ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನದಿಂದ ಸ್ಫೋಟಕ ಹೊತ್ತುತಂದ ಡ್ರೋನ್‌!

ಖಲಿಸ್ತಾನ್ ಜಿಂದಾಬಾದ್‌ನ ನಾಲ್ವರ ಬಂಧನ, ಶಸ್ತ್ರಾಸ್ತ್ರ ಜಪ್ತಿ
Last Updated 25 ಸೆಪ್ಟೆಂಬರ್ 2019, 19:46 IST
ಅಕ್ಷರ ಗಾತ್ರ

ಚಂಡೀಗಡ: ಜಿಪಿಎಸ್ ಸೌಲಭ್ಯವಿರುವ, 10 ಕೆ.ಜಿ ತೂಕದ ಸಾಮಗ್ರಿ ಹೊರಬಲ್ಲ ಸಾಮರ್ಥ್ಯದ ಡ್ರೋನ್‌ಗಳು ಪಾಕಿಸ್ತಾನದಿಂದ ಭಾರತದ ಪಂಜಾಬ್ ಗಡಿಗೆ ಶಸ್ತ್ರಾಸ್ತ್ರ ಹಾಗೂ ಸ್ಫೋಟಕಗಳನ್ನು ಏಳೆಂಟು ಬಾರಿ ಹೊತ್ತುತಂದಿವೆ ಎಂಬ ಅಂಶ ಪೊಲೀಸರ ತನಿಖೆಯಿಂದ ಬುಧವಾರ ತಿಳಿದುಬಂದಿದೆ.

ಶಸ್ತ್ರಾಸ್ತ್ರ ಹಾಗೂ ಸ್ಫೋಟಕಗಳನ್ನು ಡ್ರೋನ್‌ಗಳ ಮೂಲಕ ಪಂಜಾಬ್‌ನಲ್ಲಿ ಇಳಿಸಿದ ಘಟನೆ ಇದೇ ಮೊದಲು ಎಂದು ಅಧಿಕಾರಿಗಳು ಹೇಳಿದ್ದಾರೆ. ಅರ್ಧ ಸುಟ್ಟಿದ್ದ ಡ್ರೋನ್, ಶಸ್ತ್ರಾಸ್ತ್ರ ಹಾಗೂ ನಕಲಿ ನೋಟುಗಳನ್ನು ತರನ್‌ತಾರನ್ ಜಿಲ್ಲೆಯಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.

ಪಾಕಿಸ್ತಾನ ಹಾಗೂ ಜರ್ಮನಿಯಲ್ಲಿ ನೆಲೆಯಾಗಿರುವ ಸಂಘಟನೆಯ ಬೆಂಬಲ ಹೊಂದಿರುವ ‘ಖಲಿಸ್ತಾನ್ ಜಿಂದಾಬಾದ್‌’ ಗುಂಪಿನ (ಕೆಝಡ್ಎಫ್) ಭಯೋತ್ಪಾದನಾ ಸಂಚನ್ನು ಬಯಲು ಮಾಡಿದ್ದಾಗಿ ಪಂಜಾಬ್ ಪೊಲೀಸರು ಭಾನುವಾರ ಹೇಳಿಕೊಂಡಿದ್ದರು. ಪಂಜಾಬ್ ಹಾಗೂ ನೆರೆಯ ರಾಜ್ಯಗಳಲ್ಲಿ ಸರಣಿ ಭಯೋತ್ಪಾದನಾ ಕೃತ್ಯಗಳನ್ನು ಎಸಗಲು ಸಂಘಟನೆ ಸಂಚು ರೂಪಿಸಿತ್ತು ಎಂದು ಪೊಲೀಸರು ಹೇಳಿದ್ದರು.

ಬಲವಂತ್ ಸಿಂಗ್ ಅಲಿಯಾಸ್ ನಿಹಂಗ್, ಆಕಾಶ್‌ದೀಪ್ ಸಿಂಗ್ ಅಲಿಯಾಸ್ ಆಕಾಶ್ ರಾಂಧವ, ಹರ್ಭಜನ್ ಸಿಂಗ್ ಮತ್ತು ಬಲ್ಬೀರ್ ಸಿಂಗ್ ಎಂಬುವರನ್ನು ತರನ್‌ತಾರನ್‌ನ ಚೋಹಲಾ ಸಾಹಿಬ್ ಗ್ರಾಮದ ಹೊರವಲಯದಲ್ಲಿ ಅದೇ ದಿನ ಬಂಧಿಸಲಾಗಿತ್ತು.

ಅಸ್ಸಾಂನಲ್ಲಿ ಶಸ್ತ್ರಾಸ್ತ್ರ ಪತ್ತೆ:

ಅಸ್ಸಾಂನ ಪಾನ್ಬರಿ ಅರಣ್ಯ ಪ್ರದೇಶದಲ್ಲಿ ಭಾರಿ ಪ್ರಮಾಣದ ಶ್ತ್ರಸ್ತ್ರಾಸ್ತ್ರಗಳನ್ನು ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಖಚಿತ ಮಾಹಿತಿ ಮೇರೆಗೆ ನಡೆಸಿದ ಶೋಧ ಕಾರ್ಯದ ವೇಳೆ ಈ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ. ಶೋಧ ತಂಡದಲ್ಲಿದ್ದ ‘ಜಾರಿ’ ಎಂಬ ನಾಯಿ ಇವುಗಳನ್ನು ಪತ್ತೆ ಮಾಡಿದೆ. 9 ಅತ್ಯಾಧುನಿಕ ರೈಫಲ್‌ಗಳು, 11 ನಾಡಬಂದೂಕುಗಳು ಮತ್ತು ಭಾರಿ ಪ್ರಮಾಣದ ಸ್ಫೋಟಕಗಳು ಪತ್ತೆಯಾಗಿವೆ.

ಏನೇನು ಜಪ್ತಿ?

5 ಎಕೆ–47 ಬಂದೂಕು, 16 ಮ್ಯಾಗಜೀನ್‌, 472 ಸುತ್ತಿನ ಗುಂಡು, ಚೀನಾ ನಿರ್ಮಿತ 4 ಪಿಸ್ತೂಲು, 9 ಗ್ರೆನೇಡ್‌, 5 ಸ್ಯಾಟಲೈಟ್ ಫೋನ್‌ ಮತ್ತು‍ಪೂರಕ ಉಪಕರಣಗಳು, 2 ಮೊಬೈಲ್ ಫೋನ್, 2 ವೈರ್‌ಲೆಸ್ ಉಪಕರಣ, ₹10 ಲಕ್ಷ ಮುಖಬೆಲೆಯ ನಕಲಿ ನೋಟುಗಳು

ಯಾರ ಕೈವಾಡ?

ಕೆಝಡ್ಎಫ್‌ನ ಪಾಕಿಸ್ತಾನ ಮೂಲದ ಮುಖ್ಯಸ್ಥ ರಂಜೀತ್ ಸಿಂಗ್ ಅಲಿಯಾಸ್ ನೀತಾ ಹಾಗೂ ಜರ್ಮನಿ ಮೂಲದ ಆತನ ಸಹಚರ ಗುರುಮೀತ್ ಸಿಂಗ್ ಅಲಿಯಾಸ್ ಬಗ್ಗಾ ಎಂಬುವರು ಈ ಶಸ್ತ್ರಾಸ್ತ್ರ ಸಾಗಣೆಗೆ ಯೋಜನೆ ರೂಪಿಸಿದ್ದರು ಎಂದು ಪಂಜಾಬ್ ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.

ಇದಕ್ಕೆ ಸ್ಥಳೀಯ ಸ್ಲೀಪರ್‌ ಸೆಲ್‌ (ಭೂಗತ ಘಟಕಗಳು) ಸಹಾಯ ಪಡೆದು, ವಿಧ್ವಂಸಕ ಕೃತ್ಯ ಎಸಗಲು ಸ್ಥಳೀಯರ ನೇಮಕಾತಿ ಮಾಡಲಾಗಿತ್ತು ಎನ್ನಲಾಗಿದೆ. ಪ್ರಕರಣವನ್ನು ಎನ್‌ಐಎ ತನಿಖೆಗೆ ವಹಿಸಲು ಪಂಜಾಬ್ ಸರ್ಕಾರ ಈಗಾಗಲೇ ನಿರ್ಧರಿಸಿದೆ.

ಡ್ರೋನ್ ಸುಟ್ಟುಹಾಕಿದ ಆರೋಪಗಳು

ವಿಚಾರಣೆ ವೇಳೆಆರೋಪಿಗಳು ನೀಡಿದ ಮಾಹಿತಿ ಆಧರಿಸಿ, ಚಂಬಲ್ ಪ್ರದೇಶದ ಗೋದಾಮಿನಲ್ಲಿ ಅರ್ಧಸುಟ್ಟ ಡ್ರೋನ್ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

‘ಭೂಸೆ ಗ್ರಾಮದಲ್ಲಿ ಶಸ್ತ್ರಾಸ್ತ್ರ ಇಳಿಸಿದ ಬಳಿಕ ಡ್ರೋನ್‌ ಪಾಕಿಸ್ತಾನಕ್ಕೆ ಹಿಂತಿರುಗಲಿಲ್ಲ. ಹಾದಿ ಮಧ್ಯೆಯೇ ಅದು ನೆಲಕ್ಕೆ ಅಪ್ಪಳಿಸಿತ್ತು. ಡ್ರೋನ್‌ ಪತನವಾಗಿರುವ ಸ್ಥಳದ ಲೊಕೇಷನ್ ಅನ್ನು ಆರೋಪಿಗಳಿಗೆ ಕಳುಹಿಸಲಾಗಿತ್ತು. ಆರೋಪಿಗಳು ಅದನ್ನು ಪತ್ತೆ ಮಾಡಿ, ಸುಡಲು ಪ್ರಯತ್ನಿಸಿದ್ದರು. ಅದು ಪೂರ್ತಿ ಸುಟ್ಟುಹೋಗದ ಕಾರಣ ಅದನ್ನು ಗೋದಾಮಿನಲ್ಲಿ ಬಚ್ಚಿಟ್ಟಿದ್ದರು’ ಎಂದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಿಧಿವಿಜ್ಞಾನ ತಜ್ಞರ ನೆರವಿನಿಂದ ಡ್ರೋನ್‌ನ ಜಿಪಿಎಸ್ ಆಂಟೆನಾ ಸೇರಿದಂತೆ ಕೆಲವು ಭಾಗಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಇನ್ನೂ ಕೆಲವು ಭಾಗಗಳನ್ನು ಗುರುದ್ವಾರ ಬಾಬಾ ಬುದ್ಧ ಸಾಹಿಬ್ ಸಮೀಪದ ಕಾಲುವೆಗೆ ಎಸೆದಿದ್ದಾರೆ. ಅವುಗಳ ಪತ್ತೆಗೆ ಈಜುಗಾರರನ್ನು ನೇಮಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೇನೆ ಸನ್ನದ್ಧ

ಚೆನ್ನೈ:‘ಯಾವುದೇ ರೀತಿಯ ದಾಳಿಗಳನ್ನು ಎದುರಿಸಲು ನಮ್ಮ ಸೇನೆ ಸನ್ನದ್ಧವಾಗಿದೆ’ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಪಾಕಿಸ್ತಾನದ ಬಾಲಾಕೋಟ್‌ನಲ್ಲಿರುವ ಉಗ್ರರ ತರಬೇತಿ ಕೇಂದ್ರ ಮತ್ತೆ ಕಾರ್ಯಾರಂಭ ಮಾಡಿದೆ ಎಂಬ ವರದಿಯ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಅವರು ಈ ರೀತಿ ಉತ್ತರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT