ಬುಧವಾರ, ಅಕ್ಟೋಬರ್ 16, 2019
21 °C
ಆಶ್ರಯ ಕೋರಿ ಭಾರತಕ್ಕೆ ಬಂದ ಹಿಂದೂ, ಸಿಖ್ಖ್, ಬೌದ್ಧ, ಕ್ರೈಸ್ತ ಮತ್ತು ಜೈನ ಧರ್ಮೀಯರಿಗೆ ಅಭಯ

ಎನ್‌ಆರ್‌ಸಿಗೂ ಮುನ್ನ ‘ಪೌರತ್ವ’ ತಿದ್ದುಪಡಿ: ಅಮಿತ್‌ ಶಾ

Published:
Updated:
Prajavani

ಕೋಲ್ಕತ್ತ: ‘ದೇಶದಾದ್ಯಂತ ರಾಷ್ಟ್ರೀಯ ಪೌರತ್ವ ನೋಂದಣಿಯನ್ನು (ಎನ್‌ಆರ್‌ಸಿ) ಜಾರಿ ಮಾಡುವುದಕ್ಕೂ ಮುನ್ನ ಕೇಂದ್ರ ಸರ್ಕಾರವು ಪೌರತ್ವ ತಿದ್ದುಪಡಿ ಮಸೂದೆಯನ್ನು ತಂದು, ಭಾರತಕ್ಕೆ ಬಂದ ಹಿಂದೂ, ಸಿಖ್ಖ್, ಬೌದ್ಧ, ಕ್ರೈಸ್ತ ಮತ್ತು ಜೈನ ಧರ್ಮೀಯರಿಗೆ ಪೌರತ್ವವನ್ನು ಖಾತರಿಪಡಿಸಲಿದೆ’ ಎಂದು ಕೇಂದ್ರದ ಗೃಹಸಚಿವ ಅಮಿತ್‌ ಶಾ ಹೇಳಿದರು.

ಇಲ್ಲಿ ಆಯೋಜಿಸಿದ್ದ ಎನ್‌ಆರ್‌ಸಿ ಕುರಿತ ಸಮ್ಮೇಳನದಲ್ಲಿ ಮಂಗಳವಾರ ಮಾತನಾಡಿದ ಅವರು, ‘ಅಕ್ರಮವಾಗಿ ದೇಶದೊಳಗೆ ನುಸುಳಿ ಬಂದಿರುವ ಒಬ್ಬನೇ ಒಬ್ಬನನ್ನು ಇಲ್ಲಿರಲು ಬಿಡುವುದಿಲ್ಲ’ ಎಂದು ಪುನರುಚ್ಚರಿಸಿದರು.

‘ಎನ್‌ಆರ್‌ಸಿ ಬಗ್ಗೆ ತಪ್ಪು ಹೇಳಿಕೆ ನೀಡುವ ಮೂಲಕ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಜನರ ಹಾದಿತಪ್ಪಿಸುತ್ತಿದ್ದಾರೆ. ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಮತ್ತು ಬಿಜೆಪಿಯ ನಿಲುವನ್ನು ಸ್ಪಷ್ಟಪಡಿಸಲು ಹಾಗೂ ಪಶ್ಚಿಮ ಬಂಗಾಳದ ಜನರಿಗೆ ಸತ್ಯವನ್ನು ತಿಳಿಸಲು ನಾನು ಬಂದಿದ್ದೇನೆ. ವಂಚನೆಗೆ ಒಳಗಾಗಿ ಅಥವಾ ಭಯೋತ್ಪಾದನೆಯ ಬಲಿಪಶುವಾಗಿ ಭಾರತಕ್ಕೆ ಬಂದು ಆಶ್ರಯ ಪಡೆದ ಜನರನ್ನು ಅಪಹಾಸ್ಯಕ್ಕೆ ಒಳಪಡಿಸುವ ಕೆಲಸವನ್ನು ಮಮತಾ ಬಿಟ್ಟುಬಿಡಬೇಕು’ ಎಂದರು.

‘ಆಶ್ರಯ ಬಯಸಿ ಭಾರತಕ್ಕೆ ಬಂದವರ ರಕ್ಷಣೆಗಾಗಿ ತಿದ್ದುಪಡಿ ಮಸೂದೆ ತರಲು ಮೋದಿ ನೇತೃತ್ವದ ಸರ್ಕಾರ ತೀರ್ಮಾನಿಸಿದೆ. ಇದಾದ ಬಳಿಕ, ಭಾರತದ ಸಾಮಾನ್ಯ ಪ್ರಜೆಗೆ ಲಭಿಸುವ ಎಲ್ಲಾ ಅಧಿಕಾರ, ಸೌಲಭ್ಯಗಳು ಇಂಥ ವಲಸಿಗರಿಗೂ ಲಭಿಸಲಿವೆ. ಈ ದೇಶದ ಪ್ರಧಾನಿಯಾಗುವ ಅಧಿಕಾರವು ಸಹ ಅವರಿಗೆ ಲಭಿಸಲಿದೆ ಎಂಬುದನ್ನು ಖಾತರಿಪಡಿಸಲು ನಾನು ಬಂದಿದ್ದೇನೆ’ ಎಂದರು.

‘ರಾಜ್ಯಸಭೆಯಲ್ಲಿ ಗದ್ದಲ ಸೃಷ್ಟಿಸುವ ಮೂಲಕ ಟಿಎಂಸಿಯವರು ಪೌರತ್ವ ತಿದ್ದುಪಡಿ ಮಸೂದೆ ಅಂಗೀಕಾರವಾಗದಂತೆ ನೋಡಿಕೊಂಡರು. ಪರಿಣಾಮವಾಗಿ ಕೆಲವು ಸಮುದಾಯದ ವಲಸಿಗರಿಗೆ ದೇಶದ ಪೌರತ್ವ ಪಡೆಯಲು ಸಾಧ್ಯವಾಗಲಿಲ್ಲ. ಇಷ್ಟೊಂದು ಸಂಖ್ಯೆಯ ಅಕ್ರಮ ವಲಸಿಗರನ್ನು ಹೊಂದಿರುವ ಯಾವ ದೇಶಕ್ಕೂ ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯವಾಗಲಾರದು. ಅಕ್ರಮ ವಲಸಿಗರ ಸಮಸ್ಯೆಯನ್ನು ಶೀಘ್ರ ಪರಿಹರಿಸದಿದ್ದರೆ ದೇಶಕ್ಕೆ ಮತ್ತು ಪಶ್ಚಿಮ ಬಂಗಾಳಕ್ಕೆ ಅಪಾಯ ತಪ್ಪಿದ್ದಲ್ಲ’ ಎಂದು ಶಾ ಹೇಳಿದರು.

* ಎನ್‌ಆರ್‌ಸಿ ಜಾರಿ ಮಾಡಿದರೆ ಹಿಂದೂ ನಿರಾಶ್ರಿತರು ದೇಶ ಬಿಡಬೇಕಾದೀತು ಎನ್ನುವ ಮೂಲಕ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜನರ ಹಾದಿತಪ್ಪಿಸುತ್ತಿದ್ದಾರೆ

ಅಮಿತ್‌ ಶಾ, ಗೃಹಸಚಿವ

ಅಕ್ರಮ ವಲಸಿಗರ ಪತ್ತೆಗೆ ಸೂಚನೆ

ಲಖನೌ (ಪಿಟಿಐ): ಬಾಂಗ್ಲಾದೇಶದಿಂದ ಅಕ್ರಮವಾಗಿ ಬಂದು ರಾಜ್ಯದಲ್ಲಿ ನೆಲೆಸಿರುವವರನ್ನು ಪತ್ತೆಮಾಡುವ ಅಭಿಯಾನ ಆರಂಭಿಸುವಂತೆ ಉತ್ತರಪ್ರದೇಶದ ಡಿಜಿಪಿ, ಒ.ಪಿ. ಸಿಂಗ್‌ ಅವರು ಮಂಗಳವಾರ ಎಲ್ಲಾ ಜಿಲ್ಲೆಗಳ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಅಸ್ಸಾಂನಲ್ಲಿ ಎನ್‌ಆರ್‌ಸಿ ಜಾರಿಮಾಡಿದ ಬೆನ್ನಲ್ಲೇ ಉತ್ತರಪ್ರದೇಶದಲ್ಲಿ ಈ ಬೆಳವಣಿಗೆ ನಡೆದಿದೆ.

ಈ ಬಗ್ಗೆ ಜಿಲ್ಲಾ ಪೊಲೀಸ್‌ ಮುಖ್ಯಸ್ಥರಿಗೆ ಪತ್ರ ರವಾನಿಸಿರುವ ಸಿಂಗ್‌, ‘ಬಾಂಗ್ಲಾದೇಶದಿಂದ ಅಕ್ರಮವಾಗಿ ವಲಸೆ ಬಂದಿರುವ ಅನೇಕ ಜನರು ರಾಜ್ಯದಲ್ಲಿ ವಾಸಿಸುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದೆ. ಅಂಥವರಲ್ಲಿ ಕೆಲವರು ನಾಪತ್ತೆಯಾಗಿದ್ದಾರೆ. ರಾಜ್ಯದ ಆಂತರಿಕ ಭದ್ರತಾ ವ್ಯವಸ್ಥೆಯನ್ನು ಗಟ್ಟಿಗೊಳಿಸುವ ಉದ್ದೇಶದಿಂದ ಅಕ್ರಮ ವಲಸಿಗರನ್ನು ಗುರುತಿಸುವುದು ಅಗತ್ಯವಾಗಿದೆ. ರೈಲು, ಬಸ್‌ ನಿಲ್ದಾಣಗಳು, ಹೊಸ ಕಾಲೊನಿಗಳು, ರಸ್ತೆ ಬದಿ.. ಹೀಗೆ ಬಾಂಗ್ಲಾದೇಶಿಯರು ಮತ್ತು ಅಕ್ರಮವಾಗಿ ಬಂದಿರುವ ವಿದೇಶಿಯರು ನೆಲೆ ಕಂಡುಕೊಳ್ಳಬಹುದಾದ ಎಲ್ಲಾ ಪ್ರದೇಶಗಳಲ್ಲೂ ಪರಿಶೀಲನೆ ನಡೆಸಬೇಕು. ಪರಿಶೀಲನಾ ಪ್ರಕ್ರಿಯೆಯನ್ನು ವಿಡಿಯೊ ದಾಖಲೀಕರಣ ಮಾಡಬೇಕು ಎಂದು ಸೂಚಿಸಿದ್ದಾರೆ.

‘ವಿಚಾರಣೆಯ ಸಂದರ್ಭದಲ್ಲಿ ಯಾರಾದರೂ ತಾವು ಬೇರೆ ಜಿಲ್ಲೆ ಅಥವಾ ಬೇರೆ ರಾಜ್ಯದವರು ಎಂದು ಹೇಳಿಕೊಂಡರೆ ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು. ರೇಷನ್‌ ಕಾರ್ಡ್‌, ಮತದಾರರ ಗುರುತಿನ ಚೀಟಿ, ವಾಹನ ಚಾಲನಾ ಪರವಾನಗಿ, ಪಾಸ್‌ಪೋರ್ಟ್‌ ಮುಂತಾಗಿ ತಮ್ಮ ವಾಸ್ತವ್ಯವನ್ನು ಕಾನೂನುಬದ್ಧಗೊಳಿಸಲು ಅವರು ಯಾವುದೇ ದಾಖಲೆ ನೀಡಿದರೂ ಅದನ್ನು ಪರಿಶೀಲನೆಗೆ ಒಳಪಡಿಸಬೇಕು’ ಎಂದು ಸೂಚಿಸಲಾಗಿದೆ.

ಡಿಜಿಪಿ ಅವರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಬರೆದ ಈ ಪತ್ರದ ಪ್ರತಿಯನ್ನು ಮಾಧ್ಯಮಗಳಿಗೂ ಬಿಡುಗಡೆ ಮಾಡಲಾಗಿದೆ.

Post Comments (+)