ನನ್ನನ್ನು ನಿಂದಿಸುವುದು ಬಿಟ್ಟರೆ ವಿಪಕ್ಷಗಳಿಗೆ ಬೇರೆ ಕೆಲಸ ಇಲ್ಲ: ಮೋದಿ

ಗುರುವಾರ , ಮಾರ್ಚ್ 21, 2019
27 °C

ನನ್ನನ್ನು ನಿಂದಿಸುವುದು ಬಿಟ್ಟರೆ ವಿಪಕ್ಷಗಳಿಗೆ ಬೇರೆ ಕೆಲಸ ಇಲ್ಲ: ಮೋದಿ

Published:
Updated:

ಪಟ್ನಾ: ಬಿಹಾರದಲ್ಲಿ ನಡೆಯುತ್ತಿರುವ ಎನ್‍ಡಿಎ ಸಂಕಲ್ಪ ರ್‍ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಬಿಹಾರದಲ್ಲಿ ಮತ್ತು ಕೇಂದ್ರದಲ್ಲಿ ಎನ್‍ಡಿಎ ಸರ್ಕಾರವಿರುವುದರಿಂದ ಇಲ್ಲಿ ಅಭಿವೃದ್ಧಿ ಕಾರ್ಯಗಳು ವೇಗವಾಗಿ ನಡೆಯುತ್ತಿವೆ. ಮೂಲಸೌಕರ್ಯಗಳ ಅಭಿವೃದ್ದಿಗೆ ನಮ್ಮ ಆದ್ಯತೆ. ಬಿಹಾರದಲ್ಲಿರುವ ಎಲ್ಲ ಸ್ತರದ ಜನರಿಗೂ ಉತ್ತಮ ಸೌಲಭ್ಯ ಲಭಿಸುತ್ತಿದೆ ಎಂಬುದನ್ನು ಎನ್‍ಡಿಎ ಸರ್ಕಾರ ಖಚಿತ ಮಾಡಲು ಬಯಸುತ್ತಿದೆ ಎಂದಿದ್ದಾರೆ.

ಮೋದಿ ಭಾಷಣದ ಮುಖ್ಯಾಂಶಗಳು

* ವಿಪಕ್ಷಗಳು ನನ್ನನ್ನು ಅಧಿಕಾರದಿಂದ ಕೆಳಗಿಳಿಸಲು ಬಯಸುತ್ತಿವೆ. ಆದರೆ ನಾನು ಭಯೋತ್ಪಾದನೆ ನಿರ್ಮೂಲನೆ ಮಾಡಲು ಯತ್ನಿಸುತ್ತಿದ್ದೇನೆ. ಅವರಿಗೆ ನನ್ನನ್ನು ನಿಂದಿಸುವುದು ಬಿಟ್ಟರೆ ಬೇರೆ ಕೆಲಸವಿಲ್ಲ. ಭಯೋತ್ಪಾದನೆ ನಿರ್ಮೂಲನ ಮಾಡಲು ಕೈ ಜೋಡಿಸಿ ಎಂದು ನಾನು ಹೇಳುತ್ತೇನೆ.  ಭಯೋತ್ಪಾದನೆ ನಿರ್ಮೂಲನೆ ಆಗುವುದು ಬೇಡವೆ?  ಆದರೆ ನನ್ನನ್ನು ಅಧಿಕಾರದಿಂದ ಕೆಳಗಿಳಿಸುವುದೇ ಅವರ ಆದ್ಯತೆಯಾಗಿ ಬಿಟ್ಟಿದೆ. ಭಯೋತ್ಪಾದನೆ ನಿರ್ಮೂಲನೆಯೇ ನನ್ನ ಆದ್ಯತೆ.

*  ದೇಶದಲ್ಲಿರುವ ಬಡತನ ನಿರ್ಮೂಲನೆಗಾಗಿ ಕೈಜೋಡಿಸಿ ಎಂದರೆ ವಿಪಕ್ಷಗಳು ನನ್ನನ್ನು ಅಧಿಕಾರದಿಂದ ಕೆಳಗಿಳಿಸಲು ಬಯಸುತ್ತವೆ. ಭ್ರಷ್ಟಾಚಾರ ಮತ್ತು ಕಪ್ಪುಹಣ ಮುಕ್ತ ಭಾರತವನ್ನಾಗಿಸಲು ಕೈಜೋಡಿಸಿ ಎಂದಾಗ, ಅವರು ನನ್ನನ್ನು ಅಧಿಕಾರದಿಂದ ಕೆಳಗಿಳಿಸಲು ಬಯಸುತ್ತಾರೆ. ಬನ್ನಿ, ಯುವ ಜನಾಂಗಕ್ಕೆ ಹೆಚ್ಚು ಅವಕಾಶವನ್ನು ನೀಡುವುದಕ್ಕೆ, ಅಪೌಷ್ಟಿಕತೆ ವಿರುದ್ಧ ಹೋರಾಟಕ್ಕೆ ಕೈ ಜೋಡಿಸೋಣ ಎಂದು ಮೋದಿ ಕರೆ ನೀಡಿದ್ದಾರೆ

* ಭಯೋತ್ಪಾದನೆಯ ವಿರುದ್ಧ ಮಾತನಾಡಬೇಕಾಗಿ ಬಂದಾಗ ವಿಪಕ್ಷದಲ್ಲಿರುವ 21 ಪಕ್ಷಗಳೂ ದೆಹಲಿಗೆ ಬಂದು ಎನ್‍ಡಿಎ ವಿರುದ್ದ ಪ್ರತಿಭಟನೆಗೆ ಮುಂದಾದವು. ಭಾರತೀಯರು ಇದನ್ನು ಎಂದಿಗೂ ಕ್ಷಮಿಸುವುದಿಲ್ಲ. ಭಾರತೀಯ ಸೇನಾಪಡೆಯನ್ನು ಬೆಂಬಲಿಸುವ ಬದಲು ವಿಪಕ್ಷಗಳು ಮಾಡುವ, ಹೇಳುವ ಮಾತುಗಳು ಶತ್ರುಗಳಿಗೆ ಖುಷಿಕೊಡುವಂತಿತ್ತು. ಪಾಕಿಸ್ತಾನದಲ್ಲಿರುವ ಜೈಷೆ ಉಗ್ರ ಶಿಬಿರಗಳ ಮೇಲೆ ವಾಯುಪಡೆ ವಾಯುದಾಳಿ ನಡೆಸಿದಾಗ ಯೋಧರ ಪರವಾಗಿ ನಿಲ್ಲುವ ಬದಲು ವಿಪಕ್ಷಗಳು ದಾಳಿಯ ದಾಖಲೆ ಕೇಳಿದವು.

* ಸೌದಿ ದೊರೆ ಜತೆ ಮಾತನಾಡಿದ ನಂತರ ಹಜ್‍ಗಿರುವ ಭಾರತದ ಕೋಟಾ ಹೆಚ್ಚಳವಾಯಿತು. ಬೇರೆ ಯಾವ ರಾಷ್ಟ್ರಕ್ಕೂ ಈ ರೀತಿಯ ಗೌರವ ಸಿಕ್ಕಿಲ್ಲ.  ವಿವಿಧ ಆರೋಪಗಳಲ್ಲಿ ಸೌದಿ ಅರೇಬಿಯಾದ ಜೈಲಿನಲ್ಲಿರುವ 850 ಕೈದಿಗಳನ್ನು ಬಿಡುಗಡೆ ಮಾಡಲು ಒಪ್ಪಿಕೊಂಡ ಸೌದಿ ಅರೇಬಿಯಾದ ದೊರೆಗೆ ನಾನು ಧನ್ಯವಾದಗಳನ್ನು ಹೇಳುತ್ತೇನೆ.

* ಪಶು ಆಹಾರದ ವಿಷಯದಲ್ಲಿ ಏನೆಲ್ಲಾ ನಡೆಯಿತು ಎಂಬುದು ಬಿಹಾರದ ಜನರಿಗೆಲ್ಲರಿಗೂ ಗೊತ್ತು. ದಶಕಗಳಿಂದ ನಮ್ಮ ದೇಶದಲ್ಲಿದ್ದ ಭ್ರಷ್ಟಾಚಾರ ಮತ್ತು ಮಧ್ಯಸ್ಥಿಕೆಯ ಸಂಪ್ರದಾಯವನ್ನು ನಿಲ್ಲಿಸಲು ಧೈರ್ಯ ಮಾಡದ್ದೇ ನಮ್ಮ ಸರ್ಕಾರ.

ಇದನ್ನೂ ಓದಿ:  ದಶಕದ ನಂತರ ವೇದಿಕೆ ಹಂಚಿಕೊಂಡ ನರೇಂದ್ರ ಮೋದಿ, ನಿತೀಶ್ ಕುಮಾರ್ 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !