾರರೇ ಇಲ್ಲದಂತಾಗಿ, ಶೀಘ್ರದಲ್ಲೇ ಆ ಹಣವು ಅಲ್ಲಿನ ಸರ್ಕಾರದ ಪಾಲಾಗುವ ಸಾಧ್ಯತೆ ಇದೆ.

ಸುಪ್ತ ಖಾತೆದಾರರ ವಾರಸುದಾರರು ಯಾರಾದರೂ ಇದ್ದಲ್ಲಿ, ಸೂಕ್ತ ದಾಖಲೆಗಳನ್ನು ನೀಡಿ ಆ ಹಣವನ್ನು ಪಡೆಯಲು ಅವಕಾಶ ನೀಡಲಾಗಿದೆ. 2015ರಲ್ಲಿ ಅಲ್ಲಿನ ಸರ್ಕಾರವು 2,600 ಸುಪ್ತ ಖಾತೆಗಳ ವಿವರಗಳನ್ನು ಬಹಿರಂಗಪಡಿಸಿತ್ತು. ಆ ಖಾತೆಗಳಲ್ಲಿದ್ದ ಒಟ್ಟು ಹಣದ ಮೊತ್ತ ಸುಮಾರು 4.5 ಕೋಟಿ ಸ್ವಿಸ್‌ ಫ್ರಾಂಕ್‌ (ಸುಮಾರು ₹ 300 ಕೋಟಿ) ಆಗಿತ್ತು. ಇದಲ್ಲದೆ 80 ಸುಪ್ತ ಲಾಕರ್‌ಗಳ ವಿವರಗಳನ್ನೂ ಬಹಿರಂಗಪಡಿಸಲಾಗಿದೆ. 1954ರಿಂದ ಈ ಖಾತೆಗಳಲ್ಲಿ ಯಾವುದೇ ವಹಿವಾಟು ನಡೆದಿರಲಿಲ್ಲ.

ಈ ಸುಪ್ತ ಖಾತೆಗಳಲ್ಲಿ ಕನಿಷ್ಠ ಹತ್ತು ಖಾತೆಗಳು ಭಾರತೀಯ ಮೂಲದವರದ್ದಾಗಿವೆ. ಕೆಲವು ಖಾತೆಗಳು ಬ್ರಿಟಿಷ್‌ ಆಳ್ವಿಕೆಯ ಕಾಲದಲ್ಲಿ ತೆರೆದವುಗಳಾಗಿವೆ. ರಾಜರ ಆಳ್ವಿಕೆಯ ಕಾಲದಲ್ಲಿ ರಾಜರ ಜತೆ ಸಂಪರ್ಕ ಇಟ್ಟುಕೊಂಡಿದ್ದ ಕೆಲವರು ಇಲ್ಲಿ ಖಾತೆ ತೆರೆದಿರಬಹುದು ಎನ್ನಲಾಗಿದೆ. ಭಾರತ ಮೂಲದವರ ಖಾತೆಗಳಿಗೆ ಈವರೆಗೆ ಯಾರೊಬ್ಬ ವಾರಸುದಾರರೂ ಹಕ್ಕು ಮಂಡಿಸಿಲ್ಲ ಎಂಬುದು ವಿಶೇಷವಾಗಿದೆ.

ಸಾಮಾನ್ಯವಾಗಿ ಇಂಥ ಖಾತೆಗಳಿಗೆ ಹಕ್ಕು ಮಂಡಿಸಲು, ವಿವರವನ್ನು ಬಹಿರಂಗಪಡಿಸಿದ ದಿನದಿಂದ ಆರಂಭಿಸಿ ಒಂದು ವರ್ಷದ ಕಾಲಾವಕಾಶ ನೀಡಲಾಗುತ್ತದೆ. ಭಾರತೀಯರದ್ದು ಎನ್ನಲಾದ ಕೆಲವು ಖಾತೆಗಳಿಗೆ ಹಕ್ಕು ಸಲ್ಲಿಸಲು ನೀಡಿದ್ದ ಅವಧಿಯು ಮುಂದಿನ ತಿಂಗಳು ಕೊನೆಗೊಳ್ಳಲಿದ್ದು ಇನ್ನೂ ಕೆಲವು ಖಾತೆಗಳಿಗೆ 2020ರ ಡಿಸೆಂಬರ್‌ವರೆಗೂ ಅವಕಾಶ ನೀಡಲಾಗಿದೆ. ಯಾರೂ ಹಕ್ಕು ಮಂಡಿಸದಿದ್ದರೆ ಆ ಹಣ ಹಾಗೂ ಲಾಕರ್‌ನಲ್ಲಿರುವ ವಸ್ತುಗಳನ್ನು ಸರ್ಕಾರಕ್ಕೆ ಹಸ್ತಾಂತರಿಸಲಾಗುತ್ತದೆ.

ಭಾರತ ಮೂಲದವರ ಸುಪ್ತ ಖಾತೆಗಳಲ್ಲಿ ಎರಡು ಸುಪ್ತ ಖಾತೆಗಳು ಕಲ್ಕತ್ತಾ (ಈಗಿನ ಕೋಲ್ಕತ್ತ)ದವರದ್ದಾಗಿದೆ. ಒಂದು ಖಾತೆ ಡೆಹರಾಡೂನ್‌ನ ವ್ಯಕ್ತಿಯದ್ದಾಗಿದ್ದರೆ, ಇನ್ನೆರಡು ಖಾತೆಗಳು ಬಾಂಬೆಯ ವ್ಯಕ್ತಿಗಳದ್ದು ಎನ್ನಲಾಗಿದೆ. ಕೆಲವು ಖಾತೆಗಳು ಭಾರತ ಮೂಲದ, ಬ್ರಿಟನ್‌ ನಿವಾಸಿಗಳಿಗೆ ಸೇರಿದವುಗಳಾಗಿವೆ.

ಏನಿದುಸುಪ್ತ ಖಾತೆ?
ಸ್ವಿಸ್‌ ಕಾನೂನು ಪ್ರಕಾರ, 60 ವರ್ಷಗಳಿಗೂ ಹೆಚ್ಚು ಕಾಲದಿಂದ ವಹಿವಾಟು ನಡೆಯದ ಮತ್ತು ಖಾತೆದಾರರ ಸಂಪರ್ಕ ಸಾಧ್ಯವಾಗದೆ ಇದ್ದ ಖಾತೆಗಳನ್ನು ಸುಪ್ತ ಖಾತೆ ಎಂದು ಘೋಷಿಸಲಾಗುತ್ತದೆ. ಸ್ವಿಸ್‌ ಖಾತೆಗಳಲ್ಲಿರುವ ವಿದೇಶಿಯರ ಹಣವನ್ನು ಕುರಿತ ವಿವರಗಳನ್ನು ಬಹಿರಂಗಪಡಿಸಬೇಕು ಎಂದು ವಿವಿಧ ರಾಷ್ಟ್ರಗಳು ಸ್ವಿಟ್ಜರ್ಲೆಂಡ್‌ ಸರ್ಕಾರದ ಮೇಲೆ ಒತ್ತಡ ಹೇರುತ್ತಲೇ ಇದ್ದವು.

ಅಂತರರಾಷ್ಟ್ರೀಯ ಒತ್ತಡ ಹೆಚ್ಚಾದ ಕಾರಣ ಸುಪ್ತ ಖಾತೆಗಳ ವಿವರವನ್ನು ಬಹಿರಂಗಪಡಿಸುವ ಪ್ರಕ್ರಿಯೆಯನ್ನು ಸರ್ಕಾರವು 2015ರಲ್ಲಿ ಆರಂಭಿಸಿತ್ತು. ಭಾರತವೂ ಸೇರಿದಂತೆ ಕೆಲವು ರಾಷ್ಟ್ರಗಳ ಜೊತೆಗೆ ಈ ಕುರಿತ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳುವ ಒಪ್ಪಂದವನ್ನೂ ಮಾಡಿಕೊಂಡಿದೆ. ಈಗ ಪ್ರತಿ ವರ್ಷವೂ ಸುಪ್ತ ಖಾತೆಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಪ್ರಸಕ್ತ ಅದು 3,500ರ ಗಡಿ ದಾಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT