ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಮ್ರಾನ್ ಖಾನ್ ಪ್ರಧಾನಿಯಾದ ಬಳಿಕ ಹೆಚ್ಚು ಆಕ್ರಮಣಕಾರಿಯಾದ ಪಾಕ್: ಬಿಎಸ್‌ಎಫ್ ಡಿಜಿ

ಹೆಡ್‌ಕಾನ್‌ಸ್ಟೆಬಲ್ ಹತ್ಯೆ ಪ್ರಕರಣದ ಮಾಹಿತಿ ಬಿಚ್ಚಿಟ್ಟ ಕೆ.ಕೆ. ಶರ್ಮಾ
Last Updated 29 ಸೆಪ್ಟೆಂಬರ್ 2018, 11:10 IST
ಅಕ್ಷರ ಗಾತ್ರ

ನವದೆಹಲಿ: ಇಮ್ರಾನ್‌ ಖಾನ್ ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಪಾಕಿಸ್ತಾನದ ಸೇನೆ ಹೆಚ್ಚು ಆಕ್ರಮಣಕಾರಿಯಾಗಿದೆ ಎಂದು ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) ಪ್ರಧಾನ ನಿರ್ದೇಶಕ (ಡಿಜಿ) ಕೆ.ಕೆ. ಶರ್ಮಾ ಹೇಳಿದ್ದಾರೆ.

ಜಮ್ಮು ಸಮೀಪದ ರಾಮಗಢ ಸೆಕ್ಟರ್‌ನಲ್ಲಿ ಪಾಕಿಸ್ತಾನದ ಪಡೆಗಳು ಇತ್ತೀಚೆಗೆ ಬಿಎಸ್‌ಎಫ್ಹೆಡ್‌ಕಾನ್‌ಸ್ಟೆಬಲ್ ನರೇಂದ್ರ ಕುಮಾರ್ ಅವರ ಕತ್ತುಸೀಳಿ ಹತ್ಯೆ ಮಾಡಿ ಮಾಡಿದ್ದವು. ಇದನ್ನು ಉಲ್ಲೇಖಿಸಿದ ಶರ್ಮಾ, ‘ಈ ಘಟನೆ ಇಮ್ರಾನ್ ಪ್ರಧಾನಿಯಾದ ನಂತರ ನಡೆದಿದೆ. ಇದು ಬಿಎಟಿ (ಗಡಿ ಕಾರ್ಯಾಚರಣೆ ತಂಡ) ಕಾರ್ಯಾಚರಣೆ’ ಎಂದು ಹೇಳಿದ್ದಾರೆ.

‘ಗಡಿಯಲ್ಲಿ ಏನೂ ಬದಲಾವಣೆಯಾಗಿಲ್ಲ. ಅಂತರರಾಷ್ಟ್ರೀಯ ಗಡಿಯಲ್ಲಿ ಈ ಹಿಂದೆ ನಡೆಯಂದಂಥ ಬಿಎಟಿ ಕಾರ್ಯಾಚರಣೆಯನ್ನು ನಾವು ಕಾಣುತ್ತಿದ್ದೇವೆ. ಸಾಮಾನ್ಯವಾಗಿ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ಬಿಎಟಿ ಕಾರ್ಯಾಚರಣೆ ನಡೆಯುತ್ತಿತ್ತು. ಈ ಹಿಂದಿನ ದಿನಗಳಿಗೆ ಹೋಲಿಸಿದರೆ ಪಾಕಿಸ್ತಾನದ ಕಡೆಯಿಂದ ಹೆಚ್ಚು ಆಕ್ರಮಣಶೀಲತೆ ಕಂಡುಬರುತ್ತಿದೆ’ ಎಂದು ಅವರು ಹೇಳಿದ್ದಾರೆ.

ಇಂತಹ ಘಟನೆಗಳನ್ನು ತಡೆಯಲು ಮುಂಜಾಗರೂಕತಾ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದೂ ಅವರು ಹೇಳಿದ್ದಾರೆ.

ನರೇಂದ್ರ ಕುಮಾರ್ ಹತ್ಯೆ ಘಟನೆ ಬಗ್ಗೆ ವಿವರಿಸಿದ ಅವರು, ‘ಬೇಲಿಗೆ ಅಡ್ಡಲಾಗಿ ಆಳೆತ್ತರ ಬೆಳೆದಿದ್ದ ಹುಲ್ಲು ಕತ್ತರಿಸುವ ಕಾರ್ಯದಲ್ಲಿ ಗಸ್ತುಪಡೆ ತೊಡಗಿತ್ತು. ಸಾಮಾನ್ಯವಾಗಿ ಇಂತಹ ಕೆಲಸ ಮಾಡುತ್ತಿರುವ ವೇಳೆ ಪಾಕ್ ಪಡೆಗಳು ಗಾಳಿಯಲ್ಲಿ ಗುಂಡುಹಾರಿಸುತ್ತವೆ. ನಾವು ಕೆಲಸದಿಂದ ಹಿಂದೆ ಸರಿದು ಅವರ ಬಳಿ ಮಾತುಕತೆ ನಡೆಸುತ್ತೇವೆ. ನಂತರ ಹುಲ್ಲು ಕತ್ತರಿಸುವ ಕಾರ್ಯ ಪುನರಾರಂಭಗೊಳ್ಳುತ್ತದೆ. ಆದರೆ, ಈ ಬಾರಿ ಅವರು ಗುಂಡಿನ ದಾಳಿ ನಡೆಸಿದರು. ನಮ್ಮ ಯೋಧರು ಹಿಂದೆ ಸರಿದರು. ನಂತರ ಒಬ್ಬ ಯೋಧ ನಾಪತ್ತೆಯಾಗಿರುವುದು ತಿಳಿಯಿತು. ಪರಿಶೀಲಿಸಲು ತೆರಳಿ ನಮ್ಮ ಯೋಧರಿಗೆ, ಕಾಣೆಯಾಗಿರುವ ಯೋಧ ಧರಿಸಿದ್ದ ಹೆಲ್ಮೆಟ್ ಮತ್ತು ಟೋಪಿಪತ್ತೆಯಾಯಿತು. ಜತೆಗೆ, ಗಡಿಯಾಚೆಗಿನ ಕೆಲವು ವ್ಯಕ್ತಿಗಳು ಅವರನ್ನು ಎಳೆದುಕೊಂಡು ಹೋಗಿರುವ ಬಗ್ಗೆ ಕುರುಹುಗಳು ದೊರೆತವು. ಅಂತರರಾಷ್ಟ್ರೀಯ ಗಡಿಯಾಗಿರುವುದರಿಂದ ನಾವದನ್ನು ದಾಟಿ ಮುಂದೆ ಹೋಗುವುದಿಲ್ಲ. ಸ್ವಲ್ಪ ಸಮಯದ ಬಳಿಕ ಹುಡುಕಾಟ ನಡೆಸಲು ಆ ಬದಿಯಿಂದ ಅನುಮತಿ ದೊರೆಯಿತು. ನಾಪತ್ತೆಯಾಗಿದ್ದ ಯೋಧನ ಮೃತದೇಹ ಕಂಡುಬಂತು. ಕಾಲುಗಳನ್ನು ಕಟ್ಟಿಹಾಕಲಾಗಿತ್ತು. ಎದೆಯಲ್ಲಿ ಗುಂಡುತಗುಲಿದ ಗಾಯಗಳಿದ್ದು, ಕತ್ತು ಸೀಳಿದ ಸ್ಥಿತಿಯಲ್ಲಿತ್ತು’ ಎಂದು ಹೇಳಿದ್ದಾರೆ.

ನಂತರ ಅಂತಹ ಯಾವುದೇ ಘಟನೆ ನಡೆದಿಲ್ಲ. ಗಡಿಯಾಚೆಯಿಂದ ಗುಂಡಿನ ದಾಳಿಯೂ ನಡೆದಿಲ್ಲ ಎಂದೂ ಅವರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT