ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಹಾರ: ಒಂದೇ ಕಲ್ಲಿಗೆ ಮೂರು ಹಕ್ಕಿ ಹೊಡೆದ 'ನಿತೀಶ್'

ಎನ್‌ಆರ್‌ಸಿ, ಎನ್‌ಪಿಆರ್‌ ವಿರುದ್ಧ ನಿರ್ಣಯಗಳಿಗೆ ಬಿಹಾರ ವಿಧಾನಸಭೆ ಅನುಮೋದನೆ
Last Updated 26 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಪಟ್ನಾ: ಮಂಗಳವಾರ ಮಧ್ಯಾಹ್ನ 1.30ರ ಸಮಯ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ವಿಧಾನಸಭೆಯ ತಮ್ಮ ಕಚೇರಿಯಲ್ಲಿ ಇದ್ದರು. ಪ್ರತಿಪಕ್ಷ ನಾಯಕ ತೇಜಸ್ವಿ ಯಾದವ್ ಅವರ ಬೆಂಬಲಿಗನೊಬ್ಬ ಕಚೇರಿಗೆ ಅಡಿಯಿಟ್ಟ. ಲಾಲು ಪ್ರಸಾದ್ ಅವರ ಮಗ ತಮ್ಮ ಜೊತೆ ಮಾತನಾಡಲು ಉದ್ದೇಶಿಸಿದ್ದಾರೆ ಎಂಬ ಸಂದೇಶವನ್ನು ಆತ ಹೊತ್ತುತಂದಿದ್ದ. ಕ್ಷಣಾರ್ಧದಲ್ಲಿ ನಿತೀಶ್ ಇದಕ್ಕೆ ಒಪ್ಪಿಕೊಂಡರು.

1.52ಕ್ಕೆ ನಿತೀಶ್ ಕಚೇರಿಯಲ್ಲಿ ತೇಜಸ್ವಿ ಹಾಜರಿದ್ದರು. ಮಹಾಮೈತ್ರಿಕೂಟ ಪತನದ ಮೂರು ವರ್ಷಗಳ ಬಳಿಕ ಉಭಯ ಮುಖಂಡರು ಭೇಟಿಯಾದರು. ‘ಬಿಹಾರದಲ್ಲಿ ಎನ್‌ಆರ್‌ಸಿ ಜಾರಿ ಮಾಡುವುದಿಲ್ಲ ಎಂದು ಈಗಾಗಲೇ ಘೋಷಿಸಿದ್ದೀರಿ. ಈ ಸಂಬಂಧ ನಿರ್ಣಯ ಪಾಸು ಮಾಡಿದರೆ, ವಿವಾದ ಇರುವುದಿಲ್ಲ’ ಎಂಬ ಪ್ರಸ್ತಾವವನ್ನು ನಿತೀಶ್ ಎದುರು ತೇಜಸ್ವಿ ಇಟ್ಟರು ಎನ್ನಲಾಗಿದೆ. ಎನ್‌ಆರ್‌ಸಿ ಜೊತೆ ಎನ್‌ಪಿಆರ್‌ ವಿರುದ್ಧ ನಿರ್ಣಯವನ್ನು ಅನುಮೋದಿಸಲು ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಯಿತು.

ನಿತೀಶ್ ಹಾಗೂ ತೇಜಸ್ವಿ ನಡುವಿನ ಸಭೆಯ ಬಗ್ಗೆ ಬಿಜೆಪಿ ಸದಸ್ಯರಿಗೆ ಕಿಂಚಿತ್ ಸುಳಿವು ಕೂಡ ಇರಲಿಲ್ಲ. ಮಧ್ಯಾಹ್ನದ ಊಟದ ಬಳಿಕ ವಿಧಾನಸಭೆ ಕಲಾಪ ಪುನರಾರಂಭಗೊಂಡಿತು. ಮಧ್ಯಾಹ್ನ 2.50ರ ವೇಳೆಗೆ ಎನ್‌ಪಿಆರ್‌ ಕುರಿತ ನಿರ್ಣಯ ಸರ್ವಾನುಮತದಿಂದ ಅಂಗೀಕಾರ ಪಡೆಯಿತು. ಬಿಜೆಪಿ ಸದಸ್ಯರು ಇದನ್ನು ವಿರೋಧಿಸಿದರು. ‘ಎನ್‌ಪಿಆರ್‌ ನಿರ್ಣಯದ ಬಗ್ಗೆ ನಮಗೆ ಮಾಹಿತಿ ಇತ್ತು, ಆದರೆ ಎನ್‌ಆರ್‌ಸಿ ಬಗ್ಗೆ ಇರಲಿಲ್ಲ’ ಎಂದು ಸದನಲ್ಲಿ ಬಿಜೆಪಿ ನಾಯಕ ಹಾಗೂ ಸಚಿವ ಪ್ರೇಮ್ ಕುಮಾರ್ ಹೇಳಿದರು.

ಮತ್ತೊಂದು ತಂತ್ರ ಅನುಸರಿಸಿದ ನಿತೀಶ್, ಉಪಮುಖ್ಯಮಂತ್ರಿ ಸುಶೀಲ್ ಮೋದಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎನ್‌ಪಿಆರ್‌ ದಾಳ ಪ್ರಯೋಗಿಸಿದರು. ಎನ್‌ಪಿಆರ್‌ ಈಗಿರುವ ಮಾದರಿಯ ಬದಲಾಗಿ, 2010ರ ಮಾದರಿಯನ್ನು ರಾಜ್ಯದಲ್ಲಿ ಜಾರಿಗೊಳಿಸಲು ನಿರ್ಣಯಿಸಿದರು.

ಈ ನಿರ್ಣಯದ ಮೂಲಕ ತಾವು ಅಧಿಕಾರದಲ್ಲಿ ಇರುವವರೆಗೆ ಎನ್‌ಆರ್‌ಸಿ, ಎನ್‌ಪಿಆರ್ ಅಥವಾ ಸಿಎಎ ಬಗ್ಗೆ ಚಿಂತಿಸಬೇಕಿಲ್ಲ ಎಂದು ರಾಜ್ಯದ ಅಲ್ಪಸಂಖ್ಯಾತರಿಗೆ ನಿತೀಶ್ ಸ್ಪಷ್ಟ ಸಂದೇಶ ರವಾನಿಸಿದರು. ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಸಲಹೆಗಳನ್ನು ಪರಿಗಣಿಸಿ, ಅವರ ಜತೆಗಿನ ಸಂಬಂಧ ಸುಧಾರಿಸಿದರು. ಮೂರನೆಯದಾಗಿ, ಎನ್‌ಆರ್‌ಸಿ, ಸಿಎಎ ವಿರುದ್ಧವಾಗಿ ರಾಜ್ಯದಾದ್ಯಂತ ಜಾಥಾ ನಡೆಸುತ್ತಿರುವ ಸಿಪಿಐ ಮುಖಂಡ ಕನ್ಹಯ್ಯ ಕುಮಾರ್‌ಗೂ ಪೆಟ್ಟು ಕೊಟ್ಟರು.

‘ಗುರುವಾರ ಆಯೋಜನೆಗೊಂಡಿರುವ ‘ಸಂವಿಧಾನ ಉಳಿಸಿ, ಪೌರತ್ವ ಉಳಿಸಿ’ ರ‍್ಯಾಲಿಯಲ್ಲಿ ವಿರೋಧಿಸಲು ಎಡಪಂಥೀಯ ನಾಯಕರಿಗೆ ಏನೂ ಉಳಿದಿಲ್ಲ’ ಎಂದು ರಾಜಕೀಯ ವಿಶ್ಲೇಷಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

‘ನಿರ್ಣಯ ಪರಿಶೀಲನೆಯಲ್ಲಿ’
ತಿರುಚಿರಾಪಳ್ಳಿ (ಪಿಟಿಐ): ಎನ್‌ಆರ್‌ಸಿ ವಿರುದ್ಧ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸುವಂತಹ ಅಂಶ ಪರಿಶೀಲನೆಯಲ್ಲಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಹೇಳಿದ್ದಾರೆ.

ಬಿಹಾರ ವಿಧಾನಸಭೆಯಲ್ಲಿ ಎನ್‌ಆರ್‌ಸಿ ವಿರುದ್ಧ ನಿರ್ಣಯ ಅಂಗೀಕರಿಸಲಾಗಿದೆ. ಅದೇ ರೀತಿ ತಮಿಳುನಾಡಿನಲ್ಲಿಯೂ ನಿರ್ಣಯ ಅಂಗೀಕರಿಸುವ ಪ್ರಸ್ತಾವ ಇದೆಯೇ ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪಳನಿಸ್ವಾಮಿ ಹೀಗೆ ಪ್ರತಿಕ್ರಿಯೆ ನೀಡಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆಯಿಂದ (ಸಿಎಎ) ತಮಿಳುನಾಡಿಗೆ ತೊಂದರೆಯಾಗಬಹುದು ಎಂದು ಅವರು ಈ ಹಿಂದೆ ಹೇಳಿಕೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT