ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿಯಾಣ: ಬಿಜೆಪಿ ಜತೆ ಎಸ್‌ಎಡಿ ಮೈತ್ರಿ ಇಲ್ಲ

Last Updated 17 ಅಕ್ಟೋಬರ್ 2019, 10:02 IST
ಅಕ್ಷರ ಗಾತ್ರ

ಚಂಡಿಗಡ: ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜತೆಗೆ ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಮೈತ್ರಿ ಮಾಡಿಕೊಳ್ಳುವುದಿಲ್ಲ. ಮೈತ್ರಿ ಮಾತುಕತೆ ಆರಂಭವಾಗಿತ್ತು. ಆದರೆ, ಈ ರಾಜ್ಯದಲ್ಲಿ ಏಕಾಂಗಿಯಾಗಿಯೇ ಸ್ಪರ್ಧಿಸಲು ಎಸ್ಎಡಿ ನಿರ್ಧರಿಸಿದೆ.

2014ರ ವಿಧಾನಸಭೆ ಚುನಾವಣೆಯಲ್ಲಿ ಎಸ್‌ಎಡಿ ಟಿಕೆಟ್‌ನಲ್ಲಿ ಗೆದ್ದಿದ್ದ ಬಾಲ್‌ಕೌರ್‌ ಸಿಂಗ್‌ ಅವರನ್ನು ಬಿಜೆಪಿ ತನ್ನ ತೆಕ್ಕೆಗೆ ಸೇರಿಸಿಕೊಂಡದ್ದು ಎಸ್‌ಎಡಿಯ ಆಕ್ರೋಶಕ್ಕೆ ಕಾರಣವಾಗಿದೆ.

ಸಿಂಗ್‌ ಅವರು ದೆಹಲಿಯಲ್ಲಿ ಬಿಜೆಪಿ ಸೇರಿದ ತಕ್ಷಣವೇ ಎಸ್‌ಎಡಿ ಮುಖಂಡರು ಸಭೆ ಸೇರಿ, ಹರಿಯಾಣದಲ್ಲಿ ಬಿಜೆಪಿ ಜತೆಗೆ ಮೈತ್ರಿ ಇಲ್ಲ ಎಂಬುದನ್ನು ಘೋಷಿಸಿದರು.

ಬಿಜೆಪಿ ಮತ್ತು ಎಸ್‌ಎಡಿ ಪಂಜಾಬ್‌ನಲ್ಲಿ ದಶಕಗಳಿಂದ ಮಿತ್ರ ಪಕ್ಷಗಳಾಗಿದ್ದವು. ಆದರೆ, ಹರಿಯಾಣಕ್ಕೂ ಈ ಮೈತ್ರಿಯನ್ನು ವಿಸ್ತರಿಸುವ ಪ್ರಯತ್ನ ಈಗ ವಿಫಲವಾಗಿದೆ.

‘ಬಿಜೆಪಿ ಮೈತ್ರಿ ಧರ್ಮವನ್ನು ಉಲ್ಲಂಘಿಸಿದೆ. ನಮ್ಮ ಪಕ್ಷದ ಟಿಕೆಟ್‌ನಲ್ಲಿ ಗೆದ್ದವರನ್ನು ಬಿಜೆಪಿಗೆ ಸೇರಿಸಿಕೊಂಡದ್ದು ಸರಿಯಲ್ಲ’ ಎಂದು ಎಸ್‌ಎಡಿ ಪ್ರಧಾನ ಕಾರ್ಯದರ್ಶಿ ದಲ್ಜಿತ್‌ ಸಿಂಗ್‌ ಚೀಮಾ ಹೇಳಿದ್ದಾರೆ.

ಈ ಬೆಳವಣಿಗೆಯು ಪಂಜಾಬ್‌ನಲ್ಲಿ ಈ ಎರಡು ಪಕ್ಷಗಳ ಮೈತ್ರಿಯ ಮೇಲೆಯೂ ಪರಿಣಾಮ ಬೀರುವ ಸಾಧ್ಯತೆ ಇದೆ. ಪಂಜಾಬ್‌ನ ಮೈತ್ರಿಯಲ್ಲಿ ಎಸ್‌ಎಡಿಯ ಮುಖ್ಯಪಕ್ಷ.

ಚೌತಾಲಾ ಕುಟುಂಬ ನಾಯಕತ್ವದ ಇಂಡಿಯನ್‌ ನ್ಯಾಷನಲ್‌ ಲೋಕದಳ (ಐಎನ್‌ಎಲ್‌ಡಿ) ಜತೆಗಿನ ಮೈತ್ರಿಗೇ ಈವರೆಗೆ ಎಸ್‌ಎಡಿ ಆದ್ಯತೆ ಕೊಡುತ್ತಿತ್ತು. ಆದರೆ, ಎಸ್‌ವೈಎಲ್‌ (ಸತಲೆಜ್‌–ಯಮುನಾ‌ ಕಾಲುವೆ) ವಿವಾದದಲ್ಲಿ ತಳೆದ ವ್ಯತಿರಿಕ್ತ ನಿಲುವಿನಿಂದಾಗಿ ಈ ಪಕ್ಷಗಳು ಸಂಬಂಧ ಕಡಿದುಕೊಂಡಿವೆ.

ಎಸ್‌ಎಡಿ ಅಧ್ಯಕ್ಷ ಸುಖಬೀರ್‌ ಸಿಂಗ್‌ ಬಾದಲ್‌ ಅವರು ಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಇತ್ತೀಚೆಗೆ ಭೇಟಿಯಾಗಿ ಮೈತ್ರಿ ಬಗ್ಗೆ ಚರ್ಚಿಸಿದ್ದರು. ಸೀಟು ಹಂಚಿಕೆಯಲ್ಲಿನ ಭಿನ್ನಮತವೂ ಇತ್ತು. ಹರಿಯಾಣದಲ್ಲಿ ಒಟ್ಟು 90 ಕ್ಷೇತ್ರಗಳಿವೆ. ಎಸ್ಎಡಿ 20 ಕ್ಷೇತ್ರಗಳಿಗೆ ಬೇಡಿಕೆ ಇರಿಸಿತ್ತು. ಆದರೆ, ಎರಡು ಕ್ಷೇತ್ರಗಳನ್ನು ಬಿಟ್ಟುಕೊಡಲು ಸಿದ್ಧ ಎಂದು ಬಿಜೆಪಿ ಹೇಳಿತ್ತು.

25 ಕ್ಷೇತ್ರಗಳಲ್ಲಿ ತನ್ನ ಅಸ್ತಿತ್ವ ಇದೆ. ಈ ಪ್ರದೇಶದಲ್ಲಿ ಸಿಖ್‌ ಮತದಾರರ ಸಂಖ್ಯೆ ಗಣನೀಯವಾಗಿದ್ದು ಅವರೇ ನಿರ್ಣಾಯಕ ಎಂದು ಎಸ್‌ಎಡಿ ಹೇಳುತ್ತಿದೆ. 1984ರ ಸಿಖ್‌ ವಿರೋಧಿ ಗಲಭೆ ಪ್ರಕರಣಗಳ ಮರುತನಿಖೆಗೆ ಆದೇಶ ನೀಡಿರುವುದು ಕೂಡ ತನಗೆ ಅನುಕೂಲಕರ ಎಂಬುದು ಎಸ್‌ಎಡಿ ನಿಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT